ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಾ ನಿನ್ನಂತೆ ನಾನೂ ಶೋಷಿತ…

ಅಕ್ಕಾ ನಿನ್ನಂತೆ ನಾನೂ ಶೋಷಿತ!

– ವಿದ್ಯಾಶಂಕರ್ ಹರಪನಹಳ್ಳಿ

‘ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ…’ ಎಂಬ ಕವಿ, ಫೀರಭಾಷಾರ ಕವನದ ಸಾಲು ನೆನಪಾಗುತ್ತಿದೆ. ಇತ್ತೀಚಿಗೆ ನಾನು ಓದಿದ ಅತ್ಯಂತ ಪ್ರಭಾವಶಾಲಿ, ಪರಿಣಾಮಕಾರಿ ಮತ್ತು ಶಕ್ತಿಶಾಲಿ ಕಾವ್ಯದ ಸಾಲು ಅದು. ಅದನ್ನು ಸ್ವಲ್ಪ ಮಾರ್ಪಾಡು ಮಾಡಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದಬ್ಬಾಳಿಕೆ ಬಗ್ಗೆ ಹೇಳುವುದಾದರೆ ‘ಅಕ್ಕಾ! ನಿನ್ನ ಹಾಗೆ ನಾನೂ ಸಮಾನ ದುಃಖಿತ…’. ಜಗತ್ತಿನಾದ್ಯಂತ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಮಕ್ಕಳು ಲೈಂಗಿಕ ಶೋಷಣೆಗೆ, ವಿಕೃತಿಗೆ ಈಡಾಗುತ್ತಲೇ ಇದ್ದಾರೆ.

ಪುಟ್ಟ ಮಕ್ಕಳು ಹಠಾತ್ತನೆ ಕಾಣೆಯಾಗುವುದು, ಲೈಂಗಿಕ ವಿಕೃತಿಗೆ ಬಲಿಯಾಗುತ್ತಿರುವುದು, ಪಾಶ್ಚಿಮಾತ್ಯ ದೇಶದ ‘ಸುಸಂಸ್ಕೃತರು’ ಥೈಲ್ಯಾಂಡ್ ಮತ್ತು ಅಂತಹ ದೇಶವನ್ನು ಹುಡುಕಿ ಹೋಗುವುದು, ಭೇಟಿ ಕೊಡುವುದು, ಇನ್ನು ಜಗತ್ತಿನಲ್ಲಿ ಅಪ್ರಾಪ್ತ ವಯಸ್ಸಿನವರು ಇನ್ನೂ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ ಮತ್ತು ಜಗತ್ತಿನಲ್ಲಿ ಮಕ್ಕಳ ಶೋಷಣೆ ನಡೆಯುತ್ತಲೇ ಇದೆ ಎಂಬುದಕ್ಕೆ ಸಾಕ್ಷಿ.

ನಾನು ಆಗ ಕೆಲಸದ ನಿಮಿತ್ತ ಚೆನ್ನೈಯಲ್ಲಿ ಇದ್ದೆ. ಸುಮಾರು 2001ರಲ್ಲಿ ‘ಮಾನ್ಸೂನ್ ವೆಡ್ಡಿಂಗ್’ ಎಂಬ ಚಿತ್ರ ಬಂದಿತ್ತು. ಆ ಚಿತ್ರದಲ್ಲಿ ಪುಟ್ಟ ಮಗುವನ್ನು ಲೈಂಗಿಕವಾಗಿ ಬಳಸಿಕೊಳ್ಳುವ, ದುರ್ಬಳಕೆ ಮಾಡುವ ಒಂದು ಖಳನ ಪಾತ್ರ ಮತ್ತು ದೃಶ್ಯಗಳಿವೆ. ಸಿನಿಮಾ ನೋಡಿ ಬಂದವನು ತುಂಬಾ ಡಿಸ್ಟರ್ಬ್ ಆಗಿಬಿಟ್ಟೆ. ಆ ಸಿನಿಮಾ ಮತ್ತು ಆ ಸಿನಿಮಾದ ಆ ದೃಶ್ಯಗಳು ನನಗೆ ಗಾಬರಿಯಾಗುವಷ್ಟರ ಮಟ್ಟಿಗೆ ಮನಸ್ಸನ್ನು ಕಾಡಿಬಿಡ್ತು, ಕದಲಿಸಿ ಬಿಡ್ತು. ಯಾಕೆ ಹೀಗೆ ಎಂದು ಸುಮ್ಮನೆ ಕೂತು ಕೊಂಚ ಯೋಚಿಸಿದಾಗ, ನನಗೆ ಹೊಳೆದಿದ್ದು ನನ್ನ ಬಾಲ್ಯದ ಕಹಿ ನೆನಪುಗಳು, ನೋವ್ವು ಎಲ್ಲೋ ಸುಪ್ತವಾಗಿ ಅಡಗಿತ್ತು, ಈ ಚಲನಚಿತ್ರ ದೃಶ್ಯದೊಂದಿಗೆ ಮತ್ತೆ ಮರುಕಳಿಸಿತ್ತು. ಯಾರೋ ನನ್ನನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಇರುಸುಮುರುಸಾಗುವ ರೀತಿ ನಡೆಸಿಕೊಂಡಿದ್ದರು. ಗಾಯ ಮಾಗಿದ್ದರೂ, ಬಾಲ್ಯದ ನೆನಪು ಮಾಸಿಹೋಗಿದ್ದರೂ, ಮನಸಿನ ಯಾವುದೋ ಮೂಲೆಯಲ್ಲಿ ಅದರ ಕಹಿ ನೆನಪು ಮತ್ತು ಅದರ ಪ್ರಭಾವ ಇನ್ನೂ ಇದೆ. ಕೆಲವೊಮ್ಮೆ ನನ್ನ ಆಲೋಚನೆಗಳನ್ನ, ಭಯಗಳನ್ನ, ನಿರ್ಧಾರಗಳನ್ನ ಆ ಕಹಿ ಘಟನೆಗಳು ನಿರ್ದೇಶಿಸುತ್ತಾ ಎಂದು ಪರಿಶೀಲನೆ ಮಾಡಿಕೊಳ್ಳುತ್ತಿರುತ್ತೇನೆ. ಅಷ್ಟರ ಮಟ್ಟಿಗೆ ಗಾಯ ಇನ್ನೂ ಹಸಿ.

ಲೈಂಗಿಕ ಶೋಷಣೆಗೆ ಹೆಣ್ಣು, ಗಂಡು ಎಂಬ ಭೇದ ಇಲ್ಲ. ಕೆಲವೊಮ್ಮೆ ಗಂಡು ಹುಡುಗರಿಗೆ, ‘ನಾನು ಹುಡುಗ’ ಎಂಬ ಕಾರಣಕ್ಕೆ ಹೇಳಿಕೊಳ್ಳಲು ಆಹಂ ಅಡ್ಡಿ ಬರಬಹುದು ಅಥವಾ ‘ಅವನೇನು ಗಂಡು ಹುಡುಗ’ ಎಂಬ ಪೋಷಕರ ಅಸಡ್ಡೆಯೂ ಕಾರಣವಾಗಬಹುದು. ಆದರೆ ಪೋಷಕರು ಈ ಸಮಸ್ಯೆಯ ಬಗ್ಗೆ ಗಮನ ಕೊಡಬೇಕಿದೆ. ನನ್ನ ಗಮನಕ್ಕೆ ಬಂದಿದ್ದು ಮತ್ತು ನನಗೆ ತಿಳಿದಿದ್ದನ್ನು ಸಲಹೆ ರೂಪದಲ್ಲಿ ಬರೆದಿದ್ದೇನೆ. ಹೆಚ್ಚಿನ ಮಾಹಿತಿಗೆ ನೀವು ನುರಿತ ತಜ್ಞರನ್ನು ಸಂಪರ್ಕಿಸಬಹುದು ಅಥವಾ ಪುಸ್ತಕಗಳನ್ನು ಓದಬಹುದು.

ಪೋಷಕರಿಗೆ ಕೆಲವು ಸಲಹೆಗಳು:

•ದಯವಿಟ್ಟು ಈ ಕೆಳಗಿನ ವೀಡಿಯೊ ನೋಡಿ ಮತ್ತು ನಿಮ್ಮ ಪುಟ್ಟ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ‘ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ’ ಬಗ್ಗೆ ತಿಳುವಳಿಕೆ ಕೊಡಿ :- http://www.youtube.com/watch?v=6aH8Rwax09A

•ಹದಿಹರಯದ ಮಕ್ಕಳೊಂದಿಗೆ ಮುಕ್ತವಾಗಿ ಮಾತಾಡಿ ಮತ್ತು ಲೈಂಗಿಕತೆ ಬಗ್ಗೆ ತಿಳುವಳಿಕೆ ಕೊಡಿ. ನಿಮಗೆ ಸರಿಯಾಗಿ ಗೊತ್ತಿರದ ಪಕ್ಷದಲ್ಲಿ ನಿಮ್ಮ ಫ್ಯಾಮಿಲಿ ಡಾಕ್ಟರ್ ಹತ್ತಿರ ಸಲಹೆಗೆ ಕಳುಹಿಸಿಕೊಡಿ. ಅನೇಕ ಅನಾಹುತಗಳು ನಡೆಯುವುದು ತಪ್ಪು ತಿಳುವಳಿಕೆ ಮತ್ತು ಅಜ್ಞಾನದಿಂದ. ಹಾಗಾಗಿ ಸರಿಯಾದ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ಕೊಡಿ.

•ಚಿಕ್ಕ ಮಕ್ಕಳ ವಿಷಯದಲ್ಲಿ ಬಹುತೇಕ ಶೋಷಣೆ ನಡೆಯುವುದು ದೊಡ್ಡವರ ನಿರ್ಲಕ್ಷದಿಂದಲೇ. ಹಾಗಾಗಿ, ನಿಮ್ಮ ಮಕ್ಕಳ ನಡುವಳಿಕೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ, ಕೂಲಂಕುಷವಾಗಿ ಮಾತನಾಡಿಸಿ. ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಿ, ದೈಹಿಕ ತಪಾಸಣೆ ಮಾಡಿಸಿ.

•ಮನೆಯಲ್ಲಿ ಚರ್ಚೆಗೆ ಮುಕ್ತ ವಾತಾವರಣವಿರಲಿ. ನೀವು ‘ನಮ್ಮ ಮಕ್ಕಳು ಮುಗ್ಧರು, ಅವಕ್ಕೇನು ಗೊತ್ತು? ನಮಗೆ ಯಾರು ಹೇಳಿಕೊಟ್ಟಿದ್ದರು? ಹೇಗೋ ಅವರೇ ಮ್ಯಾನೇಜ್ ಮಾಡಿಕೊಳ್ಳುತ್ತಾರೆ, ಕಲಿತುಕೊಳ್ಳುತ್ತಾರೆ’ ಎಂದು ಉಪೇಕ್ಷೆ ಮಾಡಬೇಡಿ.

•ಲೈಂಗಿಕ ವಿಕೃತಿಗಳಲ್ಲಿ ಮೂಢನಂಬಿಕೆಗಳ ಪಾತ್ರ ದೊಡ್ಡದಿದೆ. ಅವುಗಳನ್ನು ಚರ್ಚೆ ಮುಖಾಂತರ ನಿವಾರಿಸಿ.

•ಮಕ್ಕಳು ಏನು ಓದುತ್ತಿದ್ದಾರೆ, ಇಂಟರ್ನೆಟ್ ಬಳಕೆ ಹೇಗಿದೆ, ಅವರ ಸ್ನೇಹಿತರ ಬಳಗದ ಬಗ್ಗೆ ಗಮನ ಹರಿಸಿ. ಟಿವಿ ಮತ್ತು ಇಂಟರ್ನೆಟ್-ಗೆ ಪೇರೆಂಟಲ್ ಕಂಟ್ರೋಲ್ ಇರುವುದನ್ನು ಖಚಿತ ಪಡಿಸಿಕೊಳ್ಳಿ ಮತ್ತು ಬಳಸಿ.

•ದಯವಿಟ್ಟು ಮಕ್ಕಳಲ್ಲಿ ವಿರುದ್ಧಲಿಂಗಿಯ ಬಗ್ಗೆ, ಹುಡುಗರಿಗಾಗಲಿ, ಹುಡುಗಿಯರಿಗಾಗಲಿ ಯಾವುದೇ ಪೂರ್ವಗ್ರಹ ತುಂಬಬೇಡಿ. ಸಮಾನತೆ ಮತ್ತು ಪರಸ್ಪರ ಗೌರವದಿಂದ ವರ್ತಿಸುವುದು ಹೇಳಿಕೊಡಿ. ಹಾಗೆಯೇ ನೀವೂ ವರ್ತಿಸಿ. ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್ ಆಗಿ.

•ನೆನಪಿಡಿ, ನೀವು ನಿಮ್ಮ ಮಕ್ಕಳನ್ನು ಸದಾ ಅಂದರೆ ಇಪ್ಪತ್ತುನಾಲ್ಕು ತಾಸು, ಜೀವನ ಪೂರ್ತಿ ಕಾಯುವುದಕ್ಕೆ, ಕಾಪಾಡುವುದಕ್ಕೆ ಆಗುವುದಿಲ್ಲ. ಆದರೆ ನೀವು ಹೇಳಿಕೊಡುವ ಸಂಸ್ಕಾರ, ಶಿಕ್ಷಣ ಮತ್ತು ತಿಳುವಳಿಕೆ ಅವರನ್ನು ಸದಾ ಕಾಯಬಲ್ಲದು.

 

‍ಲೇಖಕರು G

30 December, 2012

2 Comments

  1. Santhoshkumar LM

    •ನೆನಪಿಡಿ, ನೀವು ನಿಮ್ಮ ಮಕ್ಕಳನ್ನು ಸದಾ ಅಂದರೆ ಇಪ್ಪತ್ತುನಾಲ್ಕು ತಾಸು, ಜೀವನ ಪೂರ್ತಿ ಕಾಯುವುದಕ್ಕೆ, ಕಾಪಾಡುವುದಕ್ಕೆ ಆಗುವುದಿಲ್ಲ. ಆದರೆ ನೀವು ಹೇಳಿಕೊಡುವ ಸಂಸ್ಕಾರ, ಶಿಕ್ಷಣ ಮತ್ತು ತಿಳುವಳಿಕೆ ಅವರನ್ನು ಸದಾ ಕಾಯಬಲ್ಲದು.

    ಅದ್ಯಾಕೋ ನನಗೆ ನಿಮ್ಮ ಈ ಲೇಖನದ ಈ ಕೊನೆಯ ಸಾಲು ಇಷ್ಟವಾಯಿತು. ಅಪ್ಪ ಅಮ್ಮ ಎಲ್ಲ ಮಕ್ಕಳನ್ನು ೨೪ ಘಂಟೆಯೂ ಕಾಯಲಿಕ್ಕಾಗುವುದಿಲ್ಲ. ಆದರೆ ಅವರು ಕೇವಲ ಹೇಳಿಕೊಟ್ಟ ಪಾಠಗಳೇ ನಮ್ಮನ್ನು ಯಾವಾಗಲೂ ಕಾಯಬಲ್ಲವು!! good one sir!! thanks.

  2. sumathi

    ಆ ಸಿನೆಮಾ ನನ್ನ ಕೂಡಾ ಕಾಡಿತ್ತು,ವಿದ್ಯಾಶ೦ಕರ್ ನಿಮ್ಮ ಬರಹದ್ದೇ ಇನ್ನೊ೦ದು ತೂಕ. Other side of coin!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading