ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕನ ಅಗರಬತ್ತಿ

ಪ್ರಕಾಶ್ ಪೊನ್ನಾಚಿ

ಕತ್ತಲಲಿ ಲೀನವಾಗುವ ಸೂರ್ಯ
ಸುಮ್ಮನೆ ಮಲಗಲೊರಟ ಗಾಳಿ
ತಡಬಡ ಎಂದು ಇತ್ತಲಿಂದ ಅತ್ತಲಿಗೆ
ಓಡುತ್ತಿರುವ ಜಂಗುಳಿಯಲಿ
‘ಉಣ್ಣಾಕಿಕ್ಕು ಬಾ’
ಎಂದು ಆರ್ಧರಿಸುತ್ತದೆ
ಒಂದು ವಿಪ್ಲವ ಧನಿ

‘ವಸಿ ತಡಿ ಬಂದೆ’
ಇತ್ತಲಿಂದ ಸೀಳಿಕೊಂಡ ದನಿಗೆ
ಅತ್ತ ಬಾಗಿಲು ಜೋರು ಸದ್ಧಾಗುತ್ತದೆ

ಗುಡಿಸಿಲ ಜಗಲಿ ಮೇಲೆ
ಕಟ್ಟು ಕಟ್ಟಾಗಿ ಬಿದ್ದ ಎಳಸು ಬಿದಿರು
ಕಡ್ಡಿಗಳ ಎಣಿಸುತ್ತಾ
ಉಂಡೆಗೆ ಸುವಾಸಿತ ಸೆಂಟೊಂದು ಹಾಕಿ
ಮುದ್ದೆ ಮುದ್ದೆ ಬಿಡಿಸಿ
ಕಡ್ಡಿಗೆ ಉಜ್ಜಿ
ರೋಡಿನ ಇಕ್ಕೆಲಕ್ಕೆ ಒಣಗಲಿಟ್ಟರೆ
ಅದು ಸುವಾಸಿತ ಅಗರಬತ್ತಿ

ನಂಬಿ
ಇದು ನಿಜಕ್ಕೂ ಹೋಮ್ ಮೇಡ್
ತೀರಾ ಕೈಯಿಂದಲೇ ಹೊಸೆದು
ಮಾಡಿದ ಸುವಾಸಿತ ಬತ್ತಿ
ಹಚ್ಚಿದರೆ ಎರಡು ತಾಸು
ನಿಮ್ಮ ಕಾಸಿಗೆ ಮೋಸವಿಲ್ಲ
ಹೊರಗೆ
ಅಜ್ಜನ ಕೀರಲು ದನಿ ರಸ್ತೆ ದಾಟುತ್ತದೆ

ಹೊಸೆಯುತ್ತಿರುವ ಕೈಗಳ ಮೇಲೆ
ರಪ್ಪನೆ ಎದ್ದ ಬೊಬ್ಬೆಗಳು
ಇನ್ನೂ ವಿರಮಿಸಿಲ್ಲ
ಅಕ್ಕಾ ಹೊಸೆಯುತ್ತಲೇ ಇದ್ದಾಳೆ
‘ಉಣ್ಣಾಕಿಕ್ಕು ಬಾ’ ಎಂಬ
ವಿಪ್ಲವ ದನಿ ಮತ್ತೆ ಆರ್ಭಟಿಸುತ್ತದೆ

ಎಣ್ಣೆ ಖಾಲಿಯಾದರೆ ದೀಪ ಆರುತ್ತದೆ
ಹಾಳು ಗಲ್ಲಿಗೆ ಅದ್ಯಾವಾಗ ಕರೆಂಟು ಬತ್ತದೋ
ಗಲ್ಲಿ ವಾಸನೆ ವಸಿ ಸೆಂಟು ಜಾಸ್ತಿ ಹಾಕವ್ವ
ಎಂಬ ಮೌನವಾದ ಕೂಗು
ಹೀಗೇ ಕಿವಿಮುಟ್ಟುತ್ತದೆ

ಪರದೆಗಳಲಿ ಬಿತ್ತರಿಸಿಕೊಳ್ಳದ
ಬಣ್ಣದ ಕಾಗದಗಳಲಿ ರಂಜಿಸಿಕೊಳ್ಳದ
ಮೆಷಿನುಗಳ ಗುರುತು ಕಾಣದ
ಜಗಲಿಯಲೆ ಜೀವಪಡೆದುಬಿಡುವ
ಅಗರಬತ್ತಿಗಳು
ಕಾರ್ಖಾನೆಯ ಗೊಡ್ಡು ಬತ್ತಿಗಿಂತ
ಹೆಚ್ಚು ಕಾಲ ಪರಿಮಳಿಸುತ್ತವೆ

ಅರ್ಧಚಂದ್ರ ನೆತ್ತಿ ಮೇಲೆ ಧುಮುಕಿ
ಗಡಿಯಾರದ ಮುಳ್ಳಿನ ಜೀವಂತಿಕೆ
ಬಡಿದೆಬ್ಬಿಸಿ ಕೆಣಕಿ
ಬೊಬ್ಬೆ ಮೇಲೊಂದು ಬೊಬ್ಬೆ ನೋವನ್ನು
ಗುಣಿಸುವಾಗ
‘ಟೇಮ್ ಆಯ್ತು ಅವನ್ಗೆ ಉಣ್ಕಾಕಿಕ್ಕು ಹೋಗಮ್ಮಿ’
ಎಂಬ ಗಡಸು ದನಿ
ಮೂಲೆಯಲಿ ಆರ್ಭಟಿಸುತ್ತದೆ
ಸ್ಟ್ಯಾಂಡಿನ ರೇಡಿಯೋದಲಿ
‘ವಾಸು ಅಗರಬತ್ತಿ ಇದ್ದಲ್ಲಿ ಚಿಂತೆಯ ಮಾತೆಲ್ಲಿ’
ಎಂಬ ಜಾಹೀರಾತೊಂದು ಭಿತ್ತರವಾಗುತ್ತದೆ

‍ಲೇಖಕರು avadhi

9 January, 2020

2 Comments

  1. T S SHRAVANA KUMARI

    ವಿಷಾದ ಹುಟ್ಟಿಸಿದ ಕವಿತೆ

  2. Malati Bhat

    ಘಮಲಿನ ಹಿಂದಿನ ಶ್ರಮ, ನೋವು ಸುಂದರವಾಗಿ ಅಭಿವ್ಯಕ್ತವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading