ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

..ಅಂದ ಹಾಗೆ ಈ ಕಡಲೆ ಕಾಯಿ

 

 

 

 

ನಾಗರಾಜ್ ರೋಣೂರ್

 

 

 

 

ಪರಿಶೆ
ಪರಿ

ಪರಿ
ಆಶೆಗಳ
ಮೂಟೆಗಳನ್ನೆತ್ತಿಕ್ಕೊಂಡು
ಬರುವ ಜನಜಾತ್ರೆ
ಬೀಜಗಳನ್ನು
ಹರಿವಿಕೊಂಡು
ಕನಸುಗಳ ಬಿತ್ತಿ
ಹದವಾಗಿ ಹುರಿದು
ಬೆಚ್ಚಗೆ ಬೇಯಿಸಿ
ಇಲ್ಲವೇ
ಹಸಿ ಹಸಿಯಾಗಿ
ಮೆಂದು
ನವ ಚೈತನ್ಯ
ಶಕ್ತಿ, ಖನಿಜಗಳ

ಸಿಹಿ ಮಿಠಾಯಿ
ಉಂಡೆ ಕಟ್ಟಿ
ಕಟಂ-ಕುಟುಂ
ಎಂದು ಜಗಿಯುತ್ತಾ
ಕಾಲಿಟ್ಟಡಿಯಲ್ಲೆಲ್ಲಾ
ಪರ ಪರ
ಪ್ರತಿಧ್ವನಿಸುವ
ಸಿಪ್ಪೆಯ ಹಾಸು ರಾಶಿ
ಪ್ರತಿ ಕಾರ್ತಿಕ ಮಾಸಕ್ಕೆ
ಎಂದೂ ಮಾಸದ
ನನ್ನ ನೆನಪಿನ
ಮೂಟೆಗಳನ್ನು
ಬಿಚ್ಚಲು ಬರಮಾಡಿಕೊಳ್ಳುತ್ತದೆ.
ಮತ್ತೆ
ಬೀಜ ಬಿತ್ತುವ
ಕ್ರಿಯೆ
ಮೊದಲಾಗುತ್ತದೆ.

…ಅಂದ ಹಾಗೆ

ಕಡಲೆ ಕಾಯಿ
ನಮ್ಮ ಮನೆಯ ಮೂಲ ತಿನಿಸು .

ನಮ್ಮ ತಂದೆಗೆ ಬಾಲ್ಯದಲ್ಲಿ ದಕ್ಕಿದ ‘ಸೂಪರ್ ಫುಡ್’ ಕೂಡ. ಆದಾಗಿ ನಮ್ಮನೆಯಲ್ಲಿ ಕಡಲೆ ಕಾಯಿ ಹುರಿಯದ ದಿನಗಳೇ ಇಲ್ಲ. ಇನ್ನು ಕರಿದು-ಹುರಿದು- ಸವಿದ ಬಾಂಡ್ಳಿಗಳಿಗೆ ಲೆಕ್ಕವೇ ಇಲ್ಲ.

ಸಾರ್, ಚಿಂತಾಮಣಿಗೆ ಹೋಗ್ತಿದ್ದೀರಾ, ಹಾಗಾದ್ರೆ ಶ್ರೀರಾಮ ಹುರಿಗಾಳು  ಅಂಗಡಿಯಿಂದ ಒಂದೆರಡು ಕೇಜಿ ಕಡ್ಲೆ ಬೀಜ ತನ್ನಿ. ಹೀಗೆ ಕೇಳೋದು ನಮಗೆ ಮಾಮೂಲು. ! ನಾಚಿಕೆಯಿಲ್ಲ ಬಿಡಿ.!

ನಮ್ಮ ತಂದೆ ಊರು ಊಲವಾಡಿ – ಚಿಂತಾಮಣಿ, ತಾಯಿ ಬೆಳೆದಿದ್ದು ಕೋಲಾರದ ಗಲ್ಪೇಟೆ – , ಹಾಗಾಗಿ ನಮ್ದು ‘ಕಡ್ಲೆ ಬೀಜ ಸಮಾಜ’ , ಎಲ್ಲ ಆಕಾರ – ಪ್ರಾಕಾರಗಳಲ್ಲಿ ಬೀಜವನ್ನು ಮೇಯುವುದು ನಮ್ಮ ಪಾರಂಪರಿಕ ಹಕ್ಕು. ನಿಷ್ಠೆ. ಹೆಮ್ಮೆಯ ವಿಷ್ಯ ಏನಪ್ಪಾ ಅಂದ್ರೆ ಈ ಸಂಪ್ರದಾಯವನ್ನು ಕಟ್ಟು ಪಾಡಿನಿಂದ ನಮ್ಮ ಕುಟುಂಬದ ಮುಂದಿನ ಜನಾಂಗಕ್ಕೂ ಯಶಸ್ವಿಯಾಗಿ ದಾಟಿಸಿರಿರುವುದು.

ನಮ್ಮ ಜೀವ
ನೆಲೆ – ಸೆಲೆಯ ಪಾಲು ಕೋಲಾರದ ಮಣ್ಣಿಗೇ ಸೇರಬೇಕು.. ಹೇಗಾದ್ರೂ ಅದು ಬಂಗಾರದ ಮಣ್ಣಲ್ಲವೇ.? ಇನ್ನು ನೆನಪುಗಳೋ ವಜ್ರ ಖಚಿತ. ಅಷ್ಟೇ ಗಟ್ಟಿ.

ಇನ್ನು ಬಿಚ್ಚುವಾ ಬುತ್ತಿ..! ಸಮೃದ್ಧ ಭಕ್ಷದ ಕಣಜಕ್ಕೆ ಕಿಂಡಿ ಹಾಕಿದ ಹಾಗೆ..! ಘಮಲಿನ ಆಸ್ವಾದಿಸುವ ಅಸ್ಥೆ ನಿಮ್ಮದೂ ಆಗಲಿ.

ಇನ್ನು ನಾನು ಹುಟ್ಟಿದ್ದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆ.

ಪಕ್ಕದಲ್ಲೇ ತಾಗಿಕೊಂಡಿರುವುದು
ಅಮ್ಮನ ಹುಟ್ಟೂರು ರೋಣೂರು.

…ಅಂದ್ರೆ ನನ್ನ ಪ್ರಾಣ……!
ಕಲಕಿದರೆ ಸಾಕು.. ಅವ್ಯಕ್ತ ನೆನಪಿನ ಫೋಟೋ ಮಾಂಟೇಜ್  ಸುರುಳಿ ಬಿಚ್ಚಲಾರಂಭಿಸುತ್ತದೆ.

ಕಂತುಗಳಲ್ಲಿ ಕಳೆದ ನನ್ನ ಬಾಲ್ಯ , ಮಾವಿನ ತೋಟಗಳಲ್ಲಿ ಸುತ್ತಾಟ, ಮೇದ ಅಸಂಖ್ಯ ಮಾವುಗಳು, ಗಾಡಿ ಕಟ್ಟಿ ಸುತ್ತಿದ ಪುಂಗನೂರು, ಗೌನಪಲ್ಲಿ, ರಾಯಲ್ಪಾಡ್, ಸೋಮಯಾಜುಲಪಲ್ಲಿ, ಟೆಂಟುಗಳಲ್ಲಿ  ರಾತ್ರಿ ಕದ್ದು  ನೋಡಿದ ಸಿನಿಮಾಗಳು,  ಎನ್ಟಿಆರ್ ಡೈಲಾಗುಗಳು , ಎಎನ್ಆರ್ ಸ್ಟೈಲುಗಳು, ಶೋಭನ್ ಬಾಬು  ಬಾಬು ಹೇರ್ ಕ್ರಾಪುಗಳು, ಕೃಷ್ಣನ ಗಿಮಿಕ್ಕುಗುಳು, ದಿಂಬಾಲಿನಲ್ಲಿ ಹೋಲಿಸುತ್ತಿದ್ದ ಅಂಗಿಗಳು, ಮ್ಯಾಕಮೈಯ್ಯನ ಬೋಂಡಗಳು, ಘಂಟಸಾಲ ಹಾಡುಗಳ ಗುನುಗುಗಳು, ತೆಲುಗು ನಾಟಕದ ರಿಹರ್ಸಲ್ಲುಗಳು, ಕದ್ದು ಮುಚ್ಚಿ ಮತ್ತೆ ಮತ್ತೆ ನೋಡುತ್ತಿದ್ದ ಶ್ರೀದೇವಿಯ ಸಿನೆಮಾಗಳು.

ಹುಣಸೇಮರಕ್ಕೆ ಅಂಟಿಕೊಂಡ ದೆವ್ವದ ಕಥೆಗಳು, ಜಿದ್ದಾಜಿದ್ದಿನಂತೆ ದೆವ್ವಕ್ಕೆ ಸೇಡಿನ ಪೆಟ್ಟು ಕೊಟ್ಟಂತೆ ಗುದ್ದಿ-ಗುದ್ದಿ ಹುಣಸೇ ಬೀಜ ಬಿಡಿಸಿದ್ದು,
ಈಜು ಕಲಿಸಿದ ತಿಳಿ ನೀರಿನ ಬಾವಿಗಳು, ಕೆರೆಯ ದಂಡೆಯ ಮೇಲೆ ನಡೆದಾಡಿದಿದ ಹೆಜ್ಜೆಗಳು, ಊರ ಮುಂದೆ ಕುಳಿತು ಕಳೆದ ಹಾಸ್ಯ  ಸನ್ನಿವೇಶಗಳು,  ಕಾವಲು ನೆಪದಲ್ಲಿ ರಾತ್ರಿಯಿಡೀ ಹೊಲದಲ್ಲಿ ಜಾಗರಣೆ ಮಾಡಿದ ಪರಿ, ಗೋಲಿ ಪಂದ್ಯಾವಳಿಗಳು, ನಾವೇ ಕೆತ್ತಿ ಸಿಂಗರಿಸಿಕೊಂಡ ಬಣ್ಣ ಬಣ್ಣದ ಬಗುರಿಗಳ ಕೆಚ್ಚಾಟ ಕಿರುಚಾಟಗಳು, ಪೋಸ್ಟ್ ಮ್ಯಾನ್ ಸುಬಾನ್ ಸಾಬ್ ಜೊತೆ ಅಂಚೆ ವಿತರಿಸಿದ ಸಾರ್ಥಕ ಕ್ಷಣಗಳು. ರೋಣೂರಿನ ತೇರು ಸಂಭ್ರಮದಲ್ಲಿ ಪಾಲ್ಗೊಂಡ ದಿನಗಳು …

ಒಂದಾ .. ಎರಡಾ ..

ಈಗಲೂ ನೆನಪಿಸಿಕೊಂಡರೆ ನಾನು ರೋಣೂರಿನಲ್ಲಿ ಹಾಜರ್ … ಅದು ಅಣು ಅಣುವಿನಲ್ಲಿ ಬೆರೆತಿರುವ ಆಯಾಸ್ಕಾಂತದ ಶಕ್ತಿ.

ಆದರೆ ..
ಈಗ ಅಲ್ಲಿರುವುದಾದರು ಏನು.?
ಬರೀ ಮಾಸಿ ಹೋದ ನೆನಪುಗುಳು ಮಾತ್ರ ..
ಬಗೆದಷ್ಟು ನಮ್ಮಲ್ಲಿ ಜಿಗಿಯುವುದು ಬರೀ ಒಂದು ಹನಿ ಮಾತ್ರ.
ಯಾಕೆಂದರೆ
ಆ ಭೂಮಿಯಲ್ಲಿ ಈಗ
ನೀರು  ಜಿನುಗುವುದೇ ಇಲ್ಲ.

ಒಣಗಿದ ಕೆರೆಗಳು  –
ನಿಸ್ತೆಜ ಮಖಗಳು –
ಬತ್ತಿದ ಕನಸುಗಳು.
ಗುಳೇ ಎದ್ದ ಕುಟುಂಬಗಳು , ಊರು ಕಾಯಲು ಇಲ್ಲದ ಯುವ ಸಮೂಹ.

ಆದರೂ,
ನನಗೆ ರೋಣೂರು ಅಂದ್ರೆ ಪ್ರಾಣ.
ನನ್ನ ವ್ಯಕ್ತಿತ್ವದ ಬೀಜ ಮೊಳೆತದ್ದು ಅಲ್ಲಿಯೇ .
ಇಲ್ಲಿರುವುದು ಬಲಿತ ರೆಂಬೆ ಮಾತ್ರ.!

‍ಲೇಖಕರು avadhi

16 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading