ಸ್ವಾತಂತ್ರ್ಯದ ಓಟ
ನಾ ಬಾಲಕೃಷ್ಣ
ಅನಿಶ್ಚಿತ ಸ್ವಾತಂತ್ರ್ಯದೋಟದ
ಆಟದಂಗಳದಲ್ಲಿ ಹುಯಿಲಿಟ್ಟು
ಮೇಲೆರಗುವ ಅಸಂಗತ ಕಾಗೆ
ರಣಹದ್ದುಗಳ ಹದ್ದುಮೀರಿದ ಕಾಟ.
ಹಿಂದೆಂದೋ ಹಂಗರಿಯಲ್ಲಿ
ಹೆದರಿ ಕಾಲುಕಿತ್ತ ರಣಹೇಡಿಗೆ
ಪ್ರಾಲಿಟೇರಿಯೆಟ್ ಭೂತ ಕಾಡಿದ್ದು
ಕಟ್ಟೊಗೆದು ನೀಸದ ಪುಕ್ಕಲನಿಗೆ
ನಟ್ಟನಡುರಾತ್ರಿಯಲ್ಲಿ ರೋಮಾಂಚನ !
ಆದರೇನು ? ಆತ ಸತ್ತಿದ್ದೇ ಮುಪ್ಪಡರಿ.
ಇಂತು ರಮಿಸುವ ಅಡಗೂಳಜ್ಜಿ ಜೋಗುಳಕ್ಕೆ
ಸಮತೆಯತ್ತ ನಡೆವವರ ಖಬರಿಲ್ಲ
ಕತ್ತು ಕೊಯ್ಯುವ ಕರಟಕದಮನಕರ
ಅಮೂರ್ತ ಅಕ್ಷರದ ತೆವಲಿಗೆ
ಸದಾ ಸುಪ್ಪತ್ತಿಗೆಯ ಚಪಲ.
ಅಂದು ಕೈಸೇರಿದ್ದ ಗದ್ದುಗೆ
ಕೈಜಾರಿದ್ದು ನೆಪವಾಗಿ
ಕುತ್ತಾಗಿ ಹಳಿತಪ್ಪಿ ಹೇರಿದ್ದ
ಅಭಿವ್ಯಕ್ತಿ ಹರಣಕ್ಕೆ ಸೊಲ್ಲಿಲ್ಲ.
ಮತ್ತೆ ಸತ್ತಿಗೆಯ ಸುದ್ದಿಗೆ
ಪಂಚರಂಗಿಗಳ ಪರಿಪರಿಯ ಮಿಂಡತನ
ಮಂಡಿಯೂರಿ ಮನವೊಲಿಕೆ
ಥೈಲಿಗಳ ಝಣಝಣ ಕಾಂಚಾಣ
ಮರುಳಿಗ ಕವುಲೆ ಮಂದಿಗಳ
ಮೆಜಾರಿಟಿಯೇ ಮಾನದಂಡ
ಸಿಗ್ಗಿಲ್ಲದೆ ಬಡಬಡಿಸುವ
ವಂದಿಮಾಗಧರ ಬಹುಪರಾಕು
ಎಲ್ಲೆಯಿಲ್ಲದ ಹನುಮದ್ವಿಕಾಸ





nice poem..sir