ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತರಾತ್ಮವನು ಸಮಾಧಿ ಮಾಡಿ..

ಅನುವಾದ: ಡಾ. ಅಮರೇಂದ್ರ ಶೆಟ್ಟಿ.ಆರ್. (ಅಮರೇಂದ್ರ ಹೊಲ್ಲಂಬಳ್ಳಿ)

ಮೂಲ: ರಾಮ್ ಜೇಠ್ಮಲಾನಿ

ಕೆಲವು ಸಲ ರಾತ್ರಿಯ ಕತ್ತಲಿನಲ್ಲಿ
ನಾನು ನನ್ನ ಅಂತರಾತ್ಮವನ್ನು ಭೇಟಿಯಾಗುತ್ತೇನೆ.
ಪ್ರತಿದಿನವೂ ನಿಧನಿಧಾನವಾಗಿ ಸಾಯುತ್ತಿರುವ ಅದು
ಇನ್ನೂ ಬದುಕಿದೆಯೇ ಎಂದು ನೋಡುವುದಕ್ಕಾಗಿ.

ನಾನು ಒಂದು ವಿಲಾಸಿ ಸ್ಥಳದಲ್ಲಿ
ಊಟದ ಬಿಲ್ಲು ಪಾವತಿಸುವಾಗ
ಬಹುಶಃ ಆ ಮೊತ್ತ ಅಲ್ಲಿ ಬಾಗಿಲು ತೆರೆಯುವ ಕಾವಲುಗಾರನ ತಿಂಗಳ
ಸಂಬಳ ಅನಿಸುತ್ತದೆ.
ನಾನು ತಕ್ಷಣ ಆ ಯೋಚನೆಯನ್ನು ದೂರ ತಳ್ಳುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ನಾನು ವ್ಯಾಪಾರಿಯಿಂದ
ತರಕಾರಿ ಕೊಳ್ಳುವಾಗ
ಅವನ ಮಗ ‘ಚೋಟು’
ಮುಗುಳ್ನಗುತ್ತ ಆಲೂಗಡ್ಡೆ ತೂಕ ಮಾಡುತ್ತಾನೆ.
‘ಚೋಟು’, ಪುಟಾಣಿ ಹುಡುಗ,
ಓದಲು ಶಾಲೆಗೆ ಹೋಗಬೇಕಾದವನು.
ನಾನು ಬೇರೆಡೆಗೆ ದಿಟ್ಟಿಸುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ನಾನು ದುಬಾರಿ ಬೆಲೆಯ ಡಿಸೈನರ್ ಉಡುಗೆಯಲ್ಲಿದ್ದಾಗ
ಹರಿದ ಬಟ್ಟೆಯ ಹೆಂಗಸೊಬ್ಬಳು
ತನ್ನ ಮಾನ ಮುಚ್ಚಿಕೊಳ್ಳುವ
ವಿಫಲ ಪ್ರಯತ್ನ ಮಾಡುತ್ತ
ರಸ್ತೆ ದಾಟುವುದನ್ನು ನೋಡುತ್ತೇನೆ.
ನಾನು ತಕ್ಷಣ ಕಿಟಕಿಯನ್ನು ಮುಚ್ಚುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ನಾನು ನನ್ನ ಮಕ್ಕಳಿಗೆ
ದುಬಾರಿ ಉಡುಗೊರೆಗಳನ್ನು ಕೊಂಡು ಹಿಂದಿರುಗುವಾಗ
ಖಾಲಿ ಹೊಟ್ಟೆಯ, ಕಣ್ಣಿನಲ್ಲಿ ಹಸಿವು ತುಳುಕುತ್ತಿರುವ,
ಹರಕಲು ಬಟ್ಟೆ ತೊಟ್ಟ ಮಕ್ಕಳು
ಕೆಂಪು ದೀಪದ ಬಳಿ
ಆಟಿಕೆಗಳನ್ನು ಮಾರುವುದನ್ನು ನೋಡುತ್ತೇನೆ.
ಕೆಲವು ಆಟಿಕೆಗಳನ್ನು ಕೊಂಡು
ನಾನು ನನ್ನ ಅಂತರಾತ್ಮವನ್ನು
ರಕ್ಷಿಸಿಕೊಳ್ಳಲು ಯತ್ನಿಸುತ್ತೇನೆ.
ಹಾಗಿದ್ದೂ ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ನನ್ನ ಮನೆಯ ಕೆಲಸದವಳು
ತನಗೆ ಕಾಯಿಲೆಯೆಂದು ತನ್ನ
ಮಗಳನ್ನು ಶಾಲೆ ತಪ್ಪಿಸಿ
ಮನೆ ಕೆಲಸಕ್ಕೆ ಕಳಿಸಿದಾಗ
ವಾಪಸ್ಸು ಶಾಲೆಗೆ ಹೋಗೆಂದು ಅವಳಿಗೆ ಹೇಳಬೇಕೆನ್ನುವುದು ನನಗೆ ಗೊತ್ತು.
ಆದರೆ ನಾನು ಭರ್ತಿಯಾದ ಸಿಂಕ್ ಮತ್ತು ಮುಸುರೆ ಪಾತ್ರೆಗಳ ರಾಶಿ ನೋಡುತ್ತೇನೆ.
ನಂತರ ಇದೆಲ್ಲ ಒಂದೆರಡು ದಿನದ ಮಟ್ಟಿಗೆ ಮಾತ್ರವಲ್ಲವೇ ಎಂದು ನನ್ನಷ್ಟಕ್ಕೇ ಅಂದುಕೊಳ್ಳುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ಯಾವುದೋ ಮಗುವಿನ ಅತ್ಯಾಚಾರದ ಸುದ್ದಿಯನ್ನೋ, ಕೊಲೆಯ ಸುದ್ದಿಯನ್ನೋ ಕೇಳಿದಾಗ ನನಗೆ ದುಃಖವಾಗುತ್ತದೆ.
ಅದರೂ ಸದ್ಯ ನನ್ನ ಮಗು ಅಲ್ಲವಲ್ಲ ಎಂದು ಸಮಾಧಾನ ಪಡುತ್ತೇನೆ.
ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಾರೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ಜಾತಿ, ಮತ, ಧರ್ಮದ ಹೆಸರಿನಲ್ಲಿ ಜನರು ಕಿತ್ತಾಡುವಾಗ
ನನಗೆ ನೋವು ಮತ್ತು ಅಸಹಾಯಕತೆಯ ಭಾವನೆ ಉಂಟಾಗುತ್ತದೆ.
ನನ್ನ ದೇಶ ನಾಯಿಗಳ ಕೈಯಲ್ಲಿ ಸಿಲುಕುತ್ತಿದೆ ಎಂದುಕೊಳ್ಳುತ್ತೇನೆ ನನ್ನ ಎಲ್ಲಾ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು
ಭ್ರಷ್ಟ ರಾಜಕಾರಣೆಗಳನ್ನು ದೂಷಿಸುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ನನ್ನ ನಗರ ಉಸಿರು ಕಟ್ಟಿದಂತೆ ಆದಾಗ,
ಮೆಟ್ರೋಪಾಲಿಟನ್ ನಗರದಲ್ಲಿ
ಉಸಿರಾಡುವುದೂ ಅಪಾಯಕಾರಿಯಾಗಿದ್ದಾಗ,
ನಾನು ನಿತ್ಯವೂ ಕೆಲಸಕ್ಕೆ
ಕಾರನ್ನು ಒಯ್ಯುತ್ತೇನೆ.
ಮೆಟ್ರೋ ರೈಲಿಗೂ ಹೋಗುವುದಿಲ್ಲ, ಕಾರ್ ಪೂಲಿಂಗ್‍ಗೂ ಯತ್ನಿಸುವುದಿಲ್ಲ.
ನನ್ನ ಒಂದು ಕಾರಿನಿಂದ ಏನು ಮಹಾ ವ್ಯತ್ಯಾಸ ಆಗಿಬಿಡುತ್ತದೆ
ಎಂದು ಯೋಚಿಸುತ್ತೇನೆ.
ನನ್ನ ಅಂತರಾತ್ಮ ಸ್ವಲ್ಪ ಸತ್ತಿತು.

ರಾತ್ರಿಯ ಕತ್ತಲಿನಲ್ಲಿ ನಾನು ನನ್ನ ಅಂತರಾತ್ಮವನ್ನು ಭೇಟಿಯಾಗುತ್ತೇನೆ.
ಅದು ಇನ್ನೂ ಬದುಕಿರುವುದನ್ನು ಕಂಡು ಅಚ್ಚರಿ ಪಡುತ್ತೇನೆ.
ಯಾಕೆಂದರೆ,
ನಾನೇ ನನ್ನ ಕೈಯಾರೆ ಅದನ್ನು
ಸ್ವಲ್ಪ ಸ್ವಲ್ಪವೇ ಕೊಂದಿದ್ದೇನೆ,
ಹೂತು ಸಮಾಧಿ ಮಾಡಿದ್ದೇನೆ.

‍ಲೇಖಕರು avadhi

17 September, 2019

1 Comment

  1. T S SHRAVANA KUMARI

    ಚೆನ್ನಾದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading