ಅಂತಃಕರಣ ತಟ್ಟುವ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’

ಸಾ. ದಯಾ

ಇತ್ತೀಚಿಗೆ ಓದಿದ ಕೃತಿಗಳಲ್ಲಿ ಮನಸ್ಸಿಗೆ ತಟ್ಟಿದ ‘ಮುಕ್ಕು ಚಿಕ್ಕಿಯ ಕಾಳು’, ನಟಿ, ರಂಗ ನಿರ್ದೇಶಕಿ, ಸಂಘಟಕಿ, ಕವಿ ಜಯಲಕ್ಷ್ಮಿ ಪಾಟೀಲ್ ಅವರ ಚೊಚ್ಚಲ ಕಾದಂಬರಿ.

ವಿದ್ಯಾರ್ಥಿಗಳೆದುರು ಅವಮಾನಿತನಾಗಿ ಅಸಹಾಯಕ ಸ್ಥಿತಿಯಲ್ಲಿರುವ ಮೌನೇಶನನ್ನು ಮೊದಲ ಅಧ್ಯಾಯದಲ್ಲಿ ಕಂಡರೆ; ಕೊನೆಯಲ್ಲಿ ಕಾದಂಬರಿಯ ಅಂತ್ಯ ಭಾಗದಲ್ಲಿ ಪ್ರಾರಂಭದ ಅಧ್ಯಾಯದ ಮುಂದುವರೆದ ಭಾಗವಾಗಿ ಎಲ್ಲ ಅವಮಾನಗಳನ್ನು ದೈಹಿಕ ಮಾನಸಿಕ ಕೀಳರಿಮೆಗಳನ್ನು ಮೆಟ್ಟಿ ನಿಲ್ಲುವ ಮೌನೇಶ್ ಪತ್ತಾರರನ್ನು ಕಾಣಬಹುದು.

ಸೀಳು ತುಟಿಯ ಮೌನೇಶ ಸುತ್ತಮುತ್ತಲಿನ ತನ್ನ ಎಳೆಯ ಮಿತ್ರರಿಂದ, ಶಾಲೆಯ ಸಹಪಾಠಿಗಳಿಂದ, ದೈಹಿಕ ಶಿಕ್ಷಕರಿಂದ ಅವಮಾನಿತನಾಗಿ, ಆ ಅವಮಾನದಿಂದ ಘಾಸಿಗೊಂಡ ಆ ಬಾಲ್ಯದ ಮನಸ್ಸು, ಆ ಮೂಲಕ ಮಾನಸಿಕ ಕೀಳರಿಮೆಯನ್ನು ಮೇಲೈಸಿಕೊಂಡು ತನ್ನ ಹೆಸರಿಗೆ ತಕ್ಕುದಾಗಿ ಮೌನವನ್ನು ಧರಿಸಿ, ಒಂಟಿತನವನ್ನು ನೆಚ್ಚಿಕೊಳ್ಳುವಂತೆ ಮಾಡುತ್ತದೆ. ಬಾಲ್ಯದಿಂದಲೂ ಯಾರೊಂದಿಗೂ ಮಾತನಾಡಲಾರದ, ಹೇಳಲಾರದ ಮಾತುಗಳು ಗೆರೆಗಳಾಗಿ, ಬಣ್ಣಗಳಾಗಿ ಮೂಡಲಾರಂಭಿಸಿದವು. ಬದುಕು ಕಲಿಸಿದ ಅನುಭವವೇ ಆತನ ಕೈ ಹಿಡಿದು ಮುನ್ನಡೆಸುತ್ತದೆ. ಕ್ಯಾನವಾಸ್‍ನಲ್ಲಿ ಮೂಡುವ ಗೆರೆಗಳು, ಬಣ್ಣಗಳು ಆ ಅನುಭವದ ಹಿನ್ನೆಲೆಯಲ್ಲಿ ಮೂಡಿದ್ದರಿಂದಲೇ ಆತ ಓರ್ವ ಚಿತ್ರ ಕಲಾವಿದನಾಗಿ ಮೇಲೇರಲು ಮೆಟ್ಟಿಲುಗಳಾಗುತ್ತವೆ. ಹೀಗೆ ಕಲೆಯ ಮೂಲಕ ತನ್ನ ದೈಹಿಕ ನ್ಯೂನ್ಯತೆಯನ್ನು ಮೀರುವ ಕೃತಿ ಇದೆಂದು ಮೇಲ್ನೊಟಕ್ಕೆ ಕಂಡರೂ ಕೃತಿಯನ್ನು ಮತ್ತೆ ಮತ್ತೆ ಓದುತ್ತಾ ಹೋದಂತೆ ಈ ಕೃತಿಯ ಒಳಗೆ ವಿಸ್ತಾರವಾದ ಬದುಕಿನ ಸತ್ಯವೊಂದು ಎದ್ದು ತೋರುತ್ತದೆ.

ಜಾಗತೀಕರಣದ ಸಂದರ್ಭದಲ್ಲಿ ವೈಜ್ಞಾನಿಕವಾಗಿ, ಮಾನಸಿಕವಾಗಿ ಕುಬ್ಜವಾಗುತ್ತಿರುವ ಈ ಯಾಂತ್ರಿಕ ಯುಗದ ಮಾನವನೆಂಬ ಪ್ರಾಣಿ ಒಬ್ಬನಿಂದ ಒಬ್ಬ ವಿಮುಖನಾಗುತ್ತಾ; ಅಪನಂಬಿಕೆ, ದ್ವೇಷ ಮತ್ಸರಗಳು, ಕಾಮುಕತನ ಎಲ್ಲವೂ ಆವರಿಸುತ್ತಿರುವಂಥ ಈ ಸಂದಿಗ್ಧ ಸ್ಥಿತಿಯಲ್ಲಿ ನಮಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂಬ ಸತ್ಯವನ್ನು ಈ ಕಾದಂಬರಿ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವುದು ನಮ್ಮ ಅನುಭವಕ್ಕೆ ವೇದ್ಯವಾಗುತ್ತದೆ. ಈ ‘ಅರ್ಥ ಮಾಡಿಕೊಳ್ಳುವಿಕೆ’ ಇಂದಿನ ಜರೂರಿಯೂ ಹೌದು.

ಒಮ್ಮೆ ತನ್ನ ತಂದೆ ತನ್ನನ್ನು ಎತ್ತಿ ‘ಖಾಲಿ ಚೀಲವನ್ನು ಬಿಸಾಕಿದಂತೆ ಬಿಸಾಕಿದ’ ರೀತಿಗೆ ಅವನೊಳಗೆ ‘ಹಿರಣ್ಯಕಷಿಪು’ವನ್ನು ಕಂಡ ಮಗ ಮೌನೇಶ, ಒಳಗೆ ಅಡುಗೆ ಕೋಣೆಯೊಳಗೆ ತಾಯಿ-ತಂದೆ ಕುಳಿತು ಆಡುವ ಮಾತು ಮತ್ತು ಮೌನಗಳ ನಡುವಿನ ಸುಳಿಯಲ್ಲಿ ಅಪ್ಪನ ‘ಹಿರಣ್ಯಕಷಿಪು’ವಿನ ಚಿತ್ರ ಮಾಯವಾಗಿ ಅಪ್ಪನ ನಿಜ ವ್ಯಕ್ತಿತ್ವವನ್ನು ಕಂಡುಕೊಳ್ಳುತ್ತಾನೆ.

ಓರ್ವ ಶಾಲಾ ಶಿಕ್ಷಕನಾಗಿದ್ದು ಶಿಷ್ಯನನ್ನು; ಅವನೊಳಗಿನ ಪ್ರತಿಭೆಯನ್ನು ಅರ್ಥೈಸಿಕೊಳ್ಳುವ ಸರಗಣಾಚಾರಿ; ಗುರುವಿನ ಇಚ್ಛೆಯನ್ನು ಅರಿತು ನಡೆದುಕೊಳ್ಳುವ ಶಿಷ್ಯ ಮೌನೇಶ – ಇಂತಹ ಹತ್ತು ಹಲವು ಅರ್ಥೈಸಿಕೊಳ್ಳುವ ರೀತಿ ಈ ಕಾದಂಬರಿಯುದ್ದಕ್ಕೂ ಬರುವುದನ್ನು ಕಾಣಬಹುದು. ಹಳ್ಳಿ ಬದುಕಿನ ಜೀವನ ದರ್ಶಿಸುವ ಓರ್ವ ಸಾಮಾನ್ಯ ಸೂಲಗಿತ್ತಿ, ಹಿರಿಜೀವದ ಅಂತಃಕರಣ; ನಲ್ಲು ಭಾಭಿಯ ಎಂಟು ವರ್ಷದ ನೀಲೇಶನ ಮುಗುಳುನಗು, ಮುಂಬಯಿ ನಗರದಲ್ಲಿ ಬೆಂಕಿಗೂಡಿನಂಥ ಮನೆಯಲ್ಲಿರುವ ತಾರಾಬೇನ್, ಜಿಗ್ನೇಶ್‍ಭಾಯ್ ಪಟೇಲ್ – ಅವರಲ್ಲಿನ ಮಾನವೀಯತೆ, ರೈಲು ಡಬ್ಬಗಳೊಳಗೆ ಹೆಣಗಾಡುತ್ತಿರುವ ಜೀವಗಳು ರೈಲಿನಲ್ಲಿ ಇರುವಷ್ಟು ಹೊತ್ತು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ರೀತಿ, ಜೊತೆಗೆ ಮುಂಬಯಿ ರೈಲು ರೂಪಕವಾಗುವ ಪರಿ – ಹೀಗೆ ಮುಂಬಯಿ ಎಂಬ ಮಾಯಾನಗರಿಯೊಂದರ ಒಡಲನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪರಿಯೂ ಇಲ್ಲಿ ಅನನ್ಯವಾಗಿ ಮೂಡಿ ಬಂದಿದೆ.

ಪತಿ ಮೌನೇಶನನ್ನು, ಆತನ ಚಿತ್ರಗಳನ್ನು ದಾಟಿ ಆತನನ್ನು ಅರ್ಥೈಸಿಕೊಳ್ಳುವ ಪತ್ನಿ ಶೈಲಾ ಹಾಗೂ ತನ್ನ ಮಗನನ್ನು ಅರ್ಥೈಸುವ ತಾಯಿ ಕಾಮಾಕ್ಷಿ – ಈ ಎರಡೂ ಭಾಗಗಳು ಕಾವ್ಯಾತ್ಮಕವಾಗಿ ಲೇಖಕಿಯ ಲೇಖನಿಯ ಶಕ್ತಿಯನ್ನು ತೋರಿಸುತ್ತದೆ.

ಇಲ್ಲಿನ ಭಾಷೆ ಕಾದಂಬರಿಯ ಒಳಗಿನಿಂದಲೇ ಮೂಡಿ ಬಂದಿದ್ದರಿಂದ ಕೃತಕ ಎಂದೆನಿಸುವುದಿಲ್ಲ. ಆದ್ದರಿಂದಲೇ ಕಾದಂಬರಿಯ ಓದು ಓದುಗನಿಗೆ ತೊಡಕಾಗುವುದಿಲ್ಲ.

‘ಮದುವೆಯಾದ ಎರಡು ವರ್ಷಕ್ಕೆಲ್ಲ ಹೊಸ ಜೀವವೊಂದು ಮೊಳಕೆಯೊಡೆಯುತ್ತಲೇ ಮುರುಟಿ ಮತ್ತಾರು ತಿಂಗಳಿಗೆ ಒಡಲಲ್ಲಿ ಮತ್ತೊಂದು ಮುಗುಳು ಮೂಡಿತು’

‘ಸೀಳು ಮರೆಯಾಗಿ ಕೇವಲ ಒಂದು ಗೆರೆಯಾಗಿ ಗತಕಾಲದ ಗುರುತಾಗಿ ಮಾತ್ರ ಉಳಿದುಕೊಂಡಿತು’

‘ಎರಡೂ ಬದಿಯ ಸಮ್ಮತಿಯ ನಡುವೆ ಪ್ರೇಮ ಪತ್ರಗಳು ಅರಳುವ ಸಕಾಲವಿದು’

‘ಅಡುಗೆ ತಯಾರಿಯಲ್ಲಿದ್ದ ಅವ್ವನನ್ನು, ಒಲೆಯಲ್ಲಿನ ಬೆಂಕಿಯನ್ನು ಸುಮ್ಮನೆ ಮಿಕಮಿಕ ನೋಡುತ್ತಾ ಕುಳಿತ’

‘ಕಾಮಾಕ್ಷಿ ಅತ್ತ ರೀತಿಗೆ ಮಗುವಿನ ಹೃದಯವೂ ಧಗ್ ಅಂದಿರಲು ಸಾಕು, ಅದೂ ಅಳಲು ಶುರು ಮಾಡಿತು’

‘ಅದೇ ಹೊತ್ತಿಗೆ ಅಕ್ಕಪಕ್ಕದ ಮನೆಗಳಲ್ಲೂ ರೊಟ್ಟಿ ಬಡೆಯುವ ಸದ್ದು ಕೇಳತೊಡಗಿ, ಅದು ಅವರೆಲ್ಲ ಪರಸ್ಪರ ಆ ಸದ್ದಿನ ಮೂಲಕವೇ ಮಾತನಾಡಿಕೊಳ್ಳುತ್ತಿದ್ದಾರೇನೋ ಅನಿಸಿ ಭಾಗೀರತಿಗೆ ನಗು ಬರುತ್ತಿತ್ತು’ –

ಇಂತಹ ಕಾವ್ಯಾತ್ಮಕ ಸಾಲುಗಳು ಕಾದಂಬರಿಯುದ್ದಕ್ಕೂ ಬಂದು ಕಾದಂಬರಿಯ ಜೊತೆಜೊತೆಗೆ ಒಂದು ಕಾವ್ಯದ ರಸಾನುಭವವನೂ ನೀಡುತ್ತವೆ. ಸಿದ್ಧ ಮಾದರಿಯ ಕಾದಂಬರಿಯ ಹಾಗಿಯನ್ನು ಬಿಟ್ಟುಕೊಟ್ಟಿದ್ದರಿಂದಲೇ ಔದಾರು ಪುಟಗಳಲ್ಲಿ ಹೇಳಬೇಕಾದುದನ್ನು ಐದಾರು ವಾಕ್ಯಗಳಲ್ಲಿ ಹೇಳಿಮುಗಿಸಿ, ಓದು ಮುಗಿಸಿದ ನಂತರವೂ ಓದುಗನನ್ನು ಚಿಂತನೆ ಹಚ್ಚುವಂತೆ ಮಾಡುತ್ತದೆ.

ಇಲ್ಲಿನ ಮೌನೇಶ ಹುಟ್ಟು ಕಲಾವಿದನಲ್ಲ; ತಾನು ದೊಡ್ಡ ಚಿತ್ರಕಲಾವಿದನಾಗಬೇಕೆಂಬ ಮನದಿಚ್ಛೆಯನ್ನೂ ಹೊಂದಿದವನಲ್ಲ. ಆತನ ಹುಟ್ಟು, ಪರಿಸರ, ಒಟ್ಟು ಬದುಕು ಆತನನ್ನು ಕಲಾವಿದನಾಗಿ ರೂಪಿಸಿದ್ದರಿಂದಲೇ ಈ ಕಾದಂಬರಿಯನ್ನು ಓದುವಾಗ ಎಲ್ಲಿಯೂ ಕೃತಕತೆ ಕಾಣುವುದಿಲ್ಲ.

ಇಲ್ಲಿನ ಯಾವ ಪಾತ್ರಗಳೂ ಅಮುಖ್ಯ ಅನಿಸುವುದಿಲ್ಲ. ಬಂದುಹೋಗುವ ಪಾತ್ರಗಳಾದರೂ ಜೀವ ತುಂಬಿರುವಂಥವು. ಅನಾವಶ್ಯಕ ವಿವರಣೆಗಳಿಲ್ಲದೆ, ಹೇಳುವುದನ್ನು ಸೂಕ್ಷ್ಮವಾಗಿ ಹೇಳಿರುವ; ಕಾದಂಬರಿಯಲ್ಲಿನ ಪಾತ್ರಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿಯೂ ವಿಶ್ಲೇಷಿಸಿರುವ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ.

ಓರ್ವ ಕ್ರಿಯಾಶೀಲ ರಂಗಕರ್ಮಿ, ನಟಿ, ಸೂಕ್ಷ್ಮ ಸಂವೇದನೆಯ ಕವಿ, ನೊಂದವರ ಬಗ್ಗೆ ಅತೀವ ಕಾಳಜಿ – ಇವೆಲ್ಲವನ್ನು ಮೈಗೂಡಿಸಿಕೊಂಡಿರುವುದರಿಂದಲೇ ಜಯಲಕ್ಷ್ಮಿ ಪಾಟೀಲರ ಲೇಖನಿಯಿಂದ ಇಂತಹ ಅಂತಃಕರಣ ತಟ್ಟುವ ಕಾವ್ಯಾತ್ಮಕ ಕಾದಂಬರಿ ಮೂಡಲು ಸಾಧ್ಯವಾಗಿದೆ. ಕಾದಂಬರಿಕಾರ್ತಿಯ ಪ್ರಥಮ ಕಾದಂಬರಿ ಎಂಬ ಮುಲಾಜನ್ನೂ ಈ ಕೃತಿ ಬಯಸುವುದಿಲ್ಲ.

ಕೃತಿಕಾರರನ್ನು ಅಭಿನಂದಿಸುತ್ತಾ; ಬೆನ್ನುಡಿಯಲ್ಲಿ, ಕೆ. ಸತ್ಯನಾರಾಯಣ ಅವರು ಉಲ್ಲೇಖಿಸಿರುವಂತೆ, ‘ಕಾದಂಬರಿಕಾರರಾಗಿ ದೀರ್ಘ ಕಾಲದ ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಮಾಡಲು ಹೊರಟಿರುವ ಜಯಲಕ್ಷ್ಮಿಯವರಿಗೆ ಕನ್ನಡ ಓದುಗರ ಪರವಾಗಿ ಸ್ವಾಗತ ಮತ್ತು ಅಭಿನಂದನೆ’.

ಸಾ. ದಯಾ ಎಂದೇ ಮುಂಬಯಿನ ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿರುವ ದಯಾನಂದ ಸಾಲ್ಯಾನ್ ಅವರು ಮುಂಬಯಿ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯುತ್ತಮ ನಿರ್ದೇಶಕರೂ, ಬದುಕಿನ ಸೂಕ್ಷ್ಮ ಸಮಸ್ಯೆಗಳ ಕುರಿತು ಕಾಳಜಿಪೂರ್ವಕವಾಗಿ ಸಶಕ್ತವಾಗಿ ಬರೆಯುವ ನಾಟಕಕಾರರೂ, ನಟ, ಕವಿ ಮತ್ತು ಕತೆಗಾರರೂ ಆಗಿದ್ದಾರೆ.

‍ಲೇಖಕರು avadhi

March 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ahalya

    ನಿಮ್ಮ ಗ್ರಹಿಕೆ ಓದಿ ಖುಶಿಯಾಯ್ತು, ದಯಾ.

    ಪ್ರತಿಕ್ರಿಯೆ
    • Gopal trasi

      ಅಭಿನಂದನೆ ಜಯಲಕ್ಷ್ಮಿಯವರಿಗೆ. ಚೆನ್ನಾಗಿ ವಿಶ್ಲೇಷಿದ್ದೀರಿ ದಯಾ….

      ಪ್ರತಿಕ್ರಿಯೆ
  2. Shyamala Madhav

    ಜಯಲಕ್ಷ್ಮೀ ಅವರ ಮೊದಲನೆಯದಾದರೂ ಚಿತ್ತದಲ್ಲುಳಿವ ಈ ಕೃತಿಯ ಬಗ್ಗೆ ಸಾ.ದಯಾ ವಿಶ್ಲೇಷಣೆ ಖುಶಿ ಕೊಟ್ಟಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: