ಅನಾಮಿಕಾ @ ಹ್ಯಾಂಡ್ ಪೋಸ್ಟ್: ಒಂದು ಮುಟ್ಟಿನ ಬಟ್ಟಲ ಕಥೆ

ಆರನೆಯ ಇಯತ್ತೆ, ಸಂಜೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ. ನಾಟಕದ ಮುಖ್ಯ ಪಾತ್ರಧಾರಿ ನಾನೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣದಿಂದಲೆ ಮೋಟುದ್ದ ಜಡೆಯನ್ನು ಈಟುದ್ದ ಹೆಣೆದು ಓಡಾಡುತ್ತಿದ್ದೆ. ಹಾಲು ಕರೆವ ನೆನಪಾಗಿ ದನದ ಮನೆಗೆ ಹೋಗಿ ಆಕಳ ಬೆನ್ನ ಮೇಲೆ ನೀರು ಚಪ್ಪರಿಸಿ ಕುಕ್ಕರಗಾಲಲ್ಲಿ ಕೂತೆ ಅಷ್ಟೆ, ಒಳತೊಡೆಯೆಲ್ಲ ಕೆಂಪು ಕೆಂಪು ಅಂಟು!

ಕೂತ ವೇಗದಲ್ಲೆ ಎದ್ದು ಒಳಗೋಡಿದೆ. ಆಗಬಾರದ್ದು ಆಗಿದೆ ಎನ್ನುವ ಮುಖಭಾವದಲ್ಲಿ ದೊಡ್ಡಕ್ಕನ ಮುಂದೆ ಬಿಕ್ಕುತ್ತಿದ್ದೆ. ಹಾಲಿನ ಮೇಲಿನ ನನ್ನ ಪ್ರೀತಿ ಗೊತ್ತಿದ್ದ ದೊಡ್ಡಕ್ಕ ‘ಕೆಂದಾಕಳ ಕೆಚ್ಚಲಿಗೆ ಬಾಯಿ ಹಾಕಿ ಒದೆಯಿಸಿಕೊಂಡೆಯ’ ಮೊದಲ ಪ್ರಶ್ನೆ… ಗಲ್ಲ ಉಬ್ಬಿಸಿ ಊಹೂಂ ಅಂದೆ. ಅವಳು ಇನ್ನಷ್ಟು ನನ್ನ ಮರ್ಯಾದೆ ತೆಗೆಯುವ ಮೊದಲೆ ತೊಡೆಗೆಲ್ಲ ರಕ್ತ ಹತ್ತಿದೆ ಎಂದೆ.

ಆಂ!! ಎಂದವಳೆ, …. ದೊಡ್ಡವಳಾದಳು ಎಂದು ಘೋಷಿಸಿದಳು. ನಮ್ಮ ಊರಿಗಿನ್ನು ಪ್ಯಾಡ್ ಗಳು ಕಾಲಿಡದ ದಿನಗಳು. ಅವ್ವ ತನ್ನ ಒಂದು ಕಾಟನ್ ಸೀರೆ ಹರಿದು ಚಚ್ಚೌಕದ ತುಂಡುಗಳನ್ನು ಮಾಡಿದಳು. ದೊಡ್ಡಕ್ಕ ಆ ಚಚ್ಚೌಕವನ್ನು ತ್ರಿಕೋನ ಮಾಡಿ, ಅದನ್ನು ಹಾಗೆ ಹಾಗೆ ಪಟ್ಟಿಯಂತೆ ನಾಲ್ಕಂಗುಲಕ್ಕೆ ತಂದು ಹಾಕಿಕೊ ಅಂದಳು. ನಾನು ದಿಗ್ಭಾಂತ್ರಳಾಗಿ ಎಲ್ಲಿ ಹೇಗೆ ಎಂದೆ?

ಹಣೆ ಹಣೆ ಚಚ್ಚಿಕೊಂಡು ಹಾಕಿಸಿದಳು! ಇದು ಇನ್ನು ಮುಂದೆ ನಿನಗೆ ಪ್ರತಿ ತಿಂಗಳ ಕಾರ್ಯಕ್ರಮ ಎಂದು ತಿಳಿಸಿ ಕೊಡುವವರೆಗೆ ಅವ್ವ ಮತ್ತು ಅಕ್ಕಂದಿರಿಗೆ ಸಾಕು ಸಾಕಾಗಿತ್ತು. ಬಾಲವಾಡಿಯಿಂದ ಹುಡುಗರ ಜೊತೆ ಬೆಳೆದಿದ್ದಕ್ಕೊ ಏನೊ ಅಪ್ಪ-ಅವ್ವ ಅಕ್ಕಂದಿರಿಗೆ ಮಾಡಿದ ರೀತಿ ಸೀರೆ, ಆರತಿ ಅಂತೇನು ಮಾಡದೆ ರುಚಿರುಚಿಯಾದ ಅಂಟುಂಡೆ, ಹಾಲು ತುಪ್ಪ ತಿನ್ನಿಸಿದ್ದಷ್ಟೆ ನಾನು ದೊಡ್ಡವಳಾದ ಕಾರ್ಯಕ್ರಮ.

ಅದರ ನಂತರದ ಮೊದಲ ತಿಂಗಳು ನನಗಿನ್ನು ನೆನಪಿದೆ. ಒಂದಕ್ಕೆಂದು ಹೋಗಿ ಬಂದಾಗಲೆಲ್ಲ ಬಟ್ಟೆ ಬದಲಾಯಿಸಿ ಬದಲಾಯಿಸಿ ತೊಳೆದು ಹಾಕುವ ತಲೆನೋವು ತಂದಿದ್ದೆ ದೊಡ್ಡಕ್ಕನಿಗೆ. ಐದು ದಿನ ಮುಗಿದ ಮೇಲು ನಾನು ಅಡ್ಡಾದಿಡ್ಡಿ ನಡೆದಾಡುವುದನ್ನು ನೋಡಿದ ಸಣ್ಣಕ್ಕ “ಯಾಕೆ?” ಅಂದಳು. “ಬಟ್ಟೆ” ಎಂದೆ ಕೆಟ್ಟ ಮುಖದಲ್ಲಿ. “ಮುಗಿಯಿತಲ್ವ?” ಅಂದಳು. “ಆದ್ರು ಹಾಕಬೇಕಲ್ವ?” ಅಂದೆ.
“ಇಲ್ಲ ಮಾರಾಯ್ತಿ, ಐದೆ ದಿನ,” ಎಂದಳು. ಖುಷಿಯಲ್ಲಿ ಕುಣಿದಾಡುವುದೊಂದು ಬಾಕಿ.

ಹೈಸ್ಕೂಲ್ ಮುಗಿವ ದಿನಗಳವರೆಗೆ ನನ್ನ ಮುಟ್ಟಿನ ಬಟ್ಟೆಗಳನ್ನು ದೊಡ್ಡಕ್ಕನೆ ತೊಳೆಯುತ್ತಿದ್ದಳು. ಆಗಿನ ನನ್ನ ವಡ್ಡತನ ನೆನಪಿಸಿಕೊಂಡರೆ ಈಗಲೂ ನಾಚಿಕೆಯಾಗುತ್ತದೆ. ನಂತರ ಅವಳ ಮದುವೆಯಾಯಿತು. ಆಗ ಅವ್ವ ಬಟ್ಟೆ ತೊಳೆದು ಒಣಗಿಸುವುದರಿಂದ ಹಿಡಿದು, ಐದು ದಿನಗಳು ಮುಗಿದ ನಂತರ ಆ ಬಟ್ಟೆಗಳನ್ನು ನೀರಲ್ಲಿ ಕುದಿಸಿ, ತೊಳೆದು, ಬಿಸಿಲಲ್ಲಿ ಒಣಗಿಸಿ ಇಡುವ ಕ್ರಮಗಳನ್ನೆಲ್ಲ ಹೇಳಿಕೊಟ್ಟಿದ್ದಳು. ಈಗಲೂ ನಾನು ಅದನ್ನೆ ಪಾಲಿಸುವುದು.

ಮೊದಲ ಸಲ ಬಟ್ಟೆ ತೊಳೆಯುವಾಗ ಒಂಥರಾ ಹಸಿಹಸಿ ವಾಸನೆ. ಈ ಥರದ ವಾಸನೆಯನ್ನು ನಾನು ಈ ಮೊದಲು ಎಲ್ಲೊ ಗಮನಿಸಿದ್ದೇನೆ. ಎಲ್ಲಿ ಅಂತ ನೆನಪಾಗುತ್ತಿಲ್ಲ ಅಂತ ಯೋಚಿಸುತ್ತಲೆ ಇದ್ದೆ. ಒಂದು ರಾತ್ರಿ ಅಕ್ಕನ ಮಗ ಮೊಟ್ಟೆ ಟ್ರೇ ಬೀಳಿಸಿದ! ವಾಸನೆಯ ಮೂಲ ಭಗ್ ಎಂದು ಹೊಳೆಯಿತು. ನಾವು ಚಿಕ್ಕವರಿದ್ದಾಗ ದೊಡ್ಡಕಾಕಾ ಒಂದು ಕೋಳಿ ಫಾರಂ ಮಾಡಿದ್ದರು. ಮುಕ್ಕಾದ ಮೊಟ್ಟೆಗಳು ಮಾರಾಟಕ್ಕಿಲ್ಲ ಎನ್ನುವುದು ಮಕ್ಕಳ ಸ್ವಯಂ ಘೋಷಣೆ. ಮೊಟ್ಟೆಗಳನ್ನ ಹ್ಹಾಗ್ಹಾಗೆ ಒಡೆದು ನುಂಗುವ ಪಂದ್ಯ. ತತ್ತಿಯ ವಾಸನೆ ನುಂಗುವಾಗ ಬಾರದು ನುಂಗಿದ ಮೇಲೆ ನಾಲಗೆಯನ್ನ ಅಂಗಳಕ್ಕೆ ತಾಗಿಸಿದಾಗ ಮೂಗಿಗೆ ಆ ಹಸಿಹಸಿ ವಾಸನೆಯ ಪರಿಚಯ ಆಗುವುದು. ‘ಮುಟ್ಟು ಮೊಟ್ಟೆ ಒಂದೆಯಾ’ ಎನ್ನುವ ಮಾತು ‘ಮಂಗನ ಬ್ಯಾಟೆ’ಯಲ್ಲೂ ಬಂದಿದೆ.

 

ಆಮೇಲೆ ಇದರ ಬಗ್ಗೆ ಕೇಳಿದಾಗಲೆಲ್ಲ ಅನೇಕರು ಅದರ ವಾಸನೆ ಯಾರಿಗೆ ಬೇಕು ಮಾರಾಯ್ತಿ, ಮೂಗು ಮುಚ್ಚಿಯೇ ಆ ಬಟ್ಟೆ ತೊಳೆಯುವುದು ಎಂದು ಉತ್ತರಿಸಿದ್ದಾರೆ. ನನಗಂತೂ ಅದರ ಬಗ್ಗೆ ಆ ಮಟ್ಟಿನ ಹೇವರಿಕೆ ಯಾವತ್ತು ಆಗಿಲ್ಲ. ಅವ್ವನ ಗರ್ಭಕೋಶ ತೆಗೆವ ಆಪರೇಷನ್ ಆದಾಗ ನಾ ಡಿಗ್ರಿಯಲ್ಲಿದ್ದೆ. ಆ ಶಸ್ತ್ರಚಿಕಿತ್ಸೆಗೂ ಮುಂಚಿನ ದಿನಗಳಲ್ಲಿ ವಿಪರೀತ ರಕ್ತಸ್ರಾವದಿಂದ ಬಳಲಿದ್ದ ಅವ್ವನಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ. ಆಗೆಲ್ಲ ಅವರ ಆ ಬಟ್ಟೆಗಳನ್ನು ತೊಳೆದು ಹಾಕಿದ್ದು ನಾನೆ. ಎರಡನೆ ಅಕ್ಕನ ಹೆರಿಗೆ ಸಮಯದಲ್ಲಿ ‘ಮೈಮೇಲೆ’ ಹೋಗಿದ್ದನ್ನು ಅವ್ವ ಆಸ್ಪತ್ರೆಯ ಸಿಸ್ಟರ್ಸ್ ಕಡೆಯಿಂದ ತೆಗೆಯಲು ಬಿಟ್ಟಿರಲಿಲ್ಲ ನಾವೆ ಸ್ವಚ್ಛ ಮಾಡಿದ್ದು.

ಪ್ಯಾಡ್ ಗಳನ್ನು ಬಳಸುವುದು ನನಗೆ ಅಷ್ಟಾಗಿ ಒಗ್ಗಲೆ ಇಲ್ಲ. ಎಷ್ಟೆ ಉದ್ದದ ಪ್ಯಾಡ್ ಗಳು ಎಂದರು ಅಂಗಾತ ಮಲಗಿದಾಗ ಮುಟ್ಟು ಪುಳಕ್ಕನೆ ಜಾರಿ ಹಿಂದಿನಿಂದ ಹಾಸಿಗೆಯನ್ನು ಕಲೆಯಾಗಿಸಿದರೆ? ಎನ್ನುವ ಯೋಚನೆಗೆ ನಾನು ತೀರಾ ಅಸ್ವಸ್ಥಳಾಗುತ್ತೇನೆ. ಚಡ್ಡಿಯ ಅಂಚಿನವರೆಗೆ ಹಾಕಿಕೊಳ್ಳಬಹುದಾದ ಬಟ್ಟೆ ನೀಡುವ ಎಲ್ಲು ಏನು ಆಗಲ್ಲ ಎನ್ನುವ ಭರವಸೆಯನ್ನು ಪ್ಯಾಡ್ ಗಳು ಕೊಡಲೆ ಇಲ್ಲ.

ಮಹಾನಗರದಲ್ಲಂತು ಕಸದ ಜೊತೆಯೆ ಪ್ಯಾಡ್ ಗಳನ್ನು ಬಿಸಾಕುವುದು ಕಂಡರೆ ನನಗೆ ಮೈನಡುಕ. ಕನಿಷ್ಠ ಪೇಪರ್ ನಲ್ಲಿ ನೀಟಾಗಿ ಸುತ್ತಿ ಎಸೆಯಲಾಗದ ಒಂದು ಸಾಮಾಜಿಕ ಸೌಜನ್ಯವಿಲ್ಲದ್ದನ್ನು ಕಂಡ ಮೇಲಂತೂ ತೀರಾ ಅನಿವಾರ್ಯ ಅಂತಲ್ಲದೆ ನಾನು ಪ್ಯಾಡ್ ಉಪಯೋಗಿಸುವುದೆ ಇಲ್ಲ.

ವಿಲೇವಾರಿ ಮಾಡುವುದು ಕೂಡ ತೊಳೆದು ಒಣಗಿಸಿ, ಅಷ್ಟನ್ನು ಒಂದೆ ಕವರ್ ನಲ್ಲಿ ಹಾಕಿ, ಕಸದ ಗಾಡಿಯವರಿಗೆ ಇದು ಪ್ಯಾಡ್ ಗಳ ಕವರ್ ಅಂತ ಹೇಳಿಯೆ ಕೊಡುತ್ತೇನೆ. ಈ ಕ್ರಮವನ್ನು ಸಾಂಕ್ರಾಮಿಕ ಮಾಡಿದ ಮೇಲೆ ಸ್ನೇಹಿತೆಯರೆಲ್ಲ ನನ್ನ ಮೇಲೆ ರೇಗುತ್ತಿದ್ದಾಗಲೆ ‘ಟ್ಯಾಂಪೋನ್ಸ್’ ಟ್ರೈ ಮಾಡುವ ಎಂದು ಮಾಡಿದ್ದು. ಅದೂ ಸರಿ ಹೋಗಲಿಲ್ಲ. ನಾನು ಬಟ್ಟೆಗಳ ಜೊತೆ ಆರಾಮಾಗಿದ್ದಾಗ, ಅವರು ಪ್ಯಾಡಿನ ವಿಲೇವಾರಿ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದಾಗ ಬಂದಿತು menstrual cup.

ಸಿಲಿಕಾನ್ ಮೆಟಿರಿಯಲ್. ಒಂದು ಸಲ ತಗೊಂಡ್ರೆ ಮೂರರಿಂದ ಐದು ವರ್ಷ ಬಳಸಬಹುದು. ಚಿಕ್ಕದು, ಮಧ್ಯಮ, ದೊಡ್ಡವು ಮೂರು ಅಳತೆಯಲ್ಲಿ. ಯಾರು ಯಾರು ಉಪಯೋಗಿಸಬಹುದು, ಹೇಗೆ ಉಪಯೋಗಿಸಬಹುದು ಎನ್ನವುದರ ಕುರಿತು ಯೂಟ್ಯೂಬ್ ನಲ್ಲಿ ಮಾಹಿತಿಯ ಮಹಾಪೂರ. ಅದರಲ್ಲಿ ಒಬ್ಬಳ ವಿವರಣೆ ಬಲು ತಮಾಷೆಯಾಗಿತ್ತು. ನಿಮಗೆ ಯಾವ ಅಳತೆಯ ಮುಟ್ಟಿನ ಬಟ್ಟಲು ಬೇಕು ಎಂದು ಗೊತ್ತಾಗಬೇಕು ಎಂದರೆ ಹೀಗೆ ಬೆರಳಿಂದ ಅಳೆದು ಆಯ್ಕೆ ಮಾಡಿಕೊಳ್ಳಬೇಕು! ಎಂದು ಅವಳು ವಿವರಿಸಿದ್ದು ದೇವರಿಗೆ ಪ್ರೀತಿ.

ಹದಿನಾರು ವರ್ಷದ ಹೆಣ್ಣುಮಕ್ಕಳಿಂದ ಎಲ್ಲ ವಯೋಮಾನದ ಹೆಣ್ಣುಮಕ್ಕಳು ಇದನ್ನು ಬಳಸಬಹುದು ಎನ್ನುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಸರಿ ಅಂತ ಜೊತೆಗಿರುವ ಕಾವ್ ಮತ್ತು ಭಾಗೂ ಪ್ರಯೋಗ ಮಾಡಿ ನೋಡಿಯೆ ಬಿಡೋಣ ಎಂದು ಅಖಾಡಕ್ಕಿಳಿದರು. ಸರಿ ಗೂಗಲ್ ನಲ್ಲಿ ಅತ್ಯುತ್ತಮ ರೇಟಿಂಗ್ ಇರುವ ವೈಬ್ ಸೈಟ್ ನಿಂದ ಆರ್ಡರ್ ಮಾಡಿದರು. ಬಂದು ಕೈ ಸೇರಿದವು ನೋಡಿ ಮುಟ್ಟಿನ ಬಟ್ಟಲುಗಳು!

ಡೇಟ್ ಬಂದಾಗಲೆ ಟ್ರೈ ಮಾಡುವುದ? ಮೊದಲೆ ಒಂದು ಸಲ ಟ್ರೈ ಮಾಡಿ ನೋಡುವುದ ಎನ್ನುವ ಪ್ರಶ್ನೆ ಎದುರಾಯಿತು. ಯಾವುದಕ್ಕು ಒಂದು ಸಲ ಮೊದಲೆ ಟ್ರೈ ಮಾಡಿ ನೋಡ್ತೀನಿ ಎನ್ನುವ ನಿರ್ಧಾರಕ್ಕೆ ಬಂದ ಕಾವ್ ಮೊದಲ ಗಿನಿ ಪಿಗ್. ಬಾತ್ ರೂಮಿನಿಂದ ಹೊರ ಬಂದವಳ ಮುಖವನ್ನು ನಾವು ಪಾಸಿಟಿವ್ ಅಥವಾ ನೆಗೆಟಿವ್ ಅನ್ನೊ ರೇಂಜಿನಲ್ಲಿ ಎಕ್ಸೈಟ್ ಆಗಿ ನೋಡುತ್ತಿದ್ದೆವು. ಮಿಷನ್ ಪ್ಲಾಪ್! ನಂತರದ್ದು ಭಾಗೂ, ಮುಟ್ಟಿನ ದಿನಗಳಲ್ಲೆ ಟ್ರೈ ಮಾಡುವೆ ಎಂದು ಈ ತಿಂಗಳು ಮುಂದಿನ ತಿಂಗಳು ಪ್ರಯೋಗದ ದಿನವನ್ನು ಮುಂದೂಡುತ್ತಲೆ ಇದ್ದಳು. ನಡುವೆ ಆರೋಗ್ಯ ಬೇರೆ ಸ್ವಲ್ಪ ಕೈಕೊಟ್ಟಿತು.

ಇರ್ಲಿ ಬಿಡು ಮಾಡೋಣ ತಿಂಗಳು ತಿಂಗಳು ಇದ್ದಿದ್ದೆ ಅಲ್ವ ಎನ್ನುವಾಗಲೆ, ಕಂಗ್ರಾಟ್ಸ್. ಒಂದುವರೆ ತಿಂಗಳು ಸಿಹಿ ಸುದ್ದಿ ಎಂದರು ಡಾಕ್ಟರ್! ಭಾಗೂಗೆ ಇನ್ನೊಂದು ಅಥವಾ ಒಂದುವರೆ ವರ್ಷ ಇದರ ತಲೆಬಿಸಿಯೆ ಇಲ್ಲ. ನನಗೆ ಮಾತ್ರ ಎನ್ನುತ್ತ ಚಿಂತಾಕ್ರಾಂತಳಾಗಿರುವ ಕಾವ್ ಗೆ, ಇದು ಕೊರೊನ ಸಮಯ ಆಗಿರದೆ ಹೋಗಿದ್ದರೆ ಮುಂದಿನ ತಿಂಗಳು ನಿನ್ನ ಮದುವೆ ಮಾಡುತ್ತಿದ್ದೆ ಎಂದು ನಾನು ಕಾಲೆಳೆಯುತ್ತಿದ್ದೇನೆ!

‍ಲೇಖಕರು avadhi

March 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: