ಅಂಗೋಲಾದಿಂದ ವಾಪಸ್ ಬಂದ್ರು ಪ್ರಸಾದ್ ನಾಯ್ಕ್


ಅಂಗೋಲಾದ ಒಂದೊಂದೇ ಗ್ರಾಮಗಳನ್ನು ಸ್ಥಳೀಯ ಸರಕಾರಿ ಇಲಾಖೆಯೊಂದಕ್ಕೆ ಅಧಿಕೃತವಾಗಿ ಹಸ್ತಾಂತರಿಸುತ್ತಲೇ ನಮ್ಮ ಪಾಲಿನ ಅಂಗೋಲಾ ದಿನಗಳು ಕೊನೆಯಾಗುತ್ತಿರುವ ಸೂಚನೆಯು ಹಿಂದೆಂದಿಗಿಂತಲೂ ಸ್ಪಷ್ಟವಾಗಿ ನಮಗೆ ಕಾಣಿಸುತ್ತಿದ್ದವು.
ಅಷ್ಟಕ್ಕೂ ಈವರೆಗೆ ನಾವು ಭಾರತಕ್ಕೆ ಮರಳಬೇಕಿತ್ತು ಎಂಬ ಮಾತುಗಳು ಆಗಲೇ ನಮ್ಮ ವಲಯದಲ್ಲಿ ಕೇಳತೊಡಗಿದ್ದವು. ಎಡೆಬಿಡದ ಮಳೆಯಿಂದಾಗಿ ಬೇಗನೇ ಮುಗಿಸಬೇಕಿದ್ದ ಕಾಮಗಾರಿ ಕೆಲಸಗಳು ಮೂರು ತಿಂಗಳುಗಳ ಕಾಲ ವಿಳಂಬವಾಗಿದ್ದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲವೂ ನಿಗದಿತ ವೇಳಾಪಟ್ಟಿಯಂತೆಯೇ ನಡೆಯುತ್ತಿತ್ತು. ಮಳೆಯು ಸಂಪೂರ್ಣವಾಗಿ ಇಳಿದ ನಂತರವಂತೂ ಕೆಲಸದ ವೇಗಕ್ಕೆ ಮತ್ತಷ್ಟು ಶಕ್ತಿಯೂ ಬಂದು ಆಗಬೇಕಿದ್ದ ಕಾರ್ಯಗಳು ತ್ವರಿತಗತಿಯಲ್ಲಿ ಮುಂದೆ ಸಾಗಿದವು. ಇನ್ನು ಒಂದೆರಡು ತಿಂಗಳುಗಳ ಸಂಬಳವು ವಿಳಂಬವಾಗಿ ಕೈಸೇರಿತೆಂಬ ಕಾರ್ಮಿಕರ ದೂರುಗಳನ್ನು, ಮುಷ್ಕರಗಳನ್ನು ಅಂಗೋಲಾದ ಮೂಲೆಯೊಂದರಲ್ಲಿ ಕುಳಿತು ಬೆಲ್ಜಿಯಂ-ಪೋರ್ಚುಗಲ್-ನ್ಯೂಯಾರ್ಕ್ ಜಪ ಜಪಿಸುತ್ತಾ ಸಂಭಾಳಿಸುವಷ್ಟರಲ್ಲಿ ನನ್ನನ್ನು ಬಿಟ್ಟು ಉಳಿದವರೆಲ್ಲರಿಗೂ ಸಾಕುಸಾಕಾಗಿತ್ತು. ನನ್ನೊಂದಿಗಿದ್ದ ಹಿರಿಯ ಸಹೋದ್ಯೋಗಿಗಂತೂ ಅದ್ಯಾವಾಗ ಭಾರತ ತಲುಪುತ್ತೇನೋ ಎಂಬಂತೆ ನಿತ್ಯವೂ ಶಥಪಥ ತಿರುಗುವುದೇ ಕೆಲಸವಾಗಿಬಿಟ್ಟಿತ್ತು. ಅಚ್ಚರಿಯೆಂದರೆ ಜೊತೆಗಿದ್ದ ಬಿಳಿಯ ಪೋರ್ಚುಗೀಸರೂ ಕೂಡ ಆದಷ್ಟು ಬೇಗ ಅಂಗೋಲಾ ಯೋಜನೆಯ ಕೆಲಸವನ್ನು ಮುಗಿಸಿ ಅಲ್ಲಿಂದ ಕಾಲ್ಕೀಳಲು ಉತ್ಸುಕರಾಗಿರುವಂತೆ ಕಂಡರು. ಅಂತೂ ಇವರೆಲ್ಲರ ಮಧ್ಯೆ ನಾನೊಬ್ಬ ಮಾತ್ರ ವಿಚಿತ್ರ ಅಪವಾದದಂತೆ ಜೀವಿಸುತ್ತಿದ್ದೆ.

“ನೀವ್ಯಾವಾಗ ಭಾರತಕ್ಕೆ ಮರಳುವುದು?”, ಎಂಬುದು ಎಲ್ಲರ ಪ್ರಶ್ನೆಯಾಗಿದ್ದರೆ ನನ್ನ ಕ್ಷಣಗಳಂತೂ ಅಂಗೋಲಾದಲ್ಲಿ ಮತ್ತಷ್ಟು ದಿನಗಳು ಸಿಗಬಾರದೇ ಎಂಬ ನಿರೀಕ್ಷೆಯಲ್ಲಿ ಸಾಗುತ್ತಿದ್ದವು. ಅಂಗೋಲಾ ವಲಯದಲ್ಲಂತೂ ಇದು ಎಲ್ಲರಿಗೂ ಆಶ್ಚರ್ಯಕರವಾಗಿದ್ದ ಸಂಗತಿಯೂ ಹೌದಾಗಿತ್ತು. ನನ್ನ ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಸಹೋದ್ಯೋಗಿಗಳು ವರ್ಷಕ್ಕೆ ಮೂರು ಬಾರಿ ತಮ್ಮ ತಾಯ್ನಾಡಿಗೆ ಹೋಗಿ ಬರುತ್ತಿದ್ದರೆ ನಾನು ಮಾತ್ರ ವರ್ಷಕ್ಕೊಮ್ಮೆಯಷ್ಟೇ ಹೋಗಿಬರುತ್ತಾ ಅದೇನೂ ದೊಡ್ಡ ಸಂಗತಿಯಲ್ಲವೆಂಬಂತೆ ವ್ಯವಹರಿಸುತ್ತಿದ್ದೆ. ಒಟ್ಟಿನಲ್ಲಿ ನಮ್ಮ ಡೇರೆಗಳು ದಿನಗಳೆದಂತೆ ಖಾಲಿಯಾಗುತ್ತಾ ಹೋದವು. ಒಬ್ಬೊಬ್ಬರೇ ಅಧಿಕಾರಿಗಳು ಮರಳುತ್ತಿದ್ದಂತೆಯೇ ಕ್ಯಾಂಪಸ್ಸು ಭಣಗುಡಲಾರಂಭಿಸಿತ್ತು. ಇಂದಲ್ಲಾ ನಾಳೆ ಎಲ್ಲರೂ ಹೊರಹೋಗಲೇಬೇಕೆಂಬ ಸತ್ಯವನ್ನು ಮತ್ತೆ ಮತ್ತೆ ಎಚ್ಚರಿಸುವಂತೆ ಆ ಖಾಲಿತನಗಳು ನಮ್ಮನ್ನು ಕಾಡಿದವು. ಬೇರೆ ಆಯ್ಕೆಗಳೇ ಇಲ್ಲದೆ ಮತ್ತೆ ದೆಹಲಿಯಲ್ಲಿ ಬೇರೂರುವ ನಿಟ್ಟಿನಲ್ಲಿ ನಾನು ಮಾನಸಿಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ.
ಇವೆಲ್ಲದರ ಮಧ್ಯದಲ್ಲೇ ಕೆಲ ಆಘಾತಕಾರಿ ಸುದ್ದಿಗಳು ತಣ್ಣಗಿನ ಕ್ರೌರ್ಯವುಳ್ಳ ಬೆದರಿಕೆಯಂತೆ ನಮ್ಮನ್ನು ತಲುಪತೊಡಗಿದ್ದವು. ವೀಜ್ ಪ್ರಾಂತ್ಯದ ಕೆಲ ಭಾಗಗಳಲ್ಲಿ ಕಾಲರಾ ಮಹಮ್ಮಾರಿಯ ಆಗಮನವಾಗಿತ್ತು. ವಿಶ್ವಸಂಸ್ಥೆಯ ಕೆಲ ತಂಡಗಳೂ ಕೂಡ ಈ ನಡುವೆ ಬಂದುಹೋಗಿದ್ದವಂತೆ. ಇನ್ನೇನು ನಾವು ಭಾರತಕ್ಕೆ ಮರಳಲು ಕೆಲವೇ ವಾರಗಳು ಉಳಿದಿವೆ ಎಂಬಷ್ಟರಲ್ಲಿ ಪಕ್ಕದ ಕಾಂಗೋದಲ್ಲಿ ಎಬೋಲಾ ಖಾಯಿಲೆಯ ಕೆಲ ಪ್ರಕರಣಗಳು ಪತ್ತೆಯಾಗಿದ್ದವು. ಮುಂದೆ ಕೆಲ ಬೆರಳೆಣಿಕೆಯ ಎಬೋಲಾ ಪ್ರಕರಣಗಳು ಅಂಗೋಲಾದಲ್ಲೂ ಪತ್ತೆಯಾದವೆಂದು ಸರಕಾರಿ ಸ್ವಾಮ್ಯದ ಸುದ್ದಿವಾಹಿನಿಯೊಂದು ವರದಿ ಮಾಡಿತು. ಈ ಗೊಂದಲಗಳ ಮಧ್ಯೆ ನಮಗೆ ಸಮಾಧಾನವನ್ನು ತಂದಿದ್ದ ಏಕೈಕ ಅಂಶವೆಂದರೆ ಎಬೋಲಾ ಖಾಯಿಲೆಯು ಕಾಂಗೋದಲ್ಲಿ ಪತ್ತೆಯಾಗಿದ್ದಾಗಲೀ, ಅಂಗೋಲಾದಲ್ಲಿ ಪತ್ತೆಯಾಗಿದ್ದಾಗಲೀ ಭಾರತೀಯ ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ. ಹೀಗಾಗಿ ಭಾರತದಲ್ಲಿದ್ದ ಬಂಧುಮಿತ್ರರು, ಹಿತೈಷಿಗಳು ಈ ಊಹಾಪೋಹಗಳಿಗೆ ಕಿವಿಯಾಗಿ ನಮ್ಮ ಮೇಲೆ ಬರಬಹುದಾಗಿದ್ದ ಮತ್ತಷ್ಟು ಒತ್ತಡಗಳು ಇಲ್ಲವಾದಂತಾಗಿತ್ತು.
ಸರಕಾರಿ ಯೋಜನೆಗಳು ಯಾವತ್ತೂ ಸಮಯಕ್ಕೆ ಸರಿಯಾಗಿ ಕೊನೆಯಾಗುವುದಿಲ್ಲ ಎಂಬ ಕ್ಲೀಷೆಗಳ ನಡುವೆಯೇ ವಿಶ್ವಬ್ಯಾಂಕ್ ಪ್ರಾಯೋಜಿತ ನಮ್ಮ ಅಂಗೋಲಾ ಯೋಜನೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಹಲವು ಗ್ರಾಮಗಳ ಮನೆಗಳಲ್ಲಿ ಆಗಲೇ ನಲ್ಲಿ ನೀರಿನ ಸೌಲಭ್ಯಗಳು ಆರಂಭವಾಗಿ ಗ್ರಾಮಸ್ಥರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿತ್ತು. ಈ ಸೌಲಭ್ಯಗಳು ಇನ್ನೂ ಶುರುವಾಗಿಲ್ಲದ ಗ್ರಾಮಗಳಲ್ಲಿ ತತ್ಸಂಬಂಧಿ ಕಾರ್ಯಗಳು ಕೊನೆಯ ಹಂತದಲ್ಲಿದ್ದು ಒಳ್ಳೆಯ ನಿರೀಕ್ಷೆಯನ್ನು ಅಂಗೋಲನ್ ನಾಗರಿಕರಲ್ಲೂ ಸೇರಿದಂತೆ ನಮ್ಮೆಲ್ಲರಲ್ಲೂ ಹುಟ್ಟುಹಾಕಿದ್ದವು. ಇನ್ನು ಇವೆಲ್ಲದಕ್ಕೂ ಕಿರೀಟವಿಟ್ಟಂತೆ ಅಂಗೋಲಾದ ಮತ್ತಷ್ಟು ಗ್ರಾಮಗಳಿಗೆ ಕುಡಿಯಲು ನಲ್ಲಿ ನೀರಿನ ಸೌಲಭ್ಯಗಳು ಲಭ್ಯವಾಗುವಂತೆ ಸ್ಥಳೀಯ ಸರ್ಕಾರಿ ಇಲಾಖೆಯು ಮೂರನೇ ಹಂತದ ಯೋಜನೆಯನ್ನು ಹುಟ್ಟುಹಾಕಿದ್ದಲ್ಲದೆ ಅದರ ಅನುಷ್ಠಾನಕ್ಕಾಗಿ ಹೊಸದೊಂದು ಸಂಸ್ಥೆಯನ್ನು ಆಯ್ಕೆ ಮಾಡುವಲ್ಲಿಯೂ ಯಶಸ್ವಿಯಾಗಿತ್ತು. ಇದರಿಂದಾಗಿ ಬೆರಳೆಣಿಕೆಯ ಗ್ರಾಮಗಳಿಗೆ ಈಗಾಗಲೇ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಕೊಳವೆ ಜಾಲಗಳು ಮತ್ತಷ್ಟು ಹರಡಿಕೊಂಡು ಪ್ರಾಂತ್ಯದ ಉಳಿದ ಭಾಗಗಳ ನಾಗರಿಕರನ್ನೂ ಯೋಜನೆಯ ಫಲಾನುಭವಿಗಳಾಗಿ ಮಾಡುವತ್ತ ಹೊರಟು ನಿಂತಿತ್ತು.
ಅಂತೂ ವಿಶ್ವ ಫುಟ್ಬಾಲ್ ಪಂದ್ಯಾವಳಿಯ ನಿಮಿತ್ತ ಅಂಗೋಲಾ ಸೇರಿದಂತೆ ವಿಶ್ವದೆಲ್ಲೆಡೆಗಿನ ಫುಟ್ಬಾಲ್ ಪ್ರಿಯರು ವ್ಯಸ್ತವಾಗಿರುವಾಗಲೇ ನಾವು ಮರಳಿ ಭಾರತದತ್ತ ಪ್ರಯಾಣ ಬೆಳೆಸಿದ್ದೆವು. ನಮ್ಮ ಅಂಗೋಲಾ ಅವಧಿಯುದ್ದಕ್ಕೂ ಪೋರ್ಚುಗೀಸರಿಗೆ ಹೋಲಿಸಿದರೆ ಸ್ನೇಹಜೀವಿಗಳಾಗಿದ್ದ ನಾವು ಭಾರತೀಯರು ಸ್ಥಳೀಯ ಅಂಗೋಲನ್ನರಿಗೆ ನಿಜಕ್ಕೂ ಹತ್ತಿರವಾಗಿದ್ದೆವು. ಆ ಭಾವಗಳೆಲ್ಲಾ ನಮ್ಮ ಅಂಗೋಲಾ ಗೂಡಿನಿಂದ ಕೊನೆಯ ಬಾರಿಗೆ ಹೊರಡುವಾಗ ಸ್ಥಳೀಯರಲ್ಲಿ ಜೀವೋಲ್ಲಾಸದಂತೆ ಕಂಡವು. ಇನ್ನು ಎರಡೂವರೆ ವರ್ಷಗಳಿಂದ ನನ್ನನ್ನು ಬಿಡದೆ ಕಾಡಿದ, ನನ್ನ ಅಚ್ಚರಿಗಳ ಪಾಂಡೋರಾ ಡಬ್ಬವಾಗಿದ್ದ ವೀಜ್-ಲುವಾಂಡಾ ರಸ್ತೆಯಲ್ಲಿ ಕೊನೆಯ ಬಾರಿ ಪ್ರಯಾಣಿಸುವಾಗ ಆ ಇಡೀ ರಸ್ತೆ ಪ್ರಯಾಣದ ಅನುಭೂತಿಯೇ ನಮಗೆ ವಿದಾಯ ಕೋರಿದಂತಾಗಿ ಮನಸ್ಸು ಭಾರವಾಗಿದ್ದಂತೂ ಹೌದು.
“ಅಂಗೋಲಾದಂತಹ ಪ್ರದೇಶಗಳಲ್ಲಿ ಅದ್ಹೇಗೆ ನೀವು ಅಷ್ಟು ಹಾಯಾಗಿದ್ರಿ?”, ಎಂಬ ಪ್ರಶ್ನೆಯನ್ನು ಹಲವರಿಂದ ಅದೆಷ್ಟೋ ಬಾರಿ ನಾನು ಕೇಳಿದ್ದೇನೆ. ಅಂಗೋಲನ್ನರನ್ನೂ ಸೇರಿದಂತೆ ಎಲ್ಲರಿಗೂ ಇದು ಭಲೇ ಕೌತುಕದ ಸಂಗತಿಯಾಗಿದ್ದಂತೂ ಸತ್ಯ. ಅಸಲಿಗೆ ಮೆಟ್ರೋಪಾಲಿಟನ್ ಜನಜೀವನ, ಶಾಪಿಂಗ್ ಮಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಮುಗಿಯದ ಟ್ರಾಫಿಕ್… ಇವೆಲ್ಲವುಗಳಿಂದ ಹೊರತಾದ ಜೀವನವನ್ನೇ ನಾನು ಹೆಚ್ಚು ಆಸ್ವಾದಿಸುವವನೆಂಬ ಸತ್ಯವು ನನಗೆ ನನ್ನ ಈ ಹಿಂದಿನ ಪ್ರವಾಸಗಳಲ್ಲಿ ಮನದಟ್ಟಾಗಿತ್ತು. ಹೀಗಾಗಿ ಅಂಗೋಲಾ ಎಂಬ ಅವಕಾಶದ ಮೂಲಕವಾಗಿ ಪ್ರಕೃತಿಗೆ ಮತ್ತಷ್ಟು ಹತ್ತಿರವಾಗಿ ಬದುಕುವ ಸುವರ್ಣಾವಕಾಶವೊಂದನ್ನು ಬದುಕು ನನಗೆ ಕರುಣಿಸಿತ್ತು ಎಂಬಷ್ಟು ತೀವ್ರವಾಗಿ ನಾನಲ್ಲಿ ಬದುಕುತ್ತಿದ್ದೆ. ಅಂಗೋಲಾ ದಿನಗಳನ್ನು ನಾನು `ವನವಾಸ’ ಎಂದು ತಿಳಿಹಾಸ್ಯದ ಧಾಟಿಯಲ್ಲಿ ಹೇಳುವ ಜೊತೆಗೇ ಅಂಗೋಲಾದ ಪ್ರತೀಕ್ಷಣಗಳನ್ನು ಸಂಪೂರ್ಣವಾಗಿ ಜೀವಿಸಿ, ಆಸ್ವಾದಿಸಿದ ಆತ್ಮತೃಪ್ತಿಯೂ ನನ್ನಲ್ಲಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.
ಆಧ್ಯಾತ್ಮಲೋಕದಲ್ಲಿ ಸಾಮಾನ್ಯವಾಗಿ ಹೆಸರಿಸಲಾಗುವ `ಪ್ರಜ್ಞೆ’ಯನ್ನು ನನಗೆ ಪರಿಚಯಿಸಿದ್ದು ಕೂಡ ನನ್ನ ಅಂಗೋಲಾ ದಿನಗಳೇ. ನಾವೆಲ್ಲರೂ ಒಂದಲ್ಲಾ ಒಂದು ದಿನ ಸಾಯುತ್ತೇವೆ ಅನ್ನುವುದು ನಮಗಿರುವ ಸಾಮಾನ್ಯಜ್ಞಾನದ ತಿಳಿವು. ಆದರದು ಯಾವ ಕ್ಷಣದಲ್ಲೂ ಆಗಬಹುದು ಎಂಬ ಅರಿವು ಮಾತ್ರ ನಿಜವಾದ `ಪ್ರಜ್ಞೆ’. ಇಂಥದ್ದೊಂದು ಪ್ರಜ್ಞೆ ಜಾಗೃತವಾಗಿದ್ದಾಗಲಷ್ಟೇ ಮನುಷ್ಯ ಅರ್ಥಪೂರ್ಣವಾಗಿ ಬದುಕಬಲ್ಲ. ತನ್ನ ಬೆಳವಣಿಗೆಗೆ ಪೂರಕವಾಗಿರುವ ಅಂಶಗಳನ್ನಷ್ಟೇ ಜೀವನದಲ್ಲಿ ಕಾದಿರಿಸಿಕೊಂಡು ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ತನ್ನಿಂದ ದೂರ ತಳ್ಳಬಲ್ಲ. ಇದು ನಾನು ಯಾವ ಹೊತ್ತಿನಲ್ಲೂ ಸಾಯಬಹುದು ಎಂಬ ಮೃತ್ಯುಭಯವಲ್ಲ. ಬದಲಾಗಿ ಇದ್ದಷ್ಟು ಬದುಕನ್ನು ಇಡಿಇಡಿಯಾಗಿ, ಸಾರ್ಥಕವಾಗಿ ಬದುಕಬೇಕೆನ್ನಿಸುವ ಜೀವಂತ ತುಡಿತ.
ಅಸಲಿಗೆ ಹುಳುಗಳಂತೆ ಸಾಯುತ್ತಿರುವ ಜನರನ್ನು ಎಲ್ಲೆಲ್ಲೂ ನೋಡುತ್ತಲೇ ನನಗೆ ಬದುಕಿನ ಮೌಲ್ಯಗಳು ಅರಿವಾಗತೊಡಗಿದ್ದವು. ಮಾನವ ಹಕ್ಕುಗಳ ಮತ್ತು ಮಾಧ್ಯಮ ಸ್ವಾತಂತ್ರ್ಯಗಳ ನಾಶವನ್ನು ನೋಡುತ್ತಲೇ ಪ್ರಜಾಪ್ರಭುತ್ವದ, ಅಭಿವ್ಯಕ್ತಿ ಸ್ವಾತಂತ್ರ್ಯಗಳ ಪ್ರಾಮುಖ್ಯತೆಗಳು ನನ್ನೆದುರು ಅನಾವರಣಗೊಳ್ಳಲಾರಂಭಿಸಿದ್ದವು. ವಿಲಾಸವೇ ಜೀವನದ ಪರಮಗುರಿ ಎಂಬಂತಿರುವ ಸದ್ಯದ ಕಾಲಘಟ್ಟದಲ್ಲಿ ಕನಿಷ್ಠ ಸಂಪನ್ಮೂಲಗಳೊಂದಿಗೆ ಬದುಕುವ ಪರಿಯನ್ನು ಅಂಗೋಲಾ ನನಗೆ ಕಲಿಸಿತ್ತು. ಹುಟ್ಟಿಕೊಂಡ ಹೊಸ ದೃಷ್ಟಿಕೋನಗಳು, ಒಳನೋಟಗಳಿಂದಾಗಿ ಬದುಕಿನ ಬಗೆಗಿನ ದೂರುದುಮ್ಮಾನಗಳು ಕಮ್ಮಿಯಾಗುತ್ತಾ ಪ್ರಾಯಶಃ ನಾನು ಬದುಕಿನ ಹೊಸ ಸಾಧ್ಯತೆಗಳತ್ತ ನಡೆಯತೊಡಗಿದ್ದೆ. ಈ ಎಲ್ಲಾ ಕಾರಣಗಳಿಂದಲೂ ಅಂಗೋಲಾದಲ್ಲಿ ಕಳೆದ ಪ್ರತಿಯೊಂದು ಕ್ಷಣಗಳಿಗೂ ನಾನು ಋಣಿ.
ಅಂದಹಾಗೆ ಪ್ರತೀಬಾರಿಯೂ ದುಬೈ ಮೂಲಕವಾಗಿ ದೆಹಲಿಯಿಂದ ಲುವಾಂಡಾಗೆ ಅಥವಾ ಲುವಾಂಡಾದಿಂದ ದೆಹಲಿಗೆ ಹಾರುವ ನಮಗೆ ಈ ಬಾರಿ ಇಥಿಯೋಪಿಯನ್ ಏರ್ ಲೈನ್ಸ್ ನ ಆತಿಥ್ಯ ಕಾದಿತ್ತು. ಇಥಿಯೋಪಿಯನ್ ಏರ್ ಲೈನ್ಸ್ ಬಗ್ಗೆ ಮೊದಲೇ ಕಟುಟೀಕೆಗಳನ್ನು ಕೇಳಿದ್ದ ನಮ್ಮ ಗೊಣಗುವಿಕೆಗೆ ಸರಿಯಾಗಿ ಲುವಾಂಡಾದಿಂದ ಹೊರಡುವ ವಿಮಾನವು ಎರಡು ತಾಸು ತಡವಾಗಿ ನಿರಾಶೆಯನ್ನು ಹುಟ್ಟಿಸಿತ್ತು. ಅಂತೂ ಈ ಮೂಲಕವಾದರೂ ಇಥಿಯೋಪಿಯನ್ ನೆಲದ ಮೇಲೆ ಕಾಲಿಡುವ ಪುಟ್ಟ ಅವಕಾಶವೊಂದನ್ನು ವಿಧಿಯು ನಮಗೆ ಕೊಟ್ಟಿತ್ತೇನೋ. ಆದರೆ ಎರಡು ತಾಸು ತಡವಾಗಿ ಆಗಮಿಸಿದ ವಿಮಾನದಿಂದಾಗಿ ಸಹಜವಾಗಿಯೇ ಇಥಿಯೋಪಿಯಾ ರಾಜಧಾನಿಯಾದ ಅಡಿಸ್ ಅಬಾಬಾದಲ್ಲಿ ತಡವಾಗಿ ಬಂದಿಳಿದ ನಾವು ಉಸಿರಾಡಲೂ ಪುರುಸೊತ್ತಿಲ್ಲವೆಂಬಂತೆ ಲಗುಬಗೆಯಿಂದ ಓಡೋಡುತ್ತಲೇ ಬಂದು ದೆಹಲಿಯ ವಿಮಾನವನ್ನು ಯಶಸ್ವಿಯಾಗಿ ಹಿಡಿದಿದ್ದೆವು. ಜನಜಾತ್ರೆಯಂತಿದ್ದ ಭಯಂಕರ ಜನಜಂಗುಳಿಯನ್ನು ಹೊಂದಿ ಅವ್ಯವಸ್ಥೆಯ, ಗೊಂದಲದ ಗೂಡಾಗಿ ಕಾಣುತ್ತಿದ್ದ ಅಡಿಸ್ ಅಬಾಬಾದ ವಿಮಾನ ನಿಲ್ದಾಣವು ಅದ್ಯಾಕೋ ಅಂದು ನಮ್ಮ ಜನನಿಬಿಡ ರೈಲ್ವೆ ನಿಲ್ದಾಣಗಳನ್ನು ನಮಗೆ ನೆನಪಿಸಿತ್ತು.
ಹೀಗೆ ಅಡಿಸ್ ಅಬಾಬಾದಿಂದ ಹೊರಟ ವಿಮಾನವು ಕೊನೆಗೂ ನಮ್ಮನ್ನು ದೆಹಲಿಯಲ್ಲಿಳಿಸಿದಾಗ ದೆಹಲಿಯಲ್ಲಿ ಅಪರಾಹ್ನದ ಮೂರು. ಜುಲೈ ತಿಂಗಳ ಆರಂಭದ ದೆಹಲಿಯು ಬಿಸಿಕಾವಲಿಯಂತೆ ಭರ್ಜರಿಯಾಗಿ ಸುಡುತ್ತಿತ್ತು. “ನೀವು ಯಾವಾಗ ಮರಳಿ ಬರುತ್ತೀರಿ?”, “ಇನ್ನೆಷ್ಟು ದಿನ ನೀವು ಅಲ್ಲಿರಬೇಕು?”, ಎಂದೆಲ್ಲಾ ಕಾಳಜಿಯಿಂದ ಕೇಳುವ ಓದುಗರ ನಿರೀಕ್ಷೆಯಂತೆ ನಾನು ಕೊನೆಗೂ ಮರಳಿ ತಾಯ್ನಾಡಿಗೆ ಬಂದಿಳಿದಿದ್ದೆ. ಇತ್ತ ಇನ್ನೂ ಆಫ್ರಿಕಾ ಹ್ಯಾಂಗೋವರಿನಲ್ಲೇ ಮುಳುಗಿದ್ದ ನನಗೆ ದೆಹಲಿಯ ಟ್ಯಾಕ್ಸಿ ಚಾಲಕರ ಬೈಗುಳಭರಿತ ಹಿಂದಿ, ಸುಮ್ಮನೆ ಮಾತನಾಡಿಸಿದರೂ ಬೈದಂತೆ ಕೇಳುವ ಹರಿಯಾಣವೀ ಭಾಷೆಗಳು ಸ್ವಾಗತವನ್ನು ಕೋರಿದಂತೆಯೂ, ಮತ್ತೆ ನನ್ನನ್ನು ರಿಯಾಲಿಟಿಯ ಲೋಕಕ್ಕೆ ಎಳೆದುಕೊಂಡು ಬಂದಂತೆಯೂ ಭಾಸವಾಗಿತ್ತು. ಇನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಆವರಣವನ್ನು ಬಿಟ್ಟು ಮುಂದಕ್ಕೆ ಸಾಗಿದಂತೆ ಅಂಗೋಲಾ ನನ್ನ ಕಣ್ಣಿನಿಂದ ಮತ್ತಷ್ಟು ಹಿಂದಕ್ಕೆ ಸರಿದಂತೆಯೂ, ಭಾರವಾದ ಮನಸ್ಸಿನಿಂದ ಕೈಬೀಸುತ್ತಾ ಗುಡ್ ಬೈ ಹೇಳುವಂತೆಯೂ ಅನಿಸಿ ಒಂದು ವಿಚಿತ್ರ ಬಗೆಯ ಖಾಲಿತನದಲ್ಲಿ ಕೆಲ ಕ್ಷಣಗಳ ಕಾಲ ನರಳಾಡಿಬಿಟ್ಟೆ.
ಅತ್ತ ಅಂಗೋಲಾ `ಬಾಯ್’ ಅನ್ನುತ್ತಲೇ ತಾಯ್ನಾಡಾದ ಭಾರತ `ಹಾಯ್’ ಅಂದಿತ್ತು. ದೆಹಲಿಯ ಶಕ್ತಿಕೇಂದ್ರಗಳಾದ ಆಯಕಟ್ಟಿನ ಸ್ಥಳಗಳು, ಮೊಘಲ್ ವಾಸ್ತುಶಿಲ್ಪ, ಹಾಯೆನಿಸುವ ಹಸಿರು… ಹೀಗೆ ಇಷ್ಟಿಷ್ಟಾಗಿಯೇ ಭಾರತೀಯತೆಯನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು ನಾವು. ಇತ್ತ ಅಂಗೋಲಾದ ಪಯಣವನ್ನು ಮುಗಿಸಿದ ಬೆನ್ನಿಗೇ ಭಾರತದ ಹೊಸ ಇನ್ನಿಂಗ್ಸ್ ಎದುರಾಗಿ ತಯಾರಾಗಿ ನಿಂತಿತ್ತು. ಮುಂದಿನ ದಿನವೇ ನಡೆಯಲಿದ್ದ ಸಂಸ್ಥೆಯ ಐವತ್ತನೇ ವಾರ್ಷಿಕೋತ್ಸವದ ಸಿದ್ಧತೆಗಳ ಬಗ್ಗೆ ಹೇಳುತ್ತಾ ಅದೆಷ್ಟು ದೇಶಗಳ ಆಫ್ರಿಕನ್ ಗಣ್ಯಾತಿಗಣ್ಯರು ಅತಿಥಿಗಳಾಗಿ ಬರಲಿದ್ದಾರೆ ಎಂಬುದನ್ನೆಲ್ಲಾ ಪಕ್ಕದಲ್ಲಿ ಕುಳಿತಿದ್ದ ಸಹೋದ್ಯೋಗಿಯೊಬ್ಬ ಬಿಡದೆ ಹೇಳುತ್ತಿದ್ದ. ಆತನ ಮಾತುಗಳನ್ನು ಕೇಳುತ್ತಾ ನಾನು ಆಫ್ರಿಕಾವನ್ನು ಬಿಟ್ಟರೂ, ಆಫ್ರಿಕಾ ಮಾತ್ರ ನನ್ನನ್ನು ಬಿಡದು ಎಂಬಂತೆ ನಾನು ಹಾಗೇ ಸುಮ್ಮನೆ ನಕ್ಕುಬಿಟ್ಟೆ.
ಬಹುಷಃ ಈ ಕಾರಣಕ್ಕೇನೇ ಹೇಳ್ತಾರೇನೋ.. ಚಲ್ತೀ ಕಾ ನಾಮ್ ಝಿಂದಗೀ ಹೈ… ಅಂತೆಲ್ಲಾ!
। ಮುಗಿಯಿತು ।

‍ಲೇಖಕರು avadhi

October 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: