ಅಂಗೋಲಾದಲ್ಲೂ ಓಂ… ಬ್ರಾಂ… ಬ್ರೀಂ…

ಆ ದಿನ ನನಗೆ ಅಷ್ಟೇನೂ ಕೆಲಸವಿರಲಿಲ್ಲ.

ಸುಮ್ಮನೆ ನನ್ನ ಕೈಯನ್ನು ಪರೀಕ್ಷಿಸುತ್ತಾ ದೊರಗಾದ ಬಣ್ಣಗೆಟ್ಟ ಚರ್ಮವನ್ನು ನೋಡುತ್ತಾ ಭಯಂಕರ ಚಿಂತೆಯಲ್ಲಿದ್ದೆ. ಅಂಗೋಲಾದ ಬಿಸಿಲು ಒಂದೆರಡು ತಿಂಗಳಲ್ಲೇ ತನ್ನ ಆಟವನ್ನು ತೋರಿಸಿತ್ತು. ನಾನು ಅಂಥಾ ಮಹಾಗೌರವರ್ಣದ ಒಡೆಯನೇನೂ ಅಲ್ಲದಿದ್ದರೂ ಕಳೆದ ಕೆಲ ವರ್ಷಗಳಲ್ಲಿ ದೆಹಲಿಯ ಚಳಿಯ ವಾತಾವರಣವು ನನ್ನ ಚರ್ಮವನ್ನು ಕೊಂಚ ಸುಧಾರಿಸಿತ್ತು. ಆದರೆ ಅಂಗೋಲಾದ ರಣಬಿಸಿಲಿಗೆ ನಾನ್ಯಾವ ಗಿಡದ ತೊಪ್ಪಲು? ಅಂತೂ ಬಣ್ಣಗೆಟ್ಟ ಚರ್ಮವನ್ನು ನೋಡಿ ನಿಡುಸುಯ್ಯುತ್ತಾ ಆ ರಣಬಿಸಿಲನ್ನು ಶಪಿಸುತ್ತಾ ನನ್ನ ಮಜ್ದಾ ಕಾರಿನಲ್ಲಿ ಸುಮ್ಮನೆ ಕಾದು ಕುಳಿತಿದ್ದೆ.

ಹೀಗೆ ಯೋಚನೆಯ ಗುಂಗಿನಲ್ಲಿ ಕಳೆದುಹೋಗಿರುವಾಗಲೇ ಒಬ್ಬಾತ ಬಂದು ಹೇಳದೆ ಕೇಳದೆ ಕರಪತ್ರವೊಂದನ್ನು ಕಾರಿನ ತೆರೆದ ಕಿಟಕಿಯಿಂದ ನನ್ನತ್ತ ಎಸೆದು ಹೊರಟುಹೋಗಿದ್ದ. ನನ್ನೊಂದಿಗಿದ್ದ ದುಭಾಷಿ ಮತ್ತು ಕಾರು ಚಾಲಕ ಅದೇನನ್ನೋ ತರಲೆಂದು ನನ್ನನ್ನು ಒಂಟಿಯಾಗಿ ಕಾರಿನಲ್ಲೇ ಬಿಟ್ಟುಹೋಗಿದ್ದರು. ಅಂಗೋಲಾದ ಬಿರುಬಿಸಿಲ ಮಧ್ಯಾಹ್ನದಲ್ಲಿ ಕಾರಿನೊಳಗೆ ಹೆಚ್ಚು ಹೊತ್ತು ಕುಳಿತುಕೊಂಡರೆ ಬಿಸಿಯಿಂದ ಬೇಯುವುದು ಖಚಿತ. ಹೀಗಾಗಿ ಸೆಖೆಯನ್ನು ತಡೆಯಲಾರದೆ ಕಾರಿನ ಕಿಟಕಿಯ ಗಾಜನ್ನು ಇಳಿಸಬೇಕಾಗಿ ಬಂದಿತ್ತು. ಹೀಗಿರುವಾಗಲೇ ಆಗಂತುಕನೊಬ್ಬ ಕರಪತ್ರವೊಂದನ್ನು ನನ್ನ ಮುಖದ ಮೇಲೆ ಎಸೆದು ಹೋಗಿದ್ದು. ಅಂತೂ ಅದೇನೆಂದು ಓದಲು ಪ್ರಯತ್ನಿಸಿದರೆ ಅದೊಂದು ಜಾಹೀರಾತು ಎಂಬುದನ್ನು ಹೊರತುಪಡಿಸಿ ಇನ್ನೇನೂ ತಿಳಿಯಲಿಲ್ಲ. ಯಾವುದಕ್ಕೂ ನಮ್ಮ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ ಮರಳಿ ಬರಲಿ, ಆಮೇಲೆ ಕೇಳೋಣವಂತೆ ಎಂದು ಲೆಕ್ಕಹಾಕಿ ಅದನ್ನು ಜೋಪಾನವಾಗಿ ತೆಗೆದಿಟ್ಟೆ.

ನಂತರ ಮಿಗೆಲ್ ಮರಳಿ ಬಂದಾಗ ಒಂದು ಕ್ಷಣವೂ ತಡಮಾಡದೆ ಇದೇನಿದು ಎಂದು ಕೇಳಿ ಕರಪತ್ರವನ್ನು ಅವನ ಕೈಗಿಟ್ಟೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಈತ ಇದು ಯಾವುದಕ್ಕೂ ಲಾಯಕ್ಕಿಲ್ಲದ್ದು ಎನ್ನುವ ನಿರುತ್ಸಾಹದಲ್ಲಿ ಪಕ್ಕಕ್ಕಿಟ್ಟ. ಅಷ್ಟಕ್ಕೂ ಅದು ಏನಾಗಿತ್ತೆಂದರೆ ವಾಮಾಚಾರಗಳನ್ನು ಮಾಡುವ ಸ್ಥಳೀಯ ಪರಿಣತನೊಬ್ಬನ ಜಾಹೀರಾತು ಕರಪತ್ರವಾಗಿತ್ತು. ನಮ್ಮಲ್ಲಿ ಹೇಗೆ ವಶೀಕರಣ, ವಿವಾಹ, ಆಸ್ತಿ ಕಲಹ, ವಾಸ್ತು ದೋಷ, ಕುಜ ದೋಷ, ಮಾಟಮಂತ್ರ, ಕಾರ್ಯಸಿದ್ಧಿ ಎಂದೆಲ್ಲಾ ಇಷ್ಟುದ್ದ ಪಟ್ಟಿಯನ್ನು ಕೊಟ್ಟು ಕೆಲ ಮಾಂತ್ರಿಕರು ಜಾಹೀರಾತು ನೀಡುತ್ತಾರಲ್ಲವೇ? ಇದೂ ಕೂಡ ಅಂಥದ್ದೇ ಆಗಿತ್ತು. ಇಲ್ಲೂ ಪೋರ್ಚುಗೀಸ್ ಭಾಷೆಯಲ್ಲಿ ದೊಡ್ಡದೊಂದು ಪಟ್ಟಿಯನ್ನು ಕೊಡಲಾಗಿತ್ತು. ಜೊತೆಗೇ ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ನೀಡುವ ಆತನ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೂಡ. “ಅರೆ… ಇವೆಲ್ಲಾ ನಮ್ಮಲ್ಲೂ ಇದೆ ಮಾರಾಯ”, ಅಂದೆ ನಾನು. ಸುಮ್ಮನೆ ನಕ್ಕ ಮಿಗೆಲ್ ಆ ಕಾಗದದಿಂದ ರಾಕೆಟ್ ಒಂದನ್ನು ಮಾಡಿ ಕಿಟಕಿಯಾಚೆಗೆ ಹಾರಿಸಿದ್ದ.

ಬಹುಷಃ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಾನು ಕಷ್ಟಪಟ್ಟಷ್ಟು ಅಂಗೋಲಾದಲ್ಲಿ ಇನ್ಯಾವುದಕ್ಕೂ ಒದ್ದಾಡಿಲ್ಲವೇನೋ. ಅಂಗೋಲಾಕ್ಕೆ ಬಂದ ಆರಂಭದ ದಿನಗಳಲ್ಲೇ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದ ವಿಚಿತ್ರ ವಸ್ತುಗಳು ನನ್ನನ್ನು ಬೆಚ್ಚಿಬೀಳಿಸಿದ್ದವು. ಅವುಗಳಲ್ಲಿ ಮುಖ್ಯವಾಗಿದ್ದಿದ್ದು ಪ್ರಾಣಿಗಳ ಕೆಲ ಚಿಕ್ಕ ತಲೆಬುರುಡೆಗಳು, ಹಲ್ಲುಗಳು, ಹಾವುಗಳ ಒಣಗಿದ ಪೊರೆಗಳು, ಪಕ್ಷಿಗಳ ಕಾಲುಗಳು, ಕೊಕ್ಕುಗಳು, ಉಗುರುಗಳು ಮತ್ತು ಗರಿಗಳು. ಇವುಗಳಲ್ಲದೆ ಬಗೆಬಗೆಯ ಬೇರುಗಳನ್ನು, ಕಲ್ಲುಗಳನ್ನು, ಎಣ್ಣೆಗಳನ್ನೂ ಕೂಡ ಇಂಥಾ ಪುಟ್ಟ ಜಾಗಗಳಲ್ಲಿ ಮಾರಾಟಕ್ಕಿಡಲಾಗುತ್ತಿತ್ತು. ಕೊಳ್ಳಬೇಕೆಂಬ ಯಾವ ಆಸಕ್ತಿಯೂ ಇರದಿದ್ದರೂ ಈ ವಿಚಿತ್ರ ವಸ್ತುಗಳನ್ನು ನೋಡುವ ಒಂದು ಕುತೂಹಲದಿಂದಾಗಿ ನಾನು ಬಹಳಷ್ಟು ಬಾರಿ ಆ ಮಾರ್ಗವಾಗಿಯೇ ಹೋಗಿದ್ದೂ ಇದೆ. ಅಷ್ಟಕ್ಕೂ ಯಾರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡಬಲ್ಲರೇ ಎಂಬ ಕೆಟ್ಟ ಕುತೂಹಲ ನನ್ನದು.

ಈ ಬಗ್ಗೆ ನನ್ನ ದುಭಾಷಿಯಾಗಲೀ, ನನ್ನ ಸ್ಥಳೀಯ ಸಹೋದ್ಯೋಗಿಗಳಾಗಲೀ ಅದೆಷ್ಟು ಕೇಳಿದರೂ ಬಾಯಿಬಿಟ್ಟಿರಲಿಲ್ಲ. “ಏನೋ ಇದೆ. ಆದ್ರೆ ಗೊತ್ತಿಲ್ಲ”, ಎಂಬ ಉತ್ತರಗಳೇ ನನಗೆ ತಿಂಗಳಾನುಗಟ್ಟಲೆ ಸಿಕ್ಕಿದ್ದು. ಇನ್ನು ಮಾರುವವರ ಬಳಿಯೇ ಕೇಳೋಣವೆಂದು ದುಭಾಷಿಯನ್ನು ಹೇಗೋ ಓಲೈಸಿ ಕೇಳಿದರೂ ಮಾರುವಾಕೆ ನನ್ನನ್ನು ವಿಚಿತ್ರವಾಗಿ ಕಂಡು ಇಕ್ಕಟ್ಟಿಗೆ ಸಿಲುಕಿಸಿದ್ದಳು. ಅಂತೂ ಬಂದ ದಾರಿಗೆ ಸುಂಕವಿಲ್ಲವೆಂದು ಲೆಕ್ಕಹಾಕಿ ನಾನು ಹಿಂತಿರುಗಿದ್ದೆ.

ವಾಮಾಚಾರ ಮತ್ತು ಔಷಧ ಸಂಬಂಧಿ ಉತ್ಪನ್ನಗಳನ್ನು ಇಷ್ಟು ಖುಲ್ಲಂಖುಲ್ಲಾ ಆಗಿ ಮಾರುತ್ತಿರುವಾಗ ಇವುಗಳ ಬಗ್ಗೆ ಸ್ವಲ್ಪ ಹೇಳಿ ಎಂದು ಕೇಳಿದರೆ ಇದರಲ್ಲಿ ನಾಚುವಂಥದ್ದೇನಿದೆ ಎಂಬುದು ನನಗಿನ್ನೂ ತಿಳಿದಿಲ್ಲ. ಭಾರತದಲ್ಲಿರುವ ವಾಮಾಚಾರಕ್ಕೂ ಆಫ್ರಿಕಾದಲ್ಲಿರುವ ವಾಮಾಚಾರ ವಿಧಾನಗಳಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಉದಾಹರಣೆಗೆ ನಮ್ಮಲ್ಲಿ ಪಂಚಭೂತಗಳ ಪರಿಕಲ್ಪನೆಗಳು ಹೇಗಿವೆಯೋ ಆಫ್ರಿಕನ್ `ವುಡೂ’ಗಳಲ್ಲೂ ಇಂಥಾ ಕೆಲ ಸಾಮ್ಯತೆಗಳಿವೆ. ಹೀಗೆ ಸಾಂಸ್ಕøತಿಕ ಹಿನ್ನೆಲೆಗಳು ಅದೇನಿದ್ದರೂ ಪ್ರಸ್ತುತ ಇವುಗಳು ಬಂದು ತಲುಪಿದ್ದು ಮಾತ್ರ ಇತರರನ್ನು ನಿರ್ನಾಮ ಮಾಡಲು ಬಯಸುವ ಅದೇ ಹಳಸಲು ಉಪಯೋಗಗಳಿಗೆ. ಅದನ್ನು ಬಿಟ್ಟರೆ ಕೆಲ ಬಗೆಯ ಬೇರು ಮತ್ತು ಎಣ್ಣೆಗಳನ್ನು ಸಾಂಪ್ರದಾಯಿಕ ಔಷಧಿಗಳಾಗಿ ಬಳಸುವುದುಂಟು. ಸಾಮಾನ್ಯ ನೆಗಡಿಯಿಂದ ಹಿಡಿದು ಕಾಮೋತ್ತೇಜನೆ, ಗರ್ಭಧಾರಣೆಯವರೆಗೂ ಇವರಲ್ಲಿ ಮದ್ದು-ಮಾಟಮಂತ್ರಗಳಿವೆ. ಅಂಗೋಲಾ ಸೇರಿದಂತೆ ಉತ್ತಮ ವೈದ್ಯಕೀಯ ಸೌಲಭ್ಯಗಳಿಲ್ಲದ ಆಫ್ರಿಕಾದ ಹಲವು ಭಾಗಗಳಲ್ಲಿ ಇಂದಿಗೂ ಹೆಚ್ಚಿನವರು ಸಾಂಪ್ರದಾಯಿಕ ಔಷಧಿಗಳಿಗೇ ಮೊರೆಹೋಗುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಅಸಲಿಗೆ ಅಂಗೋಲಾದಲ್ಲಿ ಇಂಥಾ ವಿಲಕ್ಷಣ ವಸ್ತುಗಳನ್ನು ನಾನು ನೋಡಿದ್ದು ಒಂದು ಸ್ಯಾಂಪಲ್ ಅಷ್ಟೇ. ಟೋಗೋ ಎಂಬ ಹೆಸರಿನ ಚಿಕ್ಕ ಆಫ್ರಿಕನ್ ದೇಶವೊಂದರಲ್ಲಿ ಇಂಥವುಗಳದ್ದೇ ಒಂದು ವಿಶೇಷ ಮಾರುಕಟ್ಟೆಯಿದೆ. ಆಂಗ್ಲಭಾಷೆಯಲ್ಲಿ ಇವುಗಳನ್ನು “Fetish Market” ಎನ್ನುತ್ತಾರೆ. ಸಾಂಪ್ರದಾಯಿಕ ಔಷಧಗಳಿಂದ ಹಿಡಿದು ವಾಮಾಚಾರದವರೆಗೂ ಸಂಬಂಧಿ ರೀತಿರಿವಾಜುಗಳಿಗೆ ಬೇಕಿರುವ ಹಲವು ವಸ್ತುಗಳನ್ನು ಇಲ್ಲಿ ಮಾರಾಟಕ್ಕಿಡುತ್ತಾರೆ. ಹಕ್ಕಿ, ಕೋತಿ, ನಾಯಿ, ಮೊಸಳೆ, ಹಯೆನಾ, ಕುದುರೆಗಳ ತಲೆಬುರುಡೆಗಳು, ಪ್ರಾಣಿಗಳ ಚರ್ಮಗಳು, (ಒಣಗಿಸಿಟ್ಟ) ಪ್ರಾಣಿಗಳ ದೇಹದ ಭಾಗಗಳು, ಹಾವಿನ ಚರ್ಮಗಳು, ಪಂಜಗಳು, ಮೂಳೆಗಳು, ಸುಟ್ಟ ಬಾವಲಿಗಳು… ಹೀಗೆ ತರಹೇವಾರಿ ವಸ್ತುಗಳನ್ನು ಇಲ್ಲಿ ಇಡಲಾಗುತ್ತದೆ. ಇವುಗಳನ್ನು ಉಪಯೋಗಿಸಿಕೊಂಡು ಸಮಸ್ಯೆಗಳ ಪರಿಹಾರದ ಹೆಸರಿನಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ. ಟೋಗೋದ ಲೋಮೆಯಲ್ಲಿರುವ ಈ `ಅಕೊಡೆಸ್ಸಾವಾ’ ಹೆಸರಿನ ಮಾರುಕಟ್ಟೆಯು ಏನಿಲ್ಲವೆಂದರೂ ಪ್ರವಾಸಿಗರನ್ನು ಆಕರ್ಷಿಸುವುದಂತೂ ಹೌದು.

ಟೋಗೋ, ಹೈಟಿ, ಬೆನಿನ್ ಗಳಿಗೆ ಹೋಲಿಸಿದರೆ ಅಂಗೋಲಾದಲ್ಲಿ ಇದರ ವ್ಯಾಪ್ತಿ ಕೊಂಚ ಕಮ್ಮಿ ಎನ್ನಬಹುದಷ್ಟೇ. ಆದರೆ ಅಸ್ತಿತ್ವದಲ್ಲಂತೂ ಇದೆ. ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ಹೇಗೆ ಬಳಸುತ್ತಾರೆಂದರೆ ಮೊದಲು ಪ್ರಾಣಿಯೊಂದರ ಸಂಪೂರ್ಣ/ಭಾಗಶಃ ಮೂಳೆ/ಕೊಂಬು/ಹಲ್ಲು/ಉಗುರು/ತಲೆಬುರುಡೆಯನ್ನು ಗುದ್ದಿ ಪುಡಿ ಮಾಡಿ, ವಿವಿಧ ಬಗೆಯ ಗಿಡಮೂಲಿಕೆಗಳನ್ನು ಜಜ್ಜಿ ಇವುಗಳೊಂದಿಗೆ ಬೆರೆಸಿ ಪುಡಿಯಂತಹ ಪದಾರ್ಥವೊಂದನ್ನು ತಯಾರಿಸಲಾಗುತ್ತದೆ. ನಂತರ ಇದನ್ನು ಬೆಂಕಿಗೆ ಹಿಡಿದರೆ ನಮಗೆ ಸಿಗುವುದು ಇದ್ದಿಲಿನಂತಹ ಕಪ್ಪು ಪುಡಿ. ಮುಂದೆ ಈ ಪುಡಿಯನ್ನು ದೇಹದ ಆಯ್ದ ಭಾಗಗಳಿಗೆ ತತ್ಸಂಬಂಧಿ ಮಂತ್ರ/ಪೂಜಾವಿಧಾನಗಳೊಂದಿಗೆ ಹಚ್ಚಲಾಗುತ್ತದೆ. ಅಥವಾ ತಮ್ಮ ತಮ್ಮ ಸಮಸ್ಯೆಗಳಿಗೆ ತಕ್ಕಂತೆ ಆಹಾರದೊಂದಿಗೆ ಬೆರೆಸಿ ಸೇವಿಸಲು ಸಲಹೆಯನ್ನು ಕೊಡಲಾಗುತ್ತದೆ. ಆರೋಗ್ಯಕ್ಕೆ, ಅದೃಷ್ಟಕ್ಕೆ, ನೌಕರಿಗೆ, ವಶೀಕರಣಕ್ಕೆ, ಪ್ರೇಮ ಪ್ರಕರಣಗಳ ಜಯಕ್ಕೆ ಹೀಗೆ ಹಲವು ಸಮಸ್ಯೆಗಳಿಗೆ ಇವರಲ್ಲಿ ಪರಿಹಾರವಿದೆ. ಪರಿಹಾರವು ಎಲ್ಲೂ ಕಾಣದಿದ್ದರೆ ಎಲ್ಲರೂ ನಮ್ಮಲ್ಲಿಗೇ ಬರುವುದು ಎನ್ನುತ್ತಾರೆ ಇಲ್ಲಿಯ ವ್ಯಾಪಾರಿಗಳು.

ಇನ್ನು ಸಾಂಕೇತಿಕವಾಗಿ ಬಳಸಲಾಗುವ ಬೊಂಬೆಗಳು, ಸರಗಳು, ಮುಖವಾಡಗಳು ಇತ್ಯಾದಿಗಳೂ ಕೂಡ ಫೆಟಿಷ್ ಮಾರುಕಟ್ಟೆಗಳಲ್ಲಿ ಚಾಲ್ತಿಯಲ್ಲಿರುತ್ತವೆ. ಬೊಂಬೆಗಳು ಎರಡಿಂಚಿನಿಂದ ಹಿಡಿದು ನಾಲ್ಕಡಿಯವರೆಗೂ ಇರಬಹುದು. ಗಾತ್ರದಲ್ಲಿ ದೊಡ್ಡದಿರುವ ಬೊಂಬೆಗಳು ಸಾಮಾನ್ಯವಾಗಿ ಕಪ್ಪು, ಬೂದು, ಕಂದು ಇತ್ಯಾದಿ ದಟ್ಟಬಣ್ಣಗಳಲ್ಲಿದ್ದು ಮೈಯಲ್ಲೆಲ್ಲಾ ಮೊಳೆಗಳನ್ನು ಹೊಡೆಸಿಕೊಂಡು ನೋಡಲು ವಿಲಕ್ಷಣವಾಗಿರುತ್ತವೆ. ಈ ಗೊಂಬೆಗಳ ಕಿವಿಯಲ್ಲಿ ಗುಟ್ಟುಗಳನ್ನು ಹೇಳುವುದರಿಂದ ಹಿಡಿದು ಇವುಗಳನ್ನು ತರಹೇವಾರಿ ಪೂಜಾವಿಧಾನಗಳಲ್ಲಿ ಬಳಸಲಾಗುತ್ತದೆಯಂತೆ. ಇನ್ನು ತೀರಾ ಗ್ರಾಮೀಣ ಪ್ರದೇಶಗಳಲ್ಲಿನ ಪೂಜಾವಿಧಾನಗಳಲ್ಲಿ ಪ್ರಾಣಿಬಲಿಗಳಂತಹ ಆಚರಣೆಗಳನ್ನೂ ಅನುಸರಿಸಲಾಗುತ್ತದೆ.

ಆಫ್ರಿಕಾದ ಮತ್ತೊಂದು ದೇಶವಾದ ಬೆನಿನ್ ನಲ್ಲಿ ಹೆಬ್ಬಾವುಗಳದ್ದೇ ಒಂದು ಪುಟ್ಟ ದೇವಾಲಯವಿದೆ. ಇನ್ನು ಪಶ್ಚಿಮದತ್ತ ವಾಲಿದರೆ ಬೊಲಿವಿಯಾದಲ್ಲಿ ಪ್ರಾಣಿಗಳ ತಲೆಬುರುಡೆಗಳನ್ನು ಇಡುವ ಮಾದರಿಯಲ್ಲೇ ಲಾಮಾಗಳ ಒಣಗಿದ ಭ್ರೂಣಗಳನ್ನು, ಕಪ್ಪೆಗಳನ್ನು ಮಾರಾಟಕ್ಕಿಡುತ್ತಾರೆ. ಹೊಸದೊಂದು ಮನೆಯನ್ನು ಕಟ್ಟುವ ಸಂದರ್ಭಗಳಲ್ಲಿ ಅಡಿಪಾಯ ಹಾಕುವ ಮುನ್ನ ಈ ಭ್ರೂಣಗಳನ್ನು ಮಣ್ಣಲ್ಲಿ ಹೂಳಲಾಗುತ್ತದೆ. ನಿರ್ಮಾಣ ಕಾಮಗಾರಿಯ ಸಂದರ್ಭಗಳಲ್ಲಿ ಅನಾಹುತಗಳಾಗದಿರುವಂತೆ ಈ ಎಚ್ಚರ! ಹೀಗೆ ಬೊಲಿವಿಯಾದ ಫೆಟಿಷ್ ಮಾರುಕಟ್ಟೆಗಳಲ್ಲಿ ಎಲ್ಲೆಲ್ಲೂ ಕಾಣಸಿಗುವ ಲಾಮಾಗಳ ಭ್ರೂಣಗಳನ್ನು ಬಡವರಷ್ಟೇ ಬಳಸುತ್ತಾರೆ ಎಂಬ ಮಾತೂ ಇದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಜೀವಂತ ಲಾಮಾಗಳನ್ನೇ ಬಲಿ ಕೊಟ್ಟು ಕಟ್ಟಡ ನಿರ್ಮಾಣದ ಮೊದಲ ಪವಿತ್ರ ವಿಧಿಯನ್ನು ಪೂರೈಸುತ್ತಾರಂತೆ. ಬಿಳಿಯರು ಆಫ್ರಿಕಾಕ್ಕೆ ಕಾಲಿಡುವ ಮುನ್ನವೇ ವುಡೂ ಈ ಭಾಗಗಳಲ್ಲಿ ತಳವೂರಿತ್ತು. ಘಾನಾ, ಬುರ್ಕಿನಾಫಾಸೋ, ಬೆನಿನ್, ಐವರಿ ಕೋಸ್ಟ್, ನೈಜೀರಿಯಾ ಮೂಲಗಳಿಂದ ಬಂದಿವೆಯೆಂದು ಹೇಳಲಾಗುವ ವುಡೂ ಇಂದಿಗೂ ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಬೆನಿನ್ ನಂತಹ ದೇಶಗಳಲ್ಲಿ ಇವುಗಳು ಒಂದು ಧರ್ಮವೆಂಬಷ್ಟು ಪ್ರಚಲಿತದಲ್ಲಿದ್ದರೆ ಹೈಟಿಗಳಂತಹ ದೇಶಗಳ ಗೋಡೆಗಳಲ್ಲಿರುವ ಗ್ರಾಫಿಟಿ ಕಲೆಗಳು ಇವತ್ತಿಗೂ ಇವುಗಳ ಪ್ರಬಲ ಇರುವಿಕೆಯನ್ನು ಪ್ರತಿಪಾದಿಸುತ್ತವೆ.

ಇವೆಲ್ಲವೂ ಹೌದಾದರೂ ನಮ್ಮಲ್ಲಿ `ತಂತ್ರ’ ಎಂದು ಕರೆಯಲಾಗುವ ಪ್ರಾಚೀನ ವಿಜ್ಞಾನದಷ್ಟು ಇವುಗಳು ಭದ್ರವಾದ ತಳಪಾಯವನ್ನು ಹೊಂದಿಲ್ಲ ಎಂದು ನನಗೆ ಕೆಲವೊಮ್ಮೆ ಅನ್ನಿಸಿದ್ದುಂಟು. ತಂತ್ರದ ಆಳವನ್ನು ಅರಿಯಬೇಕಾದರೆ `Aghora: At the left hand of God’ ಎಂಬ ಶೀರ್ಷಿಕೆಯಡಿಯಲ್ಲಿ Robert E. Svoboda ರವರು ಬರೆದ ಕೃತಿಯೊಂದನ್ನು ಓದಬೇಕು. ತಂತ್ರವು ಹಲವು ಅರೆಬೆಂದ ಜ್ಞಾನಿಗಳಿಂದ ಅದೆಷ್ಟು ತಿರುಚಿದ ರೀತಿಯಲ್ಲಿ ಪ್ರಸ್ತುತವಾಗಿದೆ ಎಂಬ ಬಗ್ಗೆ ತಿಳಿಯಲು ಈ ಒಂದು ಕೃತಿಯು ಸಾಕು. ತಂತ್ರದ ಆಳವನ್ನು ಅರಿಯದೆ ಅದನ್ನು ಕೇವಲ `Tantric Sex’ ಎಂಬ ಪ್ರಚೋದಕ ಹೆಸರಿನಲ್ಲಿ ಮಾರಿ ಕಾಸು ಮಾಡಿಕೊಳ್ಳುತ್ತಿರುವ ಕೆಲ ಪಾಶ್ಚಾತ್ಯ ಮಹಾಬುದ್ಧಿವಂತರ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಮೂರು ಭಾಗಗಳಲ್ಲಿ ಪ್ರಕಟವಾದ ಈ ಕೃತಿಯು ಸ್ವೊಬೋಡಾರ ಹಲವಾರು ವರ್ಷಗಳ ಅಧ್ಯಯನದ ಮತ್ತು ಅಗಾಧ ಅನುಭವದ ಫಲ. ಹಾಗೆ ನೋಡಿದರೆ ಯೋಗವನ್ನು ಬಿಟ್ಟರೆ ತಂತ್ರಕ್ಕಿಂತ ಹೆಚ್ಚು ಈ ಪ್ರಕೃತಿಗೆ ಹತ್ತಿರವಾದದ್ದು ಬೇರೇನೂ ಇರಲಾರದು. ಮಹಾತ್ಮಾ ಗಾಂಧಿಯವರೂ ಕೂಡ ತಂತ್ರದ ಅನುಯಾಯಿಗಳಾಗಿದ್ದರೇ ಎಂಬ ವಾದಗಳೂ ಇವೆ.

ಫೆಟಿಷ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕಿಡುವ ಪ್ರಾಣಿಗಳನ್ನು ಎಲ್ಲಿಂದ ತರುತ್ತಾರೆ ಎಂಬುದು ಮುಖ್ಯ ಪ್ರಶ್ನೆ. ಟೋಗೋದ ಖ್ಯಾತ ಮಾರುಕಟ್ಟೆಯಲ್ಲಿರುವ ಪ್ರಾಣಿಗಳ ತಲೆಬುರುಡೆ ಮತ್ತು ಇತರ ಭಾಗಗಳ ದೊಡ್ಡ ಸಂಗ್ರಹವನ್ನು ಗಮನಿಸಿದರೆ ಇಂಥಾ ಪ್ರಶ್ನೆಗಳು ಮೂಡುವುದು ಸಹಜವೇ. ಸ್ವಾಭಾವಿಕವಾಗಿ ಸತ್ತ ಪ್ರಾಣಿಗಳನ್ನೇ ಇವುಗಳಿಗಾಗಿ ಬಳಸಿಕೊಳ್ಳುತ್ತೇವೆ ಎಂದು ಇವರುಗಳು ಹೇಳಿಕೊಂಡರೂ, ಸದ್ಯ ಇದು ತೀರಾ ತೆರೆದ ಮಾರುಕಟ್ಟೆಯ ರೂಪವನ್ನು ಪಡೆದಿರುವಾಗ ಪ್ರಾಣಿಗಳನ್ನು ರಹಸ್ಯವಾಗಿ ಕೊಂದು ರಾಶಿ ಹಾಕುತ್ತಾರೆ ಎಂಬ ಸಾಧ್ಯತೆಗಳಿರುವುದು ಸ್ಪಷ್ಟ. ಏಕೆಂದರೆ ಸಂಸ್ಕøತಿಯ ಹೆಸರಿನಲ್ಲಿ ಇವುಗಳು ಸ್ಥಳೀಯ ಅಮಾಯಕರಿಗೆ, ವಿದೇಶಿ ಪ್ರವಾಸಿಗರಿಗೆ ಮತ್ತು ನನ್ನಂತಹ ಕುತೂಹಲಿಗಳಿಗೆ ಟೋಪಿ ಹಾಕುವುದಕ್ಕೂ ಯಶಸ್ವಿಯಾಗಿ ಬಳಕೆಯಾಗುತ್ತಿದೆ.

ಇವುಗಳು ತೀರಾ ಮುನ್ನೆಲೆಗೆ ಬರದ ಜ್ಞಾನದ ಹರಿವುಗಳಾದ್ದರಿಂದ ಅಂಗೋಲಾದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸಿದಾಗಲೆಲ್ಲಾ ನನಗೆ ತೀವ್ರ ಹಿನ್ನಡೆಗಳಾಗಿವೆ. ಹಕೀಮರ ಸೋಗಿನಲ್ಲಿ ಕೂತಿರುವ ವ್ಯಾಪಾರಿಗಳಿಗೂ ಪ್ರಶ್ನೆಗಳು ಎದುರಾದಾಗ ಕಸಿವಿಸಿಯಾಗುತ್ತದೆ. ಇನ್ನು ಎಲ್ಲಿಂದಲೋ ಅರ್ಧಂಬರ್ಧ ಕಲಿತು ಪರಿಣತ(?)ರಾದವರು ಎಲ್ಲವನ್ನೂ `ನಂಬಿಕೆ’ಯ ಮೇಲೆ ಹೊರಿಸಿ ನಿರಾಳರಾಗುತ್ತಾರೆ. ಸಂಕೀರ್ಣವಾದ ಪದಗಳನ್ನು, ವಾದಸರಣಿಗಳನ್ನು ಬಳಸಿ ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತಾರೆ. ಇದು ಆಫ್ರಿಕಾದಲ್ಲಷ್ಟೇ ಅಲ್ಲ, ಭಾರತದಲ್ಲೂ ಸತ್ಯವೇ. ಅಂಗೋಲಾದ ಸಂಸ್ಕøತಿಯನ್ನು, ಆಧ್ಯಾತ್ಮವನ್ನು ಅರಿಯುವ ಪ್ರಯತ್ನವಷ್ಟೇ ನನ್ನದು ಎಂಬುದು ಇವರಿಗೆ ನನ್ನ ಎಂದಿನ ಉತ್ತರವಾಗಿತ್ತು. ಇದು ಇಂದಿಗೂ ಸತ್ಯ.

ನನ್ನಲ್ಲಿರುವ ಪ್ರಶ್ನೆಗಳು ಹೊಸದನ್ನು ತಿಳಿದುಕೊಳ್ಳುವ ಹಂಬಲದಿಂದ ಹುಟ್ಟಿಕೊಂಡಂಥವುಗಳೇ ಹೊರತು ಎಲ್ಲವನ್ನೂ ಪೂವ್ರಾಗ್ರಹಗಳ ಹಿನ್ನೆಲೆಯಲ್ಲಿ ಸಾಣೆಹಿಡಿದು ಧಿಕ್ಕರಿಸುವುದಕ್ಕಲ್ಲ. ಜೀವನವನ್ನು ನಿರಂತರ ಕಲಿಕೆಯನ್ನಾಗಿಸಿಕೊಂಡವರಿಗೆ ಎಲ್ಲವೂ ಅಚ್ಚರಿಯೇ, ಎಲ್ಲದರಲ್ಲೂ ಕುತೂಹಲವೇ! ಹೀಗಾಗಿ ವಾಮಮಾರ್ಗದ ಬಗ್ಗೆ ನನಗಿರುವ ಕುತೂಹಲದ ಬಗ್ಗೆ ಯಾವುದೇ ಪಶ್ಚಾತ್ತಾಪಗಳಿಲ್ಲ.

‍ಲೇಖಕರು avadhi

November 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಮಂಜು

    ಓಂ ಬ್ರಾಂ ಬ್ರೀಂ ಅಂದ್ರೇನು ಅಂತ ನಿಮ್ಮ ಲೇಖನದಲ್ಲಿ ಎಲ್ಲಾ ಹುಡುಕಿದೆ ಸಿಗಲಿಲ್ಲ!!! ಹಾಗೆಂದರೆ ಮಾಟ ಮಂತ್ರವೆಂದರ್ಥವೆ?

    ಪ್ರತಿಕ್ರಿಯೆ
  2. manjunath

    ಈ ರೀತಿಯಲ್ಲಿ ಅನಿಸಿಕೆಗಳು ನಮ್ಮವರು ಹಂಚಿಕೊಂಡರೆ ನಮಗೂ ಕೆಲವು ದೇಶದ ಆಚಾರ ವಿಚಾರಗಳು ಗೊತ್ತಾಗುತ್ತವೆ. ಲೇಖನ ಬರೆಯುವ ಶೈಲಿ ಯೇ ತುಂಬಾ ಇಷ್ಟವಾಯಿತು. ಧನ್ಯವಾದಗಳು.
    -ಮಂಜುನಾಥ್.ಬಿ.ಎಲ್
    ಬೆಂಗಳೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: