ಅಂಗೋಲಾದಲ್ಲಿ ಶುಕ್ರವಾರದ ಎಂದರೆ ಶುಕ್ರವಾರವಲ್ಲ.. ಅದು 'Day of man'


”ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ…”
ಏಳೆಂಟು ವರ್ಷಗಳ ಹಿಂದಿನ ಮಾತು.
ಕೀನ್ಯಾದ ಸಚಿವ ಸಂಪುಟದಲ್ಲಿದ್ದ ಮಂತ್ರಿಯೊಬ್ಬರು ದೆಹಲಿಗೆ ಬಂದಿದ್ದರು. ನನಗೆ ನೆನಪಿರುವಂತೆ ಕೆಲ ಆಫ್ರಿಕನ್ ದೇಶಗಳ ಶೃಂಗಸಭೆಗೆ ಅವರು ತನ್ನ ತಂಡದೊಂದಿಗೆ ಅತಿಥಿಯಾಗಿ ಬಂದಿದ್ದವರು. ನಾನಿರುವ ಸಂಸ್ಥೆಯ ಹಲವು ಯೋಜನೆಗಳು ಆಫ್ರಿಕಾದಲ್ಲಿ ನಡೆಯುತ್ತಿದ್ದರಿಂದ ಅವರು ಒಂದು ರೀತಿಯಲ್ಲಿ ನಮ್ಮದೇ ಖಾಸಗಿ ಅತಿಥಿಯಾಗಿದ್ದರು ಎಂದರೂ ತಪ್ಪಾಗಲಿಕ್ಕಿಲ್ಲ. ಬಂದವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳಿ ಎಂಬ ಶುದ್ಧ ಕೆಲಸಕ್ಕೆ ಬಾರದ ಜವಾಬ್ದಾರಿಯನ್ನು ನನ್ನಂತಹ ಒಂದಿಬ್ಬರು ತರುಣ ಎಂಜಿನಿಯರ್ ಗಳ ಮೇಲೆ ಅಂದು ಹಾಕಲಾಗಿತ್ತು. ‘
‘ನೋಡಿಕೊಳ್ಳಿ” ಎಂದರೆ ಬಂದವರ ಹಿಂದೆಯೇ ಅವರ ಬಾಲದಂತೆ ಸುತ್ತಬೇಕು, ಅವರ ನೆರಳಿನಂತಿರಬೇಕು ಎಂಬುದು ಇದರ ಗೂಡಾರ್ಥ. ನನ್ನ ಜೊತೆಗಿದ್ದಾತ ಒಂದೆರಡು ವರ್ಷ ನನಗಿಂತ ಹಿರಿಯವನಾದ್ದರಿಂದ ನಾನು ಆತನ ಜೊತೆ ಹೋಗಿದ್ದೆ. ”ನಮಗೆ ಮಾಡೋಕೇನಿಲ್ಲ, ಮಂತ್ರಿಗಳು ಇನ್ನೊಂದರ್ಧ ತಾಸಿನಲ್ಲಿ ಬರುತ್ತಾರಂತೆ. ಅವರನ್ನು ಹೋಟೇಲಿಗೆ ಕರೆದುಕೊಂಡು ಹೋಗಿ ಬಿಡೋದಷ್ಟೇ”, ಎಂದ ನನ್ನ ಸಹೋದ್ಯೋಗಿ. ನಾನೂ ಸಮ್ಮತಿಯೆಂಬಂತೆ ತಲೆಯಾಡಿಸುತ್ತಾ ಅವನನ್ನು ಹಿಂಬಾಲಿಸಿದೆ.
ಮಂತ್ರಿಗಳು ಉಳಿದ ಗಣ್ಯರಂತೆಯೇ ಹಡಗಿನಂತಹ ಕಾರಿನಲ್ಲಿ ಪಂಚತಾರಾ ಹೋಟೇಲಿನ ಅಂಗಳದಲ್ಲಿ ಜುಮ್ಮನೆ ಬಂದಿಳಿದರು. ಪುಣ್ಯಕ್ಕೆ ನಮ್ಮ ಮಂತ್ರಿಗಳಂತೆ ದಿಬ್ಬಣ ಕಟ್ಟಿಕೊಂಡು ಬರಲಿಲ್ಲ ಅನ್ನುವುದೇ ನಮಗೆ ಖುಷಿಯಾಗಿತ್ತು. ಈಗಷ್ಟೇ ಕಾಲೇಜು ಮುಗಿಸಿ ಬಂದವರಂತಿದ್ದ ನಮ್ಮಿಬ್ಬರೊಂದಿಗೆ ಸಂಕ್ಷಿಪ್ತ ಔಪಚಾರಿಕ ಮಾತುಕತೆಯ ನಂತರ ನಮ್ಮನ್ನೂ ಕರೆದುಕೊಂಡು ತಮ್ಮ ಕೋಣೆಗೆ ಹೋದ ಮಂತ್ರಿ ಮಹಾಶಯರು ”ನಾನು ಬರುವವರೆಗೂ ಇಲ್ಲೇ ಕುಳಿತುಕೊಳ್ಳಿ ಪ್ಲೀಸ್” ಎಂದು ಥಟ್ಟನೆ ಮಾಯವಾಗಿಬಿಟ್ಟರು.
ಹೀಗೆ ಏಕಾಏಕಿ ಮಾಯವಾದವರು ತೆರಳಿದ್ದು ಸ್ನಾನಕ್ಕೆ ಎಂಬುದು ನಮಗೆ ತಿಳಿದಿದ್ದು ಸಾಕಷ್ಟು ತಡವಾಗಿಯೇ. ಸ್ನಾನ ಮುಗಿಸಿ ಬೈರಾಸನ್ನು ಕುತ್ತಿಗೆಗೆ ಸುತ್ತಿ ಸಮುದ್ರತೀರವೊಂದಕ್ಕೆ ವಿಹಾರಕ್ಕೆ ಬಂದಂತೆ ನಮ್ಮೆದುರಿಗೆ ನಿಂತಿದ್ದರು ಆತ. ನೋಡಲು ನಮ್ಮ ಹಳ್ಳಿಗಳಲ್ಲಿ ಹಳೇ ಕಾಲದವರು ಧರಿಸುತ್ತಿದ್ದ ಪಟ್ಟೆ ಚಡ್ಡಿಯಷ್ಟೇ ದೊಡ್ಡದಿದ್ದ, ದೊಡ್ಡ ಹೂವು ಮತ್ತು ಬಲೂನುಗಳ ಚಿತ್ರಗಳನ್ನು ಹೊಂದಿದ್ದ, ಕಣ್ಣಿಗೆ ರಾಚುವಂತಹ ಬಣ್ಣವನ್ನು ಹೊಂದಿದ್ದ ಚಡ್ಡಿಯನ್ನಾತ ಧರಿಸಿದ್ದ. ಅರ್ಧತಾಸಿನ ಹಿಂದಷ್ಟೇ ಸೂಟುಬೂಟಿನಲ್ಲಿ ಹೊಳೆಯುತ್ತಿದ್ದ ವಿವಿಐಪಿ ಅತಿಥಿಯೊಬ್ಬರನ್ನು ಇಷ್ಟು ಬೇಗ ಈ ಗೆಟಪ್ಪಿನಲ್ಲಿ ನೋಡಲು ನಿರೀಕ್ಷಿಸದಿದ್ದ ನಾವಿಬ್ಬರು ಹುಡುಗರು ಅಂದು ಮುಖ-ಮುಖ ನೋಡಿಕೊಂಡಿದ್ದಂತೂ ಸತ್ಯ.
”ಬನ್ರೀ… ಕೆಲಸ ಮಾಡಿದ್ದು ಸಾಕು… ಎಣ್ಣೆ ಹಾಕೋಣ”, ಎಂದು ಕ್ಷಣಾರ್ಧದಲ್ಲಿ ಆಹ್ವಾನ ಬಂದಾಗಿತ್ತು. ನನ್ನ ಜೊತೆಗಿದ್ದ ಪಂಜಾಬಿ ಸಹೋದ್ಯೋಗಿ ಬಂದಿದ್ದ ಗಣ್ಯರೊಂದಿಗೆ ಅರ್ಧಂಬರ್ಧ ಇಂಗ್ಲಿಷ್ ಮಾತಾಡಿ ಆಗಲೇ ಸುಸ್ತಾಗಿದ್ದ. ಆದಷ್ಟು ಬೇಗ ಮರಳೋಣವೆಂದರೆ ಈ ಅತಿಥಿ ಮಹಾಶಯರು ಕೂತು ಎಣ್ಣೆ ಹಾಕೋಣ ಅಂತಿದ್ದಾರೆ. ಏನು ಮಾಡುವುದು ಎಂದು ಕಣ್ಣಲ್ಲೇ ನನಗೆ ಕೇಳಿದ ಆತ. ”ಇಂಗ್ಲಿಷನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಎಣ್ಣೆಯನ್ನೂ, ಈ ಅಣ್ಣನನ್ನೂ ಸಂಭಾಳಿಸು”, ಎಂದು ನಾನೂ ಕಣ್ಣಲ್ಲೇ ಆತನಿಗೆ ಅಭಯವನ್ನು ನೀಡಿದೆ.
ಒಟ್ಟಿನಲ್ಲಿ ಮುಂದಿನ ಒಂದೆರಡು ತಾಸುಗಳು ನಿರುಮ್ಮಳವಾಗಿ ಸಾಗಿದವು. ಮಂತ್ರಿಗಳು ಅಂದು ಕೆಲಸ ಮಾಡುವ ಮೂಡಿನಲ್ಲಿರುವಂತೆ ಕಾಣಲಿಲ್ಲ. ಹಾಗೆಯೇ ನಮ್ಮನ್ನು ಬಿಡುವಂತೂ ಕಾಣಲಿಲ್ಲ. ಅಂತೂ ಅಲ್ಲಿಂದ ಕಳಚಿಕೊಂಡು ಬರುವಷ್ಟರಲ್ಲಿ ಸೂರ್ಯ ಮುಳುಗಿದ್ದ. ಇಂಥದ್ದೊಂದು ವಿಚಿತ್ರ ಸಂಜೆಯನ್ನು ನಿರೀಕ್ಷಿಸದಿದ್ದ ನಾವುಗಳು ಸಾಕಷ್ಟು ಹೊತ್ತು ಗೊಂದಲದಲ್ಲೇ ಇದ್ದವು.
”ಬಹುಪಾಲು ಆಫ್ರಿಕನ್ನರು ಇರೋದೇ ಹೀಗೆ. ಕೆಲಸದ ಹೊತ್ತಿಗೆ ಕೆಲಸ, ಮೋಜಿನ ಹೊತ್ತಿನಲ್ಲಿ ಮೋಜು. ಹಾಯಾಗಿರುತ್ತಾರೆ ಇವರೆಲ್ಲಾ”, ಎಂದು ಮರುದಿನ ಆಫೀಸಿನಲ್ಲಿ ನನಗೊಬ್ಬರು ಹೇಳಿದ್ದರು. ಬಹುಷಃ   ನನ್ನ ಸಹೋದ್ಯೋಗಿ ಹಿಂದಿನ ಸಂಜೆಯ ವಿಷಯವನ್ನು ಅವರಲ್ಲಿ ಪ್ರಸ್ತಾಪಿಸಿದ್ದ. ನನಗಿವೆಲ್ಲಾ ಹೊಸ ಅನುಭವಗಳಾಗಿದ್ದರಿಂದ ಆ ಹಿರಿಯರು ನನಗಿದನ್ನು ತಿಳಿಹೇಳುತ್ತಿದ್ದರು. ನಾನೂ ಒಂದು ದಿನ ಆಫ್ರಿಕಾ ನೆಲದಲ್ಲಿ ಕಾಲಿರಿಸುತ್ತೇನೆ ಎಂಬ ಯಾವ ಕಲ್ಪನೆಯೂ ಆ ದಿನಗಳಲ್ಲಿ ಇರದಿದ್ದ ಪರಿಣಾಮವಾಗಿ ಈ ಘಟನೆಯು ಕ್ರಮೇಣ ಮರೆತೂ ಹೋಯಿತು. ಮುಂದೆ ಇವೆಲ್ಲಾ ನೆನಪಾಗಿದ್ದು ಅಂಗೋಲಾಕ್ಕೆ ಬಂದಿಳಿದ ನಂತರವೇ.
ಅಂಗೋಲಾದಲ್ಲಿ ಶುಕ್ರವಾರದ ದಿನವನ್ನು ‘Day of man’ ಎಂದು ಕರೆಯಲಾಗುತ್ತದೆ. ‘Day of man’ ಎಂದರೆ ‘ಗಂಡಸರ ದಿನ’ ಎಂಬ ಅರ್ಥವಾದರೂ ಅದು ಎಲ್ಲರಿಗೂ ಮೋಜಿನ ದಿನವೆಂದೇ ಮೀಸಲಿಟ್ಟಂತಹ ದಿನ. ಸಾಮಾನ್ಯವಾಗಿ ಕಚೇರಿಗಳು ನಿತ್ಯವೂ ಸಂಜೆಯ ಐದೂವರೆಗೆ ಮುಚ್ಚಿಹೋದರೆ ಶುಕ್ರವಾರ ಮಾತ್ರ ನಾಲ್ಕಕ್ಕೇ ಮುಚ್ಚಿಬಿಡುತ್ತವೆ. ಇನ್ನು ಶನಿವಾರ, ಭಾನುವಾರ ಎರಡು ದಿನಗಳ ವಾರಾಂತ್ಯವಿರುವ ಜನರಿಗಂತೂ ಇದು ಮತ್ತಷ್ಟು ಸಂತಸದಾಯಕ ದಿನ.
ಶುಕ್ರವಾರದ ಸಂಜೆ ಎಂದರೆ ಇಲ್ಲಿ ಗೆಳೆಯರೊಂದಿಗೆ, ಕುಟುಂಬದ ಸದಸ್ಯರೊಂದಿಗೆ, ಹಿತೈಷಿಗಳೊಂದಿಗೆ ಮೋಜಿನಲ್ಲಿ ಸಮಯವನ್ನು ಕಳೆಯುವ ಪರಿಪಾಠವಂತೆ. ಅಂಗೋಲಾದ ಬಹುತೇಕ ಸಂಸ್ಥೆಗಳಲ್ಲಿ ಇದನ್ನು ಸರ್ವೇಸಾಮಾನ್ಯವಾಗಿ ಕಾಣಬಹುದು. ಇನ್ನು ಇಂಥಾ ಪರಿಪಾಠಗಳಿಲ್ಲದ ಕೆಲ ಸಂಸ್ಥೆಗಳಲ್ಲೂ ಇದನ್ನು ಉದ್ಯೋಗಿಗಳು ಬಲವಂತದಿಂದ ಅನಧಿಕೃತವಾಗಿ ಹೇರಿಕೊಂಡು ಮೋಜು ಮಾಡುವುದೂ ಇದೆ. ಹೀಗೆ ಶುಕ್ರವಾರದ ಸಂಜೆಯೆಂದರೆ ‘ಕೂಕಾ’ ಕೊಂಚ ಹೆಚ್ಚೇ ತುಂಬಿಹರಿಯುತ್ತದೆ, ಫುಟ್ಬಾಲ್ ಪಂದ್ಯಗಳಿದ್ದರೆ ರಾತ್ರಿ ರಂಗೇರುತ್ತದೆ. ಅಂಗೋಲನ್ನರಿಗೆ ಶುಕ್ರವಾರ ಎಂದರೆ ನಿಜಕ್ಕೂ ‘Oye its Friday’!
ಭಾನುವಾರ ಮತ್ತು ಸರಕಾರಿ ರಜಾದಿನಗಳಲ್ಲೂ ವೀಜ್ ನಂತಹ ಚಿಕ್ಕಪುಟ್ಟ ಶಹರಗಳು ಇಲ್ಲಿ ಬಿಕೋ ಅನ್ನುವುದು ಸಾಮಾನ್ಯ. ರಾಜಧಾನಿಯಾದ ಲುವಾಂಡಾದಂತಹ ನಗರಗಳಲ್ಲಿ ಶಾಪಿಂಗ್ ಮಾಲ್ ಗಳು, ತಾರಾ ಹೋಟೇಲುಗಳು ಮತ್ತು ಸಾಗರತೀರದಲ್ಲಿರುವ ಕೆಲ ವ್ಯಾಪಾರಿ ಸಂಕೀರ್ಣಗಳು ತೆರೆದಿರುತ್ತವೆಯೇ ಹೊರತು ಉಳಿದವರಿಗೆಲ್ಲಾ ಅದು ನಿಸ್ಸಂದೇಹವಾಗಿ ರಜಾದಿನ. ಭಾನುವಾರ ಅಂಗಡಿ ತೆರೆದಿಟ್ಟರೆ ಒಂದಿಷ್ಟು ದುಡ್ಡು ಮಾಡಬಹುದು ಎಂಬ ದರ್ದಿಗೆ ಬಿದ್ದು ಅಂಗೋಲನ್ನರು ವ್ಯಾಪಾರ ಮಾಡುವವರಲ್ಲ. ಯಾರ ಒತ್ತಾಯಕ್ಕೋ, ಮುಲಾಜಿಗೆ ಬಿದ್ದೂ ಮಾಡುವವರಲ್ಲ. ಹೀಗೆ ರಜಾದಿನಗಳನ್ನು ‘ಜನ್ಮಸಿದ್ಧ ಹಕ್ಕು’ ಎಂಬಂತೆ ಸವಿದು  ಜೀವಿಸುವವರು ಅಂಗೋಲನ್ನರು.
ಕೆಲವೊಮ್ಮೆ ಇವುಗಳೆಲ್ಲಾ ಮಿತಿಮೀರಿ ಹೋದಂತೆ ಅನ್ನಿಸುವ ಸಂದರ್ಭಗಳೂ ಸೃಷ್ಟಿಯಾಗುವುದಿದೆ. ಉದಾಹರಣೆಗೆ ಭಾನುವಾರದ ರಜೆಗಳು ತನ್ನಷ್ಟಕ್ಕೇ ಸೋಮವಾರಕ್ಕೆ ಹೊರಳಿಕೊಳ್ಳುವುದು. ಈ ಗುಂಗಿನಲ್ಲೇ 2017 ರ ದಿನವೊಂದು ನೆನಪಾಗುತ್ತದೆ. ಅಂಗೋಲಾ ರಾಷ್ಟ್ರಾಧ್ಯಕ್ಷರ ಹುದ್ದೆಗೆ ಚುನಾವಣೆಯ ಸಿದ್ಧತೆಯಲ್ಲಿತ್ತು. ಆಡಳಿತ ಪಕ್ಷವಾದ ಎಮ್.ಪಿ.ಎಲ್.ಎ ದಿಂದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಜ್ವಾಂ ಲೊರೆನ್ಸೋ ಚುನಾವಣಾ ಪ್ರಚಾರಕ್ಕೆಂದು ವೀಜ್ ಗೆ ಆಗಮಿಸಲಿದ್ದರು. ಇನ್ನೇನು ಬಂದೇಬಿಟ್ಟರು ಅನ್ನುವಷ್ಟರಲ್ಲಿ ವೀಜ್ ನಲ್ಲಿರುವ ಎಲ್ಲಾ ಕಾರ್ಯಾಲಯಗಳಿಗೂ ಅಚಾನಕ್ಕಾಗಿ ರಜೆಯನ್ನು ಘೋಷಿಸಲಾಗಿತ್ತು.
ರಜೆಯ ಬಗ್ಗೆ ಕೊನೆಯ ಕ್ಷಣದವರೆಗೂ ಮಾಹಿತಿಯಿರದ ಕಾರ್ಯಾಲಯಗಳು ಬಾಗಿಲನ್ನು ತೆರೆದರೂ ನಂತರ ಆಡಳಿತ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆಂದು ಬಂದರೆಂಬ ಕಾರಣವನ್ನು ಹೇಳಿ(ಸಿ) ಏಕಾಏಕಿ ರಜೆಯನ್ನು ಘೋಷಿಸಲಾಯಿತು. ರಜಾದಿನಗಳನ್ನು ಇಷ್ಟಪಡದವರ್ಯಾರು ಹೇಳಿ? ಹೀಗಾದರೂ ನಮಗೆ ಮತಗಳು ದಕ್ಕಲಿ ಎಂದು ಲೊರೆನ್ಸೋರವರು ಯೋಚಿಸಿರಬಹುದೇ? ಇರಬಹುದೇನೋ!
ವಿಡಂಬನೆಯ ಸಂಗತಿಯೆಂದರೆ ದೇಶದ ಪ್ರಮುಖ ವಿರೋಧ ಪಕ್ಷವಾದ ಯು.ಎನ್.ಐ.ಟಿ.ಎ (ಯುನಿಟಾ) ಸೇರಿದಂತೆ ಉಳಿದ ಯಾವ ಪಕ್ಷಗಳ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳು ಬಂದರೂ ಹೋದರೂ ಶಹರದಲ್ಲಿ ಸುದ್ದಿಯಾಗಲಿಲ್ಲ. ಯಾವ ಹೆಚ್ಚುವರಿ ರಜಾದಿನಗಳೂ ಈ ನಿಟ್ಟಿನಲ್ಲಿ ದಕ್ಕಲಿಲ್ಲ. ನನ್ನನ್ನೂ ಸೇರಿದಂತೆ ಅಂಗೋಲಾದ ಈ ಐತಿಹಾಸಿಕ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತಿದ್ದ ಎಲ್ಲರಿಗೂ ಒಂದು ರೀತಿಯಲ್ಲಿ ಇವೆಲ್ಲವೂ ನಿರೀಕ್ಷಿತವೇ.
ಪಾರದರ್ಶಕ ಆಡಳಿತದ ಭರವಸೆಯನ್ನು ಕೊಟ್ಟಿದ್ದ ಆಡಳಿತ ಪಕ್ಷದ ಪ್ರತಿಯೊಂದು ಹೆಜ್ಜೆಗಳು ಆರಂಭದಿಂದ ಅಂತ್ಯದವರೆಗೂ ವಾಮಮಾರ್ಗವೇ ಆಗಿತ್ತು. ಹೀಗೆ ಪ್ರಜಾಪ್ರಭುತ್ವದ ಮುಖವಾಡವನ್ನು ಹಾಕಿಕೊಂಡು ರಾಜಾರೋಷವಾಗಿ ಸರ್ವಾಧಿಕಾರಿ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿರುವ ದೇಶಗಳನ್ನು ಪರಿಗಣಿಸಿದರೆ ಅಂಗೋಲಾ ಒಂದೊಳ್ಳೆಯ ನಿದರ್ಶನವಾಗಿ ನಿಲ್ಲುವಂಥದ್ದು.
ಸದ್ಯ ಮರಳಿ ಅಂಗೋಲನ್ನರ ಹಾಯೆನಿಸುವ ಜೀವನಶೈಲಿಯತ್ತ ಬರೋಣ. ಅಂಗೋಲಾದಲ್ಲಿ ನಮಗೆ ಸಾಮಾನ್ಯವಾಗಿ ಕಾಣಸಿಗುವುದು ಎರಡು ವರ್ಗದ ಜನರು ಮಾತ್ರ. ಮಿತಿಮೀರಿದ ಶ್ರೀಮಂತಿಕೆಯಲ್ಲಿ ಹೊರಳಾಡುತ್ತಿರುವ ಒಂದು ವರ್ಗ ಮತ್ತು ಬಹಳ ಕಸರತ್ತುಗಳನ್ನು ಮಾಡುತ್ತಾ ಮಲಗುವ ಮುನ್ನ ಹೇಗೋ ಹೊಟ್ಟೆ ತುಂಬಿಸಿಕೊಂಡು ದಿನತಳ್ಳುವ ಮತ್ತೊಂದು ವರ್ಗ. ಮಧ್ಯಮವರ್ಗವೆಂಬುದು ಇಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ದೇಶದ ಸಂಪತ್ತಿನ ಹಂಚಿಕೆಯಲ್ಲಿ ಮಿತಿಮೀರಿದ ಅಸಮತೋಲನವಾಗಿಬಿಟ್ಟರೆ ಸಾಮಾನ್ಯವಾಗಿ ಹೀಗಾಗುತ್ತದಂತೆ.
ಈ ಎರಡನೇ ವರ್ಗದ ಜನರು ಆರ್ಥಿಕವಾಗಿ ಬಲಿಷ್ಠರಲ್ಲ, ಇನ್ನು ಈ ಬಗ್ಗೆ ಬುದ್ಧಿವಂತರಂತೂ ಅಲ್ಲವೇ ಅಲ್ಲ. ಬ್ಯಾಂಕೊಂದರ ಸ್ಥಳೀಯ ಶಾಖೆಯಲ್ಲಿ ಉಳಿತಾಯ ಖಾತೆಯೊಂದನ್ನು ತೆರೆದು ಕಷ್ಟಕಾಲಕ್ಕೆಂದು ಒಂದಿಷ್ಟು ಕಾಸು ಕೂಡಿಡುವ ಮಂದಿಯಲ್ಲ ಇವರು. ಕೈಗೊಂದಿಷ್ಟು ಕಾಸು ಬಂದರೆ ಪ್ರಾಮುಖ್ಯತೆಯ ಪಟ್ಟಿಯಲ್ಲಿರುವ ಅತೀ ಮುಖ್ಯ ಕೆಲಸಗಳನ್ನು ಮಾಡಿ ಮುಗಿಸಿ ನಿರಾಳವಾಗುವ ವರ್ಗವೂ ಇದಲ್ಲ.
ಬದಲಾಗಿ ಡಿಸ್ಕೋಥೆಕ್ ಗಳಿಗೆ ಹೋಗಿ ಕಂಠಪೂರ್ತಿ ಕುಡಿದೋ, ಹೊಸ ಪ್ರೇಯಸಿಯೊಂದಿಗೆ ಪಕ್ಕದ ದೇಶಕ್ಕೆ ಪ್ರವಾಸ ಹೊರಟೋ ಕೈಯಲ್ಲಿದ್ದ ಅಷ್ಟೂ ಹಣವನ್ನು ಉಡಾಯಿಸಿ ಆ ಹೊತ್ತಿನ ಮೋಜಿಗಷ್ಟೇ ಆದ್ಯತೆಯನ್ನು ನೀಡುವ ಜನರಿವರು. ಹೀಗಾಗಿಯೇ ಹಲವು ಜನರಿಂದ ಸಾಲ ಪಡೆದು ಕಸರತ್ತು ಮಾಡಿದರೂ ಈ ವರ್ಗದ ಜನರ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಇದೊಂಥರಾ ತಳವಿಲ್ಲದ ಕೊಡದೊಳಕ್ಕೆ ನೀರು ಸುರಿದಂತಷ್ಟೇ!
ಇನ್ನು ಆರ್ಥಿಕ ವ್ಯವಹಾರಗಳನ್ನು ನಡೆಸುವ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ವಾಸಿ. ಹೀಗಾಗಿಯೇ ಚಿಕ್ಕಪುಟ್ಟ ವ್ಯಾಪಾರಗಳನ್ನಾದರೂ ಮಾಡಿ ಶ್ರಮದ ಬದುಕನ್ನು ಸಾಗಿಸುವ ನೂರಾರು ಹೆಣ್ಣುಮಕ್ಕಳು ಇಲ್ಲಿ ಕಾಣಸಿಗುವುದು ಸಹಜ. ಮೋಜೆಂಬುದು ಆಕೆಗೆ ಅಪರೂಪಕ್ಕೆ ಸಿಗುವ ವಿಲಾಸವಷ್ಟೇ ಹೊರತು ಅದುವೇ ಅವಳ ಜೀವನವಲ್ಲ. ಪುರುಷನಷ್ಟು ಬೇಜವಾಬ್ದಾರಿತನದಿಂದ ವರ್ತಿಸಿದರೆ ಆಕೆಯ ಕರುಳಕುಡಿಗಳು ಉಪವಾಸ ಬಿದ್ದು ಸಾಯಬೇಕಷ್ಟೇ.
ಆದರೆ ಬಹುಪಾಲು ಪುರುಷರ ಜೀವನವು ಶಿಸ್ತಿನ ಮಾರ್ಗವಿಲ್ಲದೆ ಮೋಜುಮೋಜಲ್ಲೇ ದಿಕ್ಕುತಪ್ಪುತ್ತದೆ. ಉದ್ಯೋಗಗಳು ಸಿಕ್ಕ ವೇಗದಲ್ಲೇ ಕೈಜಾರಿಹೋಗುತ್ತದೆ, ರೋಗಗಳು ಜೀವನವನ್ನು ಹಿಂಡಿಹಿಪ್ಪೆ ಮಾಡುತ್ತವೆ, ಸಾಲ ಕೊಟ್ಟವರಿಂದ ತಲೆಮರೆಸಿಕೊಂಡು ಓಡಾಡುವುದೇ ಒಂದು ನಿತ್ಯದ ದಿನಚರಿಯಾಗಿಬಿಡುತ್ತದೆ. ಹೀಗೆ ಬಡತನವನ್ನೇ ಬಂಡವಾಳವಾಗಿಟ್ಟುಕೊಂಡು ಈ ಮೂಲಕ ಅನುಕಂಪ ಗಿಟ್ಟಿಸುವ, ಉಳ್ಳವರಿಂದ ಸಿಕ್ಕಷ್ಟು ಕಾಸು ಗಿಟ್ಟಲಿ ಎಂದು ನಾಟಕ ಮಾಡುವ ಮತ್ತು ನಂತರ ಮಾಯವಾಗುವ ಮಹಾಬುದ್ಧಿವಂತರು ಇಲ್ಲಿ ಕಾಣಸಿಗುವುದು ಸಾಮಾನ್ಯ.
ಅಂಗೋಲನ್ನರನ್ನು ನಾವು ಸಾಮಾನ್ಯವಾಗಿ ಹಲವು ಉದ್ಯೋಗಗಳಲ್ಲಿ ತೊಡಗಿಕೊಂಡಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಬಹುತೇಕ ಎಲ್ಲರಲ್ಲೂ ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳಿರುತ್ತವೆ. ಹೀಗಾಗಿ ಸದ್ಯದ ಉದ್ಯೋಗವು ರಗಳೆಯೆಂಬುದು ಮನವರಿಕೆಯಾದ ತಕ್ಷಣವೇ ಇಲ್ಲಿಯವರು ರಾಜೀನಾಮೆ ಎಸೆದು ತಕ್ಷಣ ಎದ್ದು ನಡೆದುಬಿಡುತ್ತಾರೆ. ಹೀಗೆ ಒಂದೇ ಉದ್ಯೋಗಕ್ಕೆ ಕಚ್ಚಿಕೊಂಡಿರದ ಇಲ್ಲಿಯ ರೂಢಿಯು ನೀಡುವ ಸ್ವಾತಂತ್ರ್ಯವು ಅಂಗೋಲನ್ನರಿಗೆ ಬಹಳ ಪ್ರಿಯ.
ಸ್ಥಿರ ಆದಾಯವಿರುವ ಸರಕಾರಿ ಅಧಿಕಾರಿಗಳೂ ಕೂಡ ಬಿಡುವಿನ ವೇಳೆಗಳಲ್ಲಿ ಹಲವು ಬಗೆಯ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾನ್ಯರು ಬ್ರೆಡ್, ತರಕಾರಿಗಳಂತಹ ವ್ಯಾಪಾರಗಳಲ್ಲಿ ತೊಡಗಿಸಿಕೊಂಡರೆ ಮೇಲ್ಮಧ್ಯಮ ವರ್ಗದ ಇಂಥವರು ಅಂಗೋಲಾದಲ್ಲಿ ತೀರಾ ದುಬಾರಿಯಾಗಿರುವ ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಏಕೆಂದರೆ ಲುವಾಂಡಾದಂತಹ ದುಬಾರಿ ನಗರಗಳಲ್ಲಿ ಕಾಸು ಎಷ್ಟಿದ್ದರೂ ಕಮ್ಮಿಯೇ. ಇಷ್ಟಿದ್ದೂ ಹತ್ತರಲ್ಲಿ ಏಳರಷ್ಟು ಅಂಗೋಲನ್ನರ ಜೀವನಮಟ್ಟವು ಬರಖತ್ತಾಗದಿರಲು ಇಂಥಾ ವಿಚಿತ್ರ ಜೀವನಶೈಲಿಗಳೇ ಕಾರಣ.
ಹೀಗೆ ಅಂಗೋಲನ್ನರ ಜೀವನಶೈಲಿಯಲ್ಲಿ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಗೆರೆಯು ಬಹಳ ತೆಳು. ಆದರೆ ಅದೇನೇ ಆದರೂ ಇವರುಗಳು ಯಾವ ಕಾರಣಕ್ಕೂ ತಮ್ಮ ಮೋಜಿನ ಕೋಟಾವನ್ನು ತಪ್ಪಿಸುವವರಲ್ಲ. ಕೆಲ ತೀರಾ ಅನ್ನಿಸುವ ಅಪವಾದಗಳನ್ನು ಹೊರತುಪಡಿಸಿದರೆ ಇಂಥಾ ಪುಟ್ಟ ಪುಟ್ಟ ಸಂತಸಗಳು ಅಂಗೋಲನ್ನರಲ್ಲಿ ಹುಟ್ಟಿಸುವ ಜೀವನಪ್ರೀತಿ, ಉತ್ಸಾಹ ದೊಡ್ಡದು. ಹಲವು ಕಾರಣಗಳಿಂದಾಗಿ ಆಫ್ರಿಕಾದಲ್ಲಿ ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ವಲಸೆ, ತೀವ್ರಗತಿಯ ರಾಜಕೀಯ-ಆರ್ಥಿಕ ಏರಿಳಿತಗಳು, ಸಂಪತ್ತಿನ ಅಸಮತೋಲನ, ಅವಕಾಶಗಳ-ಸಂಪನ್ಮೂಲಗಳ ನಿರಂತರ ಕೊರತೆ… ಇತ್ಯಾದಿಗಳೆಲ್ಲವೂ ಇವುಗಳ ಹಿಂದಿನ ಕಾರಣಗಳಾಗಿರಬಹುದು. ಉಳಿದಂತೆ ಲೋಕೋ ಭಿನ್ನರುಚಿ!
ಒಟ್ಟಿನಲ್ಲಿ ಎಂಥಾ ಸಂಕಷ್ಟದ ಪರಿಸ್ಥಿತಿಯಲ್ಲೂ ನಿನ್ನೆ ಮತ್ತು ನಾಳೆಗಳ ಪರಿವೆಯಿಲ್ಲದೆ ಈ ಕ್ಷಣವನ್ನಷ್ಟೇ ಸವಿಯುತ್ತಾ ಹಾಯಾಗಿರುವುದನ್ನು ಕಲಿಯಬೇಕಾದರೆ ಆಫ್ರಿಕನ್ನರನ್ನೇ ಅನುಸರಿಸುವುದು ಅತ್ಯಂತ ಸೂಕ್ತ.

‍ಲೇಖಕರು Avadhi Admin

August 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. ರಾಜೀವ

    ಇನ್ನೊಂದು ಉತ್ತಮ ಬರಹ ಪ್ರಸಾದ ಸರ್…ಅಂಗೋಲಾದ ಜನರ ವಿಭಿನ್ನ ಬದುಕನ್ನು ವಿನೋದದ ಶೈಲಿಯಲ್ಲಿ ನಮಗೆಲ್ಲ ತಿಳಿಸುತ್ತಿದ್ದೀರಿ. ಅಂಗೋಲಿಯನ್ನರ ಬಡತನ, ವ್ಯಸನ, ಉರಿದು ಹೋಗುವ ಜೀವನದ ಬಗ್ಗೆ ಒಡಲಲ್ಲಿ ಸಣ್ಣ ನೋವನ್ನೂ ಇಡುತ್ತೀರಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: