ಕರವಸ್ತ್ರ
ಪಿ ಆರ್ ವೆಂಕಟೇಶ್
ಬೆರಳ ಅಣತಿಗೆ ಬಾಗಿ
ಸೋತಮೈ ಉಕ್ಕಿಸಿದ ಬೆವರ ಧಾರೆಯ ತುಂಬ
ಈಜುವ ಕರವಸ್ತ್ರವೆ
ನೀ ಕಂಡೊಡನೆ ನೆಪ್ಪಾಗುತ್ತಾರೆ
ಮಲ ಹೊತ್ತ ನನ್ನ ಬಂಧುಗಳು.
ನನ್ನುದ್ದ ದೇಹಕೆ ಅಂಗೈಯಗಲದ ಬಟ್ಟೆ ನೀನು
ನಿನ್ನಗಲ ಜಗದಗಲ ಮುಗಿಲಗಲ
ನಿನ್ನೆದುರು ದೊಡ್ಡತನ ಮೆರೆವ ನಾನು ಕುಳ್ಳ.
ಯಾರೂ ನುಗ್ಗದ ಬಾಂದಳದತಳ ನುಗ್ಗುವ
ಪಾತಾಳಗಡೆ ನೀನು
ಕೊಳೆತ ಘಮಲನು ಹುಡುಕಿ
ಕಟ್ಟಿಡುತ್ತಿ ನನ್ನೆದುರು
ತಿನ್ನಲೆಬೇಕಾದ ಬುತ್ತಿಯಂತೆ.
ಮತ್ತೆ ಸೇರುತ್ತಿ ಜೇಬಿನ ಮೌನ ಮೂಲೆಗೆ
ನನ್ನ ಜನರಂತೆ.
ಹಗಲಿಗೆ ಬೆವರಾಗಿ ಮೈ ಹಿಂಡಿ
ಆರಿಹಾಕಿದ ಅರವಿಯಂತೆ
ಮಡಚಿ ಕೂರುತ್ತಿ
ದುಡಿಮೆಯ ಧ್ಯಾನದೊಳಗೆ.
ನಿನ್ನ ಧ್ಯಾನದ ಎದುರು ನನ್ನ ಸೋಲು.

ಕೈ ಬಟ್ಟೆಯೆ
ನನ್ನೊಳಗಿನ ಗುಟ್ಟು ಬಲ್ಲ ಬೇಹುಗಾರ ನೀನು.
ಮಾಸುತ್ತಿ ನಾ ಹಡೆದ ಎಲ್ಲ ನೋವುಗಳಲ್ಲಿ ಯಾತನೆಯಲ್ಲಿ ರೋಗಗಳಲ್ಲಿ
ಎಲ್ಲವನು ನುಂಗಿ ಮೊಗೆದು ಚಿಮ್ಮುತ್ತಿ
ನನ್ನ ಮಾರಿಯತುಂಬ ನಿಲಿ€ಪ್ತ
ನಗೆ
ನನ್ನ ತಾಯಿಯಂತೆ.
ಕೈ ಬಟ್ಟೆಯೇ
ನನ್ನ ನೆತ್ತರು ಕಕ್ಕಿದ ತಪ್ಪುಗಳ
ನೆಕ್ಕಿ
ಶತಮಾನದ ದಳ್ಳುರಿಯ ಕರಕಾಗಿ
ಬೀದಿಗೆ ಬೀಳುತ್ತಿ ಅನಾಥನಂತೆ
ನನ್ನ ಜನರಂತೆ.
ನಿನ್ನ ಬೀದಿಗೆಸೆದವನು ನಾನೇ ಅಲ್ಲವೆ
ಕ್ಷಮಿಸು ಕೈ ಬಟ್ಟೆ
ನನ್ನ ಅಹಮಿಕೆಯ ಗತ್ತನ್ನು
ನನ್ನ ದೌರ್ಜನ್ಯವನ್ನು
ಇದಕ್ಕಿಂತ ದೊಡ್ಡದೇನಲ್ಲ ಬೀದಿ ಹರಡಿದ ಧೂಳು
ಎಲ್ಲ ಹೊಲಸನು ನುಂಗಿ
ಚೆಕ್ಕನೆದ್ದು ಬಿಡು ಬಾನಿನಂತೆ ನನ್ನೆದುರು ಪ್ರತಿಭಟನೆ ಬಾವಟ ನೀನು.






ಇಷ್ಟವಾಯಿತು