ಅಂಕೋಲೆಯ ದಂಡೆಯಲ್ಲಿ 'ಮಂಡಕ್ಕಿ'..

ಗಾಂವಟಿ ಕಥೆಗಳ ಸೊಗಸು
ಶ್ರೀದೇವಿ ಕೆರೆಮನೆ 
ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ತೆರೆದಿಟ್ಟು ಆತ್ಮೀಯವಾಗಿ ನಮ್ಮೊಳಗೆ ನಾವೇ ಮಾತನಾಡಿಕೊಳ್ಳುವಂತೆ ಮಾಡುತ್ತದೆ.
ಇಂದಿನ ಮೆಟ್ರೋಪಾಲಿಟನ್ ಕಥೆಗಳ ಅತೀತ ಲೋಕದಲ್ಲಿ ಮೈ ಮರೆತವರಿಗೆ ಅಪ್ಪಟ ಗ್ರಾಮೀಣ ಸೊಗಡಿನ ‘ಮಂಡಕ್ಕಿ ತಿಂದ ಗಂಗೆ’ ಸಂಕಲನದ ಕಥೆಗಳು ವಾಸ್ತವಕ್ಕೆ ಮರಳುವಂತೆ ಮಾಡುತ್ತದೆ.
ಥಾ ಹಂದರ ಬೇರೆ ಬೇರೆ ಆಗಿದ್ದರೂ ಕಥೆಯ ಒಳಾಂತರಂಗ ಮಾತ್ರ ಮನುಷ್ಯನ ಒಳತೋಟಿಯನ್ನು ಯಶಸ್ವಿಯಾಗಿ ಚಿತ್ರಿಸುತ್ತದೆ. ಬದುಕೆಂಬುದು ಕೇವಲ ಸುಖದ ಆಗರವೂ ಅಲ್ಲ, ಹಾಗಂತಾ ದುಃಖವೇ ಘನಿರ್ಭವಿಸಿರುವುದಿಲ್ಲ. ಸುಖ ಮತ್ತು ದುಃಖ ಸಮಸಮವಾಗಿ ಬೆರೆತಿರುತ್ತದೆ ಎಂಬುದನ್ನು ಈ ಕಥೆಗಳು ಅರ್ಥ ಮಾಡಿಸುತ್ತವೆ.
ಒಟ್ಟೂ ಹತ್ತು ಕಥೆಗಳಿರುವ ಈ ಸಂಕಲನದಲ್ಲಿ ಒಟ್ಟಾರೆ ಭಾಷಾ ಬಳಕೆಯು ಇನ್ನಿಲ್ಲದಂತೆ ಸೆಳೆಯುತ್ತದೆ. ಕೇವಲ ರಾಜಧಾನಿಯ ಶಿಷ್ಟ ಭಾಷೆ ಮಾತ್ರ ನಮ್ಮನ್ನು ಸೆಳೆಯುವ ಸಾಧನವಾಗಿರುವ ಈ ವಿಚಿತ್ರ ಕಾಲಘಟ್ಟದಲ್ಲಿ ಅಂಕೋಲೆಯ ತೀರಾ ಗ್ರಾಮ್ಯ ಭಾಷೆಯನ್ನು ಯಶಸ್ವಿಯಾಗಿ ದುಡಿಸಿಕೊಂಡ ಶಾಂತಾರಾಮ ನಾಯಕರ ಶಕ್ತಿ ಅಕ್ಷರಗಳಲ್ಲಿ ಎದ್ದು ಕಾಡುತ್ತದೆ. ಸರಳ ಭಾಷೆಯ, ಗ್ರಾಮೀಣ ಸೊಗಡಿನ ಈ ಕಥೆಗಳು ಮೇಲ್ನೋಟಕ್ಕೆ ಹೇಳುವುದಕ್ಕಿಂತ ಹೆಚ್ಚಾಗಿ ಬೇರೆ ಏನನ್ನೋ ಧ್ವನಿಸುತ್ತಿರುವುದು ಸೂಕ್ಷ್ಮವಾಗಿ ಓದಿದಾಗ ಅರಿವಿಗೆ ಬರುತ್ತದೆ.
‘ತಿಪ್ಪಜ್ಜಿಯ ಕೋಳಿ ಮರಿಗಳು’ ಎಂಬ ಮೊದಲ ಕಥೆಯನ್ನೇ ತೆಗೆದುಕೊಳ್ಳಿ, ಎಲ್ಲಿಂದಲೋ ಹದ್ದು ಕಚ್ಚಿಕೊಂಡು ಬಂದು ಬೀಳಿಸಿದ ಮರಿಯೊಂದನ್ನು ಜತನದಿಂದ ಕಾಪಾಡಿಕೊಂಡ ತಿಪ್ಪಜ್ಜಿಯಲ್ಲಿ ಒಂದೇ ಕನಸು. ಅವಳ ಮದುವೆಯಲ್ಲಿ ಗಂಡ ಒಡೆಯನ ಹತ್ತಿರ ಪಡೆದ ಮುವತ್ತು ರೂಪಾಯಿಯ ಸಾಲವನ್ನು ಹೇಗಾದರೂ ತೀರಿಸುವ ಹೊಣೆಯನ್ನು ಗಂಡ ಸಾಯುವಾಗ ಅವಳ ಮೇಲೆ ಹೊರೆಸಿ ಹೋಗಿದ್ದ. ಹೀಗಾಗಿ ಆತನ ಕೊನೆಯ ಆಸೆಯನ್ನು ಈಡೇರಿಸಲೇ ಬೇಕಾದ ಒತ್ತಡದಲ್ಲಿ ಆ ಹಣ್ಣು ಹಣ್ಣು ಮುದುಕಿಯಿದ್ದಳು. ಒಂದೇ ಒಂದು ಕೋಳಿ ಮರಿ ಬೆಳೆದು ಮೊಟ್ಟೆ ಇಟ್ಟು ಮರಿ ಮಾಡಿ, ಆ ಮರಿಗಳೆಲ್ಲವೂ ಒಂದೊಂದೇ ನಾನಾ ಕಾರಣದಿಂದ ಇಲ್ಲವಾಗಿ, ಕೊನೆಯಲ್ಲಿ ಉಳಿದ ಎರಡು ಕೋಳಿಗಳಲ್ಲಿ ಒಂದನ್ನು ಸ್ವಂತ ಮಗನೇ ಕದ್ದೊಯ್ದ ನಂತರವೂ ಇರುವ ಒಂದು ಹುಂಜವನ್ನು ಮಾರಿ ಮೂವತ್ತೈದು ರೂಪಾಯಿಯಲ್ಲ ಸಾಲ ತೀರುವ ಕನಸು ಕಾಣುತ್ತಿದ್ದವಳಿಗೆ ಅಲ್ಲಿಯೂ ವಿಧಿ ಕಬ್ಬೆಕ್ಕಿನ ರೂಪದಲ್ಲಿ ಮೋಸ ಮಾಡುತ್ತದೆ.
ಎರಡನೇ ಕಥೆ ‘ಬಾಳೆಗೊನೆ ಮತ್ತು ಚಿಗರೆಕೋಡು’ ಕೂಡ ಬಾಳೆಗೊನೆಯನ್ನು ಹಾಗೂ ಹಿಂದೆಂದೋ ಮನೆಯಲ್ಲಿದ್ದ ಚಿಗರೇ ಕೋಡನ್ನು ಮಾರಿ ಮನೆ ಮಕ್ಕಳಿಗೆ ಹಬ್ಬಕ್ಕೆ ಏನನ್ನಾದರೂ ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದ ಸುಕ್ರು ಗೌಡ ಅಂಕೋಲೆ ಪೇಟೆಯಲ್ಲಿನ ಕೇಳಿ ಶಂಕರನ ದೌಲತ್ತಿನಲ್ಲಿ ನಲುಗಿ ಹಬ್ಬವೂ ಬೇಡ, ಹೊಸ ಬಟ್ಟೆಯೂ ಬೇಡ, ಜೈಲು ಶಿಕ್ಷೆ ಆಗದೇ ಮನೆ ಸೇರಿದರೆ ಸಾಕು ಎಂದುಕೊಂಡವ ಸ್ಟೇಷನ್ನಿನಲ್ಲಿನ ಪೋಲಿಸರ ಆರ್ಭಟಕ್ಕೆ ನಡುಗಿ ಹಾಗೂ ಹೀಗೂ ಮನೆಗೆ ಬಂದವನೇ ಅವ್ಯಕ್ತ ರೋಷ ಹೊಂದಿದ ಮುಖಭಾವದಲ್ಲಿ ಅಸಹಾಯಕತೆಯ ನೋವನ್ನು ಬಾಳೆಗಿಡವನ್ನು ಕಡಿದೆಸೆಯುವುದರ ಮೂಲಕ ವ್ಯಕ್ತಪಡಿಸಿದ್ದು ಇಲ್ಲಿ ರೂಪಕವೆಂಬಂತೆ ಬಂದಿದೆ.
ಇವೆರಡೂ ಕಥೆಗಳಲ್ಲಿ ಕಂಡುಬರುವ ಅಸಹಾಯಕತೆ, ಸಾಮಾಜಿಕ ಶ್ರೇಣಿಗಳಲ್ಲಿ ಕಂಡುಬರುವ ಶೋಷಣೆ ನಮ್ಮನ್ನು ಆಳವಾಗಿ ತಟ್ಟುತ್ತದೆ. ತಿಪ್ಪಜ್ಜಿಯ ಗಂಡ ಸಾಯುವ ಮುನ್ನ ತನ್ನ ಮದುವೆಗೆ ಮಾಡಿದ ಸಾಲಕ್ಕಾಗಿ ಒಡೆಯನ ಮನೆಯಲ್ಲಿ ಜೀತ ಮಾಡಿದಾಗ್ಯೂ ಒಡೆಯನ ಬಾಯಿಂದಲೇ ಸಾಲ ತೀರಿದೆ ಎಂಬ ಒಂದು ಸಾಲಿಗಾಗಿ ಕಾತರಿಸಿ ಕಾದವನು ಕೊನೆಗೂ ಅದನ್ನು ಕೇಳದೇ ಮರಣಶಯ್ಯೆಯಲ್ಲಿರುವಾಗಲೂ ತೀರಿದೆ ಎಂದು ಆತನ ಒಡೆಯ ಒಮ್ಮೆಯಾದರೂ ಹೇಳಲಿಲ್ಲವೆಂದು ತನ್ನ ಹೆಂಡತಿಗೆ ಸಾಲ ತೀರಿಸಲು ಹೇಳಿದವನು. ಗಂಡನಿಗೆ ಕೊಟ್ಟ ಮಾತಿನಂತೆ ಜೀವಮಾನವಿಡೀ ಜೀತ ಮಾಡಿದರೂ ಸಾಲ ತೀರಿಸಲಾಗದ ತಿಪ್ಪಜ್ಜಿ ಕೊನೆಗೂ ಕೋಳಿ ಮಾರಿ ಸಾಲ ತೀರಿಸಬೇಕೆಂಬ ಆಸೆ ಈಡೇರದೆ ಹತಾಶಳಾಗುವುದಕ್ಕಿಂತ ಮನೆಯಲ್ಲೇ ಆಗಿದ್ದ ಬಾಳೆಗೊನೆಯನ್ನು ಮಕ್ಕಳಿಗೆ ತಿನ್ನಲೆಂದು ಬಿಡದೇ ಪೇಟೆಯಲ್ಲಿ ಮಾರುವುದರ ಜೊತೆಗೆ ಹಿಂದೆಂದೋ ಮನೆಯಲ್ಲಿದ್ದ ಚಿಗರೆ ಕೋಡನ್ನು ಮಾರಿ ಹಬ್ಬ ಆಚರಿಸುವ ಇರಾದೆಯಿಂದ ಪೇಟೆಗೆ ಬಂದ ಗೌಡ ಕೇಳಿ ಶಂಕರನ ಉಚಾಪತಿಯಿಂದ ನರಳಿ ಮನೆಯ ಬಾಳೆಗಿಡವನ್ನೆಲ್ಲ ಕಡಿದು ಹಾಕುವುದು ಇಂತಹುದ್ದೊಂದು ಶೋಷಣೆಯನ್ನು ವಿರೋಧಿಸುವ ಪ್ರತೀಕವಾಗಿ ಕಾಣುತ್ತದೆ.
ಉಳಿದ ಕಥೆಗಳಲ್ಲಿ ಮಾನವೀಯ ಸಂಬಂಧಗಳು ಪದರ ಪದರವಾಗಿ ನಮ್ಮೆದುರು ಬಿಚ್ಚಿಕೊಳ್ಳುವ ಪರಿಯೇ ಅನನ್ಯ. ಅಪ್ಪ ಯಾರು ಎಂದೇ ಗೊತ್ತಿಲ್ಲದ ರಮೇಶ ಊರವರ ಮಾತಿಗೆ ಬೇಸತ್ತು ತನ್ನ ಮಗಳ ಮದುವೆಯ ಹೊತ್ತಲ್ಲಿ ಎಂದೋ ತನ್ನ ತಾಯಿ ಮದುವೆ ಆಗಿದ್ದವಳನ್ನು ಹುಡುಕಿ ಆತನೇ ತನ್ನಪ್ಪ ಎಂದು ಬಿಂಬಿಸುತ್ತ, ಅವನ ಅಲ್ಪ ಆಸ್ತಿಯಲ್ಲಿ ಪಾಲು ಪಡೆದು ಅದನ್ನು ಅಧೀಕೃತಗೊಳಿಸಿಕೊಳ್ಳಲು ಅಡ್ಡದಾರಿ ಹಿಡಿದನೋ ಎಂಬ ಅನುಮಾನದ ಜೊತೆ ಜೊತೆಗೇ ತನ್ನ ಕೆಲಸ ಸಾಧಿಸಿಕೊಳ್ಳಲು ಏನನ್ನಾದರೂ ಮಾಡುವ ಮನುಷ್ಯನ ಮೃಗೀಯತೆಯ ಅನಾವರಣಗೊಂಡರೆ, ಮನೆಯ ಬೆಕ್ಕಿನ ಮರಿಯನ್ನು ಹೊರಗೆ ದೂರ ಬಿಟ್ಟು ಬಂದ ನಂತರ ಆ ಬೆಕ್ಕು ತನ್ನ ಮರಿಗಳಿಗಾಗಿ ಪರಿತಪಿಸುವ ಪರಿನೋಡಿ ವಿಹ್ವಲನಾಗುವ ನಿರೂಪಕ ಬೆಕ್ಕಿನ ಅಸಹಾಯಕತೆಗೆ ಮರಗುವುದು ಒಂದೆಡೆಯಾದರೆ ಕನಸಿನಲ್ಲೂ ಬೆಕ್ಕು ತನಗೆ ತೊಂದರೆ ಕೊಟ್ಟೀತು ಎಂದೇ ಯೋಚಿಸಿ ಬೆಚ್ಚಿ ಬೀಳುವುದು ಬೆಕ್ಕಿನ ಬಿಡಾರದಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದ್ದರೆ, ಕಲ್ಪನೆಯಲ್ಲಿ ಬಿಡಿಸಿದ ಚಿತ್ರದ ಕನ್ಯೆ ಸಾಕಾರಗೊಂಡು ಆತ್ಮೀಯ ಗೆಳೆಯನ ಹೆಂಡತಿಯಾಗುತ್ತಿರುವ ಹೊತ್ತಿನಲ್ಲಿ ಮೂಡಿದ ಈರ್ಷ್ಯೆಗೆ ಉತ್ತರವೋ ಎಂಬಂತೆ ಅದೇ ದಿನ ಮರ ಮುರಿದು ಮರಣದ ಹೊಸ್ತಿಲಿನಲ್ಲಿರುವ ಗೆಳೆಯ ಏನೂ ಅರಿಯದ ಹೆಂಡತಿಗೆ ಬಾಳುಕೊಡುವಂತೆ ಬೇಡಿಕೊಂಡು ಬಯಸಿದ್ದು ಕಾಲಿಗೆಡರುವಂತೆ ಮಾಡುವುದು ಕಣ್ಣಲ್ಲಿ ನೀರು ತರಿಸುತ್ತದೆ.
ತನ್ನ ಮಗನಿಗೆ ಯಾರೂ ನಿರೀಕ್ಷಿಸಿರದ ಗೆಳೆಯನ ಹೆಸರನ್ನೇ ಇಡುವ ಆತನ ನಿರ್ಧಾರದ ಕಥೆ ಇರುವ ನಾಮಕರಣ ಕಥೆಯಲ್ಲಿಯೂ ಆಸೆ, ಬಯಕೆ, ಹೊಟ್ಟೆಕಿಚ್ಚಿನ ಜೊತೆ ಜೊತೆಗೇ ಸ್ನೇಹದ ವ್ಯಾಪ್ತಿಯನ್ನೂ ಪರಿಚಯಿಸುತ್ತದೆ. ಸುಳ್ಳು ಸುಳ್ಳಿನ ಮಾತು ಹೇಳಿ ತಮ್ಮನ್ನು ತಾವು ಹೊಗಳಿಕೊಳ್ಳುವವರ ಬದುಕಿನ ಮೂರಾಬಟ್ಟೆಯ ಚಿತ್ರಣವಾಗಿ ಸುರೇಶನಿಗೆ ಎಂತಾ ಆಯ್ತು ಇದ್ದರೆ ಪ್ರಾಯಶ್ಚಿತ್ತ ಹತ್ತಾರು ಜನರ ಬಾಯಲ್ಲಿ ಹತ್ತಾರು ಕಥೆಗಳು ಹುಟ್ಟುವ ವಿಸ್ಮಯವನ್ನು ತೆರೆದಿಡುತ್ತದೆ.
ಜೋಡೆತ್ತು ಮತ್ತು ರಾಮ ಹಾಗೂ ಭಗ್ನ ಮೂರ್ತಿ ಕಥೆಗಳು ಮಾಮೂಲಿ ಹೆಣ್ಣಿನ ಹಾದರವನ್ನೇ ಬಿಚ್ಚಿಡುವ, ಆ ಮೂಲಕ ಗಂಡೆಂಬ ಗಂಡಿನ ಮರ್ಯಾದೆ ಮುಕ್ಕಾಗುವ ವಿಷಯ ಒಳಗೊಂಡಿದೆ ಎನ್ನಿಸುತ್ತದೆಯಾದರೂ ಒಂದಿಡಿ ಸಂಸಾರದ ನೊಗವನ್ನು ತಾನೊಬ್ಬಳೇ ಹೊತ್ತುಕೊಂಡು ನಿಭಾಯಿಸಲು ಹೆಣ್ಣು ಪಡುವ ನೋವಿನ ಚಿತ್ರಣವನ್ನೂ ಅದು ತೆರೆದಿಡುವಲ್ಲಿ ಯಶಸ್ವಿಯಾಗುತ್ತದೆ.
ಕೊನೆಯ ಕಥೆ ಮಂಡಕ್ಕಿ ತಿಂದ ಗಂಗೆ ಮಾತ್ರ ಸಾಂಗ್ಯಾ ಬಾಳ್ಯಾದ ಕಥೆಯನ್ನೊಳಗೊಂಡು ಮತ್ತದೇ ಹೆಣ್ಣಿನ ಹಾದರದ ಕಥೆಯೇನೋ ಎನ್ನುವ ಹೊತ್ತಿಗೆ ಅಲ್ಲ ಎಂಬುದು ಅರಿವಿಗೆ ಬರುತ್ತದೆ. ಆದರೆ ಹೆಣ್ಣು ಬಸಿರಾದರೆ ಅದಕ್ಕೆ ಆಕೆಯನ್ನು ದೂಷಿಸುವ ಸಮಾಜ ಅದಕ್ಕೆ ಕಾರಣವಾದವರನ್ನು ಮಾತ್ರ ಎದುರು ತಂದು ನಿಲ್ಲಿಸುವ ಧೈರ್ಯ ಮಾಡದಿರುವುದನ್ನು ಗಂಗೆ ತುಂಬಾ ಸೂಕ್ಷ್ಮವಾಗಿ ತನ್ನ ಮಾತುಗಳಲ್ಲಿ ಹೇಳುತ್ತಾಳೆ.
ಕಥಾ ಸಂಕಲನದ ಮತ್ತೊಂದು ಆಕರ್ಷಣೆ ಎಂದರೆ ಎಲ್ಲೂ ಶಬ್ಧಭಾರಗಳಿಂದ ಕಥೆ ನಲುಗುವುದಿಲ್ಲ. ಅದು ಕಥೆಯ ಶೀರ್ಷಿಕೆಯೇ ಇರಬಹುದು ಅಥವಾ ಕಥಾ ವಿವರಣೆಯಲ್ಲಿಯೇ ಇರಬಹುದು.,ಅಕ್ಷರಗಳು ಮೂಗಿಗಿಂತ ಮೂಗುತಿ ಭಾರ ಎಂದೆನಿಸುವಂತೆ ಮಾಡುವುದಿಲ್ಲ. ಸರಳವಾದ ಸುಲಲಿತವಾದ ಭಾವಗಳು ತನ್ನಿಂದ ತಾನೇ ಹರಿಯಬಿಟ್ಟಂತೆ ಗೋಚರವಾಗುತ್ತದೆ. ಅದಕ್ಕೆ ಕಾರಣ ಶಾಂತಾರಾಮ ನಾಯಕರ ಭಾಷಾ ಶೈಲಿ.
ಎಲ್ಲಾ ಕಥೆಗಳು ಅಂಕೋಲೆಯ ಸುತ್ತಮುತ್ತಲೇ ನಡೆಯುವ ಘಟನೆಗಳಾಗಿರುವುದರಿಂದ 1963 ರಿಂದ ಇಲ್ಲಿಯವರೆಗೆ ಬರೆದ ಎಲ್ಲಾ ಕಥೆಗಳಲ್ಲೂ ಭಾಷೆಯು ಒಡಕನ್ನು ಉಂಟು ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕು.
ಒಂದು ಕಥಾ ಸಂಕಲನಕ್ಕಾಗಿ ಸುಮಾರು ನಾಲ್ಕು ದಶಕಗಳ ಕಾಲ ಕಾದ ಸಂಯಮಿ ಶಾಂತಾರಾಮ ನಾಯಕರು ಕಥೆಗಳನ್ನೂ ಕಾವ್ಯದಂತೆಯೇ ಕುಸುರಿ ಕೆತ್ತುವುದರಲ್ಲಿ ಎತ್ತಿದ ಕೈ ಎಂಬುದನ್ನು ಈ ಕಥೆಗಳು ತೋರಿಸಿಕೊಡುತ್ತಿವೆ. ಬತ್ತದ ಉತ್ಸಾಹ ಮತ್ತಿಷ್ಟು ಕಥೆಗಳನ್ನು ಬರೆಯಿಸಲಿ ಎಂಬುದು ನನ್ನ ಹಾರೈಕೆ.

‍ಲೇಖಕರು avadhi

August 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: