ʼತಕ್ಕಂತʼಗಳು ಎಷ್ಟಿರಬೇಕು? ಛಕ್ಕಂತ ಹೇಳಿ!

ನಾಗೇಶ್ ಹೆಗಡೆ

[ಮೈಕ್‌ ಹಿಡಿದ ಭಾಷಣಕಾರರ ಮಾತುಗಳಲ್ಲಿ ʼಹೋಗತಕ್ಕಂತʼ, ʼಕೈಬಿಡತಕ್ಕಂತʼ, ʼಮರೆಯತಕ್ಕಂತʼ, ʼತಳ್ಳತಕ್ಕಂತʼ, ತಲೆಚಿಟ್ಟು ʼಹಿಡಿಸತಕ್ಕಂತʼ -ಹತ್ತಾರು, ನೂರಾರು ʼತಕ್ಕಂತʼಗಳು ಬರುತ್ತಿರುತ್ತವೆ. ಕನ್ನಡದ ಸುಂದರ ಭಾಷಾವೃಕ್ಷಕ್ಕೆ ಬಂದಳಿಕೆಯಂತೆ ಇದು ಇಷ್ಟು ದಿನ ರಾಜಕಾರಣಿಗಳ ಮಾತುಗಳಲ್ಲಿ ಮಾತ್ರ ತೂರಿಕೊಳ್ಳುತ್ತಿತ್ತು. ಕ್ರಮೇಣ ಸಾಹಿತಿಗಳ ನಾಲಗೆಗೂ ಅದು ಅಂಟಿಕೊಳ್ಳುತ್ತಿದೆಯೆ?]

ಮೊನ್ನೆ ಹಾಸನದಲ್ಲಿ ನಡೆದ ʼಹೊಯ್ಸಳ ಸಾಹಿತ್ಯೋತ್ಸವʼಕ್ಕೆ ಹೋಗಿದ್ದೆ. ಭಾಷಣ ಮಾಡಲಿಕ್ಕಲ್ಲ; ಮುಂದಿನ ಸಾಲಿನಲ್ಲಿ ʼವಿಶೇಷ ಅತಿಥಿʼಗಳ ಜೊತೆಯಲ್ಲಿ ಕೂತು, ವೇದಿಕೆಯ ಕಲಾಪಗಳ ವೀಕ್ಷಣೆಗೆ, ಅಷ್ಟೆ,

ವರದಿಗಾರನಾಗಿ ಹೀಗೆ ಮುಂದಿನ ಸಾಲಿನ ಭಾಗ್ಯ ಹಿಂದೆಲ್ಲ ಅದೆಷ್ಟೊ ಬಾರಿ, ಅದೆಷ್ಟೊ ದೇಶಗಳಲ್ಲಿ ಸಿಕ್ಕಿತ್ತಾದರೂ ಈಗಿನದು ವಿಶೇಷವಾಗಿತ್ತು.

ಮನಸ್ಸು ನಿರಾಳವಾಗಿತ್ತು. ಏಕೆಂದರೆ ಉಪನ್ಯಾಸಕರ ಮಾತಿನ ಮಹತ್ವದ ಅಂಶಗಳನ್ನು ವರದಿ ಮಾಡಬೇಕೆಂಬ ಜವಾಬ್ದಾರಿ ಕೂಡ ಇರಲಿಲ್ಲ. ಟಿಪ್ಪಣಿ ಮಾಡಿಕೊಳ್ಳುವ ಧಾವಂತವೂ ಇರಲಿಲ್ಲ. ಭಾಷಣಕಾರರಿಗೆ ತೊಡಕಿನ ಪ್ರಶ್ನೆ ಹಾಕಿ ನನ್ನ ಬೌದ್ಧಿಕತೆಯನ್ನು ಮೆರೆಯಬೇಕೆಂಬ ತೆವಲೂ ಇರಲಿಲ್ಲ.

ನಿರುಮ್ಮಳವಾಗಿದ್ದೆ. ಭಾಷಣಕಾರರಿಗೆಲ್ಲ ಸಮಯಪಾಲನೆ ಮಾಡಲೇ ಬೇಕೆಂಬ ಕಟ್ಟುನಿಟ್ಟಿನ ನಿರ್ದೇಶನ ಇದ್ದುದರಿಂದ ಆಕಳಿಕೆ, ತೂಕಡಿಕೆಗಳ ತೊಡಕೂ ಇರಲಿಲ್ಲ. ಕೈಗಡಿಯಾರವನ್ನು ಪದೇಪದೇ ನೋಡುವ ಅಥವಾ ಮೊಬೈಲನ್ನು ಪದೆಪದೇ ಉಜ್ಜುವ ಉಜ್ಜುಗವೂ ಇರಲಿಲ್ಲ. ಹಾಯಾಗಿದ್ದೆ.

ಮೊದಲ ಒಂದು ಗಂಟೆಯ ಸ್ವಾಗತ, ಪ್ರಸ್ತಾವನೆ, ಪ್ರೊ. ಎಸ್ಸೆಲ್‌ ಬೈರಪ್ಪನವರ ಉದ್ಘಾಟನಾ ಭಾಷಣ, ಸ್ಥಳೀಯ ಶಾಸಕ ಪ್ರೀತಮ್‌ ಗೌಡರ ಚುಟುಕು ಹಾರೈಕೆ/ನಿರ್ಗಮನ ಮುಗಿಯುವವರೆಗೂ ಹಾಯಾಗಿದ್ದೆ. ಆಮೇಲೆ ನಾಡೋಜ ಡಾ. ಮಹೇಶ್‌ ಜೋಶಿ ಬಂದರು.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅವರು ವೇದಿಕೆಯ ಮೇಲಿನ ಮಹನೀಯರ ಹೆಸರುಗಳ ಸರಮಾಲೆ ಹೇಳುತ್ತಲೇ ಏಳೆಂಟು ಬಾರಿ ʼತಕ್ಕಂತʼ ಪದಗಳನ್ನು ಉದುರಿಸಿದಾಗ ನಾನು ತುಸು ಚಡಪಡಿಸಿದೆ. ಕೂತಲ್ಲೇ ಬೆರಳುಗಳನ್ನು ಒಂದೊಂದಾಗಿ ಮಡಚುತ್ತ ʼತಕ್ಕಂತʼಗಳ ಲೆಕ್ಕ ಮಾಡಲು ತೊಡಗಿದೆ.

ಮುಂದಿನ ಐದೇ ನಿಮಿಷಗಳ ಅವರ ಮಾತುಗಳಲ್ಲಿ ಅವೆಷ್ಟು ಜಾಸ್ತಿ ʼತಕ್ಕಂತʼಗಳು ಬಂದುವೆಂದರೆ, ನನ್ನ ಕೈಬೆರಳ ಲೆಕ್ಕ, ಕಾಲ್ಬೆರಳ ಲೆಕ್ಕ ಎಲ್ಲ ಮುಗಿದವು. ಕಿಸೆಯಿಂದ ಪೆನ್‌ ಎತ್ತಿಕೊಂಡು, ಚೂರು ಕಾಗದಕ್ಕೆ ಪರದಾಡುವಂತಾಯಿತು.

ಅವರ ಹದಿಮೂರು ನಿಮಿಷಗಳ ಭಾಷಣದಲ್ಲಿ 105 ತಕ್ಕಂತಗಳು ಬಂದವು. ಅಥವಾ ತುಸು ಜಾಸ್ತಿಯೇ ಅನ್ನಿ.

ಇವರ ತಕ್ಕಂತಗಳನ್ನು ಎಣಿಸುತ್ತಿರುವಾಗಲೇ ಇನ್ನೊಂದು ಸಂಗತಿ ನನಗೆ ಆತಂಕ ಹುಟ್ಟಿಸಿತು. ಅದೇನೆಂದರೆ-

ಡಾ. ಮಹೇಶ್‌ ಜೋಶಿಯವರು ಹಾಸನಾಂಬೆಯನ್ನು ಹೊಗಳುವ ಭರದಲ್ಲಿ ಆ ದೇಗುಲದ ಬಗೆಗಿನ ಮೂಢನಂಬಿಕೆಯನ್ನೂ ಮತ್ತೊಮ್ಮೆ ಘಂಟಾಘೋಷ ಪ್ರಸಾರ ಮಾಡಿದರು. ಈ ದೇವಿಯ ದ್ವಾರವನ್ನು ವರ್ಷಕ್ಕೊಮ್ಮೆ ತೆರೆದು, ಉತ್ಸವ ಬಳಿಕ ಮತ್ತೆ ಮುಂದಿನ ವರ್ಷದವರೆಗೂ ಮುಚ್ಚಿರುತ್ತಾರೆ. “ವರ್ಷ ಕಳೆದರೂ ದೇವಿಯ ದೀಪ ನಂದುವುದಿಲ್ಲ; ಹೂಗಳು ಬಾಡಿರುವುದಿಲ್ಲ. ಅದು ವಿಜ್ಞಾನಕ್ಕೆ ಸವಾಲು ಒಡ್ಡಿದ ಪವಾಡ” ಎಂದರು.

ಪವಾಡ? ಇದೊಂದು ಮೂಢ ನಂಬಿಕೆ. ಅದರಲ್ಲೇನೂ ಪವಾಡ ಇಲ್ಲ ಎಂಬುದು ನಾಲ್ಕು ವರ್ಷಗಳ ಹಿಂದೆಯೇ ಸಾಬೀತಾಗಿದೆ.

ಭಾರತ ಜ್ಞಾನ-ವಿಜ್ಞಾನ ಸಮಿತಿಯವರು ಅಲ್ಲಿನ ತಥಾಕಥಿತ ಪವಾಡವನ್ನು ಬಯಲು ಮಾಡಲು ಅನುಮತಿ ಕೋರಿದಾಗ ಪ್ರಧಾನ ಅರ್ಚಕ ನಾಗರಾಜ್‌ ಅವರೇ ಖುದ್ದಾಗಿ ವಾಸ್ತವ ಏನೆಂಬುದನ್ನು ಹೇಳಿದ್ದಾರೆ: “ಪ್ರತಿ ವರ್ಷ ಬಾಗಿಲು ತೆರೆಯುವ ಮುನ್ನ ದೇವಿಗೆ ಹೊಸ ಹೂಗಳನ್ನೇರಿಸಿ, ದೀಪ ಹಚ್ಚುತ್ತೇವೆ; ನಂತರವೇ ಬಾಗಿಲು ತೆರೆಯುತ್ತೇವೆ” ಎಂದು ಹೇಳಿದ್ದಾರೆ.

ವಾಸ್ತವ ಸಂಗತಿ ಗೊತ್ತಾದ ಮೇಲೂ ಅದೊಂದು ಪವಾಡವೆಂದು ಸಾರುತ್ತ ಹೋಗಬಾರದು. ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೂಢ ನಂಬಿಕೆಗಳನ್ನು ತೊಡೆದು ಹಾಕುವ ಕೆಲಸಗಳಿಗೆ ಸಾಹಿತ್ಯ ಸಂಸ್ಥೆಗಳು ಒತ್ತು ಕೊಡಬೇಕು. ಅದೂ ಕ.ಸಾ.ಪ ಅಧ್ಯಕ್ಷರ ಸ್ಥಾನದಲ್ಲಿದ್ದವರು ಎಳೆಯ ಪೀಳಿಗೆಯ ನೂರಾರು ಸಭಿಕರಿರುವ ತಾಣದಲ್ಲಿ ಇಂದಿನ ಕಾಲಕ್ಕೆ ತಕ್ಕಂತೆ, ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತಾಡಬೇಕು ತಾನೆ?

ಈಗ ʼತಕ್ಕಂತʼಕ್ಕೆ ಮತ್ತೆ ಬರೋಣ.

ಇದುವರೆಗೆ ʼತಕ್ಕಂತʼ ಎಂಬುದು ಕೇವಲ ರಾಜಕಾರಣಿಗಳ ಮಾತುಗಳಲ್ಲಿ ಮಾತ್ರ ತೂರಿಕೊಳ್ಳುವ ಅನಗತ್ಯ ಕಿರಿಕಿರಿಯ ಪ್ರತ್ಯಯವಾಗಿತ್ತು. ಕೆಲವು ರಾಜಕಾರಣಿಗಳಲ್ಲಿ ಜಾಸ್ತಿ, ಇನ್ನು ಕೆಲವರಲ್ಲಿ ತುಂಬಾ ಜಾಸ್ತಿ ಬಾರಿ ಇದು ಸೇರಿಕೊಳ್ಳುತ್ತದೆ. ಸಾಹಿತಿಗಳಲ್ಲಿ ಅಷ್ಟೆಲ್ಲ ಜಾಸ್ತಿ ಇಲ್ಲ.

ಕ.ಸಾ.ಪ ಅಧ್ಯಕ್ಷ ಡಾ. ಜೋಶಿಯವರು ಪಾಪ, ಒಂದೆರಡು ಒಳ್ಳೊಳ್ಳೆ ಮಾಹಿತಿಗಳನ್ನೂ ತಮ್ಮ ಭಾಷಣದಲ್ಲಿ ಸೇರಿಸಿದ್ದರು ನಿಜ. ದಕ್ಷಿಣ ಭಾರತದಲ್ಲಿ ಮಾತೃಭಾಷೆಯಲ್ಲೇ ಮಾತಾಡುವವರಲ್ಲಿ ಮಲೆಯಾಳಿಗಳದು ಮೊದಲ ಸ್ಥಾನ (ಶೇ 97) ಎಂತಲೂ ತಮಿಳರದ್ದು ಎರಡನೆ ಸ್ಥಾನ (ಶೇ. 92), ಮೂರನೆಯದು ತೆಲುಗು (ಶೇ. 86) ಮತ್ತು ಕೊನೆಯ ಸ್ಥಾನ (ಶೇ 64) ಎಂದು ತಿಳಿಸಿದರು. ಕನ್ನಡಿಗರ ಸ್ವಾಭಿಮಾನದ ಕೊರತೆಯ ಬಗ್ಗೆ ಬೇಸರಿಸಿದರು. ಜೊತೆಗೆ ಕನ್ನಡದ ಹೆಮ್ಮೆಯ ಬಗೆಗೂ ಹೇಳಿದರು. ಆ ಮಾತನ್ನು ಅವರು ಹಿಂದೆಯೂ ಅದೆಷ್ಟೊ ಭಾಷಣಗಳಲ್ಲಿ ಹೇಳಿದ್ದರಾದರೂ ಮತ್ತೊಮ್ಮೆ ಕೇಳಿಸಿಕೊಳ್ಳುವಷ್ಟು ಗಮನಾರ್ಹವಾಗಿತ್ತು. ಅದು,

(ಯಾವುದೋ ಒಂದು ಅಧ್ಯಯನದ ಪ್ರಕಾರ) ಭಾಷೆಯ ಪರಿಪೂರ್ಣತೆ ಹೇಗಿರಬೇಕೆಂದರೆ ಅದು (1) ಪುರಾತನವಾಗಿರಬೇಕು; (2) ಸ್ವಂತ ಲಿಪಿ ಇರಬೇಕು (3) ಸ್ವಂತ ಅಂಕಿಗಳಿರಬೇಕು ಮತ್ತು (4) ಆಡಿದಂತೇ ಬರೆಯಲು ಸಾಧ್ಯವಿರಬೇಕು ಅಥವಾ ಬರೆದಂತೇ ಉಚ್ಚರಿಸುವಂತಿರಬೇಕು- “ಈ ಮಾನದಂಡಗಳ ಪ್ರಕಾರ ಜಗತ್ತಿನ ಮೂರೇ ಮೂರು ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು” ಎಂದು ಹೇಳಿದರು.

ಅದು “ಮೂರೇ ಮೂರು” ಎಂಬುದು ನಿಜವೇ ಆಗಿದ್ದರೆ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯಂತೂ ಹೌದು.

ಹಾಗಿರುವಾಗ, ಅದರಲ್ಲಿ “ತಕ್ಕಂತ” ಸೇರಬಾರದಲ್ಲವೆ? ನಾವು ಬರೆಯುವಾಗ ತಕ್ಕಂತಗಳನ್ನು ಸೇರಿಸುವುದಿಲ್ಲವಲ್ಲ? ಬರವಣಿಗೆಯಲ್ಲಿ ಇಲ್ಲದ್ದನ್ನು ಬಾಯಿಮಾತಿನಲ್ಲಿ ಸೇರಿಸುವುದು ಕನ್ನಡಕ್ಕೆ ಕಿರಿಕ್‌ ಕೊಟ್ಟಂತೆ ತಾನೆ? ಇಲ್ಲಿಗೆ ಅವರ ಭಾಷಣ ಕುರಿತ ನನ್ನ ಟಿಪ್ಪಣಿ ಮುಗಿಯಿತು.

*ಸಾಹಿತ್ಯ ಸಮ್ಮೇಳನಗಳ ನನ್ನ ಸೀಮಿತ ಅನುಭವದ ಪ್ರಕಾರ ಹಾಸನದ ಈ ʼಹೊಯ್ಸಳ ಸಾಹಿತ್ಯೋತ್ಸವʼ ಅತ್ಯಂತ ಅಚ್ಚುಕಟ್ಟಾಗಿತ್ತು. ಶಿಸ್ತಿನ ಸಮಯ ಪಾಲನೆ, ಸಭೆಗೆ ತೆರೆದಿಟ್ಟ ವಿಷಯ ವೈವಿಧ್ಯ, ವೇದಿಕೆಯ ಉಸ್ತುವಾರಿ, ಊಟೋಪಚಾರದ ಶಿಸ್ತು, ಸಾಹಿತ್ಯಾಭಿಮಾನಿ ಸಭಿಕರ ಶಿಸ್ತು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸ್ವಯಂಸೇವಕರ ದಣಿವರಿಯದ ಉತ್ಸಾಹ ಅನುಪಮವಾಗಿತ್ತು.

ಬುಕ್‌ಬ್ರಹ್ಮ ಸಂಸ್ಥೆಯವರು ಇಡೀ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ್ದು ಅದರ ಲಿಂಕ್‌ ಇಲ್ಲಿದೆ. ಸಭಾಸದರ ಅತಿ ಹೆಚ್ಚಿನ ಗಮನ ಸೆಳೆದ “ಜ್ಞಾಪಕ ಚಿತ್ರಶಾಲೆ” ಕಾರ್ಯಕ್ರಮ ಈ ವಿಡಿಯೊದಲ್ಲಿ 6:18:00 ಯಿಂದ ಪ್ರಾರಂಭವಾಗುತ್ತದೆ. ಡಾ. ಮಹೇಶ ಜೋಶಿಯವರ ಭಾಷಣ 1:30:00 ಯಿಂದ ಪ್ರಾರಂಭವಾಗುತ್ತದೆ. ಚೆಕ್‌ ಮಾಡಿ, ಬೇಕಿದ್ದರೆ.

‍ಲೇಖಕರು Admin

October 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Smt. Pavana N Raichur

    ಒಪ್ಪ ತಕ್ಕಂತ ಮಾತು, ನಾಗೇಶ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: