ಅವಳ ಹೆಸರಿನಲ್ಲೀಗ ಕನಸುಗಳಿಲ್ಲ !...

-ಗಾನಾ ಜೋಯ್ಸ್
ಉಸಿರುಸಿರಿಗೂ ಹಸಿರು ಚೆಲ್ಲುವ ಮಲೆ ಮಧ್ಯದಲ್ಲಿ ಪುಟ್ಟ ಮನೆ . ಮಳೆಗೆ ನೆಂದ ಹೆಂಚಿನಿಂದ ಎಂಥದೋ ಪರಿಮಳದ ನೆಚ್ಹಿನಲ್ಲಿ ಬೆಚ್ಹಗೆ ಕಂಬಳಿ ಎಳಕೊಂಡೆಳಕೊಂಡು ಮುಲುಗುತ್ತಾ ಮಲಗಿರುವ ಹದಿನೆಂಟರ ರತ್ನಿ ವಯಸ್ಸು ಹದಿನೆಂಟು -ಕನಸು ನೂರೆಂಟು.ಗಂಟೆ ಆರಾದರೂ ಕನಸಲ್ಲಿ ಬೈಕೇರಿ ಬರುವ ರಾಜಕುಮಾರನಿಗೆ ತಡೆಎಂಬುದಿಲ್ಲ. ಒಂಭತ್ತಕ್ಕೆಲ್ಲಾ ‘ಒಡೇರ ಮನೆ’ಗೆ ಮುಸುರೆ ತಿಕ್ಕಲು ಹೊರಡಬೇಕಿದ್ದ ರತ್ನಿ ಕನಸಲ್ಲಿ ತಾನೇ ಒಡತಿ.
ಒಡೇರ ಮನೆ ಅಂದ ಮೇಲೆ, ಹೋಗುವವರು-ಬರುವವರು ಹತ್ತಾರು ಮಂದಿ . ರತ್ನಿ -ಸುಂದರಿ . ಹತ್ತಾರು ಮಂದಿಯಲ್ಲೊಬ್ಬ ಹೃದಯವಂತ .ಕಣ್ ಬಿತ್ತು. ಕಣ್ಣುಗಳು ಕೂಡಿದವು . ಸಧ್ಯ! ಎರಡು ಮೂರಾಗುವುದರೊಳಗೆ ಪಂಚಾಯ್ತಿ ನಡೆದು ಹೋಯಿತು. ಹೃದಯವಂತನ ಅಪ್ಪ ಒಪ್ಪಿದ . ದೊಡ್ಡ ಸೋಶಿಯಲಿಸ್ಟು . ಅಮ್ಮ ಒಪ್ಪಿದಳು . ಅಪ್ಪನ ನೆರಳು! ಆದರು ಮದುವೆ ನಡೆಯದೆ ಹೋಯ್ತು. ರತ್ನಿಯೇ ಒಪ್ಪಲಿಲ್ಲ! ಉಹೊಂ… ಯಾವ ಸಿನೆಮಾ ಥರವೂ ಚಿಕ್ಕ ಒಡೆಯನ ಚಪಲ ಅವಳ ಬಗೆಗಿರಲಿಲ್ಲ.
ಇದ್ದದ್ದೆಲ್ಲಾ ಸಾವಿರಗಟ್ಟಲೆ ರತ್ನಿಯ ಅಪ್ಪನ ಸಾಲ . ಹೃದಯವಂತ ತೀರಿಸುವೆನೆಂದರು ಬಿಡಲಿಲ್ಲ . ಮನೆಯ ಜೀತದವಳು ಕಾರನ್ನೇರುವುದು ಅವರಿಗೆ ಬೇಕಿರಲಿಲ್ಲ . ರತ್ನಿಯ ಅಪ್ಪ-ಅಮ್ಮನಿಗೋ , ಒಡೆರು -ಸಾಕ್ಷಾತ್ ದೇವರು! ರತ್ನಿ … ಆ ದೇವರಿಗೆ ನರಬಲಿ!
ಅಣ್ಣನ ಎಳೆಮಗುವನ್ನು ಎದೆಗವಚಿಕೊಳ್ಳುತ್ತಾಳೆ . ಅವನ ನೆನಪಾಗುತ್ತದೆ. ಮಗುವಿನ ಕೆನ್ನೆ ಮೇಲೆ ಅವಳ ಕಣ್ ಮುತ್ತು ಟಪ ಟಪ ಹನಿಯುತ್ತದೆ . ಏನೊಂದು ಅರಿಯದ ಮಗು ಕಿಲ ಕಿಲ ನಗುತ್ತದೆ .






0 Comments