ಸಾವಿನ ನಡಿಗೆ
ಅಜಯ ಬಣಕಾರ
ಅವನ ಹಾಳಾದ್ದು ಪ್ರೀತಿ
ಪಾದಕಂಟಿದ ಚೂಯಿಂಗಮ್ಮು
ಕೊಡವಿದರೆ ಬಿಡದು
ಸಾಯಬೇಕೆಂದು ಹೊರಟವಳಿಗೆ
ದಾರಿಯುದ್ದಕೂ
ಅವನೇ ಅವನು
ಎಡಬಲ ಮರಗಳಂತೆ
ನೆನಪಾಗುತ್ತಾನೆ
ನೆರಳಂತೆ ದಾರಿ ಬದಲಿಸಿದವನು
ಇಲ್ಲೇ ಬಿದ್ದಿವೆ ಕೊರಡು
ಅವನು ಚುಂಬಿಸಿದ ತುಟಿಗಳು
ಈ ನೀರು ಮಡು
ನನ್ನ ಕಣ್ಣೀರು
ತೆಕ್ಕೆಯಲಿ ಕಳಕಂಡ ‘ನನ್ನದು’
ಕೊರಕಲು ಕಲ್ಲು ರಸ್ತೆ
ತಳ್ಳುಗಾಡಿಯವ ಸುಟ್ಟ-
ಮೆಕ್ಕೆತೆನೆಗೆ ಸವರಿದ ಉಪ್ಪು ಖಾರ ರುಚಿ
ಅವನ ಮೊದಲ ನೋಟ
ಕಟ್ಟಡ ಹತ್ತಿಳಿಯುತ್ತಿರುವ
ಮಂಗನ ಪುಕ್ಕಟೆ ಮನರಂಜನೆ
ಅವನು ಬೆರಳಿಡಿದು
ನಡೆದ ದಿನಗಳು
ಉಚ್ಚೆ ಹೊರಸುತಿದೆ ನಾಯಿ
ಉರುಕು ಬಂಡೆಗೆ
ಅವನ ಹೆಸರು
ಅಳಸಿಕೊಂಡಂತೆ ಎದೆಯಲಿ
ಭಿಕ್ಷುಕನ ಸಿಲವಾರ
ತಾಟಿನ ಮೇಲಿನ ಎಣಿಕೆಯಾಗದ
ನೋಟು ನಾಣ್ಯ
ಅವನೊಂದಿಗಿನ ರಾತ್ರಿಗಳು
ಇಲ್ಲೆ ಈ ಹಾದಿಯಲ್ಲೇ
ದಿಕ್ಕು ಬದಲಿಸಿದ್ದ ನಕ್ಕು
ಕಳೆದು ಹೋಗಿ ಎಲ್ಲೆಲ್ಲೋ
ಕೆಂಪು ದೀಪ-
ದೆದುರು ನಿಂತ ಸಾಲು
ಮೋಟಾರು ಹೊಗೆ
ಕಾಮ ಸುಟ್ಟ ವಾಸನೆ
ಹಳಿ ಕೈಗಳು ಕೈಬೀಸಿ
ಕರೆದಿವೆ
ಸಾವು ರೈಲು ಕೂಗುತಿದೆ
ಇವನೊಬ್ಬ ಯಾರೋ
ತುಳಿದ ಗುಲಾಬಿ
ಒರಸಿ ಒರಸಿ
ನನಗೆ ಕೊಡುತಿದ್ದಾನೆ
ಇವನ ಕಣ್ಣಲಿ ಸಾವು ರೈಲು ನಿಂತ ಬಿಂಬ
ಹೌದೂ ಕಾಲಿಗಂಟಿದ ಚುಯಿಂಗಮ್ಮೆಲ್ಲಿ?






good one..