ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಟೆಲ್ ಮಾಣಿಯಾದ ನಕ್ಸಲೈಟ್..

ವಿಜಯೇಂದ್ರ ಎಂ.ಎನ್. 

ಅರಳೀಮರದ ಕೆಳಗಡೆ ಕೂತು ಜಾಬ್ ಟೈಪಿಂಗ್ ಮಾಡುತ್ತ ಜೀವನ ರೂಡಿಸಿಕೊಳ್ಳುವ ಪ್ರಯತ್ನದಲ್ಲಿ ಗೆಳೆಯರ ವಲಯ ದಿನೇದಿನೇ ವಿಸ್ತರಿತಗೊಳ್ಳುತ್ತ ಸಾಗಿತ್ತು. ನನ್ನ‌ ಗೆಳೆಯ ವಲಯದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣವೆತ್ತರು, ನಿರಕ್ಷರಕುಕ್ಷಿಗಳು‌  ಹೀಗೆ ನಾನಾ ಬಗೆಯ ಜನ ಇದ್ದರು. ಪ

ಕ್ಕದ ಅಯ್ಯರ್ ಹೋಟೆಲಿನ‌ ೧೦ ಪೈಸೆ ಕಾಫಿ, ಕಾಮತ್ ಹೋಟೆಲಿನ ೧೫ ಪೈಸೆ, ಕಾಫಿಬಾರ್ ನ ೨೦ ಪೈಸೆಗೆ ಬೈಟೂ ಕಾಫಿಯಷ್ಟೇ ಸರ್ವೇ ಸಾಮಾನ್ಯವಾಗಿ ಖರ್ಚಾಗುತ್ತಿತ್ತು ಆದರೂ ಸತ್ಯೇಂದ್ರನಂತಹ ಗೆಳೆಯರಿಗೆ ಈಶ್ವರಿ ಲಂಚ್ ಹೋಂ ನ ಕಾಲಿದೋಸೆಗಳೆ ಅಗಬೇಕಿತ್ತು.  ಈ ಎಲ್ಲ‌ ತಿನಿಸುದಾಣಗಳಲ್ಲಿ ನನ್ನ‌ಹೆಸರಿನಲ್ಲಿ ಅಕೌಂಟ್ ಇತ್ತು. ಸುತ್ತಲಿನ ಹಾಸ್ಟೆಲ್ ಗಳಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಊರಿನಿಂದ ಹಣ ಬರುವುದು ತಡವಾದರೆ ಅವರ ತಿಂಡಿ ತೀರ್ಥಕ್ಕೆ‌ ನನ್ನದೇ ಆತಿಥ್ಯ. ಮೊದಮೊದಲು ನಾನು ಜೊತೆಗೆ ಹೋಗಿ ಹೇಳಿದರೆ ತಿಂಡಿ ಕೊಟ್ಟು ನನ್ನ ಲೆಕ್ಕಕ್ಕೆ ಹಚ್ಚುತ್ತಿದ್ದ ಹೋಟಲ್ ಮಂದಿ‌ ಬರಬರುತ್ತಾ ನನ್ನ‌ ಹೆಸರು‌ ಹೇಳಿ ಹೋದವರಿಗೆಲ್ಲ ಊಟ ತಿಂಡಿ ಕೊಡಲಾರಂಬಿಸಿ ನನ್ನ‌ ಲೆಕ್ಕದ ಯಾದಿ ದೊಡ್ಡದಾಗತೊಡಗಿತು. ನಾನು‌ ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ ಒಮ್ಮೊಮ್ಮೆ ಆ ಬಾಕಿ ನನ್ನ‌ ದಿನದ ಸಂಪಾದನೆಗಿಂತ ಹೆಚ್ಚಾಗಿ ಖಾಲಿ ಕೈಯಲ್ಲಿ ಮನೆಗೆ ಹೋಗುವ ಸಂದರ್ಭ ಬರುತ್ತಿತ್ತು. ಅದರೆ ಹಣ ಬಂದಕೂಡಲೇ ಹುಡುಕಿಕೊಂಡು ಬಂದು ಲೆಕ್ಕ ಚುಕ್ತ‌ಮಾಡಿ ಮಾನವೀಯತೆಯಲ್ಲಿನ‌ ನನ್ನ‌ ನಂಬಿಕೆಯನ್ನು ಗಟ್ಟಿ ಮಾಡುತ್ತಿದ್ದರು ಈ ಗೆಳೆಯರು.

ಗೆಳೆಯರ ಗುಂಪು ದೊಡ್ಡದಾಗುತಿದ್ದಂತೆ ನಾವೂ ಕೂಡ ಕಾಪಿ ಟೀ ಮಸಾಲೆದೋಸೆಗಳಿಂದ ಬಡ್ತಿ‌ ಪಡೆದು ಮುಂದಿನ‌ ಪಾನೀಯಗಳನ್ನು‌ ಅರಸಿ‌ಕೊಂಡು‌ ಹೋಗಲಾರಂಬಿಸಿದೆವು. ಒಂದೂವರೆ – ಒಂದೂಮುಕ್ಕಾಲು ರುಪಾಯಿಗೆ ಸಿಗುತ್ತಿದ್ದ ಬೀರ್ ಅನ್ನು ಮಿಲಿಟರಿ ಸಿಸ್ಟಂನಲ್ಲಿ‌ ಕುಡಿದು ಆನಂದ ಪಡುತ್ತಿದ್ದೆವು. ಕಾರಣ ಇನ್ನೂ ಮುಂದುವರಿಯಲು ನಮಗಿದ್ದ  ಸೀಮಿತ ಆರ್ಥಿಕ ಶಕ್ತಿ. ಲಂಕೇಶ್ ಕಾಳೇಗೌಡ, ಕೆ ಎಮ್ ಶಂಕರಪ್ಪ, ಶೂದ್ರ ಅಂತಹ ಗೆಳೆಯರು ಜೊತೆಯಾದರೆ ಮಾತ್ರ ನಮ್ಮ‌ ದರ್ಜೆ ಮೇಲೆ. ಅದರ ಜೊತೆಗೆ ಹದಿನೈದು ಪೈಸೆಗೆ ಸಿಗುವ ಚಿಪ್ಸ್, ಕೊನೆಯಲ್ಲಿ ಒಂದೊಂದು ಸಿಲೋನ್ ಪರೋಟ. ಚಿಪ್ಸ್ ಜೊತೆಗೆ ಯಾವ ಬಾರ್ ನವರು ಹೆಚ್ಚು ಸಾಸ್ ಕೊಡುತ್ತಾರೆ? ಎಲ್ಲಿ ಪರೋಟ ಜೊತೆಗೆ ಗ್ರೇವಿ ಜಾಸ್ತಿ ಸಿಗುತ್ತದೆ ಮತ್ತು ಎಲ್ಲಿ‌ ನಾವು ಮನಸೋಇಚ್ಚೆ ಹರಟುತ್ತ ಹಾಡಲು‌ ಸಾದ್ಯ ಅಂತಹ ಬಾರ್ ಗಳಿಗೆ ದಾಳಿ ಇಡುತ್ತಿದ್ದೆವು. ಅಂಜನ್ ಅಂತಹ ಗೆಳೆಯರು ಮೊದಲೇ ಹೋಗಿ ಪರೀಕ್ಷಿಸಿ‌ ನೋಡಿ ನಮಗೆ ಸೂಕ್ತ ಮಾಹಿತಿ‌ ನೀಡುತ್ತಿದ್ದರು. ಮೆಜೆಸ್ಟಿಕ್ ಪ್ರದೇಶದ ಎಲ್ಲಾ ಬಾರ್ ಗಳು‌ ನಮ್ಮ‌ ಕಾಯಂ ಅಡ್ಡಾಗಳು‌ ಆಗಿದ್ದರೂ ಎಕ್ಸೆಲ್, ಲಾರ್ಡ್ಸ್ ಇತ್ಯಾದಿ ಬಾರ್‌ಗಳು ನಮ್ಮ ದುಡ್ಡಿನಿಂದಲೇ ಬೆಳೆದು ಪ್ರಗತಿಯಾದವು.

 

ಜೀವನ ಹೀಗೆಯೇ ಸಾಗಿದ್ದಾಗ ಒಂದು ‌ಪ್ಲೇಟ್ ಚಿಪ್ಸ್ ಗೆ ‌ಪುಲ್ ಬಾಟಲ್ ಸಾಸ್ ಕೊಡುತ್ತಾರೆ ಅಂತ ಒಂದು‌ ಬಾರ್ ನ್ನು‌ ಪತ್ತೆ ಹಚ್ಚಿ‌ ತಂದರು‌ ಗೆಳೆಯರು. ಅಂದು ರಾತ್ರಿಯೇ ನಮ್ಮ ತಂಡ ಅಲ್ಲಿಗೆ‌ ಹೊರಟಿತು. ಅಂದಿನ‌ ಮಿನರ್ವ ಟಾಕೀಸ್ ಎದುರು‌ ಇದ್ದ ಒಂದು ಬಾರ್ ಅಂದಿನಿಂದಲೇ ನಮ್ಮ‌ ಅಡ್ಡ ಆಯಿತು. ಏಕೆಂದರೆ ನಾವೆಲ್ಲರೂ ಅದೇ ತಾನೇ ಬಂಡಾಯದ ದೀಕ್ಷೆ ತೊಟ್ಟಿದ್ದವರು, ಉದಯೋನ್ಮುಖ ಬರಹಗಾರರು, ಬಾಷಣಕಾರರು, ಒಂದು‌ ಚೂರು‌ ಪಾನೀಯ‌ ಒಳಸೇರಿದರಂತೂ ನಿರರ್ಗಳವಾಗಿ ಇಂಗ್ಲಿಷ್‌ ಮಾತಾಡಬಲ್ಲವರು. ಕುಳಿತಲ್ಲಿಯೇ ಕ್ರಾಂತಿಯ ಮಾಡಬಲ್ಲವರು. ಬಾಲರಾಜ್ ನಂತವರು ಟೇಬಲ್‌ ಏರಿ‌ hello friends. You know what Marx says? ಅಂತಲೋ ಶೆಟ್ಟಿ ಪಂಪ ರನ್ನರ‌ ವಿಮರ್ಶೆಯಿಂದ‌ ಲೆಕ್ಚರ್ ನಡೆಸುವುದು,ನಾನು ಯಾವುದೋ ನಾಟಕದ ಡೈಲಾಗ್ ಹೊಡೆಯುವುದೋ, ರಂಗಗೀತೆಗಳನ್ನು ಅರಚುವುದೋ, ಮುಂದಿನ ಸಂಚಿಕೆಯಲ್ಲಿ ಏನು ಕ್ರಾಂತಿಯ ಸಂದೇಶವನ್ನು ತುರುಕಬೇಕು ಎಂಬ ಬಗ್ಗೆ ಸೀರಿಯಸ್ಸಾದ ಚರ್ಚೆ ಹೀಗೆ ಅಲ್ಲಿ‌ ನಾವು ತರದ ವಿಷಯವೇ ಇರಲಿಲ್ಲ. ನಮಗೆ‌ ಆಗ ಅಸಾದ್ಯವಾಗದ್ದು ಯಾವುದೂ ಇರಲಿಲ್ಲ.

ಹೀಗೆ ದಿನ‌ ಕಳೆಯುತ್ತಿತ್ತು. ನಮ್ಮ‌ ಕ್ರಾಂತಿ ಕೂಡ ಕುಡಿದು ಮನೆಗೆ ಹೋಗಿ ಮಲಗುವಲ್ಲಿ ಮುಗಿದು ಹೋಗುತ್ತಿತ್ತು. ನಾವು ಇತರ ಕುಡುಕರಿಗಿಂತ ಭಿನ್ನ‌ವಾಗಿದ್ದರಿಂದಲೋ ಅಥ್ವಾ ನಾವು ವಿಧ್ಯಾರ್ಥಿಗಳು ಎಂಬ ಮಮಕಾರದಿಂದಲೋ ಬಹುತೇಕ ಬಾರ್ ಗಳ ಸಿಬ್ಬಂದಿ ವ್ವವಸ್ಥಾಪಕ ವರ್ಗ‌ ನಮ್ಮನ್ನು ಸಹಿಸುತ್ತಿತ್ತು.

ಇಂತಹ‌ ದಿನಗಳಲ್ಲಿ ನಮ್ಮ ನೆಚ್ಚಿನ‌ ಬಾರ್ ಗೆ ಹೊಸ ಮಾಣಿಯೊಬ್ಬ ಕೆಲಸಕ್ಜೆ ಸೇರಿಕೊಂಡ. ಮಲೆಯಾಳಿ ಭಾಷೆಯ ಈ ಯುವಕ ಕಟ್ಟುಮಸ್ತಾಗಿ‌ ಸಧೃಡನಿದ್ದ. ಅಷ್ಟೇ ಅಲ್ಲ ವಿದ್ಯಾವಂತನಂತೆಯೂ ಕಾಣುತ್ತಿದ್ದ. ನಾವು ಗೆಳೆಯರ ಗುಂಪು (ಈ ಗುಂಪಿನಲ್ಲಿ ಯಾರ್ಯಾರು ಇರುತ್ತಿದ್ದರು ಎಂಬುದನ್ನು ಇಲ್ಲಿ ವಿವರಿಸಿದರೆ ಅವರು ಈಗ ಮುಜುಗರಕ್ಕೆ ಒಳಗಾಗಬಹುದು ಎಂಬ ಯಾರ ಹೆಸರನ್ನೂ ಹೇಳುತ್ತ ಇಲ್ಲ.) ಇಲ್ಲಿಗೆ ದಾಳಿ ಮಾಡಿದಾಗೆಲ್ಲ ನಮಗೆ ಸರ್ವ್ ಮಾಡುವ ಕೆಲಸವನ್ನು ಇವನೇ ವಹಿಸಿಕೊಳ್ಳುತ್ತಿದ್ದ. ನಮ್ಮೆಲ್ಲರ ಅಮಲಿನ‌ ಮಾತುಗಳನ್ನು‌ ಡ್ರಾಮಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದ. ಕ್ರಾಂತಿಕಾರಿಗಳೆಂದು ಅವನ ಮುಂದೆ ಬ್ರಾಂಡ್‌ ಮಾಡಿಕೊಳ್ಳುವ ಯಾವ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ ನಾವು. ನಾನು ಸದಾ ಹೊಂದಿರುತ್ತಿದ್ದ ಯಾವುದೋ ಸಾಹಿತ್ಯದ ಪುಸ್ತಕವೋ ಸೈದ್ದಾಂತಿಕ ಪುಸ್ತಕವೋ ಅದನ್ನು ಬಿಡುವಿನ‌ ವೇಳೆಯಲ್ಲಿ ಕಣ್ಣು ಹಾಯಿಸುತ್ತಿದ್ದ. ಜೊತೆಗೆ ಸರ್ವ್ ಮಾಡುವಾಗಂತೂ ನಮಗೆ ಬೇಕೆನಿಸುವಷ್ಟು ಸಾಸ್, ಗ್ರೇವಿ ನೀಡುತ್ತಿದ್ದ ಅದರೆ ವಿದ್ಯಾರ್ಥಿಗಳು ಎಂಬ ಕಾರಣಕ್ಕೇನೋ ನಮ್ಮಿಂದ ಟಿಪ್ಸ್ ಪಡೆಯಲು ನಿರಾಕರಿಸುತ್ತಿದ್ದ.
ಇಂತಹ ಮಾಣಿಯ ಸದುಪಯೋಗವನ್ನು‌ ನಾವು frequent ಆಗಿ ಅಲ್ಲಿಗೆ ಬೇಟಿ ನೀಡುವ ಮೂಲಕ ಎನ್ಕ್ಯಾಷ್ ಮಾಡಿಕೊಳ್ಳುತ್ತಿದ್ದೆವು.

 

ಹೀಗೆ ಸುಮಾರು ದಿನ‌ ನಡೆಯಿತು. ಒಂದು ಸಂಜೆ ಎಂದಿನಂತೆ ನಾವಲ್ಲಿಗೆ ಕಾಲಿಟ್ಟಾಗ ಆ ಮಾಣಿ ಇರಲಿಲ್ಲ. ಕುತೂಹಲಗೊಂಡು ನಾವು ಮಾಲಿಕರನ್ನು ವಿಚಾರಿಸಿದರೆ ಅವರು ಆ ಮಾಣಿ ನಿಮಗೆ ಹೇಗೆ, ಎಷ್ಟು ದಿನಗಳಿಂದ ಗೊತ್ತು? ನಿಮಗೂ ಅವನಿಗೂ ಏನು ಸಂಬಂಧ ‌ಇತ್ಯಾದಿ ಪ್ರಶ್ನೆಗಳನ್ನೆ ಸುರಿಸಿದರು.

ತದನಂತರ ಅರಿವಾಗಿದ್ದು ಆ ಮಾಣಿ ಕೇರಳದ ಒಬ್ಬ ಹೆಸರಾಂತ ನಕ್ಸಲೈಟ್. ಯಾವುದೋ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು, ಪೋಲಿಸರನ್ನು‌ಸಾಯಿಸಿ, ಶಸ್ತ್ರಾಸ್ತ್ರ  ಕದ್ದು ಪರಾರಿಯಾಗಿದ್ದ ತಂಡವೊಂದರ ನಾಯಕ. ಕೇರಳ ಪೊಲೀಸರು ಸುಮಾರು ತಿಂಗಳಿಂದ ಹುಡುಕುತ್ತಿದ್ದರು. ಇಲ್ಲಿ ಮಾಣಿಯಾಗಿ ತಲೆಮರೆಸಿಕೊಂಡಿದ್ದ. ಅಚಾನಕ್ ಪೋಲಿಸರಿಗೆ ಸಿಕ್ಕು ಬಿದ್ದು ವಾಪಸ್ ಕೇರಳದ ಜೈಲಿಗೆ ಹೋದ. ಅವನ‌ ಅಜ್ಞಾತ ವಾಸಕ್ಕೆ ನೆರವಾದರೆಂದು ಪಾಪ ಮಾಲಿಕರಿಗೂ ಪೋಲೀಸರಿಂದ ಸಾಕಷ್ಟು ತೊಂದರೆಯಾಗಿರಬೇಕು. ಹಾಗೆಂದೇ ಅವರು ನಮ್ಮ ಮೇಲೆ ತಮ್ಮ ಸಿಟ್ಟನ್ನು ಹರಿಬಿಟ್ಟಿದ್ದರು.

ಈ ಘಟನೆಯ ನಂತರ ನಾವೂ ಅಲ್ಲಿಗೆ ಹೋಗುವುದನ್ನು ಕಡಿಮೆ ಮಾಡಿದೆವು. ಸಾಕಷ್ಟು ವರ್ಷ ಕಾಲ ಕೇಸ್ ನ್ಯಾಯಲಯದಲ್ಲಿ ನಡೆದು ಕಡೆಗೊಂದು ದಿನ ಆ ನಕ್ಸಲ್ ನಾಯಕನಿಗೆ ಗಲ್ಲಾಯಿತು ಎಂಬ ಮಾಹಿತಿ ನಮಗೆ ಸಿಕ್ಕಿತು.

ಈಗ ಮಿನರ್ವ ಟಾಕೀಸ್ ಇಲ್ಲ. ಅದರ ಎದುರು ಇದ್ದ ಬಾರ್ ಕೂಡ ಇಲ್ಲ. ಆ ಮಾಣಿಯ ಹೆಸರೂ ನೆನಪಿಗೆ ಬರುತ್ತಿಲ್ಲ. ಅದರೆ ನಿಜವಾಗಿ ನಂಬಿದ ಸಿದ್ದಾಂತವನ್ನು ಅನುಸರಿಸಿ ಕೃತ್ಯ ಎಸಗಿದ್ದ ಕ್ರಾಂತಿಕಾರಿಯೊಬ್ಬನ ಮುಂದೆ ನಮ್ಮಂತ ಹುಸಿ ಕ್ರಾಂತಿಕಾರಿಗಳು ಬರಿದೇ ಬಂಡವಾಳ ಕೊಚ್ಚಿಕೊಳ್ಳುತಿದ್ದಾಗ ಪ್ರತಿಕ್ರಿಯೆಯಾಗಿ ಅವನು‌ ನಮ್ಮೆಡೆ ಹರಿಸುತ್ತಿದ್ದ ನೋಟ ಮಾತ್ರ ನನಗೇ ಈಗಲೂ ಕಣ್ಣ ಮುಂದೆ ಬರುತ್ತಿದೆ.

‍ಲೇಖಕರು Avadhi

23 November, 2018

1 Comment

  1. Vidya

    It is very frustrating to read the font in new ‘avadhi’ format. It has become impossible to read the articles. May I request the management will look in to it please?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading