
ಮೂಲ: ಕೆ ಸಚ್ಚಿದಾನಂದನ್
ಕನ್ನಡಕ್ಕೆ: ರಾಜು ಎಂ ಎಸ್
- ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ
ಬಾಗ್ಲ ಚೀಲ್ಕ ಹಾಕ್ಬ್ಯಾಡ
ಮುಂಜಾನಿ ಕಾಣಿವ್ಯಾಗ, ಸುಳಿಯೋ ತಂಗಾಳ್ಯಾಗ..
ಹಗೂರಕ್ ತೇಲೋ ಎಲಿ ಹಾಂಗಾ ಹೋಗು
ನೀ ಭಾಳಾ ಬೆಳ್ಳಗಿದ್ರೆ ಭಸ್ಮ ಬಳ್ಕಾ ಮೈಗೆ
ಭಾಳ್ ಬುದ್ಧಿವಂತ ಅನ್ಸಿದ್ರ, ಅರೆನಿದ್ರ್ಯಾಗ ಹೊಂಡು
ಲಗೂನ ಹೊಂಟವ್ನು, ಸುಸ್ತಾಗೋದ್ ಕೂಡ ಲಗೂನ
ನಿಧಾನಕ್.. ನಿಂತವ್ರ್ ಹಾಂಗಾ ನಿಧಾನ ನಡಿಬೇಕ್
ನೀರಿನ್ ಹಾಂಗ ಆಕಾರ್ ಬ್ಯಾಡ
ನಡು ಬಗ್ಸಿರು, ಮ್ಯಾಲ್ ಏಳಾಕ್ ಹೊಂಡಬ್ಯಾಡ
ದೇವ್ರ ಸುತ್ತ ಸುತ್ತಬ್ಯಾಡ
ಶೂನ್ಯದೊಳ್ಗಡೆ ದಿಕ್ ಗಳಿರಲ್ಲ,

ಮುನ್ಸಿಬಾಗ್ಲಿಲ್ಲ ಹಿತ್ಲಿಲ್ಲ ಇದಕ್ ಹೆಸ್ರಿಡ್ದ್ ಕರಿಬ್ಯಾಡ
ಇದ್ರ್ ಹೆಸ್ರಿಗ್ ಯಾವ್ ಹೆಸ್ರಿಲ್ಲ
ಎಡೆ ಮಾಡುದ್ ಬ್ಯಾಡ ತುಂಬಿದ್ ಗಡ್ಗೆಗಿಂತ ಸಲಿಸು,
ಖಾಲಿ ಗಡ್ಗೇನ ಹೊರೋದಂದ್ರ!
ದೇವ್ರ್ ಪದಾ ಹಾಡೋದೂ ಬ್ಯಾಡ: ಆಸೆ-ಪಾಸೆಗೆಲ್ಲ ಜಾಗನೇ ಇಲ್ಲ ಇಲ್ಲಿ
ಮಾತಾಡ್ಲೇಬೇಕ್ ಅನ್ಸಿದ್ರೆ ಸದ್ದಿಲ್ದಂಗ್ ಮಾತಾಡು.
ಮರಗಳ್ಜೊತೆ ಕಲ್ಲು, ಎಲೆಗಳ್ಜೊತೆ ಹೂ ಮಾತಾಡೋ ಹಾಂಗ
ನಲ್-ನುಡಿಗಳಲ್ಲೇ ಮೌನ ಬಲ್-ಸಿಹಿ,
ಬಣ್ವಿಲ್ದಿರೋದೇ ಪಸಂದಾದ್ ಬಣ್ಣ
ನೀ ಬಂದದ್ ಹೋಗಿದ್, ಯಾರೂ ನೋಡಾಂಗಿಲ್ಲ
ಹೊಸ್ತಲ ದಾಟು ಕುಗ್ಗಿಬಗ್ಗಿ, ಥಂಡ್ಯಾಗ ಹೊಳೆ ದಾಟಿದ್ಹಾಂಗಾ.

ಇಲ್ಲಿ ಒಂದ್ ಚಣ ನೀ ಬಾಳೀಯ, ಕರಗ್ಹೋಗೋ ಹಿಮದ್ಹಾಂಗಾ
ಸೊಕ್ಕು ಬ್ಯಾಡ. ನೀನಿನ್ನೂ ಪೂರಾ ಆಗಿಲ್ಲ
ಸಿಟ್ಟು ಬ್ಯಾಡ. ಯಾವ್ ಧೂಳಾನೂ ನಿನ್ ಮಾತ್ ಕೇಳಂಗಿಲ್ಲ
ದುಃಖ್ಖನೂ ಬ್ಯಾಡ. ಏನೂ ಬದ್ಲಾಗದ್ ಮ್ಯಾಕೆ, ಯಾಕ್ ಬೇಕು!
ಇಲ್ಲದ್ ಹಿರೇತನ ಬಿಡು. ದೊಡ್ಡೋನಾಗೋಕಿದೊಂದೇ ದಾರಿ
ಎಂದ್ಗೂ ನಿನ್ ಕೈಗಳ್ನ ಬಳ್ಸ್ಬ್ಯಾಡ. ಅವು ಪ್ರೀತಿ ನೋಡಲ್ಲ ಹಿಂಸೆ ಮಾಡ್ತಾವೇ
ಮೀನು ನೀರಲ್ಲೇ ಇರ್ಲಿ, ಹಣ್ಣು ಕೊಂಬೆಲೇ ಇರ್ಲಿ
ಆಚಾರದ್-ನಾಲ್ಗೆ ಹಲ್ಉದ್ರುಸ್ಗೊಳೋದ್ನ ತಡೀವಂತೆ, ಮೆತ್ತ್ ಗಿರೋದೇ ಗಟ್ಟಿದ್ನ ರಕ್ಷಿಸ್ಲಿ.
ಏನೂ ಮಾಡ್ದೇ ಸುಮ್ನಿರೋನೇ ಭಾಳ್ಮಾಡೋಕ್ ಸಾಧ್ಯ. ಹೋಗ್ ಒಳ್ಗೆ, ಕೆತ್ದೇ ಇರೋ ಮೂರ್ತಿ ನಿಂಗೆ ಕಾಯ್ತಿದೆ.
2. ತೊದಲು
ತೊದಲುವುದು ಎಂದರೆ ಐಬಲ್ಲ
ಇದೂ ಒಂದು ಮಾತಾಡುವ ಬಗೆ.
ನುಡಿ ಮತ್ತದರ ಸೊಲ್ಗಳ ನಡುವಿರುವ ನೀರವತೆಯೇ ತೊದಲು!
ಹೇಳ್ವಿ ಉದದರ ಕೆನೆತದ ಮಧ್ಯೆ ಕಾಣುವ ಗಾಢಮೌನದ ತೆರದಿ ಇದೊಂದು ಐಬು!
ಉದ್ಗಾರಕೂ ಮೊದಲು ಬಂತೇ ಉಗ್ಗು, ಅಥವಾ ಅದರ ಬೆನ್ಹಿಂದೆ ಬಂದಿತೇ..? ಇದು ಬರಿ ಸೊಲ್ಲಾ ಯಾ, ನುಡಿಯಾ?

ನುಡಿ-ಪಂಡಿತರನ್ನೇ ತೊದಲಿಸುತ್ತವೆ ಈ ಪ್ರಶ್ನೆಗಳು.
ತೊದಲುವ ಪ್ರತೀ ಬಾರಿಯೂ – ವಾಗ್ದೇವಿಗೆ, ಅರ್ಥ, ಬಲಿಯಾಯ್ತು!
ತೊದಲಿದ ಒಂದಿಡೀ ಪೀಳಿಗೆಯ ತಾಯ್ನುಡಿಯೂ ತೊದಲೇ…
ನಮಗೀಗಿರುವಂತೆ!
ನರನ ಪುಟ್ಟಿಸಿದ ದೇವರೂ ತೊದಲಿದ್ದಿರಬೇಕು.
ಅದಕ್ಕೇ, ನರನ ಎಲ್ಲಾ ಸೊಲ್ಲುಗಳೂ ವಿಧವಿಧದರ್ಥ ಹೊಂದಿವೆ.
ಅದಕ್ಕೇ.. ಇವ, ಬೇಡುವುದರಿಂದ ಕೊಡುವಾಜ್ಞೆಯವರೆಗೂ ನುಡಿವುದೆಲ್ಲಾ ತೊದಲುಗಳೇ..
ಕವಿತೆಯೂ ಹಾಗೇನೇ!






ಎರೆಡು ಅನುವಾದ ಗಳು ತುಂಬಾ ಚನ್ನಾಗಿ ಮೂಡಿ ಬಂದಿವೆ ಅದರಲ್ಲೂ ತೊದಲು ಇಷ್ಟವಾಯಿತು…