ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ವರ್ಷದಲ್ಲಿ ಗಾಲಿಬ್ ನನ್ನು ನೆನೆಯುತ್ತಾ…

ರಮೇಶ ಗಬ್ಬೂರ್

ಕಳೆದ ಡಿಸೆಂಬರೆ್ 27 ಗಾಲಿಬ್ನ ಜನ್ಮ ದಿನ.. ದೇಶದಾದ್ಯಂತ ನಡೆವ ಗಾಲಿಬ್ ನೆನಪಿನ ಕಾರ್ಯಕ್ರಮಕ್ಕೆ ನನ್ನ ನುಡಿ ನಮನ
ಅಸದುಲ್ಲಾ ಖಾನ್ ಮಿರ್ಜಾ ಗಾಲಿಬ್ …….
‘ಗಾಲಿಬ್’ ಇದೊಂದು ನುಡಿಯ ವಾಹಕ. ಹೃದಯದಿಂದ ಹೃದಯಕ್ಕೆ ಕಟ್ಟುವ ಅಕ್ಷರ ಮತ್ತು ಅನುಭವಗಳ ಸೇತುವೆ. ವರ್ತಮಾನದ ವೈಯಕ್ತಿಕ ತಲ್ಲಣಗಳನ್ನು, ಬದುಕಿನ ದುಃಖ, ದುರಂತಗಳನ್ನು, ಹೆಣ್ಣು, ಪ್ರೀತಿ, ಆರಾಧನೆ, ಸೆಳೆತಗಳನ್ನು ತನ್ನ ಗಜಲ್ ಗಳಲ್ಲಿ ಮಾರ್ನುಡಿಸಿ ಓದುಗರನ್ನು ಬೆರಗಾಗುವಂತೆ ಮಾಡಿದ, ಕಾಡಿದ ಕವಿ ಗಾಲಿಬ್ ನಂತೆ ಬೇರಾರನ್ನು ಕಾಣಲಾಗುವುದಿಲ್ಲ. ಭಾರತದ ಎಲ್ಲ ರಾಜರುಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಅಪ್ಘಾನಿಸ್ತಾನದಿಂದ ಬಂದ ಕುಟುಂಬ ಆಗ್ರಾದಲ್ಲಿ ನೆಲೆಸಿ ಭಾರತೀಯ ಎಲ್ಲ ರಾಜರುಗಳಿಗೆ ಕುದುರೆ ಕಟ್ಟುವ ಪಳಗಿಸುವ ಕಸುಬುದಾರರಾಗಿ, ಕುದುರೆ ಸಿಪಾಯಿಗಳ ಮನೆತನದವರಾದವರು. ಅಜ್ಜ ಕುಕಾನ್ ಬೇಗ್ ಖಾನ್ನ ನಂತರದಲ್ಲಿ ಅಪ್ಪ ಅಬ್ದುಲ್ಲಾ ಬೇಗ್ ಖಾನ್ ಕುಟುಂಬದಿಂದ ಅಸದುಲ್ಲಾಖಾನ್ ಹುಟ್ಟಿ ಮಿರ್ಜಾ ಗಾಲಿಬ್ ನಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿ ಸಾಹಿತ್ಯದ ಗಡಸುತನ ಮತ್ತು ಅದರ ಮಧುರತೆಯನ್ನು ಬಿಚ್ಚಿಟ್ಟ ಕವಿ. ‘ಗಾಲಿಬ್’ ಎಂಬುದು ಕಾವ್ಯನಾಮವಾಗಿ ಅದರಿಂದಲೇ ಗುರುತಿಸಿಕೊಂಡು ಗಜಲ್ಗಳ ಮತ್ತುಗಳ ಉದುರಿಸುತ್ತಾ ಈ ನೆಲದಲ್ಲಿ ಬಿತ್ತಿದವನು. ಅಸದುಲ್ಲಾ ತನ್ನ ಸಾಮಥ್ರ್ಯದಿಂದ ದಿವಾನ ಪದವಿಯನ್ನು ಪಡೆದು ಮಿರ್ಜಾ ಆದವನು. ಸೂಫಿ ಪರಂಪರೆಯ ತತ್ವಜ್ಞಾನಿಯೊಬ್ಬನ ಕಾರಣದಿಂದಾಗಿ ಕಾವ್ಯದ ಬೋಧನೆಯನ್ನು ಪಡೆದು ಅದರಲ್ಲಿ ಪಳಗಿ ಗಾಲಿಬ್ ಎಂದು ತನ್ನ ಹೆಸರನ್ನು ಸೇರಿಸಿಕೊಂಡು ಮಿರ್ಜಾ ಗಾಲಿಬ್ ಆದವನು.

19ನೇ ಶತಮಾನದ ಆರಂಭದಲ್ಲಿ ಜಗತ್ತಿನ ಜಂಜಡಗಳು ನಿದ್ರೆಯಲ್ಲಿರುವಾಗ ತಾನು ಎಚ್ಚರವಾಗಿ ಬರೆದು ಎಲ್ಲರನ್ನು ಎಚ್ಚರಿಸಿದ ಕವಿ. ದಿಲ್ಲಿಯ ಕೊನೆಯ ಮೊಗಲ್ ದೊರೆಯಾದ ಆದಿಲ್ ಷಾನ ಆಸ್ಥಾನದ ಕವಿಯಾಗಿ ಮಿರ್ಜಾ ಗಾಲಿಬ್ನಾಗಿ ಗಜಲ್ಗಳನ್ನು ಬರೆದು ಆಸ್ಥಾನದ ವಿದ್ವಾಂಸರ ಮತ್ತು ಕೇಳುಗರ ಮನ ಗೆದ್ದವನು. ಪ್ರತಿಯೊಬ್ಬ ಕವಿಯು ಹೆಮ್ಮೆ ಪಡುವಂತೆ, ಕೇಳುಗರನ್ನು ಕವಿತೆಯ ನಶೆಯಲ್ಲಿರುವಂತೆ ಬರೆದು ಬಾಳಿದ ಕವಿ. ಜೀವನವೆಲ್ಲಾ ಹೋರಾಟದಲ್ಲಿ ಕಳೆದವನು. ಅನ್ನಕ್ಕಾಗಿ, ಹಕ್ಕಿಗಾಗಿ, ಮತ್ತು ಕೊಡುವ ಗೌರವಕ್ಕಾಗಿ ವ್ಯವಸ್ಥೆಯೊಂದಿಗೆ ಸೆಣಸಿದವನು. ಬದುಕಿನ ಎಲ್ಲಾ ಸಂದರ್ಭಗಳನ್ನು ಸುಖವೆಂದು ತಿಳಿದವನು. ಹುಟ್ಟಿದ ಏಳು ಮಕ್ಕಳು ವರ್ಷ ಕಾಣುವ ಮುಂಚೆ ಲೋಕ ಬಿಟ್ಟರೂ ವಿಚಲಿತನಾಗದೆ ಜೀವನದ ಕಷ್ಟಸುಖಗಳ ಎದುರಿಸಿದವನು. ಬರುವ ಪಿಂಚಣಿ ಹಣದಲ್ಲಿ ನಾಲ್ಕುಜನ ಸೇವಕರನ್ನು ಇಟ್ಟುಕೊಂಡವನು. ಹೆಣ್ಣಿನ ಮೋಹ, ಜೂಜಾಟ, ಕುಡಿತ, ಇವೆಲ್ಲವುಗಳನ್ನು ಸರಿತೂಗಿಸಲು ನಿತ್ಯ ಹೆಣಗಿದವನು.
ಹೃದಯದ ಸಣ್ಣ ನೋವು ಸಾಕು, ಮನೆಯೊಂದ ಮುಳುಗಿಸಲು
ನೀನು ನನ್ನ ಪ್ರೇಯಸಿ ಆಗಿರುವಾಗ, ಸಿಡಿಲಿನ ಅಗತ್ಯವಾದರು ಏನು
ಇವನು ಕಾಲಿಟ್ಟ ಮಧುಶಾಲೆಯಲ್ಲಿ ಕವಿತೆಗಳ ಓದಿ ಕುಡಿಯದವರಿಗೂ ನಶೆ ಏರಿಸುತ್ತಿದ್ದವನು. ಬರೆಯುವ ಶೇರ್ ಮತ್ಲಾಗಳನು ಮಧುಬಟ್ಟಲಿನೊಡನೆ ಹಂಚಿಕೊಂಡವನು. ತನ್ನ ಕಠಿಣ ನಿಲುವುಗಳಿಂದಾಗಿ ಜಗದ ನಿಂದೆಗೆ ಒಳಗಾದರೂ ಮತ್ತೇರಿಸಿಕೊಂಡು ಮತ್ತೆ ಮತ್ತೆ ಬರೆದು ಜನರು ಕೇಳುತ್ತಿರುವಾಗಲೇ ಮಲಗಿಸಿದವನು. ಮತ್ಲಾಗಳಲಿ ಶೇರ್ಗಳಲಿ ಸುಖವನು ಇಟ್ಟು ಕುಡಿಯಲು ಕೊಟ್ಟವನು. ಪ್ರಪಂಚ ಮರೆಯುವ ಜಾಗದಲ್ಲಿದ್ದರೂ ಕವಿತೆ ಹೇಳಿ ಎಚ್ಚರಿಸುತ್ತಿದ್ದವನು. ತನ್ನ ಯೌವನದಲಿ ನೃತ್ಯಗಾತಿಯ ಸಂಗಕ್ಕೆ ಬಿದ್ದು ಪ್ರೀತಿಸಿದವಳು ಸತ್ತಾಗ ಕಣ್ಣೀರು ಹಾಕದೆಯೇ ನೊಂದವನು.
ಇವನ ಕವಿತೆಗೆ ಮನಸೋಲದವರಾರಿಲ್ಲ. ಅಮೀರ ಖಸ್ರುವಿನ ಸಂಗೀತಕ್ಕೆ ಮರುಳಾಗಿ ಅಕ್ಬರನ ಸೈನ್ಯ ಸೋತಂತೆ ಇವನ ಗಜಲ್ಗಳಿಗೆ ಸೋಲದ ಮನಗಳೇ ಇಲ್ಲ. ಮೊಗಲ್ ರಾಜರು, ಬ್ರಿಟೀಷ್ ಅಧಿಕಾರಿಗಳು, ಸೇವಕರು, ರಾಣಿವಾಸದವರು, ನೃತ್ಯಗಾತಿಯರು, ನ್ಯಾಯಾಧೀಶರು ಅಷ್ಟೇ ಅಲ್ಲ ಲೋಕದ ಜನರನು ಗಜಲಿನಲಿ ಕಟ್ಟಿ ಹಾಕಿದ ಮಹಾ ಕವಿ. ಕವಿತೆಯ ಸೊಕ್ಕನ್ನು ಪಕ್ಕದಲ್ಲಿಟ್ಟುಕೊಂಡವನಿವನು. ಗರ್ವ ಇವನ ಬಳಿಯೇ ಇತ್ತು. ತಾನು ಮೊಗಲ್ ಸಾಮ್ರಾಜ್ಯದ ಆಸ್ಥಾನಕೆ ಹೋಗುವಂತೆಯೇ ಪೋಷಾಕು ಧರಿಸಿ ಮೇನೆಯಲ್ಲಿ (ಪಲ್ಲಕಿ) ಕುಳಿತು ಹೋದಾಗ ಕಾಲೇಜಿನ ಸಿಬ್ಬಂದಿ ಎದುರುಗೊಂಡು ಸ್ವಾಗತಿಸಲಿಲ್ಲವೆಂದು ಸಿಟ್ಟಾಗಿ ಉದ್ಯೋಗ ತ್ಯಜಿಸಿ ಬಂದವನು.
ನಿತ್ಯವೂ ಪಾನಗೋಷ್ಠಿ, ಕವಿಗೋಷ್ಠಿ ಮತ್ತು ಉನ್ನತ ಮಟ್ಟದ ಹವ್ಯಾಸಗಳಿಂದಾಗಿ ದುಂದುವೆಚ್ಚವಾಗಿ, ಮಾವನ ಮತ್ತು ಅಜ್ಜಿಯ ಮನೆಯಿಂದ ಹಣ ಬರುವುದು ನಿಂತು ಸಾಲ ಮಾಡಿ ಬದುಕಿದವನು. ಮೊಗಲರ ನಂತರದಲಿ ಬರಬೇಕಾದ ಪಿಂಚಣಿ ಬರದಾದಾಗ ಇಂಗ್ಲೆಂಡಿನ ರಾಣಿಗೆ ಪತ್ರ ಬರೆದವನು. ಸಾಲಗಾರ ಸಾಲ ತೀರಿಸಲಾಗದೆ ನ್ಯಾಯಾಲಯದಿಂದ ಗೃಹ ಬಂಧನದ ಶಿಕ್ಷೆ ಅನುಭವಿಸಿದವನು. ಮನೆಯಲ್ಲಿರುವಾಗ ಆಡಿದ ಜೂಜಿನ ಕಾರಣದಿಂದಾಗಿ ನೂರು ರೂಪಾಯಿ ದಂಡ ಕಟ್ಟಲಾಗದೆ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಿದವನು.
ಕಷ್ಟಗಳು, ಉಪವಾಸಗಳು, ಅಪಮಾನಗಳು, ನೋವುಗಳು ಅವನನ್ನು ಮುತ್ತಿಕ್ಕಿದರೂ ಗಜಲ್ಗಳ ಮುತ್ತು ಉದುರಿಸುವುದವನು ಬಿಡಲಿಲ್ಲ. ಹೆಂಡತಿಯ ಅನಾರೋಗ್ಯ, ಮಕ್ಕಳ ಸಾವು, ಸಾಲಗಳು, ಯಾತನೆಗಳ ಮೂಲಕ ಬದುಕಿ ಜಗಕೆ ಕವಿತೆಯ ಕಂದೀಲು ಹಚ್ಚಿದ ಕವಿ ಗಾಲಿಬ್ನಂತೆ ಬೇರಾರು ಇಲ್ಲ. ಇಷ್ಟೆಲ್ಲಾ ಯಾತನೆ ಇದ್ದರೂ ಸತ್ತ ಪ್ರೇಯಸಿಯ ನೆನಪು ಅವನಿಂದ ದೂರಾಗಿರಲಿಲ್ಲ. ಶಿಕ್ಷೆ ಅನುಭವಿಸುವ ಸೆರೆಮನೆಯಲ್ಲಿಯೂ ಕವಿತೆ ಹರಿಯಿತು.
ಪ್ರಿಯ ಸಖಿ, ಮೌನವೇ ರಾಜ್ಯವಾಳುವ
ಮನುಷ್ಯರಿಲ್ಲದ ಜಾಗದಲಿ ನಾವು ನೆಲೆಸೋಣ
ನೋವಿಗೆ ಮಿಡಿಯುವವರು ಮಾತಿಗೆ ಕಿವಿಯಾಗುವವರು
ಅಲ್ಲಿ ಇರದಿರಲಿ
ಎಂದು ಬರೆದು ಜಗತ್ತನ್ನು ಬೆರಗಾಗುವಂತೆ ಮಾಡಿದ. ನೋವಿನಲ್ಲಿ ಮನುಷ್ಯ ನೆಟ್ಟಗಾಗುತ್ತಾನೆಂದು ತಿಳಿದವರಿಗೆ ಬ್ರಮನಿರಸನವಾಗಿಸುತ್ತಾನೆ. ನೊವನ್ನೆ ಬಾಗಿಸಿ ತನ್ನ ಬಳಿಯಿಟ್ಟುಕೊಂಡ ಗಾಲಿಬ್ ಪ್ರಪಂಚವನ್ನು ಪ್ರಶ್ನಿಸುತ್ತಾ
ಈ ಹೃದಯವೆಂಬುದು ಕಲ್ಲು ಇಟ್ಟಿಗೆಯದಲ್ಲ
ಬೇಕೆನಿಸಿದಾಗಲೆಲ್ಲಾ ಸಾವಿರ ಬಾರಿ ಅತ್ತೇನು
ಈ ಗಾಲಿಬನ ಬಗ್ಗೆ ಜಗತ್ತಿಗೇಕೆ ಚಿಂತೆ?
 
ಎಂದು ಮಾತಾಡುತ್ತಲೇ ಸಾಗುತ್ತಾನೆ. ಕುಡಿದು ಹೋದ ಇವನನ್ನು ನಮಾಜಿನಿಂದ ಹೊರ ಹಾಕಿದಾಗ ಅವನು ಅವರನ್ನು ಪ್ರಶ್ನಿಸುವಾಗ ಹೇಳುವ ಮಾತು ನೀವು ನಮಾಜನ್ನು ಮಾಡುತ್ತಿಲ್ಲವಾಗಿ ಕುಡಿದು ಬಂದವರ ವಾಸನೆ ಮಾತ್ರ ತಿಳಿಯುತ್ತೀರಿ. ಮತ್ತೆ ಕುಡಿದವನಿಗೆ ನಮಾಜು ಇಲ್ಲವೆಂದು ಹೇಳುತ್ತೀರಿ ಇದು ಸರಿಯೇ ಎನುವ ಮಾತು ಅವನನ್ನು ಜಗತ್ತು ಪ್ರಿತಿಸುವಂತೆ ಮಾಡುತ್ತದೆ.
ಧರ್ಮಾಧರ್ಮ ನನ್ನ ಸೆಳೆದಿವೆ ಎರಡು ಪಕ್ಕಕ್ಕೆ
ನನ್ನ ಬೆನ್ನಲಿ ಎದೆ ಕಾಬಾ ಇಗರ್ಜಿ ಮುಂದುಗಡೆ
 
ನಮ್ಮ ವೃತ್ತಿ ಗುಟ್ಟು ಮತ್ತು ಎಲ್ಲವೂ ಒಂದೇ
ಘಾಲಿಬ್ ಸುದ್ದಿ ಯಾಕೆ ತೆಗೆದೆ ನನ್ನ ಮುಂದುಗಡೆ
ಅದ್ಭುತ ಮಾತುಗಾರ ಎಲ್ಲ ಶಾಸ್ತ್ರ ಗಳನ್ನು ಬಾಲ್ಯದಲಿ ಓದಿಕೊಂಡವನು. ಹೀಗಾಗಿ ಅವನ ಮಾತು ಗೌರವಿಸಲ್ಪಡುತ್ತದೆ. ಮೊಗಲ್ ಸಾಮ್ರಾಜ್ಯದ ಕೊನೆಯಗಳಿಗೆವರೆಗೂ ಸಿಪಾಯಿ ದಂಗೆಯನ್ನು ಕಣ್ಣಾರೆ ಕಂಡು ತನ್ನ ‘ದಸ್ತಂಬು’ ಎಂ ದಿನಚರಿಯಲ್ಲಿ ದಾಖಲಿಸುತ್ತಾ ತೂಗುಕತ್ತಿಯ ಕೆಳಗಿನ ಜೀವನದಂತೆ ಬಾಳಿಬದುಕಿದವನು.

ಮಧು ಬಟ್ಟಲನು ತುಟಿಗಿಟ್ಟಕ್ಷಣ
ರಾತ್ರಿಗಳಿಗೆ ಇದ್ದ ಸೊಬಗುಗಳೆಲ್ಲಿ?
ಎಂದು ಅಂದಿನ ತನ್ನ ಯೌವನ ಮತ್ತು ಉತ್ಸಾಹಗಳ ದಿನಗಳನ್ನು ನೆನೆಯುತ್ತಾ ಬರೆದವನು.
ಕಡಲೊಳಗೆ ದೋಣಿ ಮುಳುಗಿರುವಾಗ
ನಾವಿಕನ ಅನ್ಯಾಯದ ಬಗ್ಗೆ ದೇವರಲ್ಲಿ
ದೂರು ಸಲ್ಲಿಸುವುದು ಏಕೆ ಗಾಲಿಬ್?
ಎಂದು ತನ್ನಷ್ಟಕ್ಕೆ ತಾನೆ ಸಮಾಧಾನ ಮಾಡಿಕೊಂಡು ಬರೆದಿರುವ ಕವಿತೆಗಳನ್ನು ಓದುತ್ತಿದ್ದರೆ ಅಸಾಮನ್ಯ ಕವಿಯೊಬ್ಬನ ಸಾಮನ್ಯ ಚಿಂತನೆ ಯಾವ ತತ್ವಶಾಸ್ತ್ರಕ್ಕೂ ನಿಲುಕದ ಮಾತಿದು ಎಂದು ಮತ್ತೆಮತ್ತೆ ಓದಬೇಕೆನಿಸುತ್ತದೆ. ಈ ತನಕವೂ ಅವು ಪ್ರಸ್ತುತವೆನಿಸುತ್ತವೆ.
ಸಾಯಲೇಬೇಕೆಂದುಕೊಂಡು ಬದುಕಿನುದ್ದ ಸಾಯುತ್ತಿದ್ದೆ
ನನಗೀಗ ಯಾವ ಕಾಣಿಕೆ ಕೊಡುವರು? ಹೇಳು
ಇಲ್ಲೆಲ್ಲಾ ಅವನ ಗಜಲಿನ ಶೇರ್ಗಳನು ಓದುತ್ತಿದ್ದರೆ ನೆನಪು ಬಾರದಿರದು ಬರೆದವನಾರೆಂದು. ಇಷ್ಟೆಲ್ಲಾ ಓದಿದ ಮೇಲೆಯೂ ಅವನು ನಮಗೆ ಕಾಡದಿದ್ದರೆ ಜಗದಲಿರುವ ನಾವು ನಮಗ್ಯಾರೆಂದು……………..
 
ಗಾಲಿಬ್ ನ ನೆನಪಿನಲಿ ನನ್ನ ಎರಡು ಗಜಲ್ನ ಮೂಲಕವೂ ನುಡಿನಮನ ವನ್ನು ಅರ್ಪಿಸುತ್ತಿದ್ದೇನೆ…..
1..ಗಾಲಿಬ್ ಎಂದರೆ ನನಗಿಷ್ಟ
ನೀ ಷರಾಬಿನ ಬಟ್ಟಲು ಹಿಡಿದು ಮತ್ತಮತ್ತೆ ಮಾತಾಡುವುದು ನನಗಿಷ್ಟ ಗಾಲಿಬ್
ನೀ ಸಾಕಿಯ ಸಂಗದ ನಶೆಯಲಿ ಉಸುರುವ ನಿನ ಶೇರ್ಗಳು ನನಗಿಷ್ಟ ಗಾಲಿಬ್
 
ಹಗಲನ್ನೇ ಕುಡಿದಿರುವ ನಿನ ಷರಾಬಿನ ಕಾರಣದಿಂದಾಗಿ ಸಂತನಾಗಲಿಲ್ಲವಂತೆ ನೀನು
ಅನುಭವವಿಲ್ಲದವರ ಗೋಳು ನಿನ ಜೋಳಿಗೆಗೆ ಇಳಿಯ ಗೊಡದ ನೀ, ನನಗಿಷ್ಟ ಗಾಲಿಬ್
 
ಅನ್ನ, ಪದವಿ, ಮೊಹಬ್ಬತ್ತಿನ ಹೊಟ್ಟೆ ತುಂಬಿಸಿಕೊಳ್ಳದ ಮಹಾ ಫಕೀರ ನೀನು
ಹಸಿದಸಿದು ಸಾಯುತ್ತಿದ್ದರೂ ಗಜಲ್ ಓದಿ ಹಸಿವ ಮರೆಸಿದವ ನೀ, ನನಗಿಷ್ಟ ಗಾಲಿಬ್
 
ಪುರಾನಿ ಆಗ್ರಾದ ಗಲ್ಲಿಯ ಮಕ್ತಬ್ಗಳಲಿ ಅಕ್ಷರದ ಜೊತೆ ಅನಾಥವಾಗಿದ್ದೆ ನೀನು
ಫಕೀರನೊಬ್ಬನ ಷಾಗಿರ್ದನಾಗಿ ಬದುಕಿಸುವ ಕವಿತೆ ಕಲಿತ ನೀ, ನನಗಿಷ್ಟ ಗಾಲಿಬ್
 
ಅವಳ ಮನೆಯ ಎದೆಯಲಿ ಚಿತ್ರವಾಗಿ ಮುದುರಿ ಬೊಗಸೆಯಲಿ ಪ್ರೀತಿ ಕಟ್ಟಿದ್ದೆ ನೀನು
ಜಗಕೂ ಗೊತ್ತಾಗದ ಅವಳ ಉಸಿರಿಗೆ ಮತ್ಲಾಗಳ ಬಿತ್ತಿದವನು ನೀ, ನನಗಿಷ್ಟ ಗಾಲಿಬ್
 
ಸುಖ ಸುರಿಯುತ್ತಿದ್ದ ಸಾಕಿ ದೂರವಾದಾಗ ಎದೆಯ ಕವಾಟ ಕಿತ್ತುಕೊಂಡಿದ್ದೆ ನೀನು
ಖಾಯಿಲೆಯ ಮರೆಸುವ ಅವಳ ಗೆಜ್ಜೆ ಸದ್ದಿನ ಜೊತೆ ನಿನ ಗಜಲ್, ನನಗಿಷ್ಟ ಗಾಲಿಬ್
 
ಬಚ್ಚಿಟ್ಟುಕೊಂಡು ಸುಂದರಿಯ ಸಂಗಕಾಗಿ ಕಷ್ಟಪಟ್ಟು ಕಾಫಿಯಾ ರದೀಫ್ ಆದವ ನೀನು
ಅವಳಿಗಾಗಿ ಉಸುರುವ ದ್ವಿಪದಿಗಳ ಷರಾಬುಖಾನೆಯಲಿ ಮಾರಿದ ನೀ, ನನಗಿಷ್ಟ ಗಾಲಿಬ್
 
‘ದೇವರ ಗೊಡವೆ ಬೇಡೆ’ಂದು ಕುಡಿಕುಡಿದು ನಶೆಯಲಿ ಕವಿತೆ ಹಡೆದವನು ನೀನು
ನೀ ಕುಡಿದು ಬೋರಲಾಕಿದ ಬಟ್ಟಲ ಒಳ ಉಸಿರಾಗಲು ಈ ‘ದಾಸ’ನಿಗೆ ಇಷ್ಟ ಗಾಲಿಬ್
 
2..ಷರಾಬು ಮತ್ತು ಗಜಲ್
ಅವನು ಹಗಲುಗಳಲ್ಲಿ ಕುಡಿಯುತ್ತಿರಲಿಲ್ಲ ಆಮೇಲೆ ಕುಡಿಯದಿದ್ದರೆ ಹಗಲಾಗುತ್ತಿರಲಿಲ್ಲ ಸಾಕಿ
ಅವನು ಷರಾಬು ಇಲ್ಲದ ದಿನ ಸತ್ತು ಹೋಗುತ್ತಿದ್ದ ಸಾಯಲು ಇಷ್ಟವಿಲ್ಲದೆ ಸಾಕಿ
 
ಮನುಷ್ಯನನ್ನು ಸೋಲಿಸಬಹುದು ಆದರೆ ಅವನ ನಾಶ ಮಾಡಲಾಗುವುದಿಲ್ಲ
ಸಾವು ಅವನನೆತ್ತಿಯ ಮೇಲೆ ಪಾಳಿ ಕಾಯುತ್ತಿದ್ದರೂ ಬರೆಯುವುದವ ಬಿಡಲಿಲ್ಲ ಸಾಕಿ
 
‘ಮಾನ’ವೆಂಬ ವಾಸಿಯೇ ಆಗದಂತಹ ಕಾಯಿಲೆ ಅವನ ಹತ್ತಿರವೂ ಸುಳಿಯಲಿಲ್ಲ
‘ಕೀರ್ತಿ’ಎಂಬ ಸಾವಿನ ಚಿಕ್ಕತಂಗಿಯ ಹಿಂದೆ ಬೀಳದವನು ಸಾಕಿ
 
ಲೇಖನಿಗೆ ಮತ್ತೆ ಮತ್ತೆ ಷಾಯಿ ತುಂಬಿ ಬರೆಯದೆ ಷೇರ್ ಆಜಾದಿ ಮಾಡಿದವನು
ದೇಹಕೆ ಷರಾಬಿನ ಬಣ್ಣದ ಪಾನೀಯ ತುಂಬಿ ಪದಗಳ ಉದುರಿಸಿದವನು ಸಾಕಿ
 
ಕೇಳುವವನೂ ಚೆಂದ ಬದುಕಬಹುದೆಂದು ಗಜಲ್ ಕೇಳಿಸಿದವನ ಯಾರೆಂದು ಕೇಳಬೇಡ
ಅಲ್ಲಾನ ಕೇಳದೆ ಪೂರ್ತಿ ಆಯುಷ್ಯ ಬದುಕಿದ ಗಿರಿಯ ಶಿಷ್ಯ ಈ ‘ದಾಸ’ನ ಗಾಲಿಬ್ ಸಾಕಿ
 

‍ಲೇಖಕರು G

2 January, 2015

8 Comments

  1. Prabhakar M. Nimbargi

    Dear Ramesh Gabbur, You have gazals in you. You have covered Ghalib’s life and philosophy in these two touchy gazals. Well done, keep writing gazals. Congratulations.

  2. jagadishkoppa@gmail.com

    ರಮೇಶ್ ಗಬ್ಬೂರ್, ನಿಮ್ಮ ಈ ಲೇಖನದಲ್ಲಿ ನಾನು ಅನುವಾದಿಸಿದ ” ಮಿರ್ಜಾ ಗಾಲಿಬ್, ಕಥನ ಮತ್ತು ಕಾವ್ಯ” ಕೃತಿಯಿಂದ ಅನಾಮತ್ತಾಗಿ ನನ್ನ ಕವಿತೆಗೆಳನ್ನು ಬಳಸಿಕೊಂಡಿರುವ ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು.” ಪ್ರಿಯ ಸಖಿ ಮೌನವೇ ರಾಜ್ಯವಾಳುವ, ಮತ್ತು ಈ ಹೃದಯವೆಂಬುದು ಕಲ್ಲು ಇಟ್ಟಿಗೆಯದಲ್ಲ, ಹಾಗೂ ಕಡಲಲ್ಲಿ ದೋಣಿ ಮುಳುಗಿರುವಾಗ, ಅಲ್ಲದೆ ಮಧುಬಟ್ಟಲನು ತುಟಿಗಿಟ್ಟಕ್ಷಣ, ಇವುಗಳು ನನ್ನ ಕೃತಿಯಿಂದ ಆಯ್ದ ಕವಿತೆಗಳಾಗಿವೆ.
    ಜಗದೀಶ್ ಕೊಪ್ಪ. ಧಾರವಾಡ

    • ramesh gabbur

      ಹೌದು ಸರ್ .. ನಿಮ್ಮ ಕೃತಿಯಿಂದಲೇ ಆಯ್ಕೆ ಮಾಡಿಕೊಂಡದ್ದು… ನಾನು ಅಲ್ಲಿ ನೆನಪಿಸಲಾಗಲಿಲ್ಲ. ಕ್ಷಮೆ ಇರಲಿ..

  3. vidyashankar

    Good writing… but Jagadish Koppa’s question is valid… at least you should have quoted your source.

  4. chaithra

    good writing dady…

  5. Anonymous

    Ghalib matu avana gazal arrtavagada dursha. avana baduku kaaliyadaru avana gazal thumbeda battllu.Haagagi yaroo bareda vechaara baryabaaradu 0

  6. Prabhakar M. Nimbargi

    If the opinion of Shri. Jagadish Koppa is valid, my comments addressed to Gabbur be transferred to Shri. Koppa.

  7. ಸುಬ್ಬಣ್ಣ ಮತ್ತೀಹಳ್ಳಿ.

    ಗಾಲಿಬ್ ಬಗೆಗೆ ಮನಮುಟ್ಟುವಂತೇ ಅರ್ಥಪೂರ್ಣವಾಗಿ ಬರೆದಿದ್ದೀರ. ಗಾಲಿಬ್ ಬದುಕೇ ಒಂದು ಗಜಲ್. ಅಥವಾ ಮಹಾಕಾವ್ಯ. ಮತ್ತೊಮ್ಮೆ ಗಜಲ್ ಚಕ್ರವರ್ತಿಯನ್ನು
    ನೆನಪಿಸಿದ್ದಕ್ಕೆ ಧನ್ಯವಾದಗಳು. ಜಗದೀಶ್ ಕೊಪ್ಪ ರ ತಕರಾರಿನ ಬಗೆಗೆ ಉತ್ತರಿಸಿ. ನಮ್ಮನ್ನು ಅತೀವವಾಗಿ ಆಕರ್ಷಿಸಿದ ಸಾಲುಗಳು ಅದೆಷ್ಟೋ ಬಾರಿ ಆಕಸ್ಮಿಕವಾಗಿ ನಮ್ಮ ಸಾಲುಗಳಲ್ಲಿ ನುಗ್ಗಿ ಬಿಡುತ್ತವೆ. ಅಂಥಹ ಘಟನೆಗಳು ಸಾಹಿತ್ಯದಲ್ಲಿ ಸಾಕಷ್ಟಿವೆ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading