ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಲೋಕದತ್ತ ‘ಚಿತ್ರಗುಪ್ತನ ಸನ್ನಿಧಿಯಲ್ಲಿ'

ಹೊಸ ಲೋಕದತ್ತ ಒಯ್ಯುವ
ಜಯಶ್ರೀ ಕಾಸರವಳ್ಳಿಯವರ ‘ಚಿತ್ರಗುಪ್ತನ ಸನ್ನಿಧಿಯಲ್ಲಿ’
ಡಾ. ಪಾರ್ವತಿ ಜಿ. ಐತಾಳ್
ಜಯಶ್ರೀ ಕಾಸರವಳ್ಳಿ ನಮ್ಮ ನಡುವಿನ ಓರ್ವ ಮಹತ್ವದ ಲೇಖಕಿ. ತಮ್ಮ ವಿಶಿಷ್ಟ ಶೈಲಿಯ ಸಣ್ಣಕಥೆಗಳು ಮತ್ತು ಅನುವಾದಿತ ಕೃತಿಗಳ ಮೂಲಕಕನ್ನಡದ ಓದುಗರಿಗೆ ಪರಿಚಿತರಾದವರು. ಈಗಾಗಲೇ ಎರಡು ಕಥಾಸಂಕಲನಗಳನ್ನು ಪ್ರಕಟಿಸಿರುವ ಇವರ ಮೂರನೆಯ ಕಥಾಸಂಕಲನ ‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಅಂಕಿತ ಪುಸ್ತಕದವರ ಮೂಲಕ ಈಗ ಮಾರುಕಟ್ಟೆಗೆ ಬಂದಿದೆ. ಕನ್ನಡ ಕಥಾಜಗತ್ತಿಗೆ ವಿನೂತನ ಕೊಡುಗೆಯಾಗಬಲ್ಲ ಹತ್ತು ಸಣ್ಣಕಥೆಗಳು ಇಲ್ಲಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ಭಿನ್ನವಾಗಿರುವ ವಸ್ತು-ವಿನ್ಯಾಸಗಳನ್ನು ಹೊಂದಿವೆ.
ಮೊದಲ ಕಥೆ ‘ಮುತ್ತಿನಡ್ಡಿಗೆ’ ಅಸಹಾಯಕತೆಯ ಕೂಪದೊಳಗೆ ಬಿದ್ದು ನರಳುವ ಒಬ್ಬ ಕುರೂಪಿ ಹೆಣ್ಣಿನ ದುರಂತದ ಕುರಿತಾದದ್ದು. ಆರಂಭದ ವಿವರಗಳು ಆಕೆಯ ಸೂಕ್ಷ್ಮ ಸಂವೇದನೆ ಮತ್ತು ನಾಜೂಕು ಸ್ವಭಾವಗಳನ್ನು ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲೀ ಬಹಳ ಆಪ್ತವಾಗಿ ಚಿತ್ರಿಸುತ್ತವೆ. ಹೆಣ್ಣು ಮಗುವಿಗೂ ಪ್ರಾಶಸ್ತ್ಯ ಕೊಡುವ ಅವ್ವ. ತಂದೆ ಬಯಸಿ ಬಯಸಿ, ತನ್ನ ಹೆಂಡತಿಗೆ ಮುತ್ತಿನಡ್ಡಿಗೆ ಕೊಡಿಸುವೆನೆಂದು ವಾಗ್ದಾನವನ್ನಿತ್ತು ಹುಟ್ಟಿದವಳಾಕೆ. ಆದರೆ ದೊಡ್ಡವಳಾದಂತೆ ಜಗದ ಕಣ್ಣಿಗೆ ಕುರೂಪಿಯಾಗಿ ಬೆಳೆದ ಅವಳ ಮದುವೆ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಎಲ್ಲ ಗಂಡುಗಳೂ ನಿರಾಕರಿಸುತ್ತಲೇ ಹೋದಾಗ ಕೊನೆಗೆ ನೂರು ಪವನು ಚಿನ್ನ ವರದಕ್ಷಿಣೆಯಾಗಿ ಬೇಡುವ, ವಿಕೃತ ಮನಸ್ಸಿನ, ವಿಚಿತ್ರ ಪ್ರಕೃತಿಯ, ಒಬ್ಬ ನರಪೇತಲನೂ ಘೋರರೂಪಿಯೂ ಆದ ಗಂಡಿನ ಜತೆಗೆ ಅವಳ ಮದುವೆಯೆಂಬ ಶಾಸ್ತ್ರ ನಡೆಯುತ್ತದೆ. ಮದುವೆಯ ಸಂದರ್ಭದಲ್ಲಾಗಲಿ, ಮೊದಲ ರಾತ್ರಿಯಲ್ಲಾಗಲಿ ಅವಳಿಗಾಗುವುದು ದುಃಸ್ವಪ್ನದ ಅನುಭವ ಮಾತ್ರ. ಎಷ್ಟೇ ಪ್ರತಿಭಟಿಸಿದರೂ ಸಾಧ್ಯವಾಗದೆ ‘ಹುಲಿಯ ಕೈಗೆ ಸಿಕ್ಕ ಹುಲ್ಲೆಯಂತೆ’ ಸೋತು, ಆಕೆಯ ಕನಸುಗಳ ಪ್ರತೀಕವಾದ ಮುತ್ತಿನಡ್ಡಿಗೆಯ ಸುಂದರ ಮುತ್ತುಗಳೆಲ್ಲವನ್ನೂ ಕಳಕೊಂಡು, ಅರೆಜೀವವಾಗಿ ತವರು ಮನೆಗೆ ತಿರುಗಿ ಬರುವ ಆ ಹೆಣ್ಣಿನ ಕಥೆಯ ಕೊನೆಯಲ್ಲಿ ಓದುಗರನ್ನು ನಡುಗಿಸುವ ಒಂದೇ ಒಂದು ಪ್ರಶ್ನೆ : ಕುರೂಪಿಯಾಗುವುದೆಂದರೆ ಇಷ್ಟೊಂದು ಘೋರ ಅಪರಾಧವೆ?
‘ಇತಿಹಾಸದ ಪುಟಗಳೂ ವಿಯೆಟ್ನಾಮಿನ ಆ ಹೆಣ್ಣುಮಗಳೂ..’ಮಧ್ಯಮವರ್ಗದ ವಿದ್ಯಾವಂತಳಾದ ಕಥಾನಿರೂಪಕಿಯೊಂದಿಗೆ ಮುಖಾಮುಖಿಯಾಗುವ, ವಿಯೆಟ್ನಾಂ ಯುದ್ಧಕಾಲದಲ್ಲಿ ಅತಂತ್ರಳಾಗಿ ನಿರಾಶ್ರಿತರ ಜತೆಗೆ ಚೆನ್ನೈಗೆ ಬಂದು ಬದುಕು ಕಟ್ಟಿಕೊಳ್ಳುವ ಒಬ್ಬ ಹೆಣ್ಣಿನ ಕಥೆ. ಎಷ್ಟೇ ಅಡೆತಡೆಗಳು ಎದುರಾದರೂ ಧೃತಿಗೆಡದೆ ಜೀವನೋತ್ಸಾಹವನ್ನು ಕಾಪಿಟ್ಟುಕೊಂಡ ಅವಳು, ಬದುಕಿನ ಏಕತಾನತೆಗೆ ಸೋತು ಎಲ್ಲವನ್ನೂ ಯಾಂತ್ರಿಕವಾಗಿ ಕಾಣುತ್ತಿರುವ ನಿರೂಪಕಿಗೆ ಒಂದು ಅಚ್ಚರಿಯಾಗಿ ಕಾಣುತ್ತಾಳೆ.
‘ಅಂತರದ ನಡುವೆ’ ಚೆನ್ನೈ ನಗರ ಜೀವನ ಕೇಂದ್ರಿತವಾಗಿದ್ದು ಅಸಂಗತ ಶೈಲಿಯಲ್ಲಿದೆ.ಇಲ್ಲಿ ಕಥೆಯಾಗಲಿ, ಘಟನೆಗಳಾಗಲಿ ಏನೂ ಇಲ್ಲ. ಸುಮ್ಮನೆ ಗಂಡು-ಹೆಣ್ಣುಗಳ ನಡುವಣ ಮದುವೆ, ದಾಂಪತ್ಯ ಮತ್ತು ಲೈಂಗಿಕ ಸಂಬಂಧಗಳ ಸುತ್ತ ತಿರುಗುವ ಯೋಚನೆಗಳು ಅಷ್ಟೆ. ಪ್ರೀತಿಯೆಂದರೇನು, ದಾಂಪತ್ಯದಲ್ಲಿ ಇಬ್ಬರ ನಡುವಣ ಸಂಬಂಧದ ಸ್ವರೂಪವೇನು ಎಂಬುದರ ಕುರಿತಾದ ಶೋಧನೆಯಂತಿದೆ ಈ ಕಥೆ.
ಸುನಂದೆಯ ದೃಷ್ಟಿಯಿಂದ ಈ ಕಥೆ ನಿರೂಪಿಸಲ್ಪಟ್ಟಿದೆ. ಆಕೆಗೆ ತನ್ನ ಅಸ್ಮಿತೆಯ ಬಗೆಗೇ ಅನುಮಾನ. ಭಾಷಾಶಾಸ್ತ್ರಜ್ಞರು ಪ್ರತಿಪಾದಿಸಿರುವ ರಚನಾವಾದದಲ್ಲಿನ ಸಿಗ್ನಿಫೈಯರ್ ಮತ್ತು ಸಿಗ್ನಿಫೈಡ್ ಥರ ‘ನಿಜವಾದ ನನ್ನ ದೇಹಕ್ಕೂ ಸುನಂದೆ ಅನ್ನುವ ಹೆಸರಿಗೂ ಏನು ಸಂಬಂಧ?’ ಎಂದು ಕೇಳುವಾಗ ವಾಸ್ತವದಾಚೆಗಿನ ಸಂಗತಿಗಳ ಬಗ್ಗೆ ಆಕೆ ಮಾತನಾಡುತ್ತಿದ್ದಾಳೆ ಅನ್ನಿಸುತ್ತದೆ. ಕುರೂಪಿಯಾಗಿರಲಿ, ಸುಂದರಿಯಾಗಿರಲಿ, ಸಾಮಾನ್ಯಳಾಗಿರಲಿ-ಅಸಾಮಾನ್ಯಳಾಗಿರಲಿ, ಶ್ರೀಮಂತೆಯಾಗಿರಲಿ-ಬಡವಳಾಗಿರಲಿ ಮೂಲಭೂತವಾಗಿ ಸ್ತ್ರೀಯರ ಬದುಕಿನ ಸ್ಥಿತಿ-ಗತಿಗಳಲ್ಲಿ ಅಂತರವೇನೂ ಇರುವುದಿಲ್ಲ. ದಾಂಪತ್ಯವೆಂದರೆ ಪರಸ್ಪರ ಭೌತಿಕ ಆವಶ್ಯಕತೆಗಳ ಪೂರೈಕೆ ಅಷ್ಟೆ. ಲವ್ ಅಂದರೆ ಪ್ರೀತಿ ಎಂದರ್ಥ. ಆದರೆ ‘ಮೇಡ್ ಲವ್’ ಅಂದರೆ ‘ಸಂಭೋಗಿಸಿದರು’ ಎಂದು ಆರ್ಥವಾಗುವುದು ಯಾಕೆ ಎಂಬುದು ಸುನಂದೆಯ ಪ್ರಶ್ನೆ. ಎಂಥ ವಿಪರ್ಯಾಸ ! ಸಂಬಂಧಗಳಲ್ಲಿ ಎಂಥ ನಿರ್ಭಾವುಕತೆ ! ಬಳಸಿ ಎಸೆವ ಕಾಂಡಮ್ ಗಳಂತೆ, ಪರಸ್ಪರ ಅಂಟು-ನಂಟು ಯಾವುದೂ ಇಲ್ಲದೆ ಎಲ್ವೂ ಕ್ಷಣಾರ್ಧದಲ್ಲಿ ಮುಗಿಯುವುದೇ ವಾಸ್ತವ. ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆಯ ಬಗ್ಗೆ ಇಷ್ಟೊಂದು ತೆರೆದ ಭಾಷೆಯಲ್ಲಿ ವಿವರಗಳನ್ನು ದಾಖಲಿಸಿ ಕನ್ನಡದಲ್ಲಿ ಬಂದ ಮೊದಲ ಮಹಿಳಾ ಕಥೆ ಇದು ಎನ್ನಬಹುದೇನೋ ಅನ್ನಿಸುತ್ತದೆ.
‘ಸಹಿಷ್ಣುತೆ ಅಸಹಿಷ್ಣುತೆಗಳ ನಡುವೆ’ ಇಂದಿನ ಆಧುನಿಕ ಜಗತ್ತಿನಲ್ಲಿ ಕಾಣುವ ವ್ಯಾವಹಾರಿಕ ಸಂಬಂಧಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಅನುಮಾನಿಸುತ್ತಲೇ ಇರುವ ಕ್ರೂರ ವಾಸ್ತವವಿದೆ. ಸದಾ ಟಿ.ವಿ.ಯ ಮುಂದೆ ಪ್ರತಿಷ್ಠಾಪಿಸಿಕೊಳ್ಳುವ ಗಂಡ ಇಡೀ ಜಗತ್ತಿನ ವಾರ್ತೆಗಳನ್ನು ತಿಳಿದುಕೊಳ್ಳುವ ಮಹಾ ಪಂಡಿತನಾದರೂ ಮನೆಯ ಕಡೆಗೆ ಮತ್ತು ತಾನು ಬದುಕುವ ಪರಿಸರದ ಕಡೆಗೆ ಗಮನವೇ ಇಲ್ಲದ ಬೇಜವಾಬ್ದಾರಿ ಮನುಷ್ಯ. ಮನೆಗೆಲಸ, ಗಂಡನ ಚಾಕರಿಗಳ ನಡುವೆ ಕಥೆ ಬರೆಯುವ ಒತ್ತಡದಲ್ಲಿರುವ ಹೆಂಡತಿಗೆ ತಿಳಿದುಕೊಳ್ಳುವ ಕಾಳಜಿಯಿದ್ದರೂ ಅದಕ್ಕೆ ಸಮಯವಿಲ್ಲ. ಈ ಕಾರಣದಿಂದ ಪಕ್ಕದ ಮನೆಯ ಹುಡುಗನ ಬಗ್ಗೆ ಅನುಮಾನದ ಹೊಗೆ ದಟ್ಟವಾಗುತ್ತ ಹೋಗುತ್ತದೆ.
‘ಸ್ಪರ್ಶಸುಖ’ ಸ್ಪಷ್ಟವಾಗಿ ಸ್ತ್ರೀವಾದಿ ಧೋರಣೆಯುಳ್ಳ ಕಥೆ. ಹಿರಿಯ ತಲೆಮಾರಿಗೆ ಸೇರಿದ ತಾಯಿ ಮತ್ತು ಕಿರಿಯ ತಲೆಮಾರಿಗೆ ಸೇರಿದ ಮಗಳು ತಮ್ಮ ತಮ್ಮ ದೃಷ್ಟಿಕೋನದಲ್ಲಿ ಹೇಗೆ ಭಿನ್ನರಾಗಿದ್ದಾರೆ ಎನ್ನುವುದನ್ನು ಚಿತ್ರಿಸುವ ಕಥೆ. ತಾಯಿಯ ಕೈಯಲ್ಲಿ ಯಾವ ಮುಲಾಜೂ ಇಲ್ಲದೆ ಚಾಕರಿ ಮಾಡಿಸಿಕೊಳ್ಳುವ ತಂದೆಯ ಬಗ್ಗೆ ವಯಸ್ಸಿಗೆ ಬಂದ ಮಗಳು ಆಕ್ರೋಶ ವ್ಯಕ್ತಪಡಿಸುತ್ತಾಳೆ. ಪರಂಪರೆಯಿಂದ ಬೆಳೆಸಿಕೊಂಡು ಬಂದ ಪುರುಷಾಹಂಕಾರದಿಂದ ಮೆರೆಯುವ ತಂದೆ ಮತ್ತು ಆ ಬಗ್ಗೆ ಒಳಗೊಳಗೇ ನೊಂದುಕೊಂಡರೂ ಏನೂ ಮಾಡಲಾಗದ ತಾಯಿ. ಇದು ಇಲ್ಲಿಗೆ ಕೊನೆಯಾಗಬೇಕೆಂದು ಆಗ್ರಹಿಸುವ ಮಗಳು ಮತ್ತು ಈ ಬಗ್ಗೆ ಏನೂ ಗೊತ್ತಿಲ್ಲದ ಒಬ್ಬ ತಮ್ಮ- ಇಲ್ಲಿದ್ದಾg. ಆ ತಮ್ಮ ಮುಂದೆ ಬದಲಾಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಅಮ್ಮನಂತಹ ಹೆಂಡತಿ ಅವನಿಗೆ ಸಿಗಲಾರಳೆಂಬುದಂತೂ ಖಂಡಿತ.
‘ಚಿತ್ರಗುಪ್ತªನ ಸನ್ನಿಧಿಯಲ್ಲಿ’ ಭಿನ್ನ ಕಥಾವಸ್ತುವುಳ್ಳ ಕಥೆ. ಇಲ್ಲಿ ಸಾವಿನಾಚೆಗಿನ ಕತ್ತಲ ಲೋಕದ ಭಯಾನಕ ಚಿತ್ರಣವಿದೆ. ಮಹಾನ್ ಕವಯಿತ್ರಿ ಎಮಿಲಿ ಡಿಕನ್ ಸನ್ ಚಿತ್ರಿಸಿದ ಸಾವು ಕರೆದೊಯ್ಯುವ ಸುಂದರ ಜಗತ್ತಿಗೂ ಇಲ್ಲಿಗೂ ಎಂಥ ಅಜಗಜಾಂತರ ವ್ಯತ್ಯಾಸ ! ಬಹುಶಃ ಇದು ನಮ್ಮ ವಾಸ್ತವ ಜಗತ್ತಿನದ್ದೇ ಒಂದು ಮುಖವಿರಲೂ ಬಹುದು. ಅಸ್ತಿತ್ವವಾದಿ ಲೇಖಕರಾದ ಕಾಮೂ-ಕಾಫ್ಕಾರಿಗೆ ಇಂಥ ಜಗತ್ತನ್ನು ಕಲ್ಪಿಸಿಕೊಳ್ಳುವುದೆಂದರೆ ತುಂಬ ಪ್ರೀತಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ವತಂತ್ರರೆನ್ನಿಸಿಕೊಂಡೂ ದಮನಕ್ಕೆ ಗುರಿಯಾಗಿ ಬಂಧನದಲ್ಲಿ ಸಿಲುಕುವ ಸಾಮಾನ್ಯರ ದುರವಸ್ಥೆಯ ಚಿತ್ರಣ ಇದಾಗಿರಬಹುದು. ‘ ಗಡಿಯಾರದಡಿಯಲ್ಲಿ’ ವೈದ್ಯಕೀಯ ತಪಾಸಣೆ ಮಾಡಿಕೊಂಡ ವ್ಯಕ್ತಿ ಯ ಸಾವಿಗೆ ಡಾಕ್ಟರ್ ಏಳೇ ದಿನಗಳ ಗಡುವು ನೀಡಿದಾಗ ಆತ ಆ ಅವಧಿಯಲ್ಲಿ ಏನೇನು ಮಾಡುತ್ತಾನೆ ಎಂಬ ಕಥೆ. ಇದೇ ವಸ್ತುವನ್ನು ಹೊಂದಿರುವ ಇತರ ಕಥೆಗಳಿಗಿಂತ ಇದು ಹೇಗೆ ಭಿನ್ನವಾಗಿದೆ ಮತ್ತು ವಿಲಕ್ಷಣವಾಗಿದೆ ಎಂದರೆ ಇಲ್ಲಿ ಅವನ ಭಾವನೆಗಳು ಕೆಲಸ ಮಾಡುವುದೇ ಇಲ್ಲ. ಬರೇ ಯೋಚನೆಗಳು, ಯೋಜನೆಗಳು, ಸಿದ್ಧತೆಗಳು ಮತ್ತು ವ್ಯಾವಹಾರಿಕ ಕ್ರಿಯೆಗಳು ಅಷ್ಟೇ.. ಆಧುನಿಕ ವ್ಯಾವಹಾರಿಕ ಜಗತ್ತಿನ ಓಟ ಅವನಿಗೆ ಇದನ್ನು ಕಲಿಸಿದೆಯೇ? ಒಟ್ಟಿನಲ್ಲಿ ನಿರ್ಲಿಪ್ತಿಯನ್ನು ಸಾಧಿಸಿದ ಕಥೆಯಿದು.
‘ಮಾರ್ಜಾಲದ ಬಲೆಯಲ್ಲಿ’ ಹೆಣ್ಣೊಬ್ಬಳಿಂದ ವಂಚಿತನಾದ ಒಬ್ಬ ಗಂಡಸು, ಬದುಕು ಒಡ್ಡುವ ಮೋಸದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಹೇಗೆ ವಿಲವಿಲಿಸುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಅವನ ಮನಸ್ಸಿನೊಳಗಿನ ಸಂಘರ್ಷದ ಪ್ರತೀಕವಾಗಿ ಬರುವ ಬೆಕ್ಕು ಅವನ ಸಾಕ್ಷಿಪ್ರಜ್ಞೆಯಾಗಿ ವರ್ತಿಸುತ್ತದೆ. ತಾಳ್ಮೆ ಕಳೆದುಕೊಂಡಾಗ ಅವನು ಅದರ ಮೇಲೆ ಅನುಮಾನ ಪಟ್ಟು ಅದನ್ನು ಹೊಡೆದು ಕೂಡಿ ಹಾಕುತ್ತಾನೆ. ಆದರೆ ಒಬ್ಬಂಟಿತನದ ನೋವಿನಿಂದ ನಲುಗುವ ಅವನಿಗೆ ಉದ್ದಕ್ಕೂ ಸಾಥ್ ನೀಡುವುದು ಆ ಬೆಕ್ಕು ಮಾತ್ರ. ಅದರೊಂದಿಗೆ ರಾಜಿ ಮಾಡಿಕೊಳ್ಳುವುದೊಂದೇ ಅವನಿಗಿರುವ ದಾರಿ.
ಸೂಕ್ಷ್ಮಜೀವಿಯಾದ ಇರುವೆಯ ಕುರಿತು ಕುತೂಹಲ ತಾಳುವ ಸಾಧಕ ಎಂಬ ವ್ಯಕ್ತಿಯ ಅನುಭವಗಳ ವಿವಿಧ ಮುಖಗಳ ಚಿತ್ರಣ ‘ಸುಮ್ಮನೆ ಇರುವೆ ಕಚ್ಚಿಸಿಕೊಳ್ಳುವುದೆಂದರೆ’. ಯಾರ ಗಮನಕ್ಕೂ ಬೀಳದ ಇರುವೆಯೆಂಬ ಪ್ರಾಣಿ ತನ್ನ ಜೀವನದಲ್ಲಿ ಎಂಥೆಂಥ ಪಾತ್ರಗಳನ್ನು ವಹಿಸಬಹುದು ಎಂಬ ಭ್ರಮೆಯೊಳಗೆ ತೊಳಲಾಡುವ ಸಾಧಕನ ವಿಕ್ಷಿಪ್ತ ಮನಸ್ಥಿತಿ ಒಂದು ಭೀಭತ್ಸ ಲೋಕವನ್ನೇ ತೆರೆದಿಡುತ್ತದೆ. ಈ ಕಥೆಯಲ್ಲಿ ‘ಇಕೋ ಫೆಮಿನಿಸಂ’ ಕೆಲಸ ಮಾಡಿದೆಯೇನೋ ಅನ್ನಿಸುತ್ತದೆ. ಮನುಷ್ಯನ ಕಣ್ಣಿಗೆ ಸುಲಭವಾಗಿ ಬೀಳದ ಇರುವೆ ನಿಸರ್ಗದ ಒಂದು ಅವಿಭಾಜ್ಯ ಅಂಗ. ಮನುಷ್ಯನಿಗೋ ಇಡೀ ನಿಸರ್ಗದ ಮೇಲಿನ ಹಕ್ಕು ತನ್ನೊಬ್ಬನದೇ ಎನ್ನುವ ಅಹಂಕಾರ. ಇರುವೆಯನ್ನು ಹುರಿದು ತಿನ್ನುವ ಈರ್ಯಾ ಮತ್ತು ಅವನ ಕುಟುಂಬ, ಇರುವೆಗಳು ಮುತ್ತಿz ಬೆಲ್ಲದ ಡಬ್ಬದ ಸುತ್ತ ಡಿ.ಡಿ.ಟಿ. ಹಾಕಿ ಕೊಲ್ಲುವ ಅಪ್ಪ ಒಂದೆಡೆಯಾದರೆ ಕರಿ ಇರುವೆಗಳು ಶುಭವೆಂದು ತಿಳಿದು ಅವುಗಳಿಗೆ ಸಕ್ಕರೆ ಹಾಕುವ ಅಮ್ಮ, ಮತ್ತು ಗೊತ್ತಿಲ್ಲದೆ ಇರುವೆ ತಿಂದದ್ದಕ್ಕೆ ಸಂಕಟ ಪಟ್ಟು, ಭಯ ಪಟ್ಟು ಭ್ರಮೆಗೊಳಗಾಗಿ ದುಃಸ್ವಪ್ನಗಳನ್ನು ಕಾಣುವ ಸಾಧಕ ಇನ್ನೊಂದೆಡೆ. ಇರುವೆಗಳ ಇರುವಿಕೆಯ ಪ್ರಶ್ನೆಯೇ ಕಥೆಯನ್ನು ತುಂಬಿಕೊಂಡಿದೆ.
ನಾಟಕೀಯ ತಂತ್ರಗಳನ್ನೊಳಗೊಂಡ ಕೊನೆಯ ಕಥೆ ‘ಅ ಸ್ಮಾಲ್ ವರ್ಲ್ಡ್’ದಲ್ಲಿ ಜಾಗತೀಕರಣಗೊಂಡ ಈ ಜಗತ್ತಿನಲ್ಲಿ ಪಾಶ್ಚಾತ್ಯ ನಾಗರೀಕತೆಗೆ ಮರುಳಾಗಿ ಅದರತ್ತ ವಾಲುವ ಇಂದಿನ ಯುವಕ-ಯುವತಿಯರ ಲೈಂಗಿಕ ಬದುಕು, ಅವರ ಮದುವೆಯ ಕುರಿತು ಹೆತ್ತವರು ಪಡುವ ಆತಂಕದ ಚಿತ್ರಣವಿದೆ. ತೀರಾ ಯಾಂತ್ರಿಕ ಮತ್ತು ವ್ಯಾವಹಾರಿಕ ಬದುಕಿಗೆ ಒಗ್ಗಿಕೊಂಡವರು ಇಂದಿನ ಯುವಕ ಯುವತಿಯರು. ಭಾವನೆಗಳೇ ಇಲ್ಲದ ಲೆಕ್ಕಾಚಾರದ ಬದುಕು. ಇಲ್ಲಿ ಕಥೆಯ ವಿನ್ಯಾಸವೂ ಅದಕ್ಕೆ ತಕ್ಕ ಹಾಗೆಯೇ ಇದೆ. ನಿರೂಪಣೆಗಿಂತ ಹೆಚ್ಚು ನಿರ್ವಚನಕ್ಕೇ ಪ್ರಾಶಸ್ತ್ಯ.
ಜಯಶ್ರೀಯವರ ಹೆಚ್ಚಿನ ಕಥೆಗಳಲ್ಲೂ ಸ್ತ್ರೀಸಂವೇದನೆ ಕಂಡೂ ಕಾಣದಂತೆ ಹಾಸುಹೊಕ್ಕಾಗಿರುವುದನ್ನು ಕಥೆಗಳನ್ನು ಸ್ತ್ರೀವಾದಿ ನೆಲೆಯಿಂದ ಓದಿದರೆ ಹುಡುಕಿ ತೆಗೆಯಬಹುದು. ಮುತ್ತಿನಡ್ಡಿಗೆಯ ನಾಯಕಿಯಲ್ಲಿ ಮಾನಸಿಕ ಜರ್ಝರಿತ ಸ್ಥಿತಿಯ ಜತೆಗೆ ಆಕೆಯ ಮೇಲೆ ನಡೆಯುವ ದೈಹಿಕ ದೌರ್ಜನ್ಯವೂ ಸ್ಪಷ್ಟವಾಗಿ ಕಾಣಿಸುವಂಥದ್ದು. ಆದರೆ ಉಳಿದ ಕಥೆಗಳಲ್ಲಿ ಅದು ನೇರವಾಗಿ ಕಾಣುವುದಿಲ್ಲ. ಒಂದು ದೃಷ್ಟಿಯಿಂದ ಸುನಂದಾ, ಸುಕನ್ಯಾ, ವಿಮಲಾ ಎಲ್ಲರೂ ಒಂದೇ ಅಚ್ಚಿನಲ್ಲಿ ತೆಗೆದ ಎರಕಗಳಂತೆ ಒಳಗೊಳಗೇ ನೊಂದುಕೊಳ್ಳುವ ಸ್ತ್ರೀಯರು. ಅವರ ದಾಂಪತ್ಯದಲ್ಲಿ ಹೊರನೋಟಕ್ಕೆ ಎಲ್ಲವೂ ಸರಿಯಾಗಿದೆಯೆಂದು ಕಂಡರೂ ಪರಂಪರೆಯಿಂದ ಸಾಗಿ ಬಂದ ಪಿತೃ ಸಂಸ್ಕೃತಿಯ ದಬ್ಬಾಳಿಕೆ, ಯಾಜಮಾನ್ಯ, ಅಹಂಕಾರ, ಹೆಂಡತಿಯನ್ನು ಗುಲಾಮಳಂತೆ ನಡೆಸಿಕೊಳ್ಳುವ ಗಂಡಂದಿರ ಪರಿ ಸೂಕ್ಷ್ಮ ಓದುಗರ ಕಣ್ಣು ತಪ್ಪಿಸಿವುದಿಲ್ಲ.
ಮುನ್ನುಡಿ ಬರೆದ ಟಿ.ಪಿ. ಅಶೋಕ್ ಅವರು ಕಥೆಗಳ ಬಗ್ಗೆ ಪ್ರಬುದ್ಧ ಮತ್ತು ವಿದ್ವತ್ಪೂರ್ಣ ವಿಮರ್ಶೆಯನ್ನು ಬರೆದಿದ್ದಾರಾದರೂ ಕಥೆಗಳಲ್ಲಿ ಅಡಗಿರುವ ಹೆಣ್ಣಿನ ಒಳಮನಸ್ಸಿನ ಕೂಗನ್ನು ಗಮನಿಸಿಲ್ಲ. ಅವರ ಈ ವಾಕ್ಯವೇ ಅದಕ್ಕೆ ಸಾಕ್ಷಿ : ‘ಗಂಡ ಹೆಂಡತಿ ನಡುವೆ ಇರುವ ಇಕ್ಕಟ್ಟು’ ಎನ್ನುತ್ತಾರೆ. ಗಂಡ ಹೆಂಡತಿಯನ್ನು ಹೈಜಾಕ್ ಮಾಡುತ್ತಲೇ ಇರುವಾಗ, ಹೆಂಡತಿ ಸದಾ ಭಯಪಡುತ್ತ ಬದಿಗೆ ಸರಿಯುತ್ತಲೇ ಇರುವಾಗ ಇಕ್ಕಟ್ಟಿನ ಪ್ರಶ್ನೆ ಎಲ್ಲಿ ಬಂತು? ಕರೆಗಂಟೆ ಕೇಳಿದಾಗ ಒಂದು ಬಾಗಿಲು ತೆಗೆಯಲಿಕ್ಕೆ ಹೋಗಲೂ ಅವನಿಂದ ಆಗುವುದಿಲ್ಲ. ಅಷ್ಟಕ್ಕೂ ಅವನು ಮಾಡುತ್ತಿರುವ ಕೆಲಸವೆಂದರೆ ಟಿ.ವಿ.ಯ ಮುಂದೆ ಕುಳಿತಿರುವುದು. ಅದರ ಮೇಲೆ ಹೆಂಡತಿಯ ಮೇಲೆ ರೇಗುತ್ತಾನೆ. ( ಸಹಿಷ್ಣುತೆ… ಕಥೆಯಲ್ಲಿ.)
ಜಯಶ್ರೀಯವರದ್ದು ಕನ್ನಡ ಸಾಹಿತ್ಯದಲಿ ಭದ್ರಸ್ಥಾನ ಪಡೆಯಲು ಅರ್ಹತೆಯಿರುವಂಥ ಕಥೆಗಳು. ವಾಸ್ತವ ಜಗತ್ತಿನ ಕಹಿ, ಕ್ರೌರ್ಯ, ಭಾವನಾಶೂನ್ಯತೆ, ಸಂಬಂಧಗಳ ಅರ್ಥಹೀನತೆ, ಬದುಕಿನ ಉದ್ದೇಶರಾಹಿತ್ಯಗಳಿದ್ದುಕೊಂಡೂ ಎಲ್ಲವನ್ನೂ ಎದುರಿಸಿ ಬದುಕುವ ಛಲವುಳ್ಳ ಪಾತ್ರಗಳುಳ್ಳ ಅಸ್ತಿತ್ವವಾದಿ ನೆಲೆಯ ಕಥೆಗಳು. ಸಮೃದ್ಧವಾದ ತಮ್ಮ ಜೀವನಾನುಭವ ಗಳನ್ನು ಓದು-ಅವಲೋಕನವಗಳ ಮೂಲಕ ಶ್ರೀಮಂತಗೊಳಿಸಿ ಕಥೆಗಳ ಮೂಲಕ ಅಭಿವ್ಯಕ್ತಗೊಳಿಸುತ್ತ ಕಥನಕ್ರಮದ ವಿವಿಧ ಆಯಾಮಗಳನ್ನು ಗಮನಿಸಿ ಪ್ರಯೋಗಕ್ಕಿಳಿಸುತ್ತ ಅವರು ಬಹಳ ದೂರ ಸಾಗಿ ಬಂದಿದ್ದಾರೆ. ಬಾಲ್ಯದ ನೆನಪುಗಳತ್ತ ಮತ್ತೆ ಮತ್ತೆ ಹೊರಳುವ ಅವರ ಕಥೆಗಳಲ್ಲಿ ತುಂಬಿರುವ ಮಲೆನಾಡಿನ ಮಣ್ಣಿನ ಸೊಗಡು ಕಥೆಗಳ ಅಂದವನ್ನು ಹೆಚ್ಚಿಸಿದೆ.

‍ಲೇಖಕರು avadhi

17 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading