ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಪುಸ್ತಕದ ಖುಷಿಗೆ ಹಳೇ ಕವಿತೆ!

ಮಮತಾ ಜಿ ಸಾಗರ ಅವರ ಮೂರನೇ ಕಾವ್ಯ ಸಂಕಲನ ಹೊರಬಂದಿದೆ. ಈ ಸಂದರ್ಭದಲ್ಲಿ ಅವರ ಹಳೆಯ ಕವಿತೆಯೊಂದನ್ನು ಇಲ್ಲಿ ಕೊಡುತ್ತಿದ್ದೇವೆ. ಇದು ಅವರು ಸುಮಾರು ೨೦ ವರ್ಷಗಳಷ್ಟು ಹಿಂದೆ ಬರೆದದ್ದು.
* * *

manas.jpg

 ವೃದ್ಧಿ

ಮಮತಾ ಜಿ ಸಾಗರ್

ಮುತ್ತಿ ಕಿತ್ತುವ ಕಿಚ್ಚು
ಬಿಚ್ಚಿಕೊಳ್ಳುವ ತೊಗಟೆ
ತಳದ ಕಂದರದಲ್ಲಿ ಮುಚ್ಚುಕೊಳ್ಳುವ ಕೊಳಕು
ಬಚ್ಚಿಟ್ಟ ಬೆಳಕು!
ನರಮಂಡಲದ ಚಕ್ರವ್ಯೂಹದ ಅಭಿಮನ್ಯು
ರುಧಿರ ಸ್ವರೂಪಿ, ಭ್ರೂಣರೂಪಿ.
ತಮದಹನ, ಮದನದಹನ, ದಹನ
ಆವಾಹನ!!
ಕರ್ಮಣ್ಯೇ ವಾಧಿಕಾರಸ್ಥೆ?
ರಮಿಸಬೇಡವೊ ನನ್ನ;
ಸಾರವಿಲ್ಲದ ಬೀಜ
ಅಳಿದುಳಿದ ಭ್ರೂಣಗಳ ಹತ್ಯೆ.
ನೆತ್ತಿಯ ಮೇಲೆ ಸುತ್ತಿ ಸುತ್ತಿ
ಉರಿಬಿಸಿಲಲ್ಲೂ ಬೆನ್ನತ್ತಿ ಬರುತಿದೆ ನೋಡ,
ರಕ್ತ ಹೆಕ್ಕುವ ರಣಹದ್ದು.

ಕಳಚಿಕೊಂಡ ಕ್ರಿಯೆಗಳಿಗೆ
ಮತ್ತೆ ಅಪ್ಪಿಕೊಳ್ಳೋಣ ಬಾರ!
ಉಸಿರ ಬೆರೆಸಿ
ಅಂತರಾಳದ ಕತ್ತಲಲ್ಲಡಗಿದ
ಬೆಳಕ ಮಡಿಕೆಗಳ ಬಿಚ್ಚೋಣ ಬಾರ.
ಹುಗಿದಿಟ್ಟ ಸಪ್ತ ಸೌಧಗಳ ಅಗೆದಗೆದು
ಪುನಃ ಕಟ್ಟೋಣ ಬಾರ.

ತಳದ ಕಂದರದಿಂದ ಗೊಬ್ಬರದ ಸಾರ ಹೊತ್ತು,
ಬೀಜ ಸಸಿಯಾಗಿ, ಬೆಳಕ ನೀರೆರೆದು
ಹೊರಬಂದ ಬಳ್ಳಿ ಹೊಳೆಯುತಿದೆ
ಬೆಳಕ ಚೆಲ್ಲಿ.
ಭ್ರೂಣಗಳು ಫಲವತ್ತಾಗಿ, ಮಗು ಬೆಳೆದು,
ಹೆರಬೇಕು.
ಎಲ್ಲೆಲ್ಲೂ ಕೇಕೆ ಹಾಕುವ
ತೂಗು ತೊಟ್ಟಿಲ ಗೆಜ್ಜೆ ಸಪ್ಪಳ,
ಅಜ್ಜ ಮುತ್ತಜ್ಜರ ಪುನರಾವೃತ್ತಿ,
ಕರ್ಮಗಳಿಗೆ “ಅರ್ಥ” ಸಿಕ್ಕಾಗ
ಅಜ್ಜ ಮುತ್ತಜ್ಜರ ಪುನರಾವೃತ್ತಿ.

‍ಲೇಖಕರು avadhi

19 October, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading