ಹೊಸ ದೇಶ ಹೊಸ ಹೆಸರು
-ಸವಿತಾ ನಾಗಭೂಷಣ
ಗಿಡಗಂಟಿ ಬೆಳೆದ ಸೈಟನ್ನು ಖಾಲಿ
ಮಾಡುವಂತೆ ಊರಿಗೆ ಊರನ್ನೇ, ಅಲ್ಲಿನ ಮನುಷ್ಯರನ್ನೂ ಅವರು
ಬರ್ಬರವಾಗಿ ಹತ್ಯೆಗೈದು
ಗುಡಿಸಿ ಹಾಕಿದರು
ಆಗ ಮಿಕ್ಕವರೇನು ಮಾಡುತ್ತಿದ್ದರು?
ಮಂಡಿಸುತ್ತಿದ್ದರು, ಖಂಡಿಸುತ್ತಿದ್ದರು
ಆಗ ಮಿಕ್ಕವರೇನು ಮಾಡುತ್ತಿದ್ದರು?
ವಿಷಾದ, ಸಂತಾಪ, ದಿಗ್ಭ್ರಮೆ
ಶೋಕ ವ್ಯಕ್ತಪಡಿಸುತ್ತಿದ್ದರು
ಶಾಂತಿ ಮಾತುಕತೆಗೆ
ಜಗತ್ತು ಸಜ್ಜಾಗುತ್ತಿತ್ತು
ಹೊಸ ಊರಿನ ನಕಾಶೆ ತಯಾರಾಗುತ್ತಾ ಇತ್ತು, ಜಗಮಗಿಸುವ ಸೌಧಗಳು, ರೆಸಾರ್ಟ್ಗಳು, ಮೋಜು ಮಸ್ತಿಯ ತಾಣಗಳು
ಮಾಲ್ ಗಳು….
ಭರಪೂರ ವ್ಯಾಪಾರ
ಹಲವರು ಪಾಲುದಾರರು
ಊರಿನ ಸುತ್ತಲೂ ಮುಳ್ಳಿನ ಬೇಲಿಗಳು, ಎತ್ತರೆತ್ತರ ಗೋಡೆಗಳು
ಈ ಹಿಂದೆ ಅಲ್ಲಿ ಬಾಳಿ ಬದುಕಿದ್ದ
ರಕ್ತ ಮಾಂಸ ಮೂಳೆ ಮಜ್ಜೆಯ
ಮನುಷ್ಯರೇ ಈಗ ಇಟ್ಟಿಗೆ
ಮರಳು ಕಲ್ಲು ಕಬ್ಬಿಣ….
ಇದೀಗ ಭೂಪಟದಲ್ಲೊಂದು
ಹೊಸ ದೇಶ ಹೊಸ ಹೆಸರು
ಹೊಸ ನಾಗರೀಕತೆ !!






0 Comments