ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊರಟು ನಿಂತಿದ್ದೇನೆ..

ಅನಿತಾ ಪಿ. ಪೂಜಾರಿ

ಕತ್ತಲ ಪರದೆಯ ಸರಿಸಿ
ಬೆಳಕಿನ ಹೊಸಿಲಲಿ ಬಂದು ನಿಂತಿದ್ದೇನೆ

ಹಾಗೆಯೇ ನಿಲ್ಲುವ ಹಾಗಿಲ್ಲವಲ್ಲಾ
ಒಳ್ಳೆತನದ ಮನಸುಗಳನೇ ಮೆಚ್ಚಿ
ಜೊತೆಗಾನಿಸಿಕೊಂಡು ಮುನ್ನಡೆಯುತ್ತಿರುವಲ್ಲಿ
ಹಿಂದೆಂದೂ ಅರಿವಿಗೆ ಬಂದಿರದ ಕೆಲವೊಂದು
ವೇಷ ಕಳಚಿ ಬಣ್ಣ ಅಳಿಸಿದ ಮುಖಗಳು
ಸರಿದು ಹೋಗುತಿವೆ ಎದುರಿನ ಬೀದಿಯಲಿ
ಬೆಳಕಿನ ಬಾಗಿಲಲಿ ಅಡ್ಡ ನಿಂತೂ ನಿಲ್ಲದ ಹಾಗೆ
ನಟಿಸಿ ನಟಿಸಿ ಕಾಯವಾಗಿರುವವರ
ಕಂಡೂ ಕಾಣದ ಹಾಗೆ ಹೊರಟು ನಿಂತಿದ್ದೇನೆ

ಸುತ್ತ ಮುತ್ತಲಿನ ನೆಲದ ಗುಣವನು
ಅರಿತು ಮುಂದಡಿಯಿಡುತಿದ್ದೇನೆ
ತಿರುವು ಮುರುವುಗಳ ನಡುವಿನ ದಾರಿಯಲಿ
ಅದೆಷ್ಟೊ ತಿರುಚಿದ ಕಥೆಗಳು ಕಣ್ಣಿಗೆ ರಾಚಿಕೊಳ್ಳುತಿವೆ
ಕೇಳಿಯೂ ಕೇಳದ ಹಾಗೆ ಹೊರಟು ನಿಂತಿದ್ದೇನೆ

ಬಿದ್ದ ಗೀರಿನ ಸೆಳೆತ ಕರುಳ ಕಿವುಚಿದಾಗ
ಅರೆಬರೆ ಗಾಯಗಳಿಗೆ ಮುಲಾಮು ಹಚ್ಚಿ
ಮನಸು ಚೂರಾಗಲು ಬಿಡದೆ ನಗುತಲೇ
ನ್ಯಾಯಕ್ಕಾಗಿ ಚಾಚಿದ ಕೈಯನು ಇಳಿಬಿಟ್ಟು
ನನ್ನದೇ ದಾರಿಯಲಿ ಹೊರಟು ನಿಂತಿದ್ದೇನೆ

ಎದೆ ಬಾಗಿಲಲಿ ಹಚ್ಚಿಟ್ಟ ಶುದ್ಧ ದೀಪದ ನಿರಂತರತೆಗೆ
ತಮವು ಮೆಲ್ಲನೆ ತೆರೆಮರೆಗೆ ಸರಿದು
ಬೆಳಕಿನರಿವಿನೊಳು ಹೊಂದಿಕೊಳ್ಳುತಲಿದೆ
ಹಿಂದಿನದೇ ಹುಮ್ಮಸ್ಸಿನಲಿ ಹೊರಟು ನಿಂತಿದ್ದೇನೆ
ಇರುವಷ್ಟು ದಿನ ಬಾಳು ನಿರಂತರವಾಗಿರಲು

ಅನಿತಾ ಪಿ ಪೂಜಾರಿ ತಾಕೊಡೆ ಮುಂಬಯಿಯ ಪ್ರತಿಭಾವಂತ ಕವಯಿತ್ರಿ. ದಸರಾ ಕವಿ ಸಮ್ಮೇಳನದಲ್ಲಿ( ಮೈಸೂರು) ಕವಿತಾ ವಾಚನ ಮಾಡಿದ್ದಾರೆ. ಮುಂಬಯಿ ವಿವಿ ಕನ್ನಡ ಎಂಎ ಯಲ್ಲಿ ಪ್ರಥಮ ರಾಂಕ್ ಚಿನ್ನದ ಪದಕ ಪಡೆದಿರುವರು. ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.ಕೃತಿಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಹಲವು ಬಹುಮಾನ ಪಡೆದಿರುವರು.

‍ಲೇಖಕರು Avadhi

11 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading