ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..’ – ದೀಪಾ ಗಿರೀಶ್

ದೀಪಾ ಗಿರೀಶ್


ಪ್ಯಾಂಟಿನೊಳಕ್ಕೆ ಕಾಲತೂರಿಸಿ
ಬಕಲ್ಲು ಬಿಗಿದು
ಕ್ರಾಪು ತೀಡಿ
ಹೆಚ್ಚೆಂದರೆ ಮುಖಕ್ಕೆ ನಾಕು ಹನಿ ನೀರು
ಯಾರಾದರೂ ಹೇಳಬಲ್ಲರೇ
ಏನೋ ನಡೆದಿರಬಹುದೆಂದು
ನಿನ್ನ ಕಂಡು..?
 
ತಲೆಯಿಂದ ಮಿಂದೆದ್ದು
ಪಿನ್ನು, ಬಾಚಣಿಗೆ, ಪೌಡರು, ಕ್ರೀಮು
ಉಟ್ಟಸೀರೆಯ ಒಪ್ಪಮಾಡಿ
ಏನಮಾಡಿದರೇನು
ಮರೆಸದಾದೆ ನಾನು
ನುಡಿಯುವುದು ನನ್ನ ಇರುವಿಕೆಯೇ ಸಾಕ್ಷಿ!
 
ಹೇಳಿಬಿಟ್ಟೆ ನೀನು
ಈಗ ಕಷ್ಟವಲ್ಲವಲ್ಲವಂತೆ
ಮಾತ್ರೆಯಲೇ ಕರಗಿಸಿಬಿಡುತ್ತಾರೆ..
ನಿನಗೇನೋ ಗೊತ್ತು
ಬಳೆಶಾಪಿನಿಂದ ಕೊಂಡ ಕರಿಮಣಿ ಸರ
ನನ್ನ ಮಾನ ಉಳಿಸಿದೆ ಎಂದು..?
ಪಕ್ಕದಲಿ ಕೂತ ಮೂರುತಿಂಗಳ ಹಸಿಬಾಣಂತಿ ಕೇಳುತಾಳೆ
ಏನಾಗಿದೆ ನಿಮಗೆ.. ಚೆಕ್ಅಪ್ಪಿಗಾ..?
ಚೆಕ್ಅಪ್ ಮಾಡಲೇನೂ ಉಳಿದಿಲ್ಲ
ಇದ್ದದ್ದ ಬಸಿದುಬಿಡಲು ಬಂದಿದ್ದೇನೆಂದು
ಹೇಗೋ ಹೇಳಲಿ ನಾನವಳಿಗೆ
 
ಆಸ್ಪತ್ರೆಗೆ ಸೇರಿದರೆ
ಜನಬಂದು ನೋಡುತ್ತಾರೆ..
ಹಣ್ಣು-ಬೊಕ್ಕೆ ತರುತ್ತಾರೆ
ಆಸೆಯಾಗುತ್ತದೆ ಪಕ್ಕದ ಬೆಡ್ಡಿನವರ ಕಂಡು
ಸಧ್ಯ ಆಸೆ ಒತ್ತಟ್ಟಿಗಿರಲಿ
ಪೀಡೆಕಳೆದರೆ ಸಾಕು
ಎನ್ನುವ ನಿನ್ನ ಬೆಂಕಿ ಉಗುಳುವ ಕಣ್ಣು
ನೆನಪಿಸಿದವು ಅಂದು ರಮಿಸಿದವ ಇವನಾ..?
 
ದೇಹದ ಗಾಯ ಮಾಯೀತು
ಮತ್ತೆ ಹೂವು ಅರಳೀತು
ನಾನೂ ನಕ್ಕೇನು
ಮುಂದೊಂದು ದಿನ
ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..
 

‍ಲೇಖಕರು avadhi

6 March, 2013

11 Comments

  1. Beluru Raghunaandan

    ದೀಪ ಅವರೇ ನಿಮಗೆ ಅಭಿನಂದನೆಗಳು…….
    ನೀವು ಬಳಸುವ ಲೈಂಗಿಕ ಪ್ರತಿಮೆಗಳು ಸಂಕೇತಗಳು ರೂಪಕಗಳು ನಿಜಕ್ಕೂ ಹೆಚ್ಚು ಕವಿತೆಯನ್ನು ವಾಸ್ತವದಲ್ಲಿಡುತ್ತದೆ.ಮತ್ತು ನೀವು ಕವಿತೆಯ ಮೂಲಕ ಸ್ತ್ರೀ ಸಂವೇದನೆಯ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತುವುದು ಸರಿಯ ಜೊತೆಗೆ ಅರ್ಥಪೂರ್ಣ.ಹೀಗೆ ಮುಂದುವರೆಯಿರಿ.

  2. chalam

    ಶೋಷಣೆ ಕಾವ್ಯವಾದಾಗ ಅದು ಸುಂದರವಾಗುವುದು ಹೇಗೆ ಅಂತ ಯೋಚಿಸುವಂತೆ ಮಾಡುತ್ತದೆ……ಅಸಹಾಯಕತೆಯ ಉಸಿರು ಎದೆಗೆ ತುಂಬಿಕೊಳ್ಳುತ್ತದೆ.ಚೆಂದದ ನಿರೂಪಣೆ.

  3. Vasuki

    Touching!

  4. savitri

    ಯೋಚನೆಗೆ ಹಚ್ಚುತ್ತದೆ ಕವನ…

  5. -ರವಿ ಮೂರ್ನಾಡು,ಕ್ಯಾಮರೂನ್

    ಇದಕ್ಕೆ “ಮೌನ ಲಯ” ಸಂವಾದ ಅನ್ನುತ್ತೇವೆ. ಚೆನ್ನಾಗಿದೆ. ಎಲ್ಲೋ ಒಂದು ಪಿಸುಮಾತು , ಅದು ಆನಂದವೂ ಹೌದು ಅನ್ನಿಸಿತು. ಇನ್ನೊಂದು ಮೌನ ಪ್ರವರ್ತನೆಯಿದೆ ಇದೆ.
    ನೋವು-ನಲಿವು ಜೊತೆಗೂಡಿ ಹೆಣೆದ ಶೂನ್ಯ ಪ್ರದೇಶದಿಂದ ಹೊರಬರಲಾಗದ ಸಂಚಲನ ಎಂದೂ ಒಂದು ಕಡೆ ಭಾವಿಸುತ್ತೇನೆ. ಏನೋ ಅರಿವಿನ ಇಕ್ಕಳ ಸಿಗದ ಭಾವವೊಂದು ಕೊಂಬೆಗೆ ಜೋತ ಹಣ್ಣಿನಂತೆ ನೇತಾಡುತ್ತಿದೆ.
    ಇನ್ನು ಆಂಗ್ಲ ಪದಗಳು ಕಡಿಮೆಯಾಗಬೇಕಿತ್ತು ಅನ್ನಿಸಿತು. ನನಗೆ ಇದುವರೆಗೆ ” ಪೌಡರು” ಅನ್ನುವ ಪದಕ್ಕೆ ಕನ್ನಡ ಶಾಸ್ತ್ರೀಯ ಪದ ಸಿಗಲಿಲ್ಲ. ನನ್ನ ಒಂದು ಕವಿತೆಯಲ್ಲಿಯೂ ಅನಿವಾರ್ಯವಾಗಿ ಇದಕ್ಕೆ ಗುಲಾಮನಾಗಿದ್ದೇನೆ.

  6. ಚಂದಿನ

    ಕವಿತೆ ಇಷ್ಟವಾಯಿತು…
    ಗರ್ಭಪಾತ
    ಮುಗ್ಧತೆಯ ಸುತ್ತಿಕೊಂಡು
    ನಾಳೆಯು ಬರುವಂತೆ
    ನಿನ್ನ ಬೆಚ್ಚಗಿನ ಗರ್ಭದೊಳಗೆ
    ನಾನು ಬಂದೆ
    ಅಮ್ಮ….
    ಅದು ನಿನ್ನ, ಅಥವಾ ನನ್ನ
    ಆಯ್ಕೆಯೊಂದಿಗೆ ಅಲ್ಲ
    ಸಮಯ ನಿರ್ಧರಿಸಿದಂತೆ
    ಸಮಯಕ್ಕೆ ತಕ್ಕಂತೆ ಬದುಕಲು
    ನಮ್ಮ ಮನುಕುಲದ ಮರದಲ್ಲಿ
    ಆದರೆ ಮನುಷ್ಯ ಪ್ರೀತಿ
    ದೇಹವಾಗಿ, ಪದಗಳಾಗಿ ಬೆಳೆಯುವ ಮುನ್ನವೇ
    ಅಪರಿಪೂರ್ಣ ಸೃಷ್ಟಿಯೆಂಬ –
    ತೀವ್ರ ರಕ್ತಸ್ರಾವ ನನ್ನನ್ನು
    ಪಂಚಭೂತಗಳಲ್ಲಿ ಲೀನವಾಗಿಸಿತು.
    ಮೂಲ : ಯೂನೂಸ್ ಪೀರ್ಬೊಕಸ್
    ಕನ್ನಡಕ್ಕೆ: ಚಂದಿನ
    Abortion
    I came as tomorrow
    Swaddled in innocence
    To your warm womb
    Mother……
    Without your choice
    Or mine
    Destined to update
    With time
    Our human tree
    But before love
    Grew into flesh and words
    What is unfinished creation-
    A precipitation of blood
    Became my transcendence.
    yoonoos peerbocus
    Mauritius

    • Jayalaxmi Patil

      ಚಂದಿನ, ಚೆಂದದ ಅನುವಾದ.

  7. ಪ್ರಸಾದ್.ಡಿ.ವಿ.

    ಸ್ತ್ರೀ ಮನದ ಸೂಕ್ಷ್ಮ ಸಂವೇದಿತನದ ಎಳೆಯೊಂದನ್ನು ಹೊರಗೆಳೆದಿದೆ ಕವಿತೆ. ಹೆಣ್ಣನ್ನು ಕೇವಲ ತಮ್ಮ ಭೋಗದ ವಸ್ತುವಾಗಿ ಬಳಸಿಕೊಳ್ಳುವವರ ಮಾತು ಬರಿದಾಗಿಸಿಬಿಡಬಹುದು ನಿಮ್ಮೀ ಕವಿತೆ. ಸೂಕ್ಷ್ಮತೆಯನ್ನು ಹೊರಗೆಡುಹುವಲ್ಲಿ ಕವಿತೆ ಗೆದ್ದಿದೆ, ಕವಯಿತ್ರಿಯೂ ಗೆದ್ದಿದ್ದಾರೆ.
    – ಪ್ರಸಾದ್.ಡಿ.ವಿ.

  8. Jayalaxmi Patil

    ನನ್ನದು ಮತ್ತದೇ ಗೋಳು, ತೀವ್ರತರ ನೋವನ್ನು ಚೆನ್ನಾಗಿದೆ ಅಂತ ಹೇಗೆ ಹೊಗಳಲಿ….!! 🙁 ನಿಮ್ಮ ಈ ಕವನ ಅದಷ್ಟೋ ಹೆಣ್ಣುಗಳ ದನಿ, ಕಣ್ಣ ಹನಿ…..

  9. M.S.Krishna Murthy

    ಬಹಳ ಇಷ್ಟವಾಯಿತು ದೀಪಾಜಿ…

  10. mmshaik

    nice one…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading