ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳದಿರಲಾರೆ..

ಯು ಮಹೇಶ್ವರಿ 

ಇದು ನಾನು ಹೊಸತಾಗಿ ಹೇಳುವುದಲ್ಲ
ಎಂದು ಗೊತ್ತಿದ್ದರೂ ನಾ ಹೇಳದಿರಲಾರೆ
ಜೀವ ಜೀವರ ಮಧ್ಯೆ ಪ್ರೀತಿ ದಯೆ ಕಾರುಣ್ಯ ಒಸರುತಿರಬೇಕೆಂದು ಅಷ್ಟು ಹಿಂದೆಯೆ
ಹೇಳಿದ್ದು ನಿಜವಾದರೂ ನಾ ಹೇಳದಿರಲಾರೆ
ಇಂದು ಈ ಮಣ್ಣಿನಲಿ ಅವು ಕಾಣೆಯಾಗಿಹುದು ಸುಳ್ಳಲ್ಲವಲ್ಲ
ಎಲ್ಲರೂ ತಾಯಿ ಎದೆ ಹಾಲು ಉಂಡವರೆ ನಿಜವಾದರೂ
ಹಾಲಾಹಲದ ನೊರೆಯು ಜಗವ ಸುಡುತಿಹುದು
ಹಾಲುಗಲ್ಲದ ಕಂದರಿಗೆ ಸಿಗಿವ ಕೋರೆದಾಡೆಗಳು ಮೂಡುವುದು ನಿಜವೆ?
ಅವ್ವೆಯರ ಸೆರಗ ಪರಿಮಳವ ಹೊದ್ದು ಮಲಗಿದ
ಚಿಣ್ಣರ ಕಪ್ಪುಕಂಗಳಲಿ ರಕ್ತ ರಾತ್ರಿಯ ಕನಸು ಕಲಕಿದ್ದು ಸುಳ್ಳೆ?
ತೊಟ್ಟಿಲ ಗಿಲಕಿ ಲಾಲಿಯ ಕೇಳಿ ನಕ್ಕ ಕಿಲಕಿಲ ಸದ್ದು
ಅಟ್ಟಹಾಸದ ಗುದ್ದೆ? ಬಾನು ಬೆಚ್ಚಿಹುದು

ಇದಿರು ನಿಂತವರ ಸಿಗಿದು ತೋರಣಕಟ್ಟಿ ರುಂಡ ಚೆಂಡಾಡಿ
ಅಂಡಲೆಯುವಾಸೆಯ ರಕ್ತಪಿಪಾಸುಗಳ ಮಧ್ಯೆ
‘ಅಹಿಂಸಾ ಪರಮೋಧರ್ಮ ಸತ್ಯಮೇವಜಯತೇ’ ಕ್ಷೀಣ ಸೊಲ್ಲೊಂದು ನರಳುತಿದೆ
ಧರಾಶಾಹಿ ವಿದ್ಯಾಸಾಗರರ ಸ್ವಪ್ನ ಮುಲುಗುತಿದೆ
ಮನೆಕೆಡಿಸಿದ ಮಾತಿನದೆ ಗದ್ದಲದ ಒಡ್ಡೋಲಗವಿಲ್ಲಿ
ಎದೆಯಿಂದಲೆದೆಗೆ ಅಮೃತವಾಹಿನಿಯ ಹರಿವಿಗದೊ ತಡೆ ಗೋಡೆ ನೂರೆಂಟು
‘ಮಕ್ಕಳಿವರೇನಮ್ಮ ಮಕ್ಕಳಿವರೇನಮ್ಮ’ ನೂರ ಮೂವತ್ತೊಂದು ಕೋಟಿ?
ಹೇ ರಾಮ ಹೇ ಬುದ್ಧ, ಹೇ ಅಲ್ಲಾ ಹೇ ಬಸವ ಹೇ ಯೇಸು
ಸಬ್ ಕೋ ಸನ್ಮತಿದೇ ಭಗವಾನ್! ಸಬ್ ಕೋ ಸನ್ಮತಿದೇ ಭಗವಾನ್!

‍ಲೇಖಕರು avadhi

17 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading