ಗೀರ್ವಾಣಿ
ನೆನಪಿಟ್ಟು ಮರೆತಿದ್ದೇನೆ
ಕೆಲವನ್ನು ಬೇಕೆಂದೇ ಮರೆತಿದ್ದೇನೆ
ನೆನಪಾದಾಗೆಲ್ಲ ಕಾಳು ಮೆಣಸಿನಂಥ ಭಾವ !
ಬೆಂಕಿ ಹೊತ್ತಿಸಿ ನೋಡಿದ್ದೇನೆ
ಸಿಡಿದು ಹೋಗಲೆಂದು
ಹೆಪ್ಪು ಹಾಕಿಯೂ ನೋಡಿದ್ದೇನೆ
ಗಟ್ಟಿಯಾಗಲೆಂದು
ಕುದಿಸಿ ನೋಡಿದೆ.
ಕುದ್ದಷ್ಟೂ ಹೆಚ್ಚಿತು ಒಳಗುದಿಯ ಕಾವು
ಕರಗಿಸಿದೆ.
ಉಕ್ಕಿ ಮುಳುಗಿಸಿತು ನನ್ನದೇ ಪ್ರವಾಹ
ಒಗ್ಗರಣೆ ಹಾಕಿದೆ
ಸಿಡಿದು ಕಣ್ಣೊಳಗೇ ಕೂತಿತು
ಚಪಾತಿ ಹಿಟ್ಟಿನಂತೆ ನಾದಿದೆ.
ನಾದಷ್ಟೂ ಜಿಗುಟಾಯಿತು
ಅಂಟಿಕೊಂಡಿತು. ಕೊನೆಗೆ ಜಿಡ್ಡೂ ಆಯಿತು
ಇದು ವರ್ಷಗಳ ಜಿಡ್ಡು
ಎಣ್ಣೆ ಬುಡ್ಡಿಯ ತಳದಂಥದ್ದು
ಹೇಗೆ ಮಾಡಿದರೂ ರೂಪಾಂತರ
ಬಿಟ್ಟು ಹೋಗಲೊಲ್ಲದು
ಅದಕ್ಕೇ ಮರೆತುಬಿಟ್ಟಿದ್ದೇನೆ
ನೆನಪಿನಲ್ಲಿಟ್ಟು !

ಕಾಲ ಸರಿಯುತ್ತಿದೆ ಕನ್ನಡಿಯೊಳಗೆ
ಕನ್ನಡಿಯು ಹೊಸತೇನೂ ತೋರಿಸುತ್ತಿಲ್ಲ
ನಾನೇ ಆಗಾಗ ಒಳಗಿಣುಕುತ್ತೇನೆ
ಅಚ್ಚರಿಗೊಳ್ಳುತ್ತೇನೆ ವಡಕು ಬಿಂಬಗಳಿಗೆ
ಅದೇ ತಕರಾರು ! ಅದೇ ಆರೋಪ !
ಪಾರ್ಲರ್ ಗೆ ಹೋಗಿ ಬಂದಾಗೆಲ್ಲ ನೀನೇ
ಸುಂದರಿ ಎನ್ನುತ್ತದೆ.
ಕೆನ್ನೆಯ ಹೊಳಪು, ಗಲ್ಲದ ಕೆಂಪು
ಒಂದೇ ದಿನ
ಮರುದಿನವೇ ಹೊರಡುತ್ತದೆ
ಗೊಂದಲಗಳ ದಿಬ್ಬಣ
ಪಟ್ಟಿ ಮಾಡುತ್ತೇನೆ ತಕರಾರುಗಳನ್ನು,
ಮೆಲ್ಲಗೆ ಸವರುತ್ತೇನೆ ಸುಕ್ಕುಗಳನ್ನು
ಕೆರೆದು ನೋಡುತ್ತೇನೆ ಹಳೆ ಚರ್ಮವನ್ನು
ಮಸಾಜು ಕ್ರೀಮುಗಳಿಂದ ಸಂತೈಸುತ್ತೇನೆ
ಮತ್ತದೇ ಸಿಕ್ಕುಗಳು !
ಕಾಲ ಸರಿಯುತ್ತಿದೆ ಕನ್ನಡಿಯೊಳಗೆ
ನನ್ನ ತಪ್ಪುಗಳಿಗೆ ನನ್ನದೇ ಚಡಿಯೇಟು
ನನ್ನ ನಿಶ್ಯಕ್ತಿಗೆ ನನ್ನದೇ ಕಸುವು
ದಿನವೂ ಹಚ್ಚುತ್ತೇನೆ ಸೌಂದರ್ಯ ವರ್ಧಕಗಳನ್ನ
ಆದರೂ ಮತ್ತದೇ ವಡಕು ಬಿಂಬ !





Maretubittiddene nenapinallittu adbhuta saalugalu …
ಅರ್ಥವತ್ತಾಗಿದೆ….