ಮಹಂತೇಶ್ ನವಲ್ಕಲ್
ಹೆಣ್ಣು ಮಗು ಹುಟ್ಟಿದ್ರೆ ಈ ಊರಲ್ಲಿ ಏನು ಮಾಡ್ತಾರೆ ಗೊತ್ತಾ?
ಜನರು ಎಷ್ಟೇ ವಿದ್ಯಾವಂತರಾದರೂ ಸಹ ಹೆಣ್ಣು ಮಕ್ಕಳು ಹುಟ್ಟಿದಾಗ ಮುಖ ಸಿಂಡರಿಸುವವರೇ ಹೆಚ್ಚು. ಇನ್ನೂ ಕೆಲವರು ಮಗು ಹೆಣ್ಣಾಯಿತು ಎಂಬ ಕಾರಣಕ್ಕೆ ಆ ಮಗುವನ್ನು ತೊಟ್ಟಿಗೆ ಬಿಸಾಕಿ ಮನುಷ್ಯತ್ವವನ್ನು ಮರೆಯುತ್ತಾರೆ. ಇಂತಹ ಅದೆಷ್ಟೋ ಮನಕಲುಕ ಘಟನೆ ನಮ್ಮ ನಿಮ್ಮ ಎದುರು ಆಗಿ ಹೋಗಿದೆ. ಅದು ನಿಮಗೂ ಸಹ ಗೊತ್ತಿರಬಹುದು. ಆದರೆ ಇಲ್ಲೊಂದು ಗ್ರಾಮವಿದೆ. ಅಲ್ಲಿ ಹೆಣ್ಣು ಮಗು ಹುಟ್ಟಿದರೆ ಮನೆಯೊಂದು ಮಾತ್ರವಲ್ಲ ಇಡೀ ಗ್ರಾಮಸ್ಥರೇ ಸಂತೋಷ ಪಡುತ್ತಾರೆ.
ರಾಜಸ್ಥಾನದ ರಾಜ್ ಸಮಂದ್ ತಾಲೂಕಿನಲ್ಲಿ ಪಿಪ್ಲಂತ್ರಿ ಎಂಬ ಗ್ರಾಮವಿದೆ. ಇಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ಸಾಕು ಊರಿನ ಜನರೆಲ್ಲ ಹಬ್ಬ ಆಚರಿಸಿದಂತೆ ಖುಶಿ ಪಡುತ್ತಾರೆ. ಅಷ್ಟೇ ಅಲ್ಲಾ ಬರೋಬ್ಬರಿ 111 ಗಿಡಗಳನ್ನು ನೆಡುತ್ತಾರೆ. ಅದನ್ನು ಬೆಳೆಸುತ್ತಾರೆ. ಗಿಡ ಬೆಳೆದಂತೆಲ್ಲಾ ಮಗು ಕೂಡಾ ಚೆನ್ನಾಗಿ ಬೆಳೆಯಲಿ ಎಂದು ಆಶಿಸುತ್ತಾರೆ. ಇಲ್ಲಿಯವರೆಗೂ ಈ ಗ್ರಾಮದಲ್ಲಿ 25 ಮಿಲಿಯನ್ ಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಬೇವಿನ ಮರ, ಮಾವಿನ ಮರ, ಶೀಶಮ್ ಎಂಬ ಮರಗಳನ್ನು ನೆಡಲಾಗಿದೆ.
ಮತ್ತೇನಿದೆ ಇಲ್ಲಿನ ವಿಶೇಷತೆ ..?
ಪಿಪ್ಲಂತ್ರಿ ಗ್ರಾಮಸ್ಥರು ಹೆಣ್ಣು ಮಗು ಹುಟ್ಟಿದರೆ 111 ಮರ ನೆಡುವುದು ಮಾತ್ರವಲ್ಲ. ಗ್ರಾಮದಲ್ಲೆಲ್ಲಾ ದೇಣಿಗೆ ಸಂಗ್ರಹಿಸಲಾಗುತ್ತದೆ. ಸುಮಾರು 21 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸುತ್ತಾರೆ. ಬಳಿಕ ಮಗುವಿನ ಪೋಷಕರಿಂದ 10 ಸಾವಿರ ರೂಪಾಯಿ ಪಡೆಯಲಾಗುತ್ತದೆ. ಈ ಒಟ್ಟು ಹಣ 31 ಸಾವಿರವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗುತ್ತದೆ. 20 ವರ್ಷಗಳ ಫಿಕ್ಸ್‌ಡ್ ಡೆಪೋಸಿಟ್ ಮಾಡಲಾಗುತ್ತದೆ. ಆ ಹಣದಿಂದ ಬರುವ ಬಡ್ಡಿಯಲ್ಲೇ ಮಗುವಿನ ಶಿಕ್ಷಣ, ಮದುವೆ ವೆಚ್ಚ ಎಲ್ಲವನ್ನೂ ಭರಿಸಲಾಗುತ್ತದೆ.
ಎಲ್ಲಕ್ಕಿಂತ ಇನ್ನೂ ಮುಖ್ಯ ವಿಶೇಷ ಇದು..
ಈ ಊರಿನ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಬಾಲ್ಯ ವಿವಾಹಕ್ಕೆ ಜಾಗವಿಲ್ಲ. ಹೆಣ್ಣು ಹುಟ್ಟಿದ ಕೂಡಲೇ ಪೋಷಕರ ಬಳಿ 20 ವರ್ಷದವರೆಗೂ ಮದುವೆ ಮಾಡುವುದಿಲ್ಲ ಎಂಬ ಕರಾರು ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹಾಗೂ ಎಲ್ಲಾ ಹೆಣ್ಣು ಮಕ್ಕಳಿಗೂ ಸರಿಯಾದ ಶಿಕ್ಷಣ ನೀಡುತ್ತೇವೆ ಎಂದು ಸಹಿ ಮಾಡುತ್ತಾರೆ. ಅದೇ ರೀತಿ ಹೆಣ್ಣು ಮಗು ಹುಟ್ಟಿದಾಗ ನೆಟ್ಟ ಗಿಡಗಳನ್ನು ಸರಿಯಾಗಿ ಕಾಪಾಡಿಕೊಂಡು ಬರುತ್ತೇವೆ ಎಂದು ಸಹ ಪ್ರಮಾಣ ಮಾಡುತ್ತಾರೆ.
ಈ ಗ್ರಾಮದಲ್ಲಿ ಜನರು ಮರಗಳನ್ನು ಸುಮ್ಮನೆ ನೆಡುವುದು ಮಾತ್ರವಲ್ಲ ಅದರ ಸರಿಯಾದ ಪೋಷಣೆ ಸಹ ಮಾಡುತ್ತಾರೆ. ಹೆಚ್ಚಾಗಿ ಲೋಳೆಸರವನ್ನು ಬೆಳೆಯಲಾಗುತ್ತದೆ. ಸುಮಾರು 2.5 ಮಿಲಿಯನ್ ಲೋಳೆಸರ ಗಿಡಗಳನ್ನು ನೆಡಲಾಗಿದೆ. ಅದನ್ನು ಮಾರುಕಟ್ಟೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲ ಪ್ರಗತಿಪರ ರೈತರು ಲೋಳೆಸರದ ಜೆಲ್ ಮತ್ತು ಜ್ಯೂಸ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ.
ಈ ಪದ್ಧತಿ ಆರಂಭವಾಗಲು ಕಾರಣ :
ಈ ಸಂಪ್ರದಾಯ ಆರಂಭವಾದುದು ಅಲ್ಲಿನ ಮಾಜಿ ನಾಯಕ ಶ್ಯಾಮ್ ಸುಂದರ್ ಅವರಿಂದ. ಅವರ ಮಗಳು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಅಲ್ಲಿಂದ ನಂತರದಲ್ಲಿ ಈ ಊರಿನಲ್ಲಿ ಹೆಣ್ಣು ಮಕ್ಕಳ ಹುಟ್ಟನ್ನು ಸಂಭ್ರಮಿಸುತ್ತಾರೆ. ಇಲ್ಲಿವರೆಗೆ ಇಲ್ಲಿ ಸುಮಾರು ಮಿಲಿಯನ್ ಗಟ್ಟಲೆ ಗಿಡಗಳನ್ನು ನೆಡಲಾಗಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಈ ಊರಿನಲ್ಲಿ ಕಳೆದ 7-8 ವರ್ಷಗಳಲ್ಲಿ ಯಾವುದೇ ಪೊಲೀಸ್ ಕೇಸ್ ದಾಖಲಾಗಿಲ್ಲ.
ಶೋಜಿ ಸೆಬಾಸ್ಟಿಯನ್ ಎಂಬ ನಿರ್ದೇಶಕರು ಇದೇ ಗ್ರಾಮದ ಕುರಿತು ಹಿಂದಿ ಮತ್ತು ಮಲಯಾಳಂ ನಲ್ಲಿ” ಪಿಪ್ಲಂತ್ರಿ” ಎಂಬ ಚಲನಚಿತ್ರ ತಯಾರಿಸಿದ ನಂತರ ಈ ಗ್ರಾಮದ ಖ್ಯಾತಿ ದೇಶ ವಿದೇಶಗಳಲ್ಲೂ ಹಬ್ಬಿದೆ.
ಇಂತಹ ವಿಶೇಷವಾದ ಅದರಲ್ಲೂ ಮಹಿಳೆಯರಿಗೆ ಇಷ್ಟೊಂದು ಗೌರವ ನೀಡುವ ಗ್ರಾಮ ದೇಶದಲ್ಲೇ ಮತ್ತೊಂದು ಇರಲು ಸಾಧ್ಯವಿಲ್ಲ.
(ಗೆಳೆಯರೊಬ್ಬರು ಕಳಿಸಿದ್ದು)






May the breed of such villages bloom in India.
ಉಂಟೇ ಇಂಥ ಜನತೆ ನಮ್ಮ ದೇಶದಲ್ಲಿ? ತುಂಬಾ ಖುಷಿಯಾಯ್ತು ಓದಿ.’ಏನಾಯ್ತು ,ಎಂಥ ಮಗು?” ಅಂತ ಕೇಳಿದಅಜ್ಜಿ,”ಹೆಣ್ಣು ಮಗು’ಅಂತ ಹೇಳಿದೆ ಕೂಡಲೇ ”ಕುತ್ತಿಗೆ ಹಿಸುಕಿ ಬಿಡಿ’ಅಂತ ಹೇಳಿದ್ದನ್ನು ಕೇಳಿದ ನನಗೆ ಈ ಲೇಖನ ಅಮೃತ ಪಾನ ಮಾಡಿಸಿದಂತೆ ಎನಿಸಿದೆ.ಇಂಥ ಪ್ರವೃತ್ತಿ ಬೆಳೆಯಲಿ ನಮ್ಮ ಸಮಾಜದಲ್ಲಿ.
Hats up to piplantri villagers.