ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣನ್ನ ನೋಡುವ ಸಮಗ್ರ ದೃಷ್ಟಿ ಬದಲಾಗಲಿ


ಗಾಂಧೀಜಿಯವರು ಒಂದು ಮಾತನ್ನ ಹೇಳುತ್ತಿದ್ದರು. ನಮ್ಮ ದೇಶದ ಓರ್ವ ಹೆಣ್ಣು ಮಗಳು ನಿಶ್ಚಿಂತೆಯಿಂದ ಮಧ್ಯರಾತ್ರಿಯಲ್ಲಿ ಊರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂತಾದ ದಿನ ಬಂದಾಗ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಅಂತ ನಾನು ನಂಬುತ್ತೇನೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನುವ ಭ್ರಮೆಯಲ್ಲಿ ನಾವು ಇದ್ದೇವೆ. ಆದರೆ ನಮ್ಮ ಹೆಣ್ಣು ಮಕ್ಕಳು ಇಂದು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ನಾವು ನೋಡಬೇಕು. ಅತ್ಯಾಚಾರ ದಿನ ನಿತ್ಯದ ಸುದ್ದಿ ಆಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಬೇಡ ಹಗಲು ಹೊತ್ತಿನಲ್ಲಿ ಕೂಡ ಇವತ್ತು ಅಸುರಕ್ಷಿತರು. ಇದು ಆಧುನಿಕತೆಯ ಅತಿರೇಕವೇ? ನಮ್ಮ ಸಂಸ್ಕೃತಿ ಧರ್ಮಗಳ ಪತನವೇ? ಗಂಡಿನ ಸ್ವೇಛ್ಚಾಚಾರವೇ? ಹೆಣ್ಣಿನ ಬೆಳವಣಿಗೆಯನ್ನ ಸಹಿಸದ ಜನ ಮಾಡುತ್ತಿರುವ ಗದ್ದಲವೇ? ಟಿವಿ ಸಿನೀಮಾಗಳ ಪ್ರಭಾವವೇ? ಕಿರಿಯರನ್ನ ಸರಿದಾರಿಯಲ್ಲಿ ಕರೆದೊಯ್ಯದ ಹಿರಿಯರ ಬೇಜವಾಬ್ದಾರಿತನವೇ? ನನಗೆ ಗೊತ್ತಾಗುತ್ತಿಲ್ಲ.
ಮೊದಲಿನಿಂದಲೂ ನಮ್ಮ ಹೆಣ್ಣು ವಿವಿಧ ಬಗೆಯ ಕಿರುಕುಳಕ್ಕೆ ಒಳಗಾದವಳು. ಆಧುನಿಕತೆ ಅವಳನ್ನ ಅವಳ ಶತಮಾನಗಳ ಸಂಕೋಲೆಯಿಂದ ಹೊರ ತಂದಿದೆ ಅಂತ ನಾನು ನಂಬಿದ್ದೆ ಆದರೆ ಆಕೆ ಇನ್ನೊಂದು ಬಗೆಯ ಶಾಪಕ್ಕೆ ಒಳಗಾಗಿರೋದು ನಿಜಕ್ಕೂ ವಿಷಾದದ ಸಂಗತಿ. ದಿನ ನಿತ್ಯ ನಡೆಯುತ್ತಿರುವ ಸಾಲು ಅತ್ಯಾಚಾರಗಳು ಕೂಡ ನಮ್ಮ ಸರಕಾರದ ಕಣ್ಣನ್ನ ತೆರೆಸುವುದಿಲ್ಲ.
ನಮ್ಮ ಸ್ವಾಮಿ ಜಗದ್ಗುರುಗಳು ಇದರಿಂದ ವಿಚಲಿತರಾಗುವುದಿಲ್ಲ. ಅಯ್ಯಾ ಅಣ್ಣಾ ಅಂತ ಕರೆ ಎದಿರು ನಿಂತವ ಅತ್ಯಾಚಾರಕ್ಕೆ ಮುಂದಾಗುವುದಿಲ್ಲ ಅನ್ನುವ ಉಪದೇಶ ಬಿಟ್ಟರೆ ಕಾರ್ಯಗತವಾಗ ಬಹುದಾದ ಯಾವುದೇ ಕ್ರಮ, ಮಾತು ಸರಕಾರದಿಂದ ಬಂದಿಲ್ಲ. ತನ್ನ ಮೇಲೆ ಒಂದು ಹುಲಿ ಆಕ್ರಮಣ ಮಾಡಿದಾಗ ಜಿಂಕೆ ಹೀಗೆಯೇ ಹೇಳುತ್ತದೇನೋ, ಆದರೆ ಹುಲಿ ದುಷ್ಟ ವ್ಯಾಘ್ರವೇ ಅಲ್ಲವೆ? ಹೆಣ್ಣನ್ನ ನೋಡುವ ಸಮಗ್ರ ದೃಷ್ಟಿ ನಮ್ಮಲ್ಲಿ ಬದಲಾಗದಿದ್ದರೆ ಹೆಣ್ಣಿನ ಬದುಕಿಗೆ ಭರವಸೆ ಇಲ್ಲ. ಅವಳನ್ನ ಒಪ್ಪಿಕೊಳ್ಳುವ, ಸ್ವೀಕರಿಸುವ, ಸಹಿಸಿ ಕೊಳ್ಳುವ, ಯಥಾ ಅವಳನ್ನ ಗೌರವಿಸುವ ಮನೋಭಾವ ಎಲ್ಲರಲ್ಲಿಬಾರದೆ ಹೆಣ್ಣಿಗೆ ಇವತ್ತಿನ ಆತಂಕ, ಭೀತಿ, ಕಳವಳ, ದೂರವಾಗುವುದಿಲ್ಲ. ಹೆಣ್ಣಿಗೆ ನೀಡಬೇಕಾದ ಸ್ಥಾನ ನೀಡದಿದ್ದರೆ ನಮ್ಮ ಸಮಾಜಕ್ಕೆ ಪಾಶ್ರ್ವವಾಯು ಹೊಡೆಯುತ್ತದೆ.

‍ಲೇಖಕರು G

7 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading