ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಚ್ ಎಲ್ ಪುಷ್ಪ ಹೊಸ ಕವಿತೆ – ಕಾವ್ಯವೆಂದರೆ ಯಾವುದು…

ಡಾ ಹೆಚ್ ಎಲ್ ಪುಷ್ಪ

ಗುರುವೇ, ಇದೋ ನಿನಗೆ ನಮಸ್ಕಾರ,
ವೈರಸ್ಸುಗಳೆಂಬ ಕಾಲದ ಕೆನೆಗಟ್ಟಿದ
ಸಂತಾಪದ ಕಾಲ
ಕಣ್ಣೆದುರೇ ಫಲಭರಿತ ಮರಗಳು
ನೆಲಕ್ಕುರುಳಿ ಬೇರು ಮೇಲೆಕ್ಕೆದ್ದು
ಎಲ್ಲಾ ಬುಡ ಮೇಲಾಗುವ ಕಾಲ.

ಕಾಲಾತೀತ ಕಾವ್ಯದಲಿ ಮುಳುಗಿದವನೇ
ಸಂತಾಪ ಹೇಳಲು ಹೊಸ ಪದಗಳಿಗಾಗಿ
ಸುತ್ತ ತಡಕಾಡುತ್ತಿದ್ದೇವೆ
ಜೀವವಿಲ್ಲ ಹಳಸಲು ಪದಗಳಲ್ಲಿ.

ನೋವಿಗೆ ದೈನ್ಯತೆಯ ಮೊಗವಾಡವಿಟ್ಟು
ಕಣ್ಣಲ್ಲಿ ನಗುವಡಗಿಸಿ,
ತುಟಿಯಲ್ಲಿ ಲೇವಡಿಯಿಟ್ಟು
ಶಕ್ತಿ ತುಂಬಿಕೊಂಡ ಗುರುವೇ
ಕಾವ್ಯವೆಂದರೆ ಆವುದು.

ತೆಂಗು ತಾರೆಗಳ ಸಂಗಮದಲ್ಲಿ
ಅರಳಿದ್ದು, ನರಳಿದ್ದು ಯಾವ ನೆರಳು
ಜಲದ ಕಣ್ಣಿಗೆ ಬೆಳ್ಳಿಹೂಗಳ ಮುಡಿಸಿ
ಜಲಗೇರಮ್ಮನಿಗೆ ಅರಿಷಿಣ ತೊಡೆದು
ಮಡೆಅನ್ನವನು ಸಮಾಧಿಯಲಿ ಉಂಡವನೇ
ಕಾವ್ಯವೆಂದರೆ ಮತ್ತಾವುದು.

ತಮ್ಮಟೆಗಳ‌ ಮೇಲೆ ಹೊರಳಿ
ಹಾಡುಗಳೆಲ್ಲ ಹಾವಾಗಿ ಬುಸುಗುಡುವಾಗ
ನಕ್ಷತ್ರಗಳ ಹೊಳಪಿಗೆ ಮೈಲಿಗೆಯಾದಾಗ
ನೊಂದವನ ತುಟಿಯ ಮೇಲಿನ ಹಾಡೇ
ನಿನ್ನ ಕಾವ್ಯವೆಂದರೆ ಯಾವುದು.

ಜೋಪಡಿಯ ಹರಳೆಣ್ಣೆಯ ದೀಪದಲ್ಲಿ
ಚೆಂಡುಮಲ್ಲಿಗೆ ನಗುವಾಗ
ಗುಡಿಸಲಿನ ಗುಲಾಬಿಮುಳ್ಳುಗಳಲಿ
ಕವಿತೆಯ ಕನಸು ಕಂಡವನೇ
ಕವಿತೆಯೆಂದರೆ ಆವುದು.

ನಕ್ಕು ನಗಿಸುವ ಧರ್ಮ, ಪರಧರ್ಮಗಳಲ್ಲಿ
ಗೆರೆಯಳಿದು ಸಿಲುಕಿ ಸಿಕ್ಕು, ಸಿಕ್ಕಾದವನೇ
ಒಳಗಿನ ಕನ್ನಡಿಯನ್ನು ನೋಡಲು ಮರೆತು
ಬಹಿರಂಗ ಜಂಜಾಟದಲ್ಲಿ ಕಳೆದುಹೋದವನೇ
ಬಳಿ ಬಂದ ಸಂತರಿಗೂ ನಗೆಯ ಅಫೀಮನು ಉಣಿಸಿ
ಮುಳುಗಿಸಲು ಬಂದ ತೊರೆಯ ತಿರುಗಿಸಿ
ಜಾಣತನದ ಜಾಲವನು ಹರಡಿಕೊಂಡವನೇ
ಕಾವ್ಯವೆಂದರೆ ಯಾವುದು.

ಬೆಂಗಳೂರೆಂಬ ಬಿನ್ನಾಣಗಿತ್ತಿಯ ಮುಡಿಯೊಳಗೆ
ಅರಳಿದ ಮಾಗಡಿಯ ಬಿಳಿ ಮಲ್ಲಿಗೆಯೇ
ಮಂಚನಬಲೆಯ ಬಲೆಯಲ್ಲಿ ಮೀನಿಡಿದವನೇ
ನೀನೇ ಹೇಳಿದಂತೆ ಬಿಸಿಲು ಬಿರುಗಾಳಿಯಲಿ
ಮಲಗಿದ್ದವರ ಕೂರಿಸಿದೆ, ನಿಲ್ಲಿಸುವವರು ಯಾರೋ.

ವೃತ್ತದೊಳಗೆ ಕೆಲರೇ ಸೇರಿ
ಎಡಕ್ಕೊಂದು, ಬಲಕ್ಕೊಂದು
ಗಡಿಗೆಗಳು ಗಲಗಲಿಸುತ್ತಿರುವಾಗ
ಅವುಗಳ ಮಡಿಲು ತುಂಬದೆ, ಕೂಡಿಸದೆ
ಆಕಾಶದೆಡೆಗೆ ಹಾರಿದ ಅವಸರದ ಹಂಸವೇ.
ನಿನಗೆ ಶರಣು, ನಿನ್ನ ಕಾವ್ಯಕ್ಕೆ ಶರಣು
ನೊಂದವರ ದನಿಯೇ ನಿನಗೆ ಶರಣು.

‍ಲೇಖಕರು Admin

2 February, 2022

1 Comment

  1. sanganagouda

    ಕವಿತೆ ವಾಚಿಸಿ ಅದನ್ನು ರಿಕಾರ್ಟಿಂಗ್‌ ಮಾಡಿ..ಮತ್ತೆ ಮತ್ತೆ ಕೇಳುತ್ತಿರುವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading