ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯವೊಂದಿದ್ದರೆ..

ಭುವನಾ

ಚಂದ್ರನ ಮೈಮೇಲೊಂದು ಹೂವು ಅರಳುವ ಚಿತ್ರ
ಮಂಗಳದ ಮೇಲೆ ನದಿಯೊಂದು ಓಡಿ ಮಡಿದ ಕಲೆಗಳು
ಕ್ಲಿಕ್ಕಿಸುವ ಕ್ಯಾಮರಾಗಳ ಧೈರ್ಯ ನೋಡಿ ಆತಂಕವಾಗಿದೆ,
ಅಲ್ಲೆಲ್ಲಾ ಯುದ್ಧಗಳಾಗಿರಬಹುದು
ಅಥವಾ ಮುಂದುವರೆದು ಜೀವಗಳು ಅರಳಿದರೆ
ಮತ್ತೆ ಯುದ್ಧಗಳಾಗಲೂಬಹುದು

ಉದ್ದ ಅಡ್ಡ ಗೆರೆಗಳಿದ್ದರೂ
ನಡೆದಾಡುವ
ಓಡಾಡುವ
ಎಲ್ಲ ಜೀವಗಳನ್ನು ಎದುರಿಸಿ ಮೆಟ್ಟಿ ನಿಲ್ಲುವ
‘ಸರ್ವೈವಲ್ ಟು ಫಿಟೆಸ್ಟ್’
ಗರಿ ಚುಚ್ಚಿಕೊಂಡ
ಜೀವಗಳಿಲ್ಲದ ಬಯಲು
ಹಾಗೆಯೇ ಇರಲಿ ನಿರಾಯುಧಿ ದೇವರುಗಳೇ

ಈವ್ ಆ್ಯಡಮ್
ಸಹಸ್ರಾಯುಶಿ ಆಮೆಗಳಿಗೆ ಆಸರೆ ನೀಡದಿರಿ ನಿರ್ಜೀವ ಗ್ರಹಗಳೇ
ಗುಲಾಬಿ ಹೂವು
ಅನ್ನ ರೊಟ್ಟಿಗಳ ವಿನಿಮಯಿಸಿಕೊಳ್ಳಬಲ್ಲ ನಾವು
ಪ್ರೀತಿ ಪ್ರೇಮಗಳ ಬಣ್ಣ ಬಳಿದ
ಬಂದೂಕು ಸಿಡಿಮದ್ದುಗಳ ಮಾತ್ರ ಸ್ಫೋಟಿಸುವೆವು

ಬೂದಿ ಮುಚ್ಚಿದ ಇದ್ದಿಲಿನಂಥ ಸುಳ್ಳಿಗಾಗಿ
ಮಸಿ ಬಳಿದುಕೊಂಡು ಮೆರೆಯುವ
ಕುದುರೆಗಳಿಗೆ ಲಗಾಮಿಲ್ಲ ಲಾಯವಿಲ್ಲ
ರಥಗಳ ಕೀಲು ಬಿಗಿದುಕೊಳ್ಳುವ ನಾಟಕದಲ್ಲಿ
ಬಡವನ ಬೆರಳುಗಳು ಸಿಲುಕಿಕೊಂಡಿವೆ

ಯುದ್ಧದ ಮಾರನೆಯ ದಿನ
ಸೋಲು ಗೆಲುವಿನ ಕನ್ನಡಿಯೊಳಗೆ
ಗೆಲುವು ಸೋಲಿನ ಕನ್ನಡಿಯೊಳಗೆ
ಪರಸ್ಪರ ಮುಖ ನೋಡಿಕೊಂಡು ಗೇಲಿ ಮಾಡುತ್ತವೆ
ಕಚ್ಚಿಟ್ಟ ಸೇಬುವಿನ ತುಂಬ ರಕ್ತ ಮೆತ್ತಿದ ಹಲ್ಲುಗಳು
ಊರ ತುಂಬ ಗಾಯಗೊಂಡ ಮೊಲೆಹಾಲು
ಸಿರಿದೇವಿಯ ಒಡಲ ತುಂಬ ಅಂಗಹೀನ ಕಂದಮ್ಮಗಳು

ಖಾಲಿ ಗ್ರಹಗಳೇ
ಉಪಗ್ರಹಗಳೇ
ಮಿಯಾಸಿಸ್ಸು ಮೈಟಾಸಿಸ್ಸುಗಳಿಗೆ
ಧಿಕ್ಕಾರವಿರಲಿ
ನಿಮ್ಮ ಮೈಮೇಲೆ ರಕ್ತದ ಕಲೆಗಳಿಂದ
ಗಡಿ ಕೊರೆಯುವ ಜೀವಗಳಿಗೆ
ಕಣ್ಣು ಕೈಕಾಲುಗಳಾವುವೂ ಬೇಡ
ಹೃದಯವೊಂದಿದ್ದರೆ ಇರಲಿ ಬಿಡಿ

‍ಲೇಖಕರು avadhi

27 February, 2019

1 Comment

  1. ಸೋಮು ಕುದರಿಹಾಳ

    ರಥಗಳ ಕೀಲು ಬಿಗಿದುಕೊಳ್ಳುವ ನಾಟಕದಲ್ಲಿ..
    ಕವಿತೆಯ ಚಲನೆ ಇಷ್ಟ ಆಯ್ತು.
    ಊರತುಂಬ ಗಾಯಗೊಂಡ ಮೊಲೆ ಹಾಲು…….. ಅಂಗಹೀನ ಕಂದಮ್ಮ…
    ಆರ್ದತೆಯನ್ನು ಹಿಡಿದುಕೊಂಡ ಒಡಲಂತೆ.

    ಎಲ್ಲ ಸಂಕಟ ತಲ್ಲಣಗಳನ್ನು ಸಹಿಸಿಕೊಳ್ಳುವ ಹೃದಯ ಈ ಕಾಲದ ಬಡಿದಾಟ ತಾಳದೇ ಸುಖವ ಬಯಸುತಿದೆ. ಆ ಜೀವದ ಹೃದಯ ಮಿಡಿತ ಸದಾ ಬೆಚ್ಚಗಿರಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading