ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯದ ಬಾಗಿಲು ತೆರೆಯುವುದೂ ಇಲ್ಲ..

ಕವಿತೆ: ಒಂದು ಗುಚ್ಛ

 

g p basavaraju1

ಜಿ ಪಿ ಬಸವರಾಜು

 

ಪದ್ಯ
ಕುಂಟು
ಸಾಲುಗಳಿಗೆ
ನಡಿಗೆ ಕಷ್ಟ

ಹರಿವ ಹೊಳೆ
ಅಲ್ಲದಿದ್ದರೆ
ಪದ್ಯ ಅನಿಷ್ಟ

ballet dancer art
ಕವಿತಾ

ನಡುಬೀದಿಯಲ್ಲಿ ನಿಲ್ಲಿಸಿ
ಕೈಕುಲುಕಿ ತಬ್ಬಿ ಬೆಚ್ಚಗೆ
ನಾಕು ಮಾತಾಡಿದವರು

ದೂರದಲ್ಲೇ ಕೈಬೀಸಿ
ಹಾಯ್ ಎಂದವರು
ನಕ್ಕರೂ ನಗದಂತೆ
ಬಿಗಿದುಕೊಂಡವರು
ಗಾಳಿಯಲ್ಲೇ ತೇಲಿಹೋದವರು

ಕಣ್ಣಲ್ಲೇ ಕಣ್ಣುನೆಟ್ಟು ನಿಂತ
ನಿರಾಡಂಬರ ಕವಿತಾ
ತೆರೆಯುವಳು ಬಾಗಿಲನು
ಅನಂತ ಬಯಲಿಗೆ

ballet dancer art
ಕವಿತೆ-2

ಈ ಉರಿಬಿಸಿಲ ಊರಲ್ಲಿ
ನನ್ನ ಕವಿತೆಯ ತಂದಿಟ್ಟು
ಗಿರಾಕಿಗಳಿಗಾಗಿ ಕಾದುಕುಳಿತೆ

ಬಿರಿದ ನೆಲದ ಮೇಲೆ
ಚಕ್ಕಳೆ ಕಟ್ಟಿದ ಬರಿಗಾಲು
ಖಾಲಿ ನೆತ್ತಿ ಉರಿದು
ಸಣ್ಣಗೆ ಕಮರು ವಾಸನೆ

ದಳದಳ ಬೆವರು ಹರಿಯುತ್ತ
ಸುಡುವ ರೋಮಗಳ ಕುಚ್ಚುತ್ತಿದೆ

ಆಸೆಗಣ್ಣಲ್ಲಿ ಬಂದವರು
ನೋಡುತ್ತಾರೆ
ನನ್ನನ್ನು, ನನ್ನ ಕವಿತೆಯನ್ನು
ಒಂದು ಹನಿ ನೀರಿಗಾಗಿ
ಒಣಗಿದ ತುಟಿಗಳು ಬಿರಿಯುತ್ತಿವ ಮತ್ತಷ್ಟು

ಕೊಳ್ಳಬಹುದು
ನನ್ನ ಕವಿತೆಗಳ ಇವರು,
ಈ ಬತ್ತಿದ ಕಣ್ಣಿನವರು
ಈ ಒಣತುಟಿಯ ನೆಕ್ಕುವವರು

ನೀರು ಜಿನುಗದ ಕವಿತೆ
ಬಂದವರ ನೋಡುತ್ತದೆ
ಮಿಕಿಮಿಕಿ ಮಾತಿಲ್ಲದೆ

ballet dancer art

 

ಕವಿತೆ-3
ರಾತ್ರಿಯ ಬಣ್ಣ ಕಪ್ಪು
ಹಗಲಿನ ಬಣ್ಣ ಬಿಳಿ
ಈ ನಡುವೆ ಬಂದು ಹೋಗುವ
ಮುಂಜಾವು ಸಂಜೆಗಳಲ್ಲಿ
ಬಣ್ಣಗಳ ಮೆರವಣಿಗೆ

ಕವಿತೆಯೆಂದರೆ
ನಿಗಿನಿಗಿ ಹಗಲಲ್ಲ
ಮಂಪರು ಮಂಪರು ರಾತ್ರಿಯೂ ಅಲ್ಲ
ಮಂಜು ಹೆಣೆದ ಪರದೆಯ ಹರಿದು
ಕಾಡಲ್ಲಿ ಅಲೆಯುವುದು
ಕಣಿವೆಯಲ್ಲಿ ಜಾರುವುದು
ತುದಿ ಸಿಗದ ಆಗಸದ ನೆತ್ತಿಯ
ಹುಡುಕಿ ಎತ್ತರೆತ್ತರ ಏರುವುದು

ಕೊನೆಗೂ ರೆಕ್ಕೆ ಸೋತು
ಹಕ್ಕಿ ಇಳಿಯುವುದು
ಮಣ್ಣು ನೀರು ಗಾಳಿಯ
ನೆಲೆಗೆ, ನೆಲಕ್ಕೆ

ballet dancer art

ಪದ್ಯ-2
ನೀನು ಬರೆದ ಪದ್ಯಕ್ಕೆ
ಕಟ್ಟುಹಾಕಿಸಿ ಇಟ್ಟುಕೊಂಡಿದ್ದೆ
ಬಹಳ ಕಾಲ ಜೋಪಾನವಾಗಿ
ಧೂಳು ಹಿಡಿಯದ ಹಾಗೆ;

ಈಗಿವರು ಪದ್ಯಗಳನ್ನು ಓದುವುದಿಲ್ಲ
ಹಾಡುವುದೂ ಇಲ್ಲ, ಹಾಡೂ ಬೇಡ
ಸದಾ ಗಡಿಬಿಡಿಯಲ್ಲಿರುತ್ತಾರೆ ಇವರು
ಬಿಡುಗಡೆಯ ಮಾರ್ಗ ಹುಡುಕುತ್ತ

ಪದ್ಯವೆಂದರೆ ಅದು ಬಿಡುಗಡೆಯ
ಮಾರ್ಗ: ರೇಷಿಮೆಯ ಹುಳು
ಅದರ ಕೋಶ ಅಂಟು ನಂಟು
ಸತ್ತು ಬೆಂದು ಬಿಟ್ಟುಕೊಡಬೇಕು
ತನ್ನ ತಾನು; ಆಗಲೇ ಎಳೆಎಳೆಯ
ಜೋಡಣೆ, ಹೃದಯಗಳ ಕೂಡಣೆ

ಆದರೆ ಯಾರಿಗೆ ಹೇಳುವುದು, ಹೇಗೆ?
ಇವರು ಪದ್ಯಗಳನ್ನು ಓದುವುದಿಲ್ಲ
ಕ್ಷಣ ನಿಂತು ಸಾವಧಾನವಾಗಿ
ನಾಲ್ಕು ಮಾತುಗಳನ್ನೂ ಆಡುವುದಿಲ್ಲ
ಇವರು ಏರಿರುವ ಕುದುರೆಯ ಓಟಕ್ಕೆ
ರಾಕೆಟ್ಟಿನ ವೇಗ, ನೆಲಬಿಟ್ಟು ಅದು
ಚಿಮ್ಮುವುದು ಮುಗಿಲಿಗೆ, ಅಲ್ಲಿ
ಬರೆಯುತ್ತ ಮಿಂಚಿನ ಬಳ್ಳಿ; ಹರಿದು
ನೆಲದ ನಂಟಿನ ಕರುಳಬಳ್ಳಿ;

ಮುಗಿಲಲ್ಲಿ ;
ತಮ್ಮ ಚಿಪ್ಪಿನಲ್ಲಿಯೆ ತಾವು
ಮುಚ್ಚಿಕೊಂಡಿದ್ದಾರೆ ತಮ್ಮನ್ನೆ ತಾವು

 

‍ಲೇಖಕರು Admin

25 February, 2016

5 Comments

  1. Paramesh

    Thumba Ista aiytoo Sir….

  2. sangeetha raviraj

    ಬಹಳ ಅರ್ಥಗರ್ಭಿತ ಕವಿತೆಗಳು ಇಷ್ಟವಾಯಿತು

  3. Nataraj

    Beautiful lines

  4. Anonymous

    ಹೊಳೆ ಹೊಳೆಯುತ್ತ
    ಹೊಳೆಯಿಸುತ್ತ ಹರಿಯುವ ಕವಿತೆಗಳು.
    ಅನುಪಮಾ ಪ್ರಸಾದ್.

  5. J.S.Ganjekar

    ಸರಳ ಸುಂದರ ಕವಿತೆ. ಬಹಳ ಅರ್ಥಗರ್ಭಿತ ಕವಿತೆಗಳು. ತುಂಬಾ ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading