ಹುಡುಗಿ,
ಯಾಕೋ ವಿಷಾದ,ಎಂಥದೋ ವ್ಯಾಕುಲತೆ
ಎದೆಯೊಳಗೆ ತಲ್ಲಣ,ನೆನಪಿನ ಮಳೆ
ತಡೆಯದೆ ಬಿಕ್ಕುತ್ತ ಹೋದೆ.
ನದಿ ದಂಡೆಯ ನೆಲದಲ್ಲಿ ನಮ್ಮ ಪ್ರೇಮವನ್ನು
ಹೂತು, ಸಮಾಧಿ ಕಟ್ಟಿದ ಜಾಗ
ಅಲ್ಲೀಗ ಎಂಥದೋ ಮೌನ; ಅದು
ಏನೋ ಹೇಳಲು ಹವಣಿಸುತ್ತಿತ್ತು.
ಕ್ಷಿತಿಜ ಯಾವುದೋ ಆಳಕ್ಕೆ ಒಯ್ದು
ನನ್ನ ಮುರಿದ ಕನಸುಗಳಿಗೆ ತಾಕಿ
ಅಳತೊಡಗಿತು:
ಥೇಟ್ ನಿನ್ನಂತೆ !
ನನಗೆ ನಿನ್ನ ಹೊರತು ಇನ್ನೇನಿತ್ತು ?
ಈಗ ನಾನು ಕೇವಲ ಶೂನ್ಯ….
ದಿಢೀರನೆ ಮಳೆ ಹನಿಯತೊಡಗಿತು
ಬತ್ತಿ ಹೋದ ನದಿ ನೆಲದ ಗರಿಕೆಯ
ಮೇಲೆ ಬೀಳುವ ಹನಿಗಳು
ನಿನ್ನ ನೆನಪುಗಳ ಮೇಲೆ ಬೀಳುವ
ನನ್ನ ಕಣ್ಣಿರಿನಂತೆ !
ಬೀಳುವ ಒಂದೊಂದು ಹನಿಯು
ಎದೆಯೊಳಕ್ಕೆ ಇಳಿದಂತೆ ಮತ್ತೆ ವಿಷಾದ
ದಿಗ್ಗನೆ ಎದ್ದು ಬಂದು ಮನೆ ಹೊಕ್ಕು
ಕಿಟಕಿ ತೆರೆದರೆ…..
ಧಾರಾಕಾರ ಮಳೆ !
ಮತ್ತೆ ನದಿ ಮೈ ತುಂಬಿಕೊಳ್ಳುತ್ತೆ
ನಾನು…? ಇಲ್ಲ. ಕೊರಗಬೇಕು
ನಿನ್ನ ನೆನಪಲ್ಲಿ ಬಿಕ್ಕಬೇಕು :ಹಳೆಯದನ್ನು
ನೆನೆದು ನಿಟ್ಟುಸಿರಾಗಬೇಕು !
ಏಕೆಂದರೆ ನಿನ್ನ ನೆನಪೇ ನನ್ನ
ಸೌಭಾಗ್ಯ
ಸಮಸ್ಯೆ
ಸರ್ವಸ್ವ.







chendada kavite..!!
ಪ್ರೇಮವನ್ನು ಕಳೆದುಕೊಂಡ ತೀವ್ರತೆ ಶಬ್ದಕ್ಕೆ ದಕ್ಕುವುದಿಲ್ಲ…ಆದರೂ ಕವಿತೆ ಅಲ್ಪ ದುಃಖವನ್ನು ದಾಖಲಿಸಿದೆ.