ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಡುಕುವ ಹುಚ್ಚು!

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ನಾದಿರನ ಹುಚ್ಚು

ಇರುವ ಒಂದು ಬದುಕಿಗೆ
ಅದೆಷ್ಟು ಹುಡುಕುವ ಹುಚ್ಚು!
ಅದೆಷ್ಟು ಸವಿಯುವ ಹಸಿವು!

ಹರಯಕ್ಕೆ ಜೊತೆ ಬೇಕು
ಹೆಣ್ಣು ಗಂಡು
ಕೂಡಲು ಸೆಣಸಿ
ಐಭೋಗ ಕುಣಿಸಿ
ದೇಹಗಳ ಹೀಚಿ ಹಿಂಡಬೇಕು

ಒಂದು ತಣಿವಿಗಿನ್ನೊಂದು ಹಸಿವು
ಹೊನಲ ನೀರು ಕಾಡ ಹಣ್ಣು
ಗಳ ಗರಿ ಚಪ್ಪರ ದ
ಮಣ್ಣಿನ ಮನೆಗಳಿಗೀಗ
ಇನ್ನೊಂದು ಹಸಿವು

ಉಣಿಸಿಗಿಂಬಾದ ನೆಲ ಬಗೆದು
ಲೋಹ ಕಾಂತಿಯ ಸೆಳವಿನಲಿ
ಹಸಿರು ಕುಗ್ಗಿ ನೀರೊಣಗಿದರೂ
ಕನಸಿನ ಚಿತ್ತಾರಗಳನೆಲ್ಲ
ನನಸಾಗಿಸುವ ಹುಚ್ಚು

ಇದ್ದಲ್ಲಿ ಇರಲಾರದ ತೊಣಚಿ ಕಚ್ಚಿ
ಗುಳೆ ಹೊರಟು
ಗುಡ್ಡ ಗವಿಗಳ ಹಾದು ಬಂದು
ಸಾಗರ ತಟಕೆ ಮರ ಮರಗಳ ತೆಪ್ಪ ಬಿಗಿದು ಅಲೆಗಳುಬ್ಬರ ಸೀಳಿ
ಇಳಿದರು ಸಮತಟ್ಟಿಗೆ ಕಟ್ಟಲು ಅಸಮಗಳ

ಬೆಳಕಸಮ ಕತ್ತಲಸಮ
ಕೂಳಸಮ ನೀರಸಮ
ಸಿಕ್ಕ ಹೆಗಲು ಬಳಸುವ ನಡು
ಕೊಡುವ ಮುತ್ತು
ಲೆಕ್ಕಾಚಾರದ ಸುಳಿಯಲಿ
ಸುಖ ತಲೆಕೆಳಗು

ಕಂಡಿರಲಿಲ್ಲ ಈ ಬೆರಗು ಬಿನ್ನಾಣ
ಬಿಲ್ಲೆಯಿಂದ ಹಾಳೆಗೆ
ಹಾಳೆಯಿಂದ ಅಂಕೆಗೆ
ಅಂಕೆಯಿಂದ ಸನ್ನೆಗೆ
ಕಂಡದ್ದು ಕಾಣದಾಗಿ
ಬಸಿವ ಬೆವರೆಲ್ಲ
ಯಾರದೋ ಸಿಂಹಾಸನದಡಿಗೆ
ಯಾರವೋ ನಗರಗಳೆಡೆಗೆ

ಹಾಡಿ ಹಟ್ಟಿಗಳುಣಿಸು ಮಂಗಮಾಯ
ಉದ್ದ ಅಗಲ ಎತ್ತರದ ಮನೆ ಮಂದಿರಗಳ
ಕರಾಳ ನೆರಳಿನಲೆ
ಎತ್ತುಗಳೆತ್ತಿ ಕೊಟ್ಟ ನಗ ಲೂಟಿ

ಇರುವೆ ಬೆಲ್ಲ ಜೇನ ತುಪ್ಪ
ಎಮ್ಮೆ ಹಾಲು ಕುರಿಯ ಉಣ್ಣೆ
ಹುಲಿಯ ತೊಗಲು ಮೊಲದ ಮಿದುವು
ಕಾಳ ಕಣ್ಣು ಹಕ್ಕಿ ಹಾಡು
ಚಿಟ್ಟೆ ರೆಕ್ಕೆ ಮನದ ಕನಸು
ಎಲ್ಲ ಕಸಿದು ಹಕ್ಕು ಬರೆದು
ನೆಲ ನೀರು ಗಗನದಲಿ ಸುಂಯ್ಕೆಂದು ಹಾರಿ ತುರುಕುತಿದೆ ವಿಷಬಕಾಸುರರ ಬಾಯ್ಗೆ

ಹಕ್ಕಿಗಿನ್ನೆಲ್ಲಿ ವಲಸೆ
ಇರುವೆಗಿನ್ನೆಲ್ಲಿ ಪಾತಾಳ
ಕುರಿದನಕಿನ್ನೆಲ್ಲಿ ಗುಡ್ಡದಡವು

ಕ್ಷಿಪಣಿ ಸಿಡಿಸುವ ಹುಚ್ಚು
ಬಣ್ಣ ಕೆಡಿಸುವ ಹುಚ್ಚು
ರತಿಗೆ ವಿರತಿಯ ಮಂಕು ತಿಕ್ಕಿ
ಬಳಕೆ ದಾರಿಯ ಸಿಗಿವ ಹುಚ್ಚು

ಆಹಾ! ರಾತ್ರಿಗಳ ಕೊಂದು
ಹಗಲಂತೆ ಝಗಮಗಿಸುತಿವೆ ಸಾಮ್ರಾಜ್ಯ
ನಾದಿರನ ಹುಚ್ಚಿಗೆ
ಬಡಹಕೀಮನ
ಮದ್ದನರೆಯುವವರು ಯಾರೋ!?

‍ಲೇಖಕರು Admin

29 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading