ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಹಕ್ಕಿ ಹಾಡು

ಮನೆ ಮುರುಕ

– ಅಕ್ಕಿಮಂಗಲ ಮಂಜುನಾಥ

ಮಾಗಿ ಕಾಲದ ಸಂಜೆ,
ಹೊತ್ತು ಇಳಿಯುವ ಮುಂಚೆ
ಒಂದು ದಿನ ನಡೆದೆ ನಾ ಹೊಲದ ದಾರಿ
ಅತ್ತ ಹೊಲ, ಇತ್ತ ಹೊಲ,
ನಡು ಇಷ್ಟು ಚಿಕ್ಕ ಬದು
ಮುಂದೆ ಸಾಗಿದೆ ಸಿಕ್ಕ ತೋಡು ಹಾರಿ
 
ಇಕ್ಕೆಡೆಯ ಹೊಲದಲ್ಲಿ
ಸ್ವಾಗತದ ಪರಿಯಲ್ಲಿ
ತಲೆಯ ತೂಗಿತು ತೆನೆಯು ಹರ್ಷದಿಂದ
ಉತ್ತಿದ್ದು ಬಿತ್ತಿದ್ದು
ಕಳೆ ತೆಗೆದು ದುಡಿದಿದ್ದು
ಎಲ್ಲ ಫಲ ನಿಂತಿತ್ತು ದರ್ಪದಿಂದ
 
ನಡು ನಡುವೆ ಸಾಲಿನಲಿ
ಚೆಂದ ಅವರೆಯ ಹೂವು
ಕಾಯಿ ಜೋತಾಡಿತ್ತು ತೊಗರಿ ತಲೆತುಂಬಾ
ದುಡಿದ ಕಷ್ಟವದೆಷ್ಟು! ಪಡಲಿಲ್ಲ ಸುಖವಿಷ್ಟೂ
ಈಗ ಉಕ್ಕಿತು ಹರುಷ ಮನದ ತುಂಬಾ
 
ಗಸ್ತು ಹಾಕಿದೆ ಹೊಲವ
ನಡು ಉದ್ದ ಬೆಳೆಯಲ್ಲಿ
ಗಿಡದೊಂದು ತಲೆಯಲ್ಲಿ ಹಕ್ಕಿ ಗೂಡು;
ಎಂಥ ಚೆಂದದ ಗೂಡು,
ಅದರೊಳಗೆ ಮೊಟ್ಟೆಗಳು
ತಿಂದರೆಂತಹ ರುಚಿ! ಆಸೆ ಮೂಡಿ

ಒಡನೆ ಬೀಸಿದೆ ಬಲೆಯ,
ಹಕ್ಕಿಯನು ಸೆರೆ ಹಿಡಿದೆ
ಜೊತೆಗೆ ಗೂಡೊಳಗಿದ್ದ ಮೊಟ್ಟೆಯನ್ನು
ಸುಟ್ಟು ತಿಂದರೆ ಚೆಂದ,
ಎಂಥ ರುಚಿ ! ಆನಂದ,
ಸಂತಸದಿ ತುಂಬಿದೆನು ಬುಟ್ಟಿಯಲ್ಲಿ
 
ಹಕ್ಕಿ ಚೀರಿತು ಒಡನೆ
‘ಕೊಲ್ಲ ಬೇಡವೋ ಅಣ್ಣ
ಎಂಥ ಪಾಪದ ಕೆಲಸ ನಿಲ್ಲು ಮೂರ್ಖ
ಗಂಡ ಹೋಗಿಹ ಹೊರಗೆ
ನನ್ನ ಹಿಡಿದೆಯ ಬಲೆಗೆ
ಸಂಸಾರ ತೆಗೆಯುವೆಯ ಮನೆ ಮುರುಕ?’
 
ಎಂಥ ನುಡಿ ! ಎಂಥ ಕಿಡಿ !
ಎಂಥ ಸತ್ಯದ ಮಾತು
ಅಂತುನಿಂತೆನು ನಾನು ನಿಜಕು ಸೋತು
ಕೆಟ್ಟ ನಾಲಗೆ ಹಿತಕೆ
ಇಂಥ ದುರ್ಬುದ್ಧಿಯೇ
ಅತ್ತು ಬಿಟ್ಟೆನು ಕೊಂಚ ಅಲ್ಲೆ ಕೂತು
 
ದುರುಳ ಮಾಡಿದ ಪಾಪ
ದುರ್ಬಲನು ಉಣ್ಣುವುದೇ
ಇಂಥ ಶೋಷಣೆ ಇನ್ನು ನಿಲ್ಲಬೇಕು
ಆ ಜಾತಿ ಈ ಜಾತಿ
ದೀನ ಧನಿಕನು ಎಂಬ
ಮಾತನ್ನು ನಾವಿಂದು ಕೊಲ್ಲಬೇಕು
 
ಕಣ್ಣು ತೆರೆಸಿತು ಹಕ್ಕಿ;
ಶುಭವ ಕೋರಿದೆ ಅದಕೆ
ನಮಿಸಿ ಹಾರಿತು ಮೇಲೆ ಚುಕ್ಕೆಯಂತೆ
ಎಂಥ ಅನುಭವ ಪಟ್ಟೆ,
ಮೊಟ್ಟೆ ಗೂಡಿಗೆ ಇಟ್ಟೆ
ಹಗುರವಾಯಿತು ಮನಸು ಗಾಳಿಯಂತೆ

‍ಲೇಖಕರು G

10 May, 2015

2 Comments

  1. Nagarajyk kamble

    Channagide sir

  2. Rohini Satya

    Maanaveeya moulyagaiadarpana kavana chennaagide sir!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading