ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಲಲಿತ ಪ್ರಬಂಧ

ಕ್ಲಾಸ ಥರ್ಡ

-ಗುಂಡುರಾವ್ ದೇಸಾಯಿ

ಮಕ್ಕಳು ಛಲೋ ಬಾಟ್ಲಿಯಲ್ಲಿ ಶಾಲಿಗೆ ನೀರು ಒಯ್ಲಿ ಅಂತ ಹೊಸ ಹೊಸ ಬಾಟಲು ತಂದಿರತಿನಿ ಆದರ ಮಕ್ಕಳು ಕೈಯಾಗ ಏನಗತಾವ ಏನೊ….., ವಾರ ಹದಿನೈದು ದಿನದಾಗ ಒಡಕೊಂಡಿರತಾವ. ಎಷ್ಟು ಹೊಸವು ಕೊಡಿಸಿದಾಗಲೂ ಇದೆ ಆಗ್ಯಾದ. ಆದ್ರ ಶಾಶ್ವತವಾಗಿ ಉಳದಾವ ಅಂದ್ರ ಕುಡಿದಾದ ಮೇಲೆ ಬೀಸಾಡಲೇಬೇಕಾಗಿದ್ದ ಬಿಸಲರಿ ಬಾಟಲ್ಗಳು! ಹಾಗೆ ತಿನ್ನೋಕೆ ಏನೆಲ್ಲ ಕೊಡಸ್ತವಿ, ಏನಾಗ ಬಾರದು ಅಂತ ಸ್ಟಾಂಡರ್ಡ ಮೆಮಟೇನ್ ಮಾಡತೀವಿ. ಆದ್ರ ಅವು ಇಷ್ಟ ಪಡೋದು ಅದ ಒಂದು ರೂಪಾಯಿ ಕುರುಕುರೆ, ಚಾಕಲೇಟು, ಸೊಂಡಗಿ. ಚಕ್ಕಲಿ. ಡಬ್ಬಿಯಲ್ಲಿ ಬರೊ ಐಸ್ ಕ್ರೀಮು. ಶ್ವಾನಕ್ಕ ಪಲ್ಲಕ್ಕಿಯಲ್ಲಿ ಕೂಡ್ರಿಸಿ ಮೆರವಣಿಗೆ ಮಾಡಿದ್ರೂ ಹೇಸಿಗಿ ಕಂಡರ ಹಾರತ್ತ ಅಂತಾರಲ್ಲ ಹಾಂಗ ಹಾಂಗ ಮನುಷ್ಯನ ಬುದ್ಧಿ ಯಾವ ಕ್ಲಾಸಿನಲ್ಲದ್ರೂ ಥರ್ಡ ಕ್ಲಾಸ ಬಗ್ಗೆನ ಆಸೆ ಪಡತ್ತ.
ಕ್ಲಾಸ ಥರ್ಡ ಹೀಗೊಂದು ಕಂಟಿನ್ಯೂಎಶನ್ ಪಾಯಿಂಟ್ ಕೊಟ್ಟು ಯಾವ ವಿಷಯದ ಬಗ್ಗೆ ಬರಿತಾ ಇರೋದು ಅಂತ ತಮಗೆ ಅರ್ಥವಾಗಿರಬೇಕು ಅಂತ ಭಾವಿಸಿದ್ದಿನಿ. ಕ್ಲಾಸ್ ಥರ್ಡ ಅಂದ್ರೆ ಮೂರನೆ ದಜರ್ೆಯ ವಸ್ತುಗಳು, ತಿನ್ನುವ ತಿಂಡಿ, ಅಂಗಡಿಗಳು, ತಾಣಗಳು ಮನುಷ್ಯರನ್ನು ಹಿಡುಕೊಂಡು ಎಲ್ಲರೂ ಕಡೆಗಣಿಸುವ ಎಲ್ಲಾ ವಿಷಯ ವಸ್ತುಗಳ ಬಗ್ಗೆ ಈ ಲೇಖನ ಎಂಬುದು ನನ್ನ ಆರಂಭಿಕ ಸ್ಪಷ್ಟನೆ.
ಕ್ಲಾಸ ಥರ್ಡ ನಲ್ಲಿ ಬರುವ ವಸ್ತು, ತಾಣಗಳ ಪಟ್ಟಿ ಹೇಳ್ರೀ ಅಂದಾಗ ವಾಂತಿವಿಲಾಸಗಳು ಸ್ವಾರಿ ಹಳ್ಳಿ ತಟ್ಟಿಹೋಟಲ್ಗಳು, ನಗರದ ಬೀದಿಬದಿಯ ಬಂಡಿಗಳು, ಫುಟ್ಪಾತ್ ಅಂಗಡಿಗಳು, ಹೊತ್ತು ಮಾರುವ ಐಟಮ್ಗಳು………… ಹಿಂಗ ಪಟ್ಟಿ ಬೆಳಿತಾನ ಹೊಗತದ.
ಐಶ್ವರ್ಯ ಬಂದಾಗ ಅಂಡರ್ ಎಸ್ಟಿಮೆಟ ಮಾಡುವಂತಹ ವಸ್ತು, ವಿಷಯ ಕ್ಲಾಸ ಥರ್ಡನಲ್ಲಿ ಬರತಾವೆ. ಇಂದಿನ ದಿನಗಳಲ್ಲಿ ಯಾವುದನ್ನು ಕಡೆಗಣಿಸಲಾಗದು. ಧೂಳಿದು ಎಂದು ನೆಲಕ್ಕೆ ಝಾಡಿಸಿ ಒದ್ದರೆ ಅದೆ ತಲೆ ಮೇಲೆ ಕೂಡುವಂತೆ ಯಾವುದನ್ನು ಅಲಕ್ಷಿಸುವಂತಿಲ್ಲ. ಎಲ್ಲರಿಗೂ, ಎಲ್ಲ ವಸ್ತುಗಳಿಗೂ ಅದರದ್ದೆ ಆದ ಮೌಲ್ಯಗಳಿವೆ. ನಲ್ಲಿ ಬಂದಾದರೆ, ಮಿಷನ್ ಕೈಕೊಟ್ಟರೆ, ಘಟಾರ ತುಂಬಿದ್ದರೆ, ಚಪ್ಪಲಿ ಹರಿದರೆ, ಸಾಮಾನು ಸಾಗಿಸಬೇಕಾದರೆ, ಕರೆಂಟು ಹೋದರೆ, ಸಣ್ಣ ಪುಟ್ಟ ಮನೆ ರಿಪೇರಿ ಇದ್ದರೆ, ಸರಿಪಡಿಸುವ ವ್ಯಕ್ತಿಯ ಮೊರೆ ಹೋಗಲೇಬೇಕು. ಕ್ಲಾಸಿನವರು ಕಾಸಿದ್ದವರು ಎಂದರೆ ತಿಪ್ಪರಲಾಗ ಹಾಕಿದರು ಕೈಗೂಡದು. ನಾವು ಏನೆ ಪೋಜಿಶನಲ್ಲಿದ್ದರೂ ನಮ್ಮ ಸೊಂಡಿಯಿಂದ ನೀರನ್ನು ಕುಡಿಯಲಾಗದು. ಇವತ್ತು ಅನ್ನ ಕೊಡುವ ರೈತನನ್ನ ಎಷ್ಟು ಸಾಧ್ಯವೋ ಅಷ್ಟು ಶೋಷಣೆಗೆ ಒಳಪಡಿಸುತ್ತಿದ್ದೇವೆ. ಅವನು ಕ್ಲಾಸ್ ಲಾಸ್ಟು ಕೈಬಿಟ್ಟರೆ ನಾವೂ ಲಾಸ್ಟೂ…….! ದುಡಿಯುವ ವರ್ಗ ಇರೋ ಕಾರಣಕ್ಕಾಗಿ ನಮ್ಮ ಕ್ಲಾಸುಗಳು ಬಂದಿರುವುದು ಎಂದು ತಿಳಿದರೆ ಬದುಕು ಮಧರ.
‘ಅಯ್ಯೊ ನಾವು ಮನೆಯಲ್ಲಿ ರೊಟ್ಟಿನೆ ತಿನ್ನಾಂಗಿಲ್ಲ, ನಾವೇನಿದ್ದು ಕ್ಲಾಸ ಊಟಾನೆ ಮಾಡೋದು. ಸೋನಾ ಮಸೂರಿ ಅಕ್ಕಿನೆ ತಿನ್ನೊದು’ ಅಂತಿದ್ದವರ ಮನೆಯಲ್ಲೆಲ್ಲ ಬೊಜ್ಜು,ಶುಗರ್ ಮಹಿಮೆಯಿಂದ ರೊಟ್ಟಿಗಳ ಪ್ರವೇಶವಾಗಿವೆ ಅಷ್ಟೇ ಏಕೆ ಬಡವರ ಈ ಆಹಾರ ದೊಡ್ಡವರ ಮನೆಯ ಅದ್ದೂರಿ ಔತಣ ಕೂಟದಲ್ಲಿ ಕಂಗೊಳಸ್ತಾ ಇದೆ. ಊಟದ ವಿಷಯಕ್ಕೆ ಬಂದಾಗ ದೊಡ್ಡ ದೊಡ್ಡ ಸಿಟಿಗಳಲ್ಲಿ ಪಂಚತಾರಾ ಹೋಟಲ್ಗಳು ಉದಯಿಸಿವೆ. ಜಾಸ್ತಿ ದುಡ್ಡುಕೊಟ್ಟು ಹಂಚಿಕೊಂಡು ಹರಕೊಂಡು ತಿನ್ನುವ ಸಂಸ್ಕೃತಿ ಅದು. ಇತ್ತೀಚಿಗೆ ಸ್ನೇಹಿತರೊಬ್ಬರು ನಾರ್ಥ ಇಂಡಿಯನ್ ಡಿಶ್ ಚೆನ್ನಾಗಿರುತ್ತೆ ಅಂತ ಕರೆದೊಯ್ದಿದ್ದರು. ಅಜರ್ೀರ್ಣಕ್ಕಿಡು ಮಾಡುವ ತಂದೂರಿ, ನಾಲ್ಕು ಐಟಮ್ ಪಲ್ಯಗಳು ರೋಸ್ಟಾಗಿ ಬಂದವು. ಇದ್ದೋರು ಆರು ಜನ ಪಲ್ಯ ಒಬ್ಬರಿಗಾದ್ರೂ ಪೂತರ್ಿಯಾಗಿ ಬರಲಿಲ್ಲ. ಅಂದ ಮೇಲೆ ಹೊಟ್ಟೆ ತುಂಬಲಿಲ್ಲ ಅನ್ನಿ. ಆಮೇಲೆ ತಂದ ಸ್ವಾದ ರಹಿತ ಅನ್ನ ಸಾರು, ಅದಕ್ಕೂ ಮುಂಚೆ ಅದೇನೋ ಸೂಪ್ ಅಂತ ನೀಡಿದರು. ಮನೆಯಲ್ಲಿ ಮಾಡುವ ಟಮಾಟೋ ಸಾರು ಅದರ ಬೆಲೆಯೋ 50ರೂ ಅಂತೆ. ಮುಗಿಸಿ ಹೊರ ಬಂದಿವಿ. ಬಿಲ್ಲ ಸಾವಿರ ರೂಪಾಯಿಯ ಗಡಿ ದಾಟಿತ್ತು. ನನಗಂತ್ರೂ ಹಿಡಿಸಿದ್ದಿಲ್ಲ ಹೊಟ್ಟಿನೂ ತುಂಬಿದ್ದಿಲ್ಲ. ನನ್ನ ಹೊಟ್ಯಾಗಿಂದು ಹೊರ ಹಾಕಿದೆ. ಎಲ್ಲಾರೂ ‘ಹೌದು ಕಣೋ’ ಅಂದ್ರು. ಅದೇ ಲಿಂಗಾಯತ ಖಾನಾವಳ್ಯಾಗ ಮಾಡಿದಿದ್ರ ಹಣ, ಆರೋಗ್ಯದ ದೃಷ್ಟಿಂದನೂ ಛಲೋ ಆಗುತ್ತಿತ್ತು. ಎಲ್ಲಾ ಕ್ಲಾಸ್ ಮಾಯೆ ಅಲ್ಲವೆ? ತುಂಬಿಲ್ಲ ಅಂತ ಹೇಳಿದ್ರೆ ಸ್ಟೇಟಸ್ ಕಾಡುತ್ತೆ. ಇದು ಒಂದೆ ಅಂತ ಅಲ್ಲಾ ಅನೇಕ ಸಾರಿ ಇಂತಹ ಹೋಟೆಲ್ಗಳಿಗೆ ಹೋಗಿದ್ದರೂ ಅನುಭವಿಸಿದ್ದೆ ಅರ್ಧ ಹೊಟ್ಟಿ ಊಟ. ಹೊರಗೆ ಶುಬ್ರ ಕಾಣೊದು ಒಳಗೆ ಅಶುದ್ಧ ಇರುತ್ತೆ ಹೊರಗೆ ಅಸ್ವಚ್ಛವಾಗಿ ಕಾಣೊದು ಒಳಗೆ ಶುಬ್ರವಾಗಿರುತ್ತೆ.

ದೊಡ್ಡ ದೊಡ್ಡ ಹೋಟೆಲ್ ಬೇಕರಿಗಳಲ್ಲಿ ನಡೆಯುವ ಅವಾಂತರವನ್ನ ಮಾಧ್ಯಮಗಳು ಬೇಕಾದಷ್ಟು ಹೊರಹಾಕಿವೆ. ಆದರೆ ಥರ್ಡಕ್ಲಾಸುಗಳು ಎಂದು ಬಗೆಯುವ ನಮ್ಮ ಹಳ್ಳಿಯ ಚಹಾ ಹೋಟೆಲ್ಗಳು, ಫುಟ್ಪಾತ್ ಹೊಟೆಲ್, ಬೀದಿ ಬದಿಯ ಬಂಡಿಗಳು ಎಲ್ಲಾ ಒಪನ್ ಪ್ರೇಶ್, ನಿಮಗ ಸರಿಗೆ ಕಾಣಲಿಕ್ಕಪ ಅಂದ್ರ ನಿಮ್ಮ ಮನಸ್ಸಿಂದು ಹೇಳಿದ್ರ ಆಗಿಂದಾಗಲೇ ತೋಳದು ಸ್ವಚ್ಛಮಾಡಿ, ಬದಲಾಯಿಸಿಯೆ ನಗು ಮನಸ್ಸಿನಿಂದ ಕೊಡತಾರೆ. ನಗುಮೊಗದ ಸ್ವಾಗತ, ‘ಸರ್,ಯಕ್ಕಾ,ಯಣ್ಣಾ ‘ಅನ್ನುವ ಹೃದಯ ತುಂಬಿದ ಮಾತುಗಳು. ಹೊಟ್ಟೆಗೂ ಹಿತ ಜೊತೆ ಜೇಬಿಗೂ. ಹೈಟೆಕ್ ಹೋಟೆಲ್ಗಳಲ್ಲಿ ಹೆಚ್ಚು ಮಾತಾಡಂಗಿಲ್ಲ, ಬಾಯಿ ಮುಚ್ಚಕೊಂಡು ಹೋಗಬೇಕು, ಬಯಸಿದ್ದು ರುಚಿ ಹೇಗೆ ಇರಲಿ ತಿಂದು ಅವರು ನಮೂದಿಸಿದಷ್ಟು ಬೆಲೆ, ಮೇಲೆ ಅಪ್ಲೈ ಮಾಡಿದವಗೆ ಖುಷಿಗೆ ಕೊಟ್ಟು ಮರು ಮಾತನಾಡದೆ ವಾಪಾಸ ಬರಬೇಕು. ನಮ್ಮೂರಲ್ಲಿ ಒಳ್ಳೆ ಹೋಟಲ್ಗಳಿಗಿಂತ ಕ್ಲಾಸ ಥರ್ಡ ಹೊಟೆಲ್ಗಳೆ ಬಹಳ. ಒಂದೊಂದು ಹೊಟೆಲ್ದು ಒಂದೊಂದು ವಿಶೇಷ. ರೇಟ್ ಕಡಿಮೆ ಕೂಡಾ.
ಅಂತೆಯೆ ಫುಟ್ಪಾತನಲ್ಲಿ ದೊರಕುವ ವಸ್ತುಗಳು. ಬಟ್ಟೆ ಇರಲಿ, ಗೃಹ ಉಪಯೋಗಿ ವಸ್ತುಗಳಿರಲಿ, ಮತ್ಯಾವುದೆ ಇರಲಿ, ಎಲ್ಲರೂ ಮನಸು ಮಾಡತಾರೆ, ಮುಗಿಬೀಳತಾರೆ. ಅವನ್ನೆ ಮಾಲ್ಗಳಲ್ಲಿ, ಹೈಟೆಕ್ ಶಾಪ್ಗಳಲ್ಲಿ ಖರಿದಿಸಿದರೆ ದುಪ್ಪಟ್ಟು ತೆತ್ತು ಬರಬೇಕು. ಬೆಂಗಳೂರಿಗೆ ಹೋದಾಗ ಒಂದು ರೇನ್ ಕೋಟ್ ಖರೀದಿಸುವ ಮನಸ್ಸಾಯಿತು. ಬೆಲೆ ಬಗ್ಗೆ ನಿಖರತೆ ಇರಲಿಲ್ಲ. ನನ್ನ ಅಣ್ಣನ ಮಗ ಸಾಫ್ಟವೇರ್ ಇಂಜಿನಿಯರ್, ಅವನ ಮಾರ್ಗದರ್ಶನ ಪಡೆಯಲು ‘ಎಷ್ಟಕ್ಕೆ ಕೊಳ್ಳಬಹುದು?’ ಎಂದು ಕೇಳಿದೆ. 1500ರೂ ಆದ್ರೆ ಓ.ಕೆ ಅಂದ. ನಾನು ಹೌಹಾರಿದೆ. ಅವನು ತನ್ನ ಸಾಫ್ಟವೇರ್ ರೇಟಿಗೆ ಮಾತಾಡಿದ್ದ. ಮಾಲ್ಗಳಲ್ಲಿ ಅದೇ ರೇಟಿಗೆ ಇತ್ತು ಅದೇ ಐಟಮ್ ಫುಟ್ಪಾತನಲ್ಲಿ 500ರೂ.ಗೆ ಸಿಕ್ಕಿತ್ತು. ಥರ್ಡಕ್ಲಾಸು ಚೀಜುಗಳು ಎಂದು ಕರೆಯಲ್ಪಡುವ ಈ ಪುಟ್ ಪಾತ ವಸ್ತುಗಳ ಮೋಹದಿಂದ ಯಾರಿಗೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಅವುಗಳ ಉತ್ಪತ್ತಿ ಎಲ್ಲಿ ಹೇಗೋ ತಿಳಿಯದು ಆದರೆ ಮಧ್ಯಮ, ಕೆಳವರ್ಗದ ಆಶೋತ್ತರಗಳಿಗೆ ಸ್ಪಂದಿಸುವ, ಬಜೆಟ್ಗೆ ಸರಿಹೊಂದುವ ಸಿರಿವಂತರನ್ನೂ ತನ್ನ ಬುಟ್ಟಿಯಲ್ಲಿ ಹಾಕಿಕೊಳ್ಳುವ ಅವುಗಳಿಗೆ ಮುಗಿಬೀಳದವರೆ ವಿರಳ ಅಂದ ಮೇಲೆ ಅಂತಸ್ತಿನ ಭೇದ ಎಲ್ಲಿ ಬಂತು. ಬೆಂಗಳೂರಿನ ಸಂಡೆ ಮಾಕರ್ೆಟನಲ್ಲಿ ಅದೆಷ್ಟು ರಾಶಿ ರಾಶಿ ಕಾಣುತ್ತವೆ ಈ ವಸ್ತುಗಳು. ಆಧುನಿಕ ತಂತ್ರಜ್ಞಾನದ ಸರಕುಗಳು(ಯಾವ ರೂಪದಿಂದ ಬಂದದ್ದು ಎನ್ನುವುದು ಗುರುತಿಸುವುದು ಅಸಾಧ್ಯ) ಅಲ್ಲಿ ಬಿದ್ದಿರುತ್ತವೆ ಬೀದಿಯಲ್ಲಿ. ಇನ್ನೂ ಇತ್ತೀಚಿಗೆ ಸಾಹಿತ್ಯ ಸಮ್ಮೇಳನ, ವಿವಿಧ ಸಮ್ಮೇಳನಗಳಲ್ಲಿ ಉದ್ದೇಶಿತ ವಸ್ತುಗಳ ವ್ಯಾಪಾರಕ್ಕಿಂತ ಬೆಲ್ಲ ಬಿದ್ದಡೆ ಬರುವ ಇರುವೆಯಂತೆ ಅದ್ಯಾವ ಮಾಯೆಯಿಂದ ಬಂದು ಸೇರುವ ಈ ಪುಟ್ಪಾತಿನ ಮಾಯಾವಿಗಳು ಮಾಡುವ ಮಾಯಾಜಾಲದಲ್ಲಿ ಇವರ ವ್ಯಾಪಾರವೇ ಬಿಕರಿಯಾಗಿರುತ್ತದೆ.
ಇನ್ನೂ ವೈದ್ಯಕೀಯ ವಿಚಾರ ಬಂದಾಗ ಆರ್.ಎಂ.ಪಿಗಳು ಬಡವರ ಅಪದ್ಭಾಂದವರು. (ನುರಿತ,ಜಾಣ್ಮೆ ಇರುವವರು ಮಾತ್ರ). ಸ್ವಲ್ಪ ಜ್ವರ,ನೆಗಡಿ,ಕೆಮ್ಮು ಬಂದರೆ ಆಸ್ಪತ್ರೆಗೆ ಹೋದರೆ ನೂರರ ಮೂರು ನಾಲ್ಕು ನೋಟು ತೆತ್ತು ಬರಬೇಕು. ಅವೇ ಮೆಡಿಸಿನ್ನು ಇಂಜಿಕ್ಷನ್ನು ಮಾಡೊ ಇವರಲ್ಲಿ ನೂರಿನ ಒಂದು ನೋಟಿನೊಳಗೆ ಮುಗಿದು ಹೋಗುತ್ತದೆ. ನಮ್ಮೂರಲ್ಲಿ ಕಾರ್ಯಕ್ರಮಕ್ಕೆ ಸ್ವಾಮಿಗಳೊಬ್ಬರು ಬಂದಾಗ ವೇದಿಕೆಯ ಮೇಲೆ ಹೃದಯಾಘಾತವಾಯಿತು. ವೇದಿಕೆಯಲ್ಲಿ ಸ್ಥಾನ ಹಂಚಿಕೊಂಡಿದ್ದ ವೈದ್ಯರು ಬಂದು ನೋಡಿ ‘ಸ್ವಾಮಿ ಇಸ್ ನೋ ಮೋರ್’ ಎಂದು ಉದ್ಗಾರ ತೆಗೆದರು. ಎಲ್ಲರೂ ಬಂದ ಅತಿಥಿ ಸ್ವಾಮಿಗಳಿಗೆ ಹೀಗಾಯಿತಲ್ಲ ಹೇಗಾದರೂ ಮಾಡಿ ಎಂದು ಉದ್ಗಾರ ತೆಗೆದಾಗ ಬಂದ ತಜ್ಞ ವೈದ್ಯರೆಲ್ಲ ಕೈ ಹಿಡಿದು ನಾಡಿ ಪರೀಕ್ಷೆ ಮಾಡಿ ಅದೆ ವಾಕ್ಯವನ್ನು ಪುನರುಚ್ಛಾರ ಮಾಡಿದ್ರು. ಅಲ್ಲೆ ನೋಡುತ್ತಾ ನಿಂತಿದ್ದ ಹಿರಿಯ ಆರ್.ಎಂ.ಪಿ ವೈದ್ಯ ‘ಸರಿ ಸರ್ರಿ’ ಎಂದು ಬಂದವರೆ ಅಂಗಾತ ಬಿದ್ದ ಬಾಯಿಯೊಳಕ್ಕೆ ಬಾಯಿ ಇಟ್ಟು ಉಸಿರು ನೀಡಿ ಎದೆಗೆ ಎಂಟು ಹತ್ತು ಸಾರಿ ಜೋರಾಗಿ ಬಡಿದರು. ಮಿರಾಕೆಲ್ ತಜ್ಞರು ಸತ್ತಿದ್ದಾರೆ ಎಂದು ಏನು ಸಟರ್ಿಫೈ ಮಾಡಿದ್ದರೋ ಹೌಹಾರಿ ಕಾಲ್ಕಿತ್ತಿದ್ದರು. ನನಗೂ ಈ ಮಂದಿ ಬಗ್ಗೆ ಕಿಳಿರಿಮೆ ಇತ್ತು. ಒಳ್ಳೆ ಸವರ್ಿಸು ಜೊತೆಗೆ ಮನೆಗೆ ಬಂದು ಟ್ರೀಟ್ ಮಾಡೋ ಇವರೆ ನಮಗೆ ಆಪತ್ ರಕ್ಷಕರಾಗಿದ್ದಾರೆ.
ಇನ್ನೂ ಹೈಟೆಕ್ ಶಾಲೆಗಳ ಕತೆ. ವ್ಯಾಪರೀಕರಣದ ಹಿನ್ನಲೆಯಲ್ಲಿ ಪಾಲಕರಿಗೆ ಮಂಕು ಬೂದಿ ಎರಚುವ ಆಡಳಿತ ಮಂಡಳಿ ನಡೆಸುವ ಬೂಟಾಟಿಕೆ ನೋಡಬೇಕು. ಮೊನ್ನೆ ಬೆಂಗಳೂರಿಗೆ ಹೋದಾಗ ಪರಿಚಿತರ ಮನೆಗೆ ಹೋಗಿದ್ದೆ. ಮಾತಾಡತಾ ಮಾತಾಡತಾ ಅವರ ಮಗ ಲ್ಯಾಪ ಟಾಪ್ ನಲ್ಲಿ ಏನೋ ಮಾಡುತ್ತಿರುವುದು ಕಂಡು ಬಂತು. ಶಿಕ್ಷಕನಾಗಿರುವುದರಿಂದ ಸಹಜ ಕೂತೂಹಲದಿಂದ ಅವನ ಮಾಡುತ್ತಿರುವ ಕೆಲಸ ಗಮನಿಸಿದೆ. ಇಷ್ಟೆಲ್ಲ ಯಾಕ ಇಂಟರ್ ನೆಟ್ನಲ್ಲಿ ಹುಡುಕುತಿಯಾ ನಿನ್ನ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳು ಅವು. ನಿಮ್ಮ ಅಜ್ಜಿನ ಕೇಳಿದ್ರೆ ಅದರ ಬಗ್ಗೆ ದೊಡ್ಡ ಕಥಿನ ಹೇಳ್ತಾರೆ. ಇನ್ನೂ ಇವು ಸೈನ್ಸ್ ಎಕ್ಸಪಿರಿಮೆಂಟ್ಸು. ಮನೆಯಲ್ಲೆ ಮಾಡಬಹುದು ಎಂದು ಒಂದೆರಡನ್ನು ಮಾಡಿ ತೋರಿಸಿದೆ. ಆ ಮಗು ನನ್ನ ಬಗ್ಗೆ ಮೊದಲು ಅಂಡರ್ಎಸ್ಟೀಮೇಟ್ ಮಾಡಿತ್ತ್ತು. ಮಮ್ಮಿ, ಪಾಪ! ಈ ಅಂಕಲ್ಗೆ ಎಲ್ಲಾ ಗೊತ್ತಿದೆ. ಎಷ್ಟು ಚೆನ್ನಾಗಿ ತಿಳಿಸಿಕೊಟ್ರು. ನೋಡೋಕೆ ಹ್ಯಾಂಗ್ ಕಾಣ್ತಾರ!ೆ ಎಂದ. ನನಗ ಅವರ ವರ್ತನೆ ಗಾಭರಿಯಾಗಿತ್ತು. ಶೂಟ್ ಬೂಟ್ ಹಾಕಿಕೊಂಡವರು ಆ ಹುಡಗನ ಪಾಲಿಗೆ ಮೇಷ್ಟ್ರು. ನನ್ನ ಚಹರೆ ಹಾಗಿರಲಿಲ್ಲಲ್ಲ! ಅವರು ಮೇಷ್ಟ್ರಿರಿದ್ದಾರಪ ಅವರು ಎಂದು ಪರಿಚಯಿಸಿದ. ಅವನಿಗೆ ನಂಬಿಕೆನೆ ಬರಲಿಲ್ಲ ಅನ್ನಿ.
ಇತ್ತೀಚಿಗೆ ಒಂದು ಶಾಲೆಗೆ ಹೋಗಿದ್ದೆ. ಹೆಡ್ ಮಾಸ್ಟರ್ ಅವರೊಂದಿಗೆ ಮಾತಾಡುತ್ತಿರುವಾಗ ಪಾಲಕರೊಬ್ಬರು ಬಂದರು ಮಗುವಿನೊಂದಿಗೆ. ಜೊತೆಗೆ ಕ್ಲಾಸ್ ಟಿಚರ್ರು. ‘ಮೇಡಂ ಇವರು ಮಗುವಿನ ಪ್ರೋಜಕ್ಟ ಮಾಡಿಕೊಂಡು ಬಂದಿಲ್ಲ. ಅದಕ ರಿಪೋರ್ಟ ಮಾಡ್ತಿದ್ದಿನಿ’ ಎಂದ್ರು. ಆ ಪೆರಂಟು ಭಯದಿಂದ ‘ಇಲ್ಲ ಮಿಸ್ ಎಷ್ಟೆ ಕಷ್ಟ ಆಗಲಿ ಇವತ್ತು ಮಾಡಸಿ ನಾಳೆ ಕಳಸ್ತಿನಿ’ ಎಂದು. ಹೆಡ್ ಮೆಡಮ್ ‘ಹಿಂಗ ಮಾಡಿದ್ರೆ ಹ್ಯಾಂಗ್ರಿ ಅದಕ್ಕೆ ಮಾಕ್ರ್ಸ ಇರುತ್ತವೆ’ ಅವರು ಗದ್ಗದಿತರಾಗಿ ‘ಹಾಂಗ ಮಾಡಬೇಡಿ’ ಎಂದು ಅಂಗಲಾಚಿದ. ನಾನು ಕೇಳಿದೆ ‘ಎಷ್ಟನೆ ಕ್ಲಾಸ್ರೀ ನಿಮ್ಮ ಮಗು’ ಎಂದು. ‘ಎಲ್.ಕೆ.ಜಿ’ ಅಂದ್ರು. ನಾನು ಅವರು ಹೋದ ಮೇಲೆ ‘ಏನ್ರೀ?’ ಅಂದೆ. ‘ನಾಟಕ ಮಾಡಲಿಕ್ಕಪ ಅಂದರ ಕಾಂಪಿಟೇಷನ್ ಯುಗದಾಗ ಇನ್ಸ್ಟಿಟ್ಯೂಷನ್ ನಡಸದು ಬಾಳ ಕಷ್ಟ ಆಗುತ್ತರಿ’ ಅಂದ್ರು. ನಾನು ಮರು ಮಾತನಾಡದೆ ಹೊರಬಂದೆ. ಅದೆ ನಮ್ಮ ಸರಕಾರಿ ಶಾಲೆಗಳಲ್ಲಿ ಕಲಿಕಾ ಸ್ನೇಹಿ ವಾತಾವರಣ ಇದೆ. ಇಲ್ಲಿ ಕಲಿತ ಮಕ್ಕಳೆ ಒಳ್ಳೆ ಹಂತಕ್ಕೆ ಹೋಗುತ್ತಿದ್ದಾರೆ.
ಬಸ್ಗಳಲ್ಲಿ ಖಾಸಗಿ ಆಯಿತು, ಸರಕಾರಿ ಸ್ಲೀಪರ್ ಕೋಚು, ಸುವಿಹಾರಿ ಬಸ್ಗಳೆ ಆಯಿತು ಹೈಟೆಕ್ ಸಂಸ್ಕೃತಿಯವು ಅಲ್ಲಿ ಡ್ರೈವರ್ ಕಂಡಕ್ಟರ್ನನ್ನು ಹಿಡಕೊಂಡು. ಅಲ್ಲಿ ಸಾಮನ್ಯರು ಹೋದರೆ ಉಸಿರುಗಟ್ಟುವ ವಾತಾವರಣ. ನಾವು ಎಂಟ್ರಿಕೊಡ್ತಿದ್ದಂತೆ ಕಂಡಕ್ಟರ್ ಏನು? ಎತ್ತ? ಇಷ್ಟಾಗುತ್ತೆ ಅಂತ ಹೇಳೆ ಒಳಕಳಿಸುತ್ತಾನೆ. ಒಳ ಹೊಕ್ಕರೆ ಅಲ್ಲಿಯ ತರತರಾರಿ ಬಿಳಿಮುಖಗಳು, ಹೈಟೆಕ್ ಮಂದಿ ನೋಡುವ ನೋಟನೆ ಬೇರೆ. ಒಮ್ಮೆ ಇಂತಾ ಬಸ್ಸಿನಲ್ಲಿ ಹಾರ್ಟ ಅಟ್ಯಾಕಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ದಾರಿಯ ಮಧ್ಯ ಹೆಚ್ಚುಕಮ್ಮಿ ಆದಾಗ ಜೊತೆಗಿದ್ದವರು ಗೋಗರೆದರೂ ಪಕ್ಕದವರು ಸಹಾಯಕ್ಕೆ ಬರಲಿಲ್ಲ, ಚಾಲಕನು ಕಿವಿಗೊಡಲಿಲ್ಲ. ಕೊನೆಗೂ ನಿಲ್ಲಿಸಿದ್ದು ತಾಸು ಆದ ಮೇಲೆ ಅಷ್ಟೊತ್ತಿಗೆ ಅವರು ಈಹಲೋಕ ತೇಜಿಸಿದ್ದರು. ಆದರ ನಮ್ಮ ಥರ್ಡಕ್ಲಾಸು ಆರ್ಡರಿ, ಎಕ್ಸಪ್ರೆಸ್ ಬಸ್ಸುಗಳು ಹಾಂಗಲ್ಲ, ಕಾಮನ್ ರೈಲ್ವೆ ಬೋಗಿ ಕೂಡ. ಎಲ್ಲವೂ ಹೊಸ ಹೊಸ ಅನುಭವ ಒದಗಿಸುವ ಖಜಾನೆಗಳು. ಸ್ವಲ್ಪ ಜಂಪಾಗಿ ಹಿಂದಿನವು ಸತ್ಯನಪ ಅಂತ ಕೂಗಿಕೊಂಡ್ರ ಇಡಿ ಬಸ್ಸೆ ಅವನ ಬೆಂಬಲಕ್ಕ ನಿಲ್ಲತ್ತೆ, ಸ್ವಲ್ಪ ಯಾರಿಗೇನರ ಆಗಲಿ ಸಹಾಯಕ ಇದ್ದೋರು ಧುಮಕತಾರೆ, ಉಚ್ಚಿ ಬಂದಾವ, ಇಸ್ಸಿ ಬಂದಾವ ಅಂದ್ರುನೂ ನಿಲ್ಲಸ್ತಾರೆ. ಎಷ್ಟೋ ಡೆಲವರಿಗಳು ಇಲ್ಲಿ ಆಗತಾವ ಅಂದ್ರೆನು ಸಾಮಾನ್ಯವೇನ್ರಿ? ಇನ್ನೂ ಟಾಂ.ಟಾಂ ಎಂದು ಕರೆಯಲ್ಪಡುವ ಟಾಟಾ ಎಸಿ ಗ್ರಾಮಿಣ ಸಾರಿಗೆ ಆಧಾರವಾಗಿವೆ. ಹಿಂದೆ ಟ್ರಾಕ್ಸ ಮಹಿಂದ್ರಾ ಗಾಡಿಗಳಿದ್ದವು, ನಾವು ಶಾಲಿಗೆ ಸರಿಯಾದ ಸಮಯಕ್ಕೆ ಹೋಗಿ ಬರಬೇಕಾದ್ರೆ ಇವೆ ಆಧಾರವಾಗಿದ್ವು. ಅದು ನಾವು ಮಧ್ಯ ಇಳಿಯುವರಾದ್ದರಿಂದ ನಮಗೆ ಟಾಪ್ ಮೇಲೆ, ಬಾನಟ್ ಮೇಲೆ ಜಾಗ. ಅನಿವಾರ್ಯ. ಬಾನಟ್ವು, ಟಾಪ್ ಮೇಲೆ ಹ್ಯಾಂಗ ಕುತುಗೊಂಡು ಪ್ರಯಾಣಿಸುತ್ತಿದ್ದೆವೋ ಅಂತ ನನೆಸಿಕೊಂಡ್ರೆ ಈಗ ಭಯವಾಗುತ್ತೆ. ಆದ್ರೆ ಆನಿವಾರ್ಯತೆ ಇತ್ತಲ್ಲ.
ನಮ್ಮ ರಾಜಕೀಯದಲ್ಲಿರೊ ಪ್ರತಿಶತ ಮಂದಿ ಯಾರು? ಓದೊ ಅವಧಿಯಲ್ಲಿ ಥರ್ಡಕ್ಲಾಸ್ ಇದ್ದ ಮಂದಿನ! ನೌಕರರ ವಲಯದಲ್ಲಿ ಸಿ ದಜರ್ೆ ಅಂತಿದೆ. ಅವರಿಂದಲೇ ದೇಶದ ಕಾರ್ಯಚಟುವಟಿಕೆಗಳು ನಡದಿರೋದು. ವಿಶೇಷವಾಗಿ ಪ್ರೈಮರಿ ಮೇಷ್ಟರು ಈ ವಲಯದಲ್ಲಿ ಬರತಾರೆ. ಆ ವಲಯದಲ್ಲಿ ಇದ್ದದಕಾಗಿಯೇ ಮಹಾನ್ ವ್ಯಕ್ತಿಗಳನ್ನ ರೂಪಸಕಾಗತಿದೆ. ಅವರ ಲೇವಲ್ ಚೇಂಜ್ ಮಾಡಿದ್ರೆ…..!
‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ? ಅ ಜಾತಿ ಈ ಜಾತಿ ಎನಬೇಡ ದೇವನೊಲಿದಾತನೆ ಜಾತ ಸರ್ವಜ್ಞ’ ಎನ್ನುವಂತೆ ‘ಥರ್ಡ ಕ್ಲಾಸಾದರೇನು ಗುಣ, ಕಾರ್ಯವೇನು ಗೌಣವೇ? ಆ ಕ್ಲಾಸು ಈ ಕ್ಲಾಸು ಎನಬೇಡ ಮಾನವಿಯತೆ ಇರುವ ಕ್ಲಾಸೇ ಶ್ರೇಷ್ಠ ಸರ್ವಜ್ಞ’ ಎಂದು ಸರ್ವಜ್ಞನ ಕ್ಷಮೆ ಕೋರಿ ಸೇರಿಸಬೇಕಿದೆ. ಕ್ಲಾಸ ಎಷ್ಟೇ ಮೇಲ ಹೋಗಲಿ ಕೊನೆ ಕ್ಲಾಸಿನ ಅವಶ್ಯಕತೆ ಅನಿವಾರ್ಯತೆ ಬೇಕೆ ಬೇಕು. ಕ್ಲಾಸ ಥರ್ಡ ಇರುವುದರಿಂದಲೇ ಅಪರ್ ಕ್ಲಾಸುಗಳು. ಒಂದು ವಿಷಯ ಬುದ್ಧ,ಬಸವ, ಗಾಂಧಿಜಿ ಮೊದಲಾದ ವ್ಯಕ್ತಿಗಳು ಮಹಾನರಾಗಿದ್ದು ತಮ್ಮ ಕ್ಲಾಸ ಒನ್ ಬಿಟ್ಟು ಕ್ಲಾಸ ಥರ್ಡ ಜನರಿಗಾಗಿ ಬದುಕು ಸವೆಸಿದ್ದಕ್ಕಾಗಿ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಂಡರೆ ನಾವು ಹಗುರಾಗಬಹುದು.
 

‍ಲೇಖಕರು G

8 April, 2015

2 Comments

  1. Kantha

    Good one Mr. Rao, thanks.

  2. gundurao

    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading