ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಮಕ್ಕಳ ಪದ್ಯ

ಕುಂಭ ಕರ್ಣನ ನಿದ್ದೆ

-ಅಕ್ಕಿಮಂಗಲ ಮಂಜುನಾಥ


ಕುಂಭ ಕರ್ಣ ಕರಿಯ ಹಾಗೆ
ಕಪ್ಪಗಿದ್ದನು
ಮುಗಿಲಿಗಿಂಥ ಮಿಗಿಲುವಂಥ
ದಪ್ಪಗಿದ್ದನು
 
ನಿದ್ದೆಯಲ್ಲೇ ಕಳೆವ ಕಾಲ
ಮಾಸಗಟ್ಟಲೆ
ಎದ್ದ ಮೇಲೆ ತಿನ್ನುತ್ತಿದ್ದ
ಲೋಡುಗಟ್ಟಲೆ
 
ಅಲ್ಪ ಸುಖದಿ ಕಳೆಯುತ್ತಿದ್ದ
ಕಾಲ ಎಲ್ಲವ
ಊಟ-ಹೆಂಡ-ನಿದ್ದೆ ಮಾತ್ರ
ಬಯಸುತ ಇವ
 
ಜಗದ ಜನತೆ ಕಕ್ಕಾಬಿಕ್ಕಿ
ಇವನ ನಿದ್ದೆಗೆ
ಕಿವಿಯ ಮುಚ್ಚಿ ಓಡುವರು
ಗೊರಕೆ ಸದ್ದಿಗೆ
 
ಲಾಡು ಬಾಡು ಲೋಡು ಲೋಡು
ಮುಕ್ಕುತ್ತಿದ್ದನು
ಏನೆ ಕೊಡಲಿ ತಿಂದು ಕೈಯ
ನೆಕ್ಕುತ್ತಿದ್ದನು
 
ಅಡಿಯ ನಡೆಗೆ ಬುವಿಯ ಒಡಲು
ನಡುಗುತ್ತಿದ್ದಿತು
ತೆರೆಯೆಬಾಯಿ ಅಭ್ಭಾ! ಸಿಡಿಲು
ಗುಡುಗುತ್ತಿದ್ದಿತು
 
ಅವನ ಹೊಟ್ಟೆ ಕೆರೆಯ ಕಟ್ಟೆ –
ಯಂಥೆ ಇದ್ದಿತು
ರಾಶಿ ಮೊಟ್ಟೆ- ಮಾರುಕಟ್ಟೆ-
ಯನ್ನೆ ಮೆದ್ದಿತು
 
ಒಮ್ಮೆ ನಿದ್ದೆ ಮಾಡುತ್ತಿದ್ದ
ಮಲಗಿ ಗವಿಯಲಿ
ಎಚ್ಚರಾಗಲಿಲ್ಲ ಅವಗೆ
ಬಂದರೂ ಹುಲಿ
 
ಎಬ್ಬಿಸೋಕೆ ದಂಡಿಯಾಗಿ
ದಂಡು ಬಂದಿತು
ಉಚ್ವಾಸಕೆ ದಂಡೆಲ್ಲವು
ಹೊಟ್ಟೆ ಸೇರಿತು
 
ನಿಶ್ವಾಸಕೆ ಅದೇ ದಂಡು
ಆಚೆ ಬಿದ್ದಿತು
“ಸತ್ತೆವಪ್ಪ” ಎಂದು ಬಿದ್ದು-
ಎದ್ದು ಓಡಿತು
 
ಕಹಳೆ ಊದಿ ಭೇರಿ ಬಡಿದು
ಮಾಡೆ ಕಲರವ
ಈಟಿಯಿಂದ ತಿವಿದರೂನು
ಏಳನೋ ಶಿವ
 
ಸಾಲು ಸಾಲು ಆನೆ ಕಾಲು
ಮೇಲೆ ನಡೆದರೂ
ಮಿಸುಕಲಿಲ್ಲ ಮಿಡುಕಲಿಲ್ಲ
ಎಷ್ಟೇ ಹೊಡೆದರೂ
 
ಬಸ್ಸು ಲಾರಿ ಮತ್ತೆ ರೈಲು
ಹತ್ತಿ ಹೋದವು
ಉಸಿರಾಟದ ಉಬ್ಬಸಕ್ಕೆ
ಉರುಳಿ ಬಿದ್ದವು
 
ಮದ್ದು ಗುಂಡು ಆಟಂ ಬಾಂಬು
ಬುಡಕೆ ಇಟ್ಟರೂ
ಮಗ್ಗುಲಾದನಷ್ಟೆ -ಅವರೆ
ಮುಗುಚಿ ಬಿದ್ದರು
 
ಕಾದ ಎಣ್ಣೆ ಕಿವಿಯ ಒಳಗೆ
ಕೆಡವಿ ಸುರಿದರೂ
ಕದಲಲಿಲ್ಲ ಖಾರದ ಹುಡಿ
ಕಣ್ಣಿಗಿಟ್ಟರೂ
 
ಶತ ಪ್ರಯತ್ನ ಮಾಡಿ ಎಲ್ಲ
ಸೋತು ಹೋದರು
ತಮ್ಮ ಕೈಲಿ ಆಗದೆಂದು
ಶರಣು ಆದರು
 
ತಲೆಯ ಮೇಲೆ ಕೈಯ ಹೊತ್ತು
ಕುಳಿತ ರಾವಣ
ಪರಿಹಾರಕೆ ಕೇಳಿಕೊಂಡ
ಅಪ್ಪ ಬ್ರಹ್ಮನ
 
ಬಹ್ಮ ಬಂದು ಪಾತ್ರೆ ತಂದು
ಚಲ್ಲೆ ಅದರ ತೀರ್ಥ
ಆಗ ಕುಂಭ ಕರ್ಣ ಎದ್ದ
ಕಣ್ಣ ಕೈಲಿ ಉಜ್ಜುತ
 
ಇಂಥ ಕತೆ ನಡೆಯಿತೆಂದು
ಹೇಳುತ್ತಾರೆ ಎಲ್ಲಾ
ಸಾಕ್ಷಿಗಾಗಿ ನೋಡಿದವರು
ಒಬ್ಬರೂನು ಇಲ್ಲ.
 

‍ಲೇಖಕರು G

22 September, 2014

5 Comments

  1. vidyashankar

    Very nice poem!

  2. Rupa Hassan

    Chennagide.

  3. maheshwari.u

    ಕುಂಭಕರ್ಣನನೆಬ್ಬಿಸಿಮ್ – .ಚಿಕ್ಕಂದಿನಲ್ಲಿ ನೋಡಿದ ಯಕ್ಷಗಾನ ಬಯಲಾಟದ ನೆನಪು ಅಬ್ಬಾ, ಈಗಲೂ ಹಸಿಯಾಗಿದೆ.ಅಂತೆಯೇಶ್ರೀರಾಮಾಯಣದರ್ಶನಮ್ ಕಾವ್ಯದಲ್ಲಿ ಕುವೆಂಪು ಅವರ ವರ್ಣನೆ.ಪದ್ಯ ಚೆನಾಗಿದೆ.

  4. ಅಕ್ಕಿಮಂಗಲ ಮಂಜುನಾಥ

    ಪದ್ಯ ಓದಿ ಪ್ರತಿಕ್ರಿಯೆ ನೀಡಿದ ವಿದ್ಯಾಶಂಕರ್, ರೂಪ ಹಾಸನ್ ಮತ್ತು ಮಹೇಶ್ವರಿ .ಯು. ಅವರಿಗೆ ಕೃತಜ್ಞತೆಗಳು.
    –ಅಕ್ಕಿಮಂಗಲ ಮಂಜುನಾಥ

  5. RAVINDRANATHA

    He Eegina/kaliyugada kumba karnaranna pitamaha Brahma helisalu saadyavo………………………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading