ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ಕೂತ್ಕೋಬೋದ ಮೇಷ್ಟ್ರೆ…

– ಸತ್ಯಮಂಗಲ ಮಹದೇವ


ಹೀಗೆ ಕೂತ್ಕೋಬೋದ ಮೇಷ್ಟ್ರೆ

ಸುಮ್ಮನೆ ನಿರುಮ್ಮಳವಾಗಿ ಕೂತಿದಿರಲ್ಲ
ಎದೆ ದಸಕ್ ಅನ್ನತ್ತೆ ಗಾಳಿ ಆಡ್ತಿಲ್ವೇನೊ ಅನ್ಸುತ್ತೆ
ಎಲ್ಲಾ ಯಾಕೆ ಹೀಗಿದೆ ಸ್ತಬ್ಧವಾಗಿ ಅಂತ
ನೀವು ಹೀಗೆ ಕೂತಿರೋದನ್ನ ನೋಡ್ದಾಗ.
 
 
ಆಕಾಶ ನೋಡೋವಾಗ ಮೊದಲು ನೀವೆ ಅಲ್ವ
ತೋರು ಬೆರಳ ಹಿಡಿಯುವ ಆಯ ತೋರುದ್ರಲ್ಲ
ಚುಕ್ಕಿ ಎಣಿಸಲು ಹೊಸ ಕಣ್ಣು ಕೊಟ್ಟ ಎರೆಡೂ ಕೈಗಳು
ಕೂತವಲ್ಲ ಶಾಂತವಾಗಿ ನಿಮ್ಮ ತೊಡೆ ಮೇಲೆ
ಜಗದ ಎದೆ ತುಂಬ ನಿಮ್ಮದೇ ಮುಖ
ಮೌನದೊಳಗೊಂದು ಧ್ಯಾನವಾಗಿ
 
‘ಮುಖದಲ್ಲಿ ಭಾವನೆ ಬೇಕೋ ಲೇ’
ಅಂದ್ರಲ್ಲ
ಎದೆತುಂಬಿ ಮೈ ಮನಸ್ಸು ಎರಡೂ
ಬೆರೀಬೇಕು ಅಂತ
ಬೆನ್ನಮೇಲೆ ಬಲವಾಗಿ ಹೊಡದ್ರಲ್ಲ
ಏಟಿನ ಕಾವು ಅಂಗೆ ಅದೆ ಇನ್ನೂ
ಹೀಗೆ ಕೂತ್ಕೋಬೋದ ಮೇಷ್ಟ್ರೆ
ಹತ್ರ ಬಂದಂಗೆಲ್ಲಾ ಕಣ್ ಮುಚ್ಕೊತವೆ
ಪದವಾಗಿ ನಿಮ್ಮ ಹಡೆಯುವ ನೆನಪಲ್ಲಿ
 
ಜಾಲಿ,ಬೇಲಿ,ತೂಬ್ರೆ, ತುಂಬೆ,ಜಾಲಾರಿ
ಎಲ್ಲಾ ಗಿಡಾನೂ
ಅಂಗೈ ಎದೆ ಒಳಗೆ ಅಪ್ಪಿ ಮುದ್ದಾಡುದ್ರಲ್ಲ
ಬಾಪು ಮುಟ್ಟದಂಗೆ ಆಯ್ತು
ತಿಪ್ಪೆ ಕೆಳಗೆ ಬೆಳೆದ ನನ್ನ ಮುಟ್ಟಿದಾಗ್ಲೂ
 
ಆಲದ ಬೇರು ಹರಿದಂಗೆ ಹರುದ್ರಲ್ಲ
ನಾಡ ತುಂಬೆಲ್ಲಾ
ಅದೆಷ್ಟು ಗುಬ್ಬಿ ಗೊರವಂಕ, ಅವ್ವಂದಿರು ತೊರೆದ
ಮರಿಕೋಗಿಲೆಗಳು
ಗಟ್ಟಿ ಪದ ಹಾಡೋ ಅಂಗೆ
ಗುಟುಕು ಕೊಟ್ರಲ್ಲ ಬಾಯಿ ತೆರೆದಾಗೆಲ್ಲಾ
ಅವ್ವ ಅಂದಂಗಾತದೆ ಮೇಷ್ಟ್ರೆ ಅವು ಕೂಗ್ದಾಗೆಲ್ಲಾ
 
 
ಪಟ್ಟ ಕಿರೀಟ ಎಲ್ಲಾ ಒದ್ದು
ಹಸಿದು ಉಂಡವರ ಕಣ್ಣ ನಗುವಾಗಿ
ಇಂದೂ ಕಾಣ್ತಲೇ ಇದೀರ
ಗಂಟೆ ಒಡ್ದಂಗಾಯ್ತದೆ ಮೇಷ್ಟ್ರೆ
ಇವ್ರು ನಮ್ಮ ಮೇಷ್ಟ್ರು ಅಂದ್ರೆ
ನನ್ನಂತ ಎಷ್ಟೋ ಕಪ್ಪು ಹಕ್ಕಿಗಳೆಲ್ಲಾ
ಇವ್ರು ನಮ್ಮ ಮೇಷ್ಟ್ರು ಅಂತವಲ್ಲಾ ಅದ್ಕೆ
 
 
ನೋಡೋಕೆ ಆಗಲ್ಲ ಮೇಷ್ಟ್ರೆ ನೀವು ಹೀಗಿರೋದ್ನ
ಯಾವ ಹೊಸ ನಾಟಕವು ಭ್ರೂಣವಾಗಿ ಬೆಳಿತಿದ್ಯೋ
ಯಾವ ನವೋಲ್ಲಾಸ ಹಂಚೋಕೆ ಸಿದ್ದತೆ ನಡೀತಿದ್ಯೋ
ಎದೆ ಅಗ್ನಿ ಪರ್ವತವಾಗಿ ಕುದಿಯೋದು ಕಾಣ್ತದೆ ನಿಮ್ಮ
ಕಣ್ಣೊಳಗೆ
ಸಿಡಿಯೋ ಕ್ಷಣಕ್ಕೆ ಕಾಯ್ತಾಯಿದ್ದಿನಿ
ಮತ್ತೆ ನಿಮ್ಮ ಅಪ್ಪಿಕೋಳ್ಳೋ ಘಳಿಗೆ ಬರಲಿ ಅಂತ
 

‍ಲೇಖಕರು G

14 January, 2015

6 Comments

  1. Anonymous

    padya chenagide, swamarukadinda koodide.

  2. ಲಲಿತಾ ಸಿದ್ಧಬಸವಯ್ಯ

    ಪದ್ಯ ಬಹಳ ಬಹಳ ಚೆನ್ನಾಗಿದೆ. ನಮ್ಮ ತುಮಕೂರು ಸೀಮೇ ಭಾಷೆ, ಲಯವೆನ್ನಿಸದ ಲಯ, ಆರ್ತತೆ ಪ್ರತಿಯೊಂದೂ ಚೆನ್ನಾಗಿ ಹೊಂದಿಕೊಂಡಿವೆ , ಮಹದೇವ್ ನಿಮಗೆ ನನ್ನ ಧನ್ಯವಾದ ಇಷ್ಟೊಳ್ಳೆ ಪದ್ಯ ಸಿಜಿಕೆ ಮೇಲೆ ಬರೆದದ್ದಕ್ಕೆ.

  3. Vidyarashmi Pelathadka

    Chennaagide

  4. ಅಕ್ಕಿಮಂಗಲ ಮಂಜುನಾಥ

    ಪದ್ಯ ತುಂಬಾನೇ ಚೆನ್ನಾಗಿದೆ. ಅಭಿನಂದನೆಗಳು.

  5. mahesh kalal

    fine kavithe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading