ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿರೋಶಿಮಾದಲ್ಲಿ ಹುಣ್ಣಿಮೆಯೇ ಇಲ್ಲ..

ಸಂಧ್ಯಾ ಹೊನಗುಂಟಿಕರ್ 

ಸಾವಿರ ಸೂರ್ಯರು
ಭೂಮಿಗೆರಗಿದಂತೆ
ಬಂದಡರಿದ ಆ ಚೆಂಬೆಳಕು
ಬೆಳಕಲ್ಲ
ಯಮ ಪುರಿಯಿಂದ ಉರುಳಿದ ಆ ಚೆಂಡು ನೆಲಕ್ಕೆ ತಾಗದೆ ಬದುಕು ನುಂಗಿ
ಬಣ್ಣ ಬದಲಿಸಿ ಸಾವಿನ ದಾಳ ಎಸೆಯಿತೆ?

ಅಂದು ಚಾಚಿದ ಕೆನ್ನಾಲಿಗೆಗೆ
ಬೆಂದಿತ್ತು ನೆಲ, ನರಳಿತ್ತು ಜನ,
ಆಗಸದಿಂದ ಉದುರಿದ ಬೂದಿ
ಯಾವ ಬಾಬಾನ ಪವಾಡದಿಂದಲ್ಲ.
ಚಂದ್ರನು ಉರಿದು ಹೋಗಿರಬೇಕು
ಅದಕ್ಕೆ ಹಿರೋಶಿಮಾದಲ್ಲಿ ಹುಣ್ಣಿಮೆಯೇ ಇಲ್ಲ.

ಒಂಟಿ ಕಣ್ಣಲ್ಲೂ ಒಸರುವ ನೀರು
ಮೋಟು ಕೈಯಲ್ಲಿ, ಉಗುರಿಲ್ಲದ ಬೆರಳಲ್ಲೂ ಕಾಮನ ಬಿಲ್ಲು ತೋರುವಾಸೆ
ಬಕ್ಕ ತಲೆ ,ಬೆರಳಿಲ್ಲದ ಕಾಲಲ್ಲೂ
ಯುದ್ಧಗಳಿಗೆ ಬ್ರೇಕ್ ಹಾಕುವ ಅಹವಾಲು

ತನ್ನ ಆಸೆಯ ನಂಜು ಇಳಿದ ಆಳಕ್ಕೆ ಮುರುಟಿದ ಬದುಕಿಗೆ ಬೆಚ್ಚಿ ಬಿದ್ದಿರಬೇಕು ಸಾಂತ್ವನ ಹೇಳಲು ಎದೆಗಾರಿಕೆ ಇಲ್ಲ
ಧೃತಿ ತಪ್ಪಿರಬಹುದು ದೊಡ್ಡಣ್ಣಗೆ.
ಆದರೇನು ….?
ಪಾಪಿಗೂ ಬದುಕುವಾಸೆ
ಇನ್ನಷ್ಟು ಮದ್ದು ಗುಂಡುಗಳು ತೆಕ್ಕೆಯಲ್ಲಿ. ನಿದ್ದೆಯಿಲ್ಲ ತನ್ನ ನೆರಳೆ ನುಂಗಿದಂತೆ…
ಹಗ್ಗವೇ ಹಾವಾದಂತೆ
ಮಗ್ಗುಲಲ್ಲಿ ಮದ್ದು ತನ್ನನ್ನೇ ಸುಟ್ಟೀತೆ
ಕನವರಿಸುತ್ತಿರಬಹುದು ಪಾಪ ಭೀತಿಯಲ್ಲಿ.

ಇತಿಹಾಸಕ್ಕೆ ಬಲು ದೊಡ್ಡ ಗರ್ಭ
ಬಿಟ್ಟು ಕೊಡುವುದಿಲ್ಲ ಹೊಟ್ಟೆಯ ಗುಟ್ಟು
ಹೊರ ಪದರು ಬಿಚ್ಚಿದರೂ ಒಳಪದರ ಹುಟ್ಟು ಕಾಲಗರ್ಭದ ಬೀಜಕ್ಕೆ  ಅತಿ ಸಂಯಮ ಕಾಯುತ್ತದೆ ಬೇಸರಿಯದೇ ಬರುವ ಸಮಯ

ಬದುಕು ಬರಚಿ ಎಸೆದರೂ
ಕನಸುಗಳ ಹೊರೆ ದಹಿಸಿದರೂ
ಬುದ್ಧನೂರಿನವರಿಗೆ
ಒಂದೇ ಒಂದು ಹಂಬಲ
ಹಾರಿಸಬೇಕು ರಾಶಿ ರಾಶಿ ಪಾರಿವಾಳಗಳ ಪೂರ್ವದಿಂದ ಪಶ್ಚಿಮಕ್ಕೆ….

‍ಲೇಖಕರು avadhi

12 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading