ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾರಿ ಹೋದ ಬಾಲಿವುಡ್ 'ಪ್ರಾಣ'…' – ನಾ ದಿವಾಕರ್ ಬರೀತಾರೆ


 
ಸಿನಿಮಾಗಳಲ್ಲಿ, ವಿಶೇಷವಾಗಿ ಭಾರತೀಯ ಸಿನಿಮಾ ರಂಗದಲ್ಲಿ ಖಳನಾಯಕ ಎಂದರೆ ಜನಸಾಮಾನ್ಯರ ದ್ವೇಷಕ್ಕೊಳಗಾಗುವ ಒಂದು ಪಾತ್ರ. ಖಳನಾಯಕನ ಪಾತ್ರ ಮಾಡುವ ವ್ಯಕ್ತಿ ಎಷ್ಟೇ ಸಂಭಾವಿತರಾಗಿದ್ದರೂ ಕೆಲವೊಮ್ಮೆ ಸಮಾಜದಲ್ಲಿ ಶಂಕಾಸ್ಪದ ವ್ಯಕ್ತಿಯಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚು. ಅದರೂ ಭಾರತೀಯ ಚಿತ್ರರಂಗದಲ್ಲಿ ಖಳನಾಯಕನ ಪಾತ್ರ ವಹಿಸಿದ ಕೆಲವು ನಟರು ಅಜರಾಮರವಾಗಿದ್ದಾರೆ. ಅಂತಹ ಒಬ್ಬ ಮಹಾನ್ ಕಲಾವಿದ ಪ್ರಾಣ್, ಪ್ರಾಣ್ ಕ್ರಿಶನ್ ಸಿಕಂಡ್ ಇಹಲೋಕ ತ್ಯಜಿಸಿದ್ದಾರೆ 60 ವರ್ಷಗಳ ತಮ್ಮ ಸುದೀರ್ಘ ಕಲಾಸೇವೆಯಲ್ಲಿ ನಾನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕ, ಪೋಷಕ ನಟ, ಹಾಸ್ಯ ನಟನಾಗಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಪ್ರಾಣ್ ತಮ್ಮ ವಿಶಿಷ್ಟ ಕಂಚಿನ ಕಂಠ ಸಿರಿಗೇ ಪ್ರಸಿದ್ಧಿ.
ಪ್ರಾಣ್ ನಟಿಸಿರುವ ಬಾಲಿವುಡ್ ಚಿತ್ರಗಳ ಮತ್ತೊಂದು ವಿಶೇಷ ಎಂದರೆ ಚಿತ್ರ ಶೀರ್ಷಿಕೆಯಲ್ಲಿ ಎಲ್ಲ ನಟ ನಟಿಯರ ಹೆಸರುಗಳನ್ನು ತೋರಿಸಿದ ನಂತರ ಅಂಡ್ ಪ್ರಾಣ್ ಅಥವಾ ಅಲಾಂಗ್ ವಿತ್ ಪ್ರಾಣ್ ಎಂದು ತೋರಿಸುತ್ತಿದ್ದುದು. ಈ ಒಂದು ಸನ್ಮಾನ ಮತ್ತಾವ ನಟನಿಗೂ ದೊರೆತಂತೆ ಕಾಣುವುದಿಲ್ಲ. ಪ್ರಾಣ್ ವೈಶಿಷ್ಟ್ಯವೇ ಅದು. ಅವರ ನಟನೆ ಕೆಲವೊಮ್ಮೆ ಹೀರೋಗಳನ್ನು ಮರೆ ಮಾಚಿಸುವಂತಿರುತ್ತಿತ್ತು. ಮನೋಜ್ ಕುಮಾರ್ ಅವರ ಉಪಕಾರ್ ಒಂದು ನಿದರ್ಶನವಷ್ಟೆ.
ಖಳನಾಯಕನಾಗಿ, ಪೋಷಕ ನಟನಾಗಿ ಅತಿ ಹೆಚ್ಚು ಫಿಲಂಫೇರ್ ಮತ್ತು ಬಿಎಫ್ಜೆಎ ಪ್ರಶಸ್ತಿಗಳನ್ನು ಗಳಿಸಿರುವ ಕೀರ್ತಿ ಪ್ರಾಣ್‌ಗೆ ಸಲ್ಲುತ್ತದೆ. 1920ರ ಫೆಬ್ರವರಿ 12ರಂದು ಜನಿಸಿದ ಪ್ರಾಣ್ 1940 ರಿಂದ 1990ರ ಕಡೆಯವರೆಗೆ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಹಲಾಕು, ಖಾನ್ದಾನ್, ಪಿಲ್ಪಿಲಿ ಸಾಹೆಬ್ ಮುಂತಾದ ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿದ ಪ್ರಾಣ್ ನಂತರ ಹಲವು ದಶಕಗಳ ಕಾಲ ವಿಲನ್ ಪಾತ್ರದಲ್ಲಿ ಮಿಂಚಿದ್ದರು. 1940 ರಿಂದ 47ರವರೆಗೆ ನಾಯಕ ನಟರಾಗಿ ನಟಿಸಿದ ಪ್ರಾಣ್ ನಂತರ ಐದು ದಶಕಗಳ ಕಾಲ ಖಳನಾಯಕರಾಗಿ ಮಿಂಚಿದ್ದರು.
ಹಿಂದಿ ಚಿತ್ರರಂಗದಲ್ಲಿ ಖಳನಾಯಕರಾಗಿ ಪ್ರವೇಶಿಸಿ ನಾಯಕರಾದವರು ಹಲವರಿದ್ದಾರೆ, ಶತ್ರುಘ್ನಸಿನ್ಹ, ವಿನೋದ್ ಖನ್ನ ಮುಂತಾದವರು. ಆದರೆ ನಾಯಕ ನಟರಾಗಿ ಪ್ರವೇಶಿಸಿ ಖಳನಾಯಕರಾಗಿ ಪ್ರಸಿದ್ಧಿಯಾದವರಲ್ಲಿ ಅಜಿತ್ ಮತ್ತು ಪ್ರಾಣ್ ಅಪ್ರತಿಮರು. ಖಾನ್ದಾನ್ (1942) ಪಿಲ್ಪಿಲಿ ಸಾಹೆಬ್ (1954) ಹಲಾಕು (1956) ಪ್ರಾಣ್ ನಾಯಕರಾಗಿ ನಟಿಸಿದ ಪ್ರಮುಖ ಚಿತ್ರಗಳು. ನಂತರ ಖಳನಾಯಕರಾಗಿ ಮಧುಮತಿ, ಜಿಸ್ ದೇಶ್ ಮೆ ಗಂಗಾ ಬೆಹತೀ ಹೈ, ಜಾನಿ ಮೆರಾ ನಾಮ್, ಬೇ ಇಮಾನ್, ಜಂಝೀರ್, ದುನಿಯಾ, ಡಾನ್ , ಉಪಕಾರ್, ಆನ್ಸೂ ಬನ್ಗಯೆ ಫೂಲ್ ಮುಂತಾದ ಚಿತ್ರಗಳಲ್ಲಿ ಖಳನಾಯಕರಾಗಿ, ಪೋಷಕ ನಟರಾಗಿ ನಟಿಸಿದ ಪ್ರಾಣ್ ತಮ್ಮ ಕಂಠ ಸಿರಿ, ಮಾತನಾಡುವ ಶೈಲಿ ಮತ್ತು ಗಡಸು ವ್ಯಕ್ತಿತ್ವದಿಂದಲೇ ಜನತೆಯ ಅನುರಾಗಕ್ಕೆ ಪಾತ್ರರಾಗಿದ್ದರು.
1942-46ರ ಅವಧಿಯಲ್ಲಿ 18 ಚಿತ್ರಗಳಲ್ಲಿ ನಟಿಸಿದ್ದ ಪ್ರಾಣ್ ದೇಶದ ವಿಭಜನೆಯ ವೇಳೆ ಕೊಂಚ ಸಮಯ ನಟನೆಯಿಂದ ದೂರ ಸರಿಯುವುದು ಅನಿವಾರ್ಯವಾಗಿತ್ತು. ವಿಭಜನೆಯ ನಂತರ ಲಾಹೋರಿನಿಂದ ಮುಂಬೈಗೆ ಬಂದ ಪ್ರಾಣ್ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾಗ ಮರೀನ್ ಡ್ರೈವ್ನಲ್ಲಿ ದೆಲಮಾರ್ ಹೋಟೆಲಿನಲ್ಲಿ ನೌಕರಿ ಮಾಡುತ್ತಿದ್ದರು. ದೇವಾನಂದ್ ಮತ್ತು ಕಾಮಿನಿ ಕೌಶಲ್ ನಟಿಸಿದ್ದ ಜಿದ್ದಿ ಚಿತ್ರದಲ್ಲಿ ದೊರೆತ ಅವಕಾಶ ಪ್ರಾಣ್ ಜೀವನದಲ್ಲಿ ಹೊಸ ತಿರುವು ನೀಡಿತ್ತು. ನಂತರ ಎಂದಿಗೂ ಹಿಂದಿರುಗಿ ನೋಡದ ಪ್ರಾಣ್ 1950ರ ವೇಳೆಗೇ ಪ್ರಸಿದ್ಧ ಖಳನಾಯಕರಾಗಿ ಹೊರಹೊಮ್ಮಿದ್ದರು. 1948ರ ಗ್ರಹಸ್ಥಿ, 1949ರ ಅಪರಾಧಿ ಮತ್ತು ಪುತ್ಲಿ ಪ್ರಾಣ್ ಅವರ ನಟನಾ ಕೌಶಲ್ಯವನ್ನು ಹೊರಸೂಸುವುದರಲ್ಲಿ ಯಶಸ್ವಿಯಾಗಿದ್ದವು. 1940-60ರ ದಶಕಗಳ ಅದ್ವಿತೀಯ ನಾಯಕರಾಗಿದ್ದ ದಿಲೀಪ್ ಕುಮಾರ್, ದೇವಾನಂದ್ ಮತ್ತು ರಾಜ್ಕಪೂರ್ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಪ್ರಾಣ್ ನಿದರ್ೇಶಕರ ಪ್ರಥಮ ಆದ್ಯತೆಯಾಗಿದ್ದರು. ರಾಜ್ಕಪೂರ್ ಅವರ ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ ಚಿತ್ರದಲ್ಲಿನ ಅವರ ನಟನೆ ಅವಿಸ್ಮರಣೀಯ. ಒಬ್ಬ ಡಕಾಯಿತನ ಪಾತ್ರದಲ್ಲಿ ಸದಾ ಕುತ್ತಿಗೆಯ ಮೇಲೆ ಬೆರಳಾಡಿಸುತ್ತಾ ತಮ್ಮ ಜೀವನದ ಅಂತ್ಯ ಕ್ಷಣಗಣನೆ ಮಾತ್ರ ಎಂಬ ಸಂಕೇತವನ್ನು ನೀಡುವ ಪಾತ್ರದಲ್ಲಿ ಪ್ರಾಣ್ ಚಿತ್ರದ ಹೈಲೈಟ್ ಆಗಿದ್ದರು.
ದಿಲೀಪ್ ಕುಮಾರ್ ಅವರ ಆಜಾದ್, ದೇವದಾಸ್, ಮಧುಮತಿ, ದಿಲ್ ದಿಯ ದದರ್್ಲಿಯ, ರಾಮ್ ಔರ್ ಶ್ಯಾಮ್ ಹಾಗೂ ಆದ್ಮಿ, ದೇವಾನಂದ್ ಅವರ ಜಿದ್ದಿ, ಮುನೀಮ್ಜಿ, ಅಮರ್ ದೀಪ್, ಜಬ್ ಪ್ಯಾರ್ ಕಿಸೀಸೆ ಹೋತಾ ಹೈ, ರಾಜ್ ಕಪೂರ್ ಅವರ ಆಹ್, ಚೋರಿಚೋರಿ, ಜಾಗ್ತೆ ರಹೋ, ಚಲಿಯಾ, ದಿಲ್ ಹಿ ತೋ ಹೈ, ಜಿಸ್ ದೇಶ್ಮೆ ಗಂಗಾ ಬೆಹತೀ ಹೈ ಮುಂತಾದ ಚಿತ್ರಗಳು ಪ್ರಾಣ್ ಅವರ ಯಶಸ್ವಿ ಪಯಣದ ಮೈಲಿಗಲ್ಲುಗಳಾಗಿ ಪರಿಣಮಿಸಿದ್ದವು. ನಂತರ 1960-70ರ ದಶಕದಲ್ಲಿ ಶಮ್ಮಿಕಪೂರ್, ಜಾಯ್ ಮುಖಜರ್ಿ, ಧಮೇರ್ಂದ್ರ, ರಾಜೇಂದ್ರ ಕುಮಾರ್ ಚಿತ್ರಗಳಲ್ಲೂ ಪ್ರಾಣ್ ಪ್ರಮುಖ ಪಾತ್ರ ವಹಿಸಿದ್ದರು. 1950-70ರ ದಶಕದಲ್ಲಿ ಪ್ರಾಣ್ ಎಲ್ಲರ ನೆಚ್ಚಿನ ಖಳನಾಯಕರಾಗಿದ್ದುದಷ್ಟೇ ಅಲ್ಲ, ಅನೇಕರು ತಮ್ಮ ಮಕ್ಕಳಿಗೆ ಪ್ರಾಣ್ ಎಂದು ಹೆಸರಿಡಲು ಹಿಂಜರಿಯುತ್ತಿದ್ದುದೂ ಉಂಟು. ಇದು ಪರದೆಯ ಮೇಲೆ ವಿಲನ್ ಪ್ರಾಣ್ ಮೂಡಿಸಿದ ಭೀತಿಯ ಪರಿಣಾಮ. ಆದರೆ ನಿಜ ಜೀವನದಲ್ಲಿ ಪ್ರಾಣ್ ಒಬ್ಬ ಸಹೃದಯ ನಟ ಎಂದು ಇಡೀ ಚಿತ್ರರಂಗಕ್ಕೆ ತಿಳಿದ ಸತ್ಯವಾಗಿತ್ತು. ನಾಯಕನಿಲ್ಲದ ಚಿತ್ರ ಇರಬಹುದು ಆದರೆ ಖಳನಾಯಕನಿಲ್ಲದೆ ಇರಲಾರದು. ಹೀರೋವನ್ನು ಉತ್ತಮ ಚಾರಿತ್ರ್ಯದ ನಟನನ್ನಾಗಿ ನಿರೂಪಿಸಲು ವಿಲನ್ ಪಾತ್ರ ಅತ್ಯಗತ್ಯ ಎಂಬ ಪ್ರಾಣ್ ಅವರ ಅಭಿಪ್ರಾಯ ಎಷ್ಟು ಸತ್ಯ.

ಕೇವಲ ಖಳನಾಯಕನಾಗಿ ಮಾತ್ರವಲ್ಲದೆ ಅತ್ಯುತ್ತಮ ಪೋಷಕ ನಟನಾಗಿ ಪ್ರಾಣ್ ಹಲವು ಚಿತ್ರಗಳಲ್ಲಿ ಮಿಂಚಿದ್ದರು. ಅಷ್ಟೇನೂ ಉತ್ತಮ ನಟನಾ ಕೌಶಲ್ಯವಿಲ್ಲದಿದ್ದರೂ ಅತ್ಯುತ್ತಮ ಚಿತ್ರಗಳನ್ನು ನೀಡಿದ ಮನೋಜ್ ಕುಮಾರ್ ಅವರ ಉಪಕಾರ್ ಚಿತ್ರದಲ್ಲಿ ಪ್ರಾಣ್ ನಿರ್ವಹಿಸಿದ ಮಲಂಗ್ ಚಾಚಾ ಪಾತ್ರ ಇಂದಿಗೂ ಅವಿಸ್ಮರಣೀಯ. ಬಹುಶಃ ಉಪಕಾರ್ ಯಶಸ್ಸಿಗೆ ಪ್ರಾಣ್ ಅವರ ಪಾತ್ರವೇ ಮುಖ್ಯಪ್ರಾಣ ಎಂದರೂ ಅತಿಶಯವೇನಲ್ಲ. ವಿಕ್ಟೋರಿಯಾ 203 ನಲ್ಲಿ ಹಾಸ್ಯ ನಟರಾಗಿ, ಜಂಝೀರ್ ಚಿತ್ರದಲ್ಲಿ ಅಮಿತಾಬ್ ಅವರೊಡನೆ ಸುಧಾರಿತ ಖಳನಾಯಕನಾಗಿ, ಶರಾಬಿ ಚಿತ್ರದಲ್ಲಿ ಒಬ್ಬ ಭಗ್ನ ಉದ್ಯಮಿಯಾಗಿ, ಧರಮ್ವೀರ್ ಚಿತ್ರದಲ್ಲಿ ಒಬ್ಬ ವೀರ ಯೋಧನಾಗಿ ಪ್ರಾಣ್ ಅವರ ನಟನೆ ಚಿರಸ್ಮರಣೀಯ. ಅಶೋಕ್ ಕುಮಾರ್ ಅವರೊಡನೆ ಗಾಢವಾದ ಸ್ನೇಹ ಹೊಂದಿದ್ದ ಪ್ರಾಣ್ ಅವರೊಡನೆ 27 ಚಿತ್ರಗಳಲ್ಲಿ ನಟಿಸಿದ್ದೂ ಒಂದು ವೈಶಿಷ್ಟ್ಯ. ಕಾಶ್ಮೀರ್ ಕಿ ಕಲಿ ಚಿತ್ರದಲ್ಲಿ ಸ ಬಳಸುವಲ್ಲಿ ಷ ಮತ್ತು ಷ ಬಳಸುವಲ್ಲಿ ಸ ಬಳಸುವ ಪಾತ್ರ ಅವರ ವಾಕ್ ಸಿರಿಗೆ ಸಾಕ್ಷಿ. ಈ ಚಿತ್ರದಲ್ಲಿ ಪ್ರಾಣ್ ಸಿಗರೇಟ್ ಎಳೆಯುವ ಪರಿ ಅಂದಿನ ಯುವಕರ ಫ್ಯಾಷನ್ ಆಗಿತ್ತೆಂದರೆ ಅವರ ನಟನಾ ಕೌಶಲ್ಯ ಮತ್ತು ಪ್ರಭಾವದ ಅರಿವಾಗುತ್ತದೆ. 1969 ರಿಂದ 1982ರ ಅವಧಿಯಲ್ಲಿ ರಾಜೇಶ್ ಖನ್ನಾ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ನಾಯಕ ನಟರಿಗಿಂತಲೂ ಪ್ರಾಣ್ ಹೆಚ್ಚಿನ ಸಂಭಾವನೆ ಪಡೆಯತ್ತಿದ್ದರು. ಅಮಿತಾಬ್, ವಿನೋದ್ ಖನ್ನ, ರಣಧೀರ್ ಕಪೂರ್, ರಿಷಿ ಕಪೂರ್ ಅವರಿಗಿಂತಲೂ ಪ್ರಾಣ್ ಸಂಭಾವನೆ ಹೆಚ್ಚಾಗಿರುತ್ತಿತ್ತು. ರಾಜೇಶ್ ಖನ್ನಾ ಅವರೊಡನೆ 6, ಅಮಿತಾಬ್ ಅವರೊಡನೆ 14 ಚಿತ್ರಗಳಲ್ಲಿ ನಟಿಸಿದ ಪ್ರಾಣ್ ಶರಾಬಿ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಅಮಿತಾಬ್ ಅವರನ್ನೂ ಮೀರಿಸಿ ನಟಿಸಿರುವುದು ಅವರ ಪ್ರತಿಭೆಗೆ ಸಾಕ್ಷಿ.
ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಸಿದ್ದ ಪ್ರಾಣ್ 1997ರಲ್ಲಿ ಸರ್ವಕಾಲಿಕ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದರು. 2000ದಲ್ಲಿ ಸ್ಟಾರ್ ಡಸ್ಟ್ ಶತಮಾನದ ಖಳನಾಯಕ ಪ್ರಶಸ್ತಿಗೆ ಭಾಜನರಾಗಿದ್ದರು. 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ಮತ್ತು 2013ರಲ್ಲಿ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದ ಪ್ರಾಣ್ ಇಹಲೋಕ ತ್ಯಜಿಸುವ ಮೂಲಕ ಬಾಲಿವುಡ್ನಲ್ಲಿ ಒಂದು ಶಾಶ್ವತ ಕೊರತೆಯನ್ನು ಉಂಟುಮಾಡಿ ಹೋಗಿದ್ದಾರೆ.
ಆಜ್ ದುನಿಯಾ ಮೇ ಅಗರ್ ಜಿಂದಾ ರಹನಾ ಹೈ ತೋ ದುನಿಯಾ ಕಾ ಬಟನ್ ಅಪ್ನೆ ಹಾಥ್ ಮೆ ರಖನಾ ಪಡ್ತಾ ಹೈ ಎಂಬ ಶರಾಬಿ ಚಿತ್ರದ ಡಯಲಾಗ್ನಂತೆಯೇ ಪ್ರಾಣ್ ಅಭಿಮಾನಿಗಳ ಅಭಿಮಾನದ ಬಟನ್ ತಮ್ಮ ಹೃದಯದಲ್ಲೇ ಮುಚ್ಚಿಟ್ಟುಕೊಂಡು ಅಜರಾಮರರಾಗಿದ್ದಾರೆ. ಪ್ರಾಣ್ ಇನ್ನಿಲ್ಲ ಆದರೆ ಪ್ರಾಣ್ ಎಂಬ ಅದ್ಭುತ ನಟನ ಪ್ರಾಣ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ, ಸದಾ ಶಾಶ್ವತವಾಗಿ ಉಳಿದೇ ಇರುತ್ತದೆ.
 
 
 

‍ಲೇಖಕರು avadhi

29 July, 2013

1 Comment

  1. Manjnula

    Tumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading