ತೇಜಸ್ವಿಯನ್ನು ಹುಡುಕುತ್ತಾ : ಮೂಡಿಗೆರೆ, ಮೂಡಿಗೆರೆ … ರೈಟ್ ರೈಟ್!

ಭಾಗ ೦೬

(ಭಾಗ ೫ ಓದಲು ಇಲ್ಲಿ ಕ್ಲಿಕ್ಕಿಸಿ)

ಮರುದಿನ ಬೆಳಿಗ್ಗೆ ಮೂಡಿಗೆರೆಗೆ ವಿದಾಯ ಹೇಳಿ ಬೆಂಗಳೂರಿಗೆ ಹೋಗುವ ಬಸ್ ಹಿಡಿಯಬೇಕಿತ್ತು. ಸಾಕ್ಷ್ಯಚಿತ್ರಕ್ಕಾಗಿ ಬೇಕಾದ ವಿಷಯಗಳು, ಮಾಹಿತಿಗಳು ಸಹ ಸಾಕಷ್ಟೇ ಸಿಕ್ಕಿದ್ದವು. ಆದರೆ ನನಗೆ ಅಷ್ಟು ಬೇಗ ಮೂಡಿಗೆರೆಯಂತಹ ಸುಂದರ ಊರನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ. ‘ಇನ್ನೊಂದೆರಡು ದಿನ ಮೂಡಿಗೆರೆಯಲ್ಲೇ ಇದ್ದು ಇನೊಂದಷ್ಟು ಜಾಗಗಳನ್ನು ತಿರುಗಿ ನಂತರ ಬೆಂಗಳೂರಿಗೆ ಹೋಗಬಹುದಲ್ಲ’ ಅಂದುಕೊಳ್ಳುತ್ತಿದ್ದೆ. ಆದರೆ ಹೇಮಂತ ಅಂದು ಬೆಂಗಳೂರಿಗೆ ಹಿಂತಿರುಗಿ ಅವನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ನೈಟ್ ಶಿಫ್ಟ್ ಕೆಲಸಕ್ಕೆ ಹೋಗಲೇಬೇಕು ಎಂದ. ಹಾಗಾಗಿ ಮೂಡಿಗೆರೆಯನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರೂ ಬೆಂಗಳೂರಿಗೆ ಹೋಗಲೇಬೇಕಾದ ಅನಿವಾರ್ಯತೆ ಉದ್ಭವಿಸಿದ್ದರಿಂದ, ಬೆಳಿಗ್ಗೆ ಬೇಗ ಎದ್ದು ಮೂಡಿಗೆರೆ ಬಿಡುವ ತಯಾರಿ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮೂಡಿಗೆರೆಯಿಂದ ಜಾಗ ಖಾಲಿ ಮಾಡುವ ಸಿದ್ದತೆಯಲ್ಲಿರಬೇಕಾದರೆ ಧನಂಜಯ್ ಫೋನ್ ಮಾಡಿ ‘ಪರಮೇಶ್ವರ್, ಸ್ವಲ್ಪ ಅರ್ಜೆಂಟ್ ಇದೆ. ಕೆಳಗಡೆ ಬನ್ನಿ, ಇಲ್ಲಿ ಕೆನರಾ ಬ್ಯಾಂಕ್ ಎಟಿಎಮ್ ಮುಂದೆ ಇದ್ದೀನಿ’ ಎಂದರು. ಏನೋ ತುರ್ತಿನ ವಿಚಾರವಿರಬೇಕೆಂದುಕೊಂಡು ನಾವಿಬ್ಬರೂ ಕೆಳಗಿಳಿದು ಅವರು ಹೇಳಿದ್ದ ಜಾಗಕ್ಕೆ ಬಂದೆವು. ಧನಂಜಯ್ ಎಟಿಎಮ್ ಮುಂದಿನ ಮಾರುತಿ ವ್ಯಾನೊಂದಕ್ಕೆ ಓರಗಿ ನಿಂತು ನಮಗಾಗಿ ಕಾಯುತ್ತಿದ್ದರು. ನಮ್ಮನ್ನು ಕಂಡ ಕೂಡಲೇ ‘ಹೊರಟುಬಿಟ್ರ ಬೆಂಗಳೂರಿಗೆ?’ ಎಂದು ಪ್ರಶ್ನಿಸಿದರು. ‘ಹೌದು ಸಾರ್, ನಾನು ಇನ್ನೊಂದೆರಡು ದಿನ ಇರ್ಬೇಕು ಅಂತಿದ್ದೆ. ಆದ್ರೆ ಇವನಿಗೆ ನೈಟ್ ಶಿಫ್ಟ್  ಸೋ ಹೋಗ್ಲೇಬೇಕಾಗಿದೆ’ಎಂದೆ. ‘ಗೊತ್ತಿಲ್ಲ ನಿಮಗೆ ಆಗುತ್ತೋ ಇಲ್ಲವೋ ಅಂತ, ಸಾಧ್ಯ ಆದ್ರೆ ಟ್ರೈ ಮಾಡಿ’ ಎನ್ನುತ್ತಾ ಒಂದು ಚೀಟಿಯನ್ನು ನನ್ನ ಕೈಗೆ ಕೊಟ್ಟರು.
‘ಏನಿದು ಚೀಟಿ?’ಎಂದು ಕೇಳುವ ಮೊದಲೇ, ‘ತೇಜಸ್ವಿಗೆ ಬೇಕಾಗಿದ್ದ ಮುಖ್ಯವಾದ ಇಬ್ಬರು ವ್ಯಕ್ತಿಗಳನ್ನ ರಾತ್ರಿ ಮನೆಗೆ ಹೋದ್ಮೇಲೆ ಕಾಂಟ್ಯಾಕ್ಟ್ ಮಾಡಿ ನಿಮ್ಮ ವಿಷ್ಯ ಹೇಳ್ದೆ. ಅವ್ರು ತುಂಬಾನೇ ಖುಷಿಪಟ್ರು. ಇವತ್ತು ಬರೋಕೆ ಹೇಳಿದಾರೆ. ಅವ್ರಿಬ್ರು ಸಿಗೋದೇ ತುಂಬಾ ಕಷ್ಟ. ಸಾಧ್ಯ ಆದ್ರೆ ಹೋಗಿ ಅವ್ರನ್ನ ಮೀಟ್ ಮಾಡಿ. ತೇಜಸ್ವಿ ಬಗ್ಗೆ ನಿಮಗೆ ಇನ್ನಷ್ಟು ಹೊಸ ವಿಷ್ಯ ಸಿಗಬಹುದು’, ನಾನು ಇಬ್ಬರ ಹತ್ತಿರಾನೂ ಆಲ್ರೆಡಿ ಮಾತಾಡಿ ನಿಮ್ಮ ವಿಷ್ಯ ಹೇಳಿದ್ದೀನಿ! ಹಾಂ…ನನಗೆ ಬ್ಯಾಂಕಿಗೆ ಲೇಟ್ ಆಗ್ತಿದೆ. ಬೇಲೂರಿನವರೆಗೂ ಬಸ್ ಹಿಡಿದು ಹೋಗ್ಬೇಕು. ಹೊರಡ್ತೀನಿ. ನಿಮ್ಮ ಕೆಲಸ ಎಲ್ಲ ಮುಗಿದ ಮೇಲೆ ಫೋನ್ ಮಾಡಿ’ ಎನ್ನುತ್ತಾ ನಮ್ಮ ಪ್ರತಿಕ್ರಿಯೆಗೂ ಕಾಯದೇಧನಂಜಯ್ ಬೇಲೂರಿಗೆ ಹೋಗುವ ಬಸ್ ಹಿಡಿಯಲು ಮೂಡಿಗೆರೆಯ ಬಸ್ ನಿಲ್ದಾಣದ ಕಡೆ ಓಡಿದರು.
ನಾವು ಚೀಟಿ ತೆಗೆದು ನೋಡಿದೆವು. ಆ ಚೀಟಿಯಲ್ಲಿ ಎರಡು ಹೆಸರುಗಳ ಜೊತೆ ಆ ಹೆಸರಿನ ವ್ಯಕ್ತಿಗಳ ಫೋನ್ ನಂಬರ್ ಸಹಇತ್ತು. ಅದರಲ್ಲಿ ಮೊದಲ ಹೆಸರು ‘ಹಿರೇಮಗಳೂರು ಕಣ್ಣನ್’ಮತ್ತು ಎರಡನೆಯದು ‘ಗಿರಿಜಾ ಶಂಕರ್’ ಎಂಬ ಹೆಸರು. ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ನೋಡಿದ್ದರಿಂದ ‘ಹಿರೇಮಗಳೂರು ಕಣ್ಣನ್’ಎಂದರೆ ಯಾರು ಎಂದು ನಮಗೆ ಗೊತಿತ್ತು. ಆದರೆ ‘ಗಿರಿಜಾ ಶಂಕರ್’ ಎನ್ನುವ ಹೆಸರನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೆವು. ಧನಂಜಯ್ ಅಷ್ಟು ಒತ್ತಿ ಹೇಳಿದ್ದರಿಂದ ಇವರಿಬ್ಬರೂ ತೇಜಸ್ವಿಯವರಿಗೆ ತುಂಬಾ ಆಪ್ತರು ಎಂಬುದರಲ್ಲಿ ನಮಗೆ ಯಾವುದೇ ಅನುಮಾನಗಳಿರಲಿಲ್ಲ. ಹಾಗಾಗಿ ಅವರಿಬ್ಬರನ್ನು ಮಾತನಾಡಿಸದೇ ಬೆಂಗಳೂರಿಗೆ ಹೋಗಬಾರದು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ಆಗ ನಮಗಿದ್ದ ಸಮಸ್ಯೆ ಎಂದರೆ ಹೇಮಂತನ ನೈಟ್ ²¥sïÖ ಕೆಲಸ. ಹಿರೇಮಗಳೂರು ಕಣ್ಣನ್ ಹಾಗೂ ಗಿರಿಜಾಶಂಕರರವರನ್ನು ಮಾತನಾಡಿಸಲು ಹೋಗುವುದಾದರೆ ಅದಕ್ಕೆ ಹೇಮಂತನ ಒಪ್ಪಿಗೆ ಬೇಕಿತ್ತು. ನನ್ನ ಮನಸ್ಸಿನ ಒದ್ದಾಟವನ್ನು ಅರ್ಥ ಮಾಡಿಕೊಂಡ ಹೇಮಂತ ಅವರ ಟೀಮ್ ಲೀಡರಿಗೆ ಫೋನ್ ಮಾಡಿ ಅನಾರೋಗ್ಯದ ಕಾರಣ ಕೊಟ್ಟು ಆ ದಿನದ ಮಟ್ಟಿಗೆ ರಜೆ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದ. ಆ ಕ್ಷಣದಲ್ಲಿ ನನಗೆ ಹೇಮಂತನ ಬಗ್ಗೆ ಅತೀವವಾದ ಅಭಿಮಾನ ಉಂಟಾಯಿತು.

ತಕ್ಷಣ ಇಬ್ಬರೂ ಬೆಂಗಳೂರಿಗೆ ಹೋಗುವ ವಿಚಾರವನ್ನೇ ಮರೆತು ಚೀಟಿಯಲ್ಲಿದ್ದ ತೇಜಸ್ವಿಯವರ ಇಬ್ಬರು ಒಡನಾಡಿಗಳಿಗೆ ಫೋನ್ ಮಾಡಿದೆವು. ಗಿರಿಜಾ ಶಂಕರರವರು ಮಧ್ಯಾಹ್ನದ ನಂತರ ಬರುವಂತೆ ಹೇಳಿದರೆ, ಹಿರೇಮಗಳೂರು ಕಣ್ಣನ್ ರವರ ಸಹಾಯಕರೊಬ್ಬರು ಕರೆ ಸ್ವೀಕರಿಸಿ ಯಾವಾಗ ಬೇಕಾದರು ಬರಬಹುದೆಂದು ತಿಳಿಸಿದ್ದರಿಂದ ಮೊದಲಿಗೆ ಹಿರೇಮಗಳೂರು ಕಣ್ಣನ್ ರವರನ್ನು ಭೇಟಿ ಮಾಡಿ ನಂತರ ಗಿರಿಜಾಶಂಕರ್ ರವರನ್ನು ಮಾತನಾಡಿಸೋಣವೆಂದುಕೊಂಡು ಹಿರೇಮಗಳೂರಿನ ಕಡೆ ಪ್ರಯಾಣ ಬೆಳೆಸಿದೆವು. ಹಿರೇಮಗಳೂರು ಚಿಕ್ಕಮಗಳೂರಿನಿಂದ ಎರಡೇ ಕಿಲೋಮೀಟರುಗಳ ದೂರದಲ್ಲಿರುವ ಪಟ್ಟಣದಂತಹ ಒಂದು ಪುಟ್ಟ ಊರು.ನಾವುಚಿಕ್ಕಮಗಳೂರಿನವರೆಗು ಬಸ್ಸಿನಲ್ಲಿ ಬಂದು ಅಲ್ಲಿಂದ ಆಟೋವೊಂದನ್ನು ಹಿಡಿದು ಹಿರೇಮಗಳೂರು ತಲುಪುವಷ್ಟರಲ್ಲಿ ಬೆಳಿಗ್ಗೆ ೧೦ ಗಂಟೆ. ಅಂದು ಸಹ ಮೋಡ ಮುಸುಕೇ ಇತ್ತು. ಆಟೋ ಇಳಿದು ನಡೆದು ಹೋಗುತ್ತಿದ್ದ ಒಬ್ಬರನ್ನು ‘ಹಿರೇಮಗಳೂರು ಕಣ್ಣನ್ ರವರ ಮನೆ ಎಲ್ಲಿ?’ ಎಂದು ಕೇಳಿದೆವು. ‘ಅದೇ ಮನೆ, ಬ್ಯಾಂಕ್ ಪಕ್ಕದ್ದು’ ಎಂದು ನಮ್ಮ ಎದುರಿಗಿದ್ದ ಮನೆಯೊಂದನ್ನು ತೋರಿಸಿದ ಆ ಹಿರಿಯರು ‘ಅವ್ರೀಗ ದೇವಸ್ಥಾನದಲ್ಲಿರ್ತಾರೆ, ಈ ಕಡೆಯಿಂದ ಹೋಗಿ ಸಿಗುತ್ತೆ’ ಎಂದು ದೇವಸ್ಥಾನದ ದಾರಿ ತೋರಿಸಿ ಮುನ್ನಡೆದರು. ದೇವಸ್ಥಾನದ ಕಾಂಪೌಂಡಿನ ಗೋಡೆಗಳ ಮೇಲೆಲ್ಲ ಬರೆದಿದ್ದ ‘ಮಾತಿಗೆ ಮಾತು ಸೇರಿದರೆ ನುಡಿ, ತಾಕಿದರೆ ಕಿಡಿ’ ಇಂತಹ ಹಲವು ಹಿತನುಡಿಗಳನ್ನುಓದುತ್ತಾನಡೆದುನಾವಿಬ್ಬರು ‘ಶ್ರೀ ಕೊದಂಡರಾಮಸ್ವಾಮಿ ದೇವಾಲಯ’ದ ಹೆಬ್ಬಾಗಿಲು ತಲುಪಿದೆವು.

ಹಿರೇಮಗಳೂರು ಕಣ್ಣನ್’ರವರು ಯಾರೊಂದಿಗೊ ಮಾತನಾಡುತ್ತಾ ಹೆಬ್ಬಾಗಿಲಿನಲ್ಲೇ ನಿಂತಿದ್ದರು. ನಾವು ನಮ್ಮ ಪರಿಚಯ ಮಾಡಿಕೊಂಡೆವು. ತಕ್ಷಣ ಶ್ರೀ. ಕಣ್ಣನ್ ರವರು ನಮಗೆ ಆಶ್ಚರ್ಯವಾಗುವಂತೆ ನಾವಿಬ್ಬರು ತುಂಬಾ ವರ್ಷಗಳ ಪರಿಚಯಸ್ಥರು ಎಂಬಂತೆ ನಮ್ಮ ಕೈ ಹಿಡಿದು ತುಂಬಾ ಆತ್ಮೀಯತೆಯಿಂದ ನಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದರು. ಅವರೊಂದಿಗೆ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯೊಬ್ಬರಿಗೆ ‘ತೇಜಸ್ವಿ ಬಗ್ಗೆ ಮಾತಾಡ್ಬೇಕು ಅಂತ ಬಂದಿದ್ದಾರೆ ನಮ್ ಹುಡುಗ್ರು’!! ಎಂದು ನಮ್ಮ ಪರಿಚಯ ಮಾಡಿಸಿದರು. ಹೀಗೆ ದಿಢೀರ್ ಎಂದು ನೇರ ವಿಷಯಕ್ಕೆ ಬಂದರು ಶ್ರೀ. ಕಣ್ಣನ್ ರವರು. ಅದಾಗಿ ಸುಮಾರು ಎರಡು ಗಂಟೆಗಳ ಕಾಲ ಶ್ರೀ. ಕಣ್ಣನ್ ರವರು ತೇಜಸ್ವಿಯವರೊಂದಿಗೆ ಅವರಿಗಿದ್ದ ಒಡನಾಟದ ಬಗ್ಗೆ, ದೇವರು ಎಂಬ ಕಲ್ಪನೆಯ ಬಗ್ಗೆ ತೇಜಸ್ವಿಯವರಿಗಿದ್ದ ನಿಲುವಿನ ಬಗ್ಗೆ ಹೀಗೆ ಹಲವು ವಿಷಯಗಳನ್ನು, ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ತೇಜಸ್ವಿಯವರ ಬಗೆಗೆ ಶ್ರೀ.ಕಣ್ಣನ್ ರವರಿಂದ ನಮಗೆ ಸಾಕಷ್ಟು ಹೊಸ ವಿಷಯಗಳು, ಮಾಹಿತಿಗಳು ದೊರಕಿದವು. ಮಧ್ಯಾಹ್ನ ಅವರ ಮನೆಯಲ್ಲೇ ಊಟ ಮುಗಿಸಿಕೊಂಡು ಅಲ್ಲಿಂದ ಹೊರಡಲು ಅಣಿಯಾದೆವು. ಸಮಯ ಎರಡು ಗಂಟೆಯಾಗಿತ್ತು. ಪೂರ್ವ ತಯಾರಿಯೆಲ್ಲ ಮುಗಿಸಿ ಚಿತ್ರೀಕರಣಕ್ಕೆ ಆದಷ್ಟು ಬೇಗ ಬರುತ್ತೇವೆಂದು ಹೇಳಿ ಅವರಿಗೆ ಧನ್ಯವಾದ ತಿಳಿಸಿ ಹಿರೇಮಗಳೂರಿನ ಅವರ ಮನೆಯಿಂದ ಹೊರಟು ಮುಖ್ಯ ರಸ್ತೆಯ ಕಡೆ ಹೆಜ್ಜೆ ಹಾಕಿದೆವು.

ನಮ್ಮ ಮುಂದಿನ ಭೇಟಿ ಗಿರಿಜಾ ಶಂಕರ್ ಅವರದ್ದಾಗಿತ್ತು. ಚಿಕ್ಕಮಗಳೂರಿನಲ್ಲೇ ಇರುವ ಗಿರಿಜಾ ಶಂಕರ್ ಅವರ ಮನೆ ತಲುಪಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಮೊದಲೇ ಫೋನ್ ಮಾಡಿ ತಿಳಿಸಿದ್ದರಿಂದ ಗಿರಿಜಾ ಶಂಕರ್ ರವರು ಸಿದ್ದವಾಗಿ ನಮಗಾಗಿ ಕಾಯುತ್ತಿದ್ದರು.(ಗಿರಿಜಾ ಶಂಕರರವರು ತೇಜಸ್ವಿಯವರ ಹಲವು ವರ್ಷಗಳ ಒಡನಾಟದಲ್ಲಿದ್ದವರು. ಚಿಕ್ಕಮಗಳೂರಿನ ಪತ್ರಿಕೆಯೊಂದರ ಸಂಪಾದಕರಾಗಿರುವ ಇವರು ಪಶ್ಚಿಮ ಘಟ್ಟ ರಕ್ಷಣಾ ಹೋರಾಟದಲ್ಲಿ ಸಕ್ರಿಯರು). ಪರಸ್ಪರ ಪರಿಚಯ ಮುಗಿದ ನಂತರ ಅವರಿಗೆ ನಮ್ಮ ಉದ್ದೇಶ ತಿಳಿಸಿದೆ. ಅವರು ‘ಹಾಂ…ಧನಂಜಯ್ ಜೀವಾಳ ಫೋನ್ ಮಾಡಿ ಹೇಳಿದ್ರು, ಹೇಳಿ ನನ್ನಿಂದೇನಾಗ್ಬೇಕು’ ಎಂದರು. ನಾನು ತೇಜಸ್ವಿಯವರ ಬಗೆಗೆ ನಿಮಗೆ ಗೊತ್ತಿರುವ ವಿಷಯ, ನೀವು ಕಂಡಂತಹ ತೇಜಸ್ವಿ ಬಗ್ಗೆ ನಮಗೆ ವಿವರವಾಗಿ ಹೇಳಿದರೆ ನಮ್ಮ ಸಾಕ್ಷ್ಯಚಿತ್ರಕ್ಕೆ ಅನುಕೂಲ ಆಗುತ್ತದೆಂದು ತಿಳಿಸಿದೆ. ಗಿರಿಜಾ ಶಂಕರರವರು ಸಂತೋಷದಿಂದ ಒಪ್ಪಿಕೊಂಡು ಅವರು ಕಂಡಂತಹ ತೇಜಸ್ವಿಯವರ ವ್ಯಕ್ತಿತ್ವವನ್ನು ನಮ್ಮ ಮುಂದೆ ಬಿಡಿಸಿಡುತ್ತಾ ಹೋದರು, ನಾನು ನೊಟ್ಸ್ ಮಾಡಿಕೊಳ್ಳುತ್ತಾ ಹೋದೆ. ಸಂಜೆ ೫ ಗಂಟೆಯ ಹೊತ್ತಿಗೆ ನಮ್ಮ ಮಾತುಕತೆ ಮುಗಿಯಿತು. ಚಿತ್ರೀಕರಣದ ಸಮಯದಲ್ಲಿ ಇನ್ನೂ ವಿವರವಾಗಿ ತೇಜಸ್ವಿ ಕುರಿತು ಮಾತನಾಡಬೇಕೆಂದು ಅವರಲ್ಲಿ ಕೋರಿಕೊಂಡು ಅಲ್ಲಿಂದ ಹೊರಟು ಚಿಕ್ಕಮಗಳೂರಿಗೆ ಬಂದೆವು.
 
ಅಲ್ಲಿಗೆ ಸಾಕ್ಷ್ಯಚಿತ್ರ ಬೇಕಾಗಿದ್ದ ತೇಜಸ್ವಿ ಕುರಿತ ವಿವರ, ಮಾಹಿತಿಗಳು ಬೇಕಾದಷ್ಟು ಸಿಕಿದ್ದವು. ಜೊತೆಗೆ ಹಲವು ತೇಜಸ್ವಿ ಒಡನಾಡಿಗಳ ವಿವರಗಳೂ ಸಿಕ್ಕಿದ್ದವು. ಬೇರೆ ಬೇರೆ ಕಡೆ ನೆಲೆಸಿರುವ ತೇಜಸ್ವಿಯವರ ಒಡನಾಡಿಗಳನ್ನು ಫೋನಿನಲ್ಲಿ ಮಾತನಾಡಿಸಬೇಕೆಂದುಕೊಂಡೆವು. ಈ ಎಲ್ಲಾ ಮಾಹಿತಿ, ವಿವರಗಳನ್ನು ಇಟ್ಟುಕೊಂಡು ತೇಜಸ್ವಿ ಕುರಿತ ಸಮಗ್ರ ಸಾಕ್ಷ್ಯಚಿತ್ರವನ್ನು ಅತ್ಯಂತ ಸಮರ್ಥವಾಗಿ, ಆಸಕ್ತಿಯುತವಾಗಿ ರೂಪಿಸುವುದು ಹೇಗೆಂಬುದರ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು. ಒಂದು ವೇಳೆ ಸಾಕ್ಷ್ಯಚಿತ್ರ ಪರಿಣಾಮಕಾರಿಯಾಗಿಲ್ಲದಿದ್ದರೆ ‘ಇಂಥಾ ಇಂಟರೆಸ್ಟಿಂಗ್ ಪರ್ಸನಾಲಿಟಿ ಬಗ್ಗೆ ಎಂಥ ಕೆಟ್ಟ ಡಾಕ್ಯುಮೆಂಟರಿ ಮಾಡಿದ್ದಾರೆ’ ಎಂದೆಲ್ಲಾ ಉಗಿಸಿಕೊಳ್ಳಬೇಕಾಗುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತಿದ್ದರಿಂದ ನಮಗೆ ಬೇರೆ ದಾರಿಯೆ ಇರಲಿಲ್ಲ, ಸಾಕ್ಷ್ಯಚಿತ್ರವನ್ನು ಸಾಧ್ಯವಾದಷ್ಟು ಅತ್ತ್ಯುತ್ತಮವಾಗಿ ರೂಪಿಸುವುದರ ಹೊರತಾಗಿ. ಅದರ ಬಗ್ಗೆಯೇ ಯೋಚಿಸುತ್ತಾ ಸೀದ ಮೂಡಿಗೆರೆಗೆ ಬಂದು ಅತಿಥಿ ಲಾಡ್ಜಿನ ನಮ್ಮ ಕೋಣೆಯನ್ನು ಖಾಲಿ ಮಾಡಿ ಮೂಡಿಗೆರೆ ಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರಿನ ಬಸ್ಸು ಹತ್ತಿಕೊಂಡೆವು. ಬಸ್ಸು ಕಿಕ್ಕಿರಿದು ತುಂಬಿತ್ತು. ಅಂಥಾದ್ದರಲ್ಲೂ ಹೇಗೋ ಮೂಲೆಯಲ್ಲಿ ಎರಡು ಸೀಟು ಗಿಟ್ಟಿಸಿಕೊಂಡು ಆಸೀನರಾದೆವು. ಬಸ್ಸು ಮೂಡಿಗೆರೆ ಬಿಟ್ಟಾಗ ಸಮಯ ನೋಡಿಕೊಂಡೆ.

ನನ್ನ ವಾಚು ರಾತ್ರಿಹತ್ತು ಗಂಟೆ ತೋರಿಸುತ್ತಿತ್ತು. ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದೆ. ಅಲ್ಲೊಂದು ಇಲ್ಲೊಂದು ಬೀದಿ ದೀಪದ ಮಂಕು ಬೆಳಕಿನಲ್ಲಿ ನಿಗೂಢವೊಂದನ್ನು ಅಡಗಿಸಿಕೊಂಡ ಊರಿನಂತೆ ಕಾಣುತ್ತಿದ್ದಮೂಡಿಗೆರೆ ಬಸ್ಸು ಚಲಿಸಿದಂತೆ ನಮ್ಮಿಂದ ದೂರ ದೂರ ಹೋಗುತ್ತಿತ್ತು.
ಮರುದಿನ ಬೆಳಿಗ್ಗೆ ಸುಮಾರು ೬ ಗಂಟೆಯ ಹೊತ್ತಿಗೆಲ್ಲ ನಾವು ಬೆಂಗಳೂರಿನಲ್ಲಿದ್ದೆವು. ರಾಜಧಾನಿ ಇನ್ನೂ ಸರಿಯಾಗಿ ಕಣ್ಣು ಬಿಡದೇ ನಿದ್ರೆ ಮಂಪರಿನಲ್ಲಿಯೇ ತೂಕಡಿಸುತ್ತಿತ್ತು. ನಮ್ಮಿಬ್ಬರಿಗೂ ಪ್ರಯಾಣದ ಆಯಾಸವಾಗಲಿ, ಸುಸ್ತಾಗಲಿ ಅಥವ ಮನೆಗೆ ಹೋಗಿ ಮಲಗಿ ಸುಧಾರಿಸಿಕೊಳ್ಳಬೇಕೆಂದಾಗಲಿ ಅನ್ನಿಸುತ್ತಿರಲಿಲ್ಲ. ಮೂರು ದಿನಗಳ ಮೂಡಿಗೆರೆ ಅಲೆದಾಟ ನಮ್ಮಲ್ಲಿ ಒಂದು ರೀತಿಯ ಹೊಸತನ, ಲವಲವಿಕೆ ಉಂಟುಮಾಡಿತ್ತು. ಮುಖ್ಯವಾಗಿ ಇನ್ನು ಮುಂದೆ ಮಾಡಬೇಕಿದ್ದ ಕೆಲಸಗಳು ಹೆಚ್ಚಾಗಿದ್ದುದ್ದರಿಂದ ನಾವು ಅನಗತ್ಯವಾಗಿ ಸಮಯವನ್ನು ಕೊಲ್ಲುವ ಹಾಗೇ ಇರಲಿಲ್ಲ. ಹಾಗಾಗಿ ಮುಂದಿನ ೧೫ ದಿನಗಳ ಕಾಲ ಮೂಡಿಗೆರೆಯಿಂದ ಹೆಕ್ಕಿ ತಂದಿದ್ದ ತೇಜಸ್ವಿ ಕುರಿತ ಮಾಹಿತಿಗಳನ್ನು, ವಿಷಯಗಳನ್ನು ಎದುರಿಗೆ ಹರಡಿಕೊಂಡು ಕುಳಿತು ಹತ್ತಾರು ಬಾರಿ ಮತ್ತೆ ಮತ್ತೆ ಪರಿಶೀಲಿಸಿ, ಅನುಮಾನಗಳು ಉಂಟಾದಾಗಲೆಲ್ಲ ಸಂಬಂಧಪಟ್ಟವರಿಗೆ ಫೋನ್ ಮಾಡಿ ವಿಚಾರಿಸಿ ಖಚಿತಪಡಿಸಿಕೊಂಡು, ಆ ವಿಚಾರಗಳನೆಲ್ಲ ಸಾಕ್ಷ್ಯಚಿತ್ರದಲ್ಲಿ ಹೇಗೆ ತರಬೇಕೆಂದು ಚಿಂತಿಸುತ್ತಾ, ತಂಡದೊಂದಿಗೆ ಚರ್ಚಿಸುತ್ತಾ, ಅಂತಿಮವಾಗಿ ಸ್ಕ್ರಿಪ್ಟ್ ಬರೆದು ಮುಗಿಸಿದೆ. (ಈ ಅಂತಿಮವೆಂದುಕೊಂಡ ಸ್ಕ್ರಿಪ್ಟನ್ನೂ ಸಹ ಹಲವು ಬಾರಿ ಬದಲಾವಣೆಗೊಳಪಡಿಸಿಕೊಂಡೆವು. ಸ್ಕ್ರಿಪ್ಟ್ ನ ಪ್ರೊಸೆಸ್ ನಡೆಯುವುದೇ ಹಾಗೆ).
ಸ್ಕ್ರಿಪ್ಟ್ ಸಿದ್ದವಾದ ನಂತರ ನಿರ್ಮಾಪಕರಾದ ಜರಗನಹಳ್ಳಿ ಕಾಂತರಾಜುರವರನ್ನು ಭೇಟಿಯಾಗಿ ಸ್ಕ್ರಿಪ್ಟಿನ ಕಾಪಿಯೊಂದನ್ನು ಅವರಿಗೆ ಕೊಟ್ಟೆವು. ಅವರು ‘ಕೊಟ್ ಹೋಗಿ ಎರಡು ದಿನ ಬಿಟ್ಟು ಫೋನ್ ಮಾಡಿ’ ಎಂದು ಹೇಳಿ ಕಳಿಸಿದರು. ನಾನು ಮೂರು ದಿನ ಬಿಟ್ಟು ಅವರಿಗೆ ಫೋನ್ ಮಾಡಿದಾಗ ‘ಚೆನ್ನಾಗಿದೆ, ಮಾಡಿ. ಯಾವಾಗ್ನಿಂದ ಶೂಟಿಂಗ್ ಶುರು ಮಾಡ್ಬೇಕು ಅಂತಿದ್ದೀರಿ?’ ಎಂದು ಕೇಳಿದರು. ‘ಸಾರ್ ಶೂಟಿಂಗ್ ಮಲ್ನಾಡ್ ಸುತ್ತಮುತ್ತ ಆಗಿರೋದ್ರಿಂದ ಮಳೆಗಾಲದಲ್ಲಿ ಶೂಟ್ ಮಾಡ್ಬೇಕು ಅಂತಿದ್ದೀನಿ. ಸೋ ನೆಕ್ಸ್ಟ್ ಮಂತ್ ಬಿಗಿನಿಂಗ್ ನಲ್ಲಿ ಶುರು ಮಾಡಿದ್ರೆ ಚೆನ್ನಾಗಿರುತ್ತೆ ಸಾರ್’ ಎಂದೆ. ‘ಮಲ್ನಾಡ್ನಲ್ಲಿ ಮಳೆ ಯದ್ವಾತದ್ವಾ ಸುರಿಯುತ್ರಿ. ಕಷ್ಟ ಆಗಲ್ವ? ಸುಮ್ನೆ ಆಮೇಲೆ ಮಳೆಲಿ ಹೋಗಿ ಸಿಕಾಕೊಂಡು ಒದ್ದಾಡ್ತೀರ ಅಷ್ಟೇ. ಮಳೆ ಸ್ವಲ್ಪ ಕಡಿಮೆ ಆಗ್ಲಿ. ನವೆಂಬರ್ ಟೈಮಿಗೆ ಮಾಡಿ’ ಎಂದು ಒಂದು ಬಾಂಬ್ ಹಾಕಿದರು. ಅಕ್ಟೋಬರ್ ವರೆಗೂ ಕಾಯಲು ನಾನು ಸಿದ್ದನಿರಲಿಲ್ಲ. ಏಕೆಂದರೆ ನಮ್ಮ ತಂಡ ಅದಾಗಲೇ ಒಂದು Forceನಲ್ಲಿತ್ತು. ಈ Forceನಲ್ಲೇ ಶುರು ಮಾಡಿಬಿಟ್ಟರೆ ಶೂಟಿಂಗ್ ಕಷ್ಟ ಆದ್ರು ಚೆನ್ನಾಗೇ ಆಗುತ್ತೆ ಎಂದು
ನಾನು ಲೆಕ್ಕಾಚಾರ ಹಾಕಿದ್ದೆ. ಅದೂ ಅಲ್ಲದೇ ಮಳೆಗಾಲದಲ್ಲೇ ಚಿತ್ರೀಕರಣ ಮಾಡಿದರೆ ಮಲೆನಾಡನ್ನು ಆದಷ್ಟು ಸುಂದರವಾಗಿ ತೋರಿಸಬಹುದು ಎಂದುಕೊಂಡಿದ್ದರಿಂದ ಅಕ್ಟೋಬರಿನವರೆಗೂ ಕಾಯುತ್ತಾ ಕುಳಿತಿರಲು ಸಾಧ್ಯವಾಗದೆ ‘ಸಾರ್, ಅದು ಎಷ್ಟೇ ಕಷ್ಟ ಆದ್ರು ಪರ್ವಾಗಿಲ್ಲ. ಒಳ್ಳೆ ಟೀಮ್ ಇದೆ ನನ್ ಜೊತೆ. ಮಳೆ ಬೇಕೆ ಬೇಕು ಅಂತಲೇ ಹುಡುಕ್ಕೊಂಡು ಹೋಗಿ ಮಳೆಗಾಲದಲ್ಲೇ ಶೂಟಿಂಗ್ ಮಾಡ್ಬೇಕು ಅಂತ ಪ್ಲಾನಿಂಗು ಸರ್’ ಎಂದು ಇದ್ದ ವಿಷಯವನ್ನೆಲ್ಲಾ ಅವರಿಗೆ ಹೇಳಿ ಗೋಗರೆದು ಕಡೆಗೂ ಅವರನ್ನು ಒಪ್ಪಿಸಿದೆ.
’ಆಯ್ತು ಬಿಡಿ, ನೀವ್ ಇಷ್ಟೊಂದು Confidenceನಲ್ಲಿ ಇರೋದಾದ್ರೆ ನಾನ್ ಆಗಲ್ಲ ಅನ್ನಲ್ಲ. ಶೂಟಿಂಗ್ ಪ್ಲಾನ್ ಮಾಡ್ಕೊಂಡು ನನಗೆ ಹೇಳಿ’ ಎಂದು ತಕ್ಷಣ ಚಿತ್ರೀಕರಣ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟರು ನಿರ್ಮಾಪಕರಾದ ಜರಗನಹಳ್ಳಿ ಕಾಂತರಾಜುರವರು. ನಿರ್ಮಾಪಕರ ಒಪ್ಪಿಗೆ ದೊರೆತ ನಂತರ ನಮ್ಮ ಕೆಲಸಗಳು ವೇಗಪಡೆದುಕೊಂಡವು. ಚಿತ್ರೀಕರಣ ಪ್ರಾರಂಭಿಸಲು ಮಾಡಿಕೊಳ್ಳಬೇಕಿದ್ದ ತಯಾರಿಗಳನ್ನು ಅಂತಿಮಗೊಳಿಸುವಲ್ಲಿ ನಾನು ನಿರತನಾದೆ. ಕೆಲವು ಅಡೆತಡೆಗಳನ್ನು ಹೊರತುಪಡಿಸಿದರೆ ಕೆಲಸಗಳೆಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದವು. ಆದರೆ ಅದುವರೆಗೂ ನಮ್ಮ ಸಾಕ್ಷ್ಯಚಿತ್ರಕ್ಕೆ ಕ್ಯಾಮೆರಾಮನ್ ಯಾರು ಎಂಬುದೇ ನಮಗಿನ್ನೂ ಖಾತ್ರಿಯಾಗಿರಲಿಲ್ಲ. ನನಗಿದ್ದ ಅತಿ ದೊಡ್ಡ ತಲೆನೋವು ಇದೇ ಅಗಿತ್ತು. ನಿರ್ದೇಶಕನಾಗಿ ನಾವು ಏನೇ ಕಲ್ಪಿಸಿಕೊಡರೂ ಅದನೆಲ್ಲಾ ನಿಜವಾಗಿಯೂ ಎಕ್ಸಿಕ್ಯೂಟ್ ಮಾಡುವವರು ಕ್ಯಾಮೆರಮನ್. ಅದೂ ಅಲ್ಲದೇ ಈ ಸಾಕ್ಷ್ಯಚಿತ್ರದ ಹೆಚ್ಚಿನ ಭಾಗವನ್ನು ಮಳೆಯಲ್ಲೇ ಚಿತ್ರೀಕರಿಸುವ ಯೋಚನೆ ಇದ್ದುದ್ದರಿಂದ ಎಲ್ಲದಕ್ಕೂ ಹೊಂದಿಕೊಂಡು ಹೋಗುವ, ಏನೇ ಅಡೆತಡೆಗಳು ಬಂದರು ಅದನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ಇವೆಲ್ಲಕ್ಕಿಂತಲೂ ಮುಖ್ಯವಾಗಿ ತೆಗೆದುಕೊಳ್ಳುವ ಸಂಭಾವನೆಗೆ ತಕ್ಕ ಹಾಗೆ ಸಮಯದ ಲೆಕ್ಕಾಚಾರ ಹಾಕುತ್ತಾ ಕಾರ್ಮಿಕನಂತೆ ಕೆಲಸ ಮಾಡುವ ಮನಸ್ಥಿತಿಯಿಲ್ಲದ ಕ್ಯಾಮೆರಮನ್ ನಮಗೆ ಬೇಕಿತ್ತು. ನಿಜವಾಗಿಯೂ ಒಂದು ಪ್ಯಾಷನ್ ಇಟ್ಟುಕೊಂಡು ‘ಇಸಂ’ಗಳು ‘ತನ’ಗಳನ್ನೆಲ್ಲಾ ಬಿಟ್ಟು ಅಂತಿಮಕಲಾಕೃತಿಯನ್ನು ತಲೆಯಲಿಟ್ಟುಕೊಂಡು ಕೆಲಸ ಮಾಡುವ ಕ್ಯಾಮೆರಮನ್ ಒಬ್ಬರ ಅವಶ್ಯಕತೆ ನಮಗೆ ಇತ್ತು.
ನನ್ನ ಸರ್ಕಲ್ ನಲ್ಲಿ ನನಗೆ ತಿಳಿದಿದ್ದ ಕೆಲವು ಕ್ಯಾಮೆರಮನ್ ಗಳ ಜೊತೆ ಮಾತನಾಡಿದೆ,ಪ್ರಯೋಜನವಾಗಿರಲಿಲ್ಲ. ನನ್ನ ಸ್ನೇಹಿತರು Refer ಮಾಡಿದ ಕೆಲವು ಕ್ಯಾಮೆರಮನ್ ಗಳೊಂದಿಗೂ ಮಾತುಕತೆ ನಡೆಸಿದ್ದೆ. ಯಾಕೋ ಯಾರೂ ಸರಿಹೋಗುತ್ತಿಲ್ಲ ಎನ್ನಿಸುತ್ತಿತ್ತು. ಕೆಲವರಿಗೆ ನಮ್ಮ ಅಲೋಚನೆಗಳು ಅರ್ಥವಾಗುತ್ತಿರಲಿಲ್ಲ ಮತ್ತೂ ಕೆಲವರಿಗೆ ಔಟ್ ಡೋರ್ ಶೂಟಿಂಗ್ ಆಗಿ ಬರುತ್ತಿರಲಿಲ್ಲ, ಇನ್ನೂ ಕೆಲವರು ‘ನನಗೆ ತುಂಬಾ ಕೆಲಸ ಬರುತ್ತೆ ನಿಮಗೇನು ಬೇಕು ಹೇಳಿ’ ಎಂಬ ಮನಸ್ಥಿತಿಯವರು, ಕಡೆಗೆ ಎಲ್ಲ ಸರಿಯಾಗಿದೆ ಅಂದುಕೊಂಡರೆ ಅವರು ನಮ್ಮ ಬಡ್ಜೆಟ್ಟಿಗೆ ಸರಿತೂಗುತ್ತಿರಲಿಲ್ಲ. ಅದೂ ಅಲ್ಲದೇ ನಾನು ಮೊದಲಿನಿಂದಲೂ ಪ್ರತಿಭೆಗಿಂತಲೂ ಪ್ಯಾಷನ್ ಹಾಗೂ ಹಾರ್ಡ್ ವರ್ಕ್ ನಲ್ಲಿ ನಂಬಿಕೆ ಇಟ್ಟವನಾಗಿದಿದ್ದರಿಂದ ಪ್ಯಾಷನೇಟಿವ್ ಆದ ಒಬ್ಬ ಹುಡುಗ ಸಿಕ್ಕರೆ ಒಳ್ಳೆಯದು ಅಂದುಕೊಳ್ಳುತ್ತಿದ್ದೆ. ಅಷ್ಟೊತ್ತಿಗಾಗಲೇ ನಾನು ಸುಮ್ನೆ ಇರಲಿ ಎನ್ನುವಂತೆ facebookನಲ್ಲಿ ಈ ರೀತಿ ಸಾಕ್ಷ್ಯಚಿತ್ರವೊಂದಕ್ಕೆ ಕ್ಯಾಮೆರಮನ್ ಹುಡುಕಾಟ ನಡೆದಿದೆ ಎಂದು ಒಂದು ಮಾತು ತೇಲಿ ಬಿಟ್ಟಿದ್ದೆ. ಅದು ಫಲ ಕೊಡಬಹುದೆಂದು ನನಗೆ ಸುತಾರಾಂ ನಂಬಿಕೆ ಇರಲಿಲ್ಲ. ಆದರೆ ಒಂದು ದಿನ ನನ್ನೆದುರು ಬಂದು ಕುಳಿತು ನನ್ನ ನಂಬಿಕೆಯನ್ನು ತಲೆಕೆಳಗು ಮಾಡುವಂತೆ ಮಾಡಿದವರು‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಶ್ಯಚಿತ್ರವನ್ನು ಅದ್ಭುತವಾಗಿ ಚಿತ್ರಿಸಿ ಅದರ ಯಶಸ್ಸಿಗೆ ಬಹುಮುಖ್ಯ ಕಾರಣಕರ್ತನಾದ ನನ್ನ ಗೆಳೆಯ ದರ್ಶನ್ ಹೆಬ್ಬಾಳ್.
ಆ ಹೊತ್ತಿಗೆ ದರ್ಶನ್ ಆಗಷ್ಟೇ ಹೆಸರಘಟ್ಟದ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಮೂರು ವರ್ಷಗಳ ಸಿನಿಮಾಟೋಗ್ರಫಿ ಡಿಪ್ಲೊಮ ಮುಗಿಸಿ ಬಂದಿದ್ದರು. ಆದರೆ ಎಲ್ಲಿಯೂ ಕೆಲಸ ಮಾಡಿದ ಅನುಭವವಾಗಲೀ ಅಥವ ಸ್ವಂತ ಪ್ರಾಜೆಕ್ಟ್ ಮಾಡಿದ ಅನುಭವವಾಗಲೀ ಇರಲಿಲ್ಲ. ಮೊದಲ ಮಾತಿನಲ್ಲೇ ಅವರನ್ನು ನಯವಾಗಿ ತಿರಸ್ಕರಿಸಿ ವಾಪಸ್ ಕಳಿಸಬಹುದಾದ ಎಲ್ಲಾ ಅನರ್ಹತೆಗಳು ಆಗ ಅವರಿಗಿದ್ದವು. ಆದರೆ ಒಂದೇ ಒಂದು ಕಾರಣಕ್ಕೆ ನಾನು ಅವರನ್ನು ತಿರಸ್ಕರಿಸಲಿಲ್ಲ.
ಅದು ಅವರಲ್ಲಿದ್ದ ಉತ್ಸಾಹ ಮತ್ತು ಹಂಬಲ್ ನೆಸ್ ನ ಕಾರಣಕ್ಕೆ. ದರ್ಶನ್ ರನ್ನು ಈ ಸಾಕ್ಷ್ಯಚಿತ್ರದ ಕ್ಯಾಮೆರಮನ್ ಎಂದು ತೆಗೆದುಕೊಂಡ ನಂತರ ಅವರಿಗೆ ಸಾಕ್ಷ್ಯಚಿತ್ರದ ರೂಪುರೇಷೆಗಳ ಕುರಿತು, ಚಿತ್ರೀಕರಣದ ಪ್ಲಾನಿಂಗಿನ ಕುರಿತು, ಚಿತ್ರೀಕರಣದ ಸಂದರ್ಭದಲ್ಲಿ ಮಲೆನಾಡಿನ ಮಳೆಯಲ್ಲಿ ನಮಗೆ ಎದುರಾಗಬಹುದಾದ ಸವಾಲುಗಳ ಕುರಿತು ಅವರಿಗೆ ವಿವರಿಸಿದೆ. ಅವರು ಎಲ್ಲದ್ದಕ್ಕೂ ಯಾವುದೇ ಚಕಾರವೆತ್ತದೇ ಒಪ್ಪಿಕೊಂಡರು. ಹೇಮಂತನಿಗೆ ಅವರನ್ನು ಪರಿಚಯಿಸಿದೆ. ಅಲ್ಲಿಗೆ ನಮಗಿದ್ದ ದೊಡ್ಡ ಯೋಚನೆಯೊಂದು ಪರಿಹಾರವಾದಂತಾಯಿತು. ಮತ್ತೊಮ್ಮೆ ಕೊನೆಯದಾಗಿ ಚಿತ್ರೀಕರಣದ ಏಲ್ಲಾ ಸಿದ್ದತೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿಕೊಂಡೆವು. ಹೀಗೆ ಈ ಎಲ್ಲಾ ಸಿದ್ದತೆಗಳು ಮಾಡಿ ಮುಗಿಸುವಷ್ಟರಲ್ಲಿ ಜುಲೈ ಕಳೆದಿತ್ತು. ಆಗಸ್ಟ್ ಮೊದಲ ವಾರದಲ್ಲಿ ನಿರ್ಮಾಪಕರನ್ನು ಕಂಡು ಅವರಿಗೆ ನಾವು ಮಾಡಿಕೊಂಡಿರುವ ಸಿದ್ದತೆಗಳನೆಲ್ಲಾ ವಿವರಿಸಿದೆ, ತಂಡವನ್ನೂ ಪರಿಚಯಿಸಿದೆ. ಅವರು ಎಲ್ಲವನ್ನೂ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ‘ಶೂಟಿಂಗ್ ಯಾವಾಗ್ನಿಂದ?’ಎಂದು ಕೇಳಿದರು. ‘ಮುಂದಿನ ವಾರ ಬೆಂಗಳೂರು ಬಿಡ್ತಾ ಇದ್ದೀವಿ ಸರ್. ಆಗಸ್ಟ್ ನೈನ್ತ್ ಹೊರಡೊದು’ ಎಂದು ಅವರಿಗೆ ನಮ್ಮ ಶೆಡ್ಯೂಲ್ ವಿವರಿಸಿದೆ. ‘ಹುಂ..ಸರಿ, ಆಗ್ಲಿ ಮಾಡಿ…ಮಳೆ ಜೋರಿದೆ ಎಚ್ಚರಿಕೆ ಇರ್ಲಿ. ಉತ್ಸಾಹ ಹೀಗೆ ಉಳಿಸ್ಕೊಳಿ’ ಎಂದು ಕೆಲವು ಎಚ್ಚರಿಕೆಯ ಮಾತುಗಳನ್ನು ಹೇಳಿ ಚಿತ್ರೀಕರಣಕ್ಕೆ ಬೇಕು ಎಂದು ಕೇಳಿದ್ದ ಹಣವನ್ನು ಚೆಕ್ ರೂಪದಲ್ಲಿ ಕೊಟ್ಟರು. ಸಾಕ್ಷ್ಯಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಇಷ್ಟು ಸರಾಗವಾಗಿ ಆಗುತ್ತಿರುವುದು ಕಂಡು ನನಗೆ ಕಣ್ತುಂಬಿ ಬಂತು. ನಿರ್ಮಾಪಕರಿಗೆ ‘ಚಿತ್ರೀಕರಣ ಮುಗಿದ ನಂತರ ಬಂದು ಕಾಣುತ್ತೇನೆಂದು’ ಹೇಳಿ ಅವರಿಗೆ ಧನ್ಯವಾದ ಅರ್ಪಿಸಿ ಜಯನಗರದ ಅವರ Officeನಿಂದ ಹೊರಟು ಬಂದೆವು.
ಅಲ್ಲಿಗೆ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿತ್ತು. ೨೦೧೨ರ ಆಗಸ್ಟ್ ೯ರಂದು ತೇಜಸ್ವಿಯನ್ನು ಹುಡುಕಿ ಹೊರಡಲಿದ್ದ ಮುಂದಿನ ನಮ್ಮ ೧೨ ದಿನಗಳಪಯಣ ಹಲವು ರೋಮಾಂಚಕಾರಿ ಅನುಭವಗಳಿಗೆ ಒಳಗಾಗಿನಮ್ಮೆಲ್ಲರ ಜೀವಮಾನದಲ್ಲೇ ಮರೆಯಲಾಗದ ಪಯಣವಾಗುವುದರಲ್ಲಿತ್ತು.
(ಮುಂದುವರೆಯುವುದು…)
 

‍ಲೇಖಕರು avadhi

July 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: