ಅಮ್ಮನಿಲ್ಲ
ಎಂ. ಎಸ್. ಕೃಷ್ಣಮೂರ್ತಿ
ಕಡು ಕಷ್ಟ
ಮಡದಿ, ಮಕ್ಕಳು
ಅಮ್ಮ ,ಅವನು
ಹಸಿದ ಹೊಟ್ಟೆ
ಯಾರು ಯಾರು ಸತ್ತರೂ
ಅಲ್ಲಿಲ್ಲ ಅಳು
ಅದಕ್ಕೇ ಅವನಿಗೆ
ಅಮ್ಮ ಸತ್ತಾಗ ಅಳಲಾಗಲಿಲ್ಲ
ಗುಡಿಸಲ ಗುಬ್ಬಚ್ಚಿ
ಹತ್ತಿ ಹಗುರ
ಅಸ್ತಿಪಂಜರದ ಆಸ್ತಿ
ಭವಣೆಯಿಂದ ಬಿದುರಿಗೆ
ಭಾರವೇ ಇಲ್ಲದ ಬಡಕಲು ದೇಹ
ಅವಳನ್ನೆತ್ತಿ
ಬಿದುರಿನ ಚಟ್ಟದ ಮೇಲಿಟ್ಟಾಗಲೂ
ಅವನಿಗೆ ಅಳಲಾಗಲಿಲ್ಲ
ಮಲ್ಲಿಗಿಯ ಜುಟ್ಟಾ ?
ಜುಟ್ಟಿಗಿಲ್ಲದ ಮಲ್ಲಿಗೆ
ಹೊಟ್ಟೆಗಿಲ್ಲದ ಹಿಟ್ಟು
ಮೃತ ದೇಹಕ್ಕೆ ಮಲ್ಲಿಗೆ
ಪರಿಹಾಸ್ಯದ ಪರಿಮಳ
ಬೇಡ
ಅಮ್ಮನ ಮೇಲಿದ್ದ ಹೂ ಹಾರ ಎತ್ತಿ ಎಸೆದಾಗಲೂ
ಅವನು ಅಳಲಿಲ್ಲ
ಆದರೆ,
ಬದುಕು ಪೂರ ಬರಿಗಾಲು
ಹೆಜ್ಜೆ ಹೆಜ್ಜೆಗೆ ಉರಿಬಿಸಿಲು
ಕಲ್ಲು ,ಮುಳ್ಳು, ಒತ್ತುಗಳು
ಒಡೆದ ಪಾದಕ್ಕೆ ಇಲ್ಲ ಮುಲಾಮು
ಬಿರುಕು ಬಿಟ್ಟ ಬದುಕಿಗೆ
ನೆತ್ತರ ಬಿಂದುಗಳ ಬಿಕ್ಕಳಿಸುವ
ಬರಿಗಾಲ ಅಮ್ಮನ ಅಂತಿಮ ಯಾತ್ರೆ
ಬಿರುಕು ಬಿಟ್ಟ ಬರಿಗಾಲಿಗೆ
ನೆತ್ತರ ಬಿಂದುಗಳ
ಪುರಾತನ ಪುರಾವೆಗೆ
ನಮಸ್ಕರಿಸುವಾಗ
ಕಣ್ಣು ಚುಚ್ಚಿ
ಹೃದಯ ಹಿಂಡಿ
ಅವನು
ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ
ಇರಬಹುದಿತ್ತು ? ಇನ್ನು ಸ್ವಲ್ಪ ಕಾಲ
ಹಸಿದ ಹೊಟ್ಟೆ,? ಹಂಚಿಕೊಳ್ಳಬಹುದಿತ್ತು
ಹೂ, ಹಣ್ಣು ? ಹಬ್ಬದಲ್ಲಾದರೂ ಹಂಚಿಕೊಳ್ಳಬಹುದಿತ್ತು
ತರಲೂಬಹುದಿತ್ತು ಬರಿಗಾಲಿಗೆ ಚಪ್ಪಲಿ
ಆದರೆ ಅದಾವುದೂ ಆಗಲಿಲ್ಲ
ಅವನಿಗೆ ಈಗ
ಅಮ್ಮನಿಲ್ಲ , ಅಮ್ಮನಿಲ್ಲ , ಅಮ್ಮನಿಲ್ಲ







ಹೃದಯ ಕಿತ್ತು ಬಂದಂತಹ ಭಾವ !!
Ammana preethi aluvannu maresuthade,,,,,,,,,,,,,, hrudaya kithu banthu sir