ಭಾವನೆಗಳಂಚಿನಲಿ
ನಾ ದಿವಾಕರ್
ಹನಿಗಳಂಚಿನ ಪದರ
ಬಿಂಬಿಸುವ ಚಿತ್ರಗಳು
ನಿಲುಕಲಹುದೇವ ಮನದ
ಸುಪ್ತ ಮಂಥನ ಕ್ರಿಯೆಗೆ ;
ರೆಕ್ಕೆ ಬಡಿತದ ರಾಗ
ಮೂಡಿಸುವ ಅಲೆಗಳಲಿ
ಹರಿವುದುಂಟೇ ಒಲವು
ಒಡಲ ತೀರದ ಕಡೆಗೆ !
ಮಸುಕು ಮಬ್ಬಿನ ಚಿತ್ತ
ಹೊಂಗಿರಣಕೆ ತೆರೆದಾಗ
ಭಾವದೀಟಿಯು ಪುಟಿದು
ಪುಟಪುಟದಿ ಮಿಡಿಯುತದೆ ;
ಒಡಲೊಳಗಿನ ಚಿಪ್ಪು
ಮುತ್ತುಗಳನಪ್ಪಿದಾಗ
ಜನ್ಮಾಂತರದ ನಂಟು
ಟಿಸಿಲೊಡೆದು ಮೆರೆಯುತದೆ !
ಪ್ರೀತಿಯ ಹೊಂಗಿರಣದಲಿ
ಸಿಹಿನಗೆಯ ತೋರಣ
ಮಧುರ ಪಾಶದ ಸೆಳೆತ
ಆತ್ಮ ಮಿಲನದ ಗಾನ ;
ಸ್ನೇಹ ಭಾವದ ತೃಪ್ತಿ
ಕಲ್ಪನೆಯ ಕಡಲಾಗಿ
ವಿಹರಿಸುವ ರೆಕ್ಕೆಗಳು
ಮಿಂದು ಸ್ಪರ್ಶಿಸಿ ಬಾನ !
ನೀರೊಳು ಹಾರುವ ಬಯಕೆ
ಕಡಲಡಿಯ ಮೀಟುವುದೇಕೆ
ಎತ್ತಲೋ ಹರಿವ ಚಿತ್ತ
ಹೆಜ್ಜೆಗುರುತುಗಳ ಸುತ್ತ ;
ಇರಲಿ ಬಂಧನದ ಕುಣಿಕೆ
ಇರಲಿ ಭಾವದ ಬೆಸುಗೆ
ಇರಲಿ ಉಸಿರಲಿ ಉಸಿರು
ಕಡೆಯ ಬಡಿತದವರೆಗೆ!







– ಹರಿವುದುಂಟೆ ಒಲವು ಒಡಲ ತೀರದ ಕಡೆಗೆ ಒಳ್ಳೆಯ ಭಾವ ಲಹರಿಯ ಒಂದು ಅರ್ಥಪೂರ್ಣ ಕವನ. ಒಲವು ಜೀವನದ ಎಲ್ಲ ಮಗ್ಗಲುಗಳು ಮತ್ತು ಆಯಾಮಗಳಲ್ಲಿ ಪುಟಗೊಂಡು ಹೊರಬಿದ್ದ ಒಂದು ಅಪರಂಜಿ.
sundara kavana – manadalada geethe – sogasagide
nice very nice..