ಹರಿಯುತ್ತಲೇ ದಡ ಸೇರಿಸಿದ ‘ಹರಿವ ನದಿ’

ರಾಘವೇಂದ್ರ ಬೆಟ್ಟಕೊಪ್ಪ

ನಾನು ನಿತ್ಯ ಅಕ್ಷರದ ವ್ಯವಸಾಯಿ ಆದರೂ ಬಹುಕಾಲದ ಬಳಿಕ ಪುಸ್ತಕವೊಂದರ ಕುರಿತು ಬರೆಯ ತೊಡಗಿದೆ. ದಿನವೂ ವರದಿ, ಚಿತ್ರ ಲೇಖನಗಳ ಮಧ್ಯೆ ಕಳೆಯುವ ನನಗೆ ಈ‌ ಕೃತಿಯ ಕುರಿತು ಮನಸಿನಾಳದ ಮಾತುಗಳಿಗೆ ಅಕ್ಷರ ರೂಪ ಕೊಡಬೇಕು ಎಂಬ ತುಡಿತ ಬಂದಿದ್ದು ಸುಳ್ಳಲ್ಲ. ಆ ತುಡಿತವೇ ಇದು. ಒಂದು‌ ಕೃತಿ ಈ ಪಾಟಿ ಕದಡುವದು ಉಂಟಲ್ಲ…ಅದಕೆ ಮಾತಿಲ್ಲ…ಬಹುಷ: ಬದುಕಿನ ದಾರಿ ಆಗಿದ್ದರಿಂದ ಕಾಡಿದೆ. ಕದಡಿದೆ.

ಈ ಕೃತಿ ನೊಂದ ಹೆಣ್ಮಕ್ಕಳ ಪಾಲಿಗೆ ಜೀವನದ ದಾರಿ ತೋರುವ ಮೀನಾಕ್ಷಮ್ಮನ ಬದುಕಿನ ಗೀತೆ. ಇದು ಹರಿಯದೇ ಅರಿವಿನಲ್ಲಿ ಹರಿವ ನದಿ…!

ಲೇಖಕಿ ಭಾರತಿ ಹೆಗಡೆ ಅವರು ನಿರೂಪಣೆ ಮಾಡಿದ ಮೀನಾಕ್ಷಿ ಭಟ್ ಅವರ ಆತ್ಮ ಕಥನವೇ ಹರಿವ ನದಿ. ಈ‌ ನದಿಯ ದಡಗಳೇ ಭಾರತಿ ಹೆಗಡೆ ಹಾಗೂ ರವೀಂದ್ರ ಭಟ್ಟ. ಈ ಎರಡೂ ದಡಗಳಿಗೆ ಅಕ್ಷರಶ: ಬದುಕಿನ ದಡ ಕಲ್ಪಿಸಿದ್ದಾರೆ ಮಾತೆ. ನಮ್ಮ ಚೆನ್ನಮ್ಮ! ಚೆಂದಕಿರುವ ಅಮ್ಮನೂ. ಈಗ ನಿಜಕ್ಕೂ ಸಂತೃಪ್ತಿಯ ಬದುಕು ನಡೆಸುವ ಚೆನ್ನಮ್ಮ!!

ನಾನು ಇತ್ತೀಚೆಗೆ ಓದಿದ ಒಂದು ಅಪರೂಪದ ಪುಸ್ತಕ ಹರಿವ ನದಿ. ಮೀನಾಕ್ಷೀ ಭಟ್ಟ ಅವರ ಆತ್ಮಕಥನ. ಇಲ್ಲಿ ಬರುವ ಪಾತ್ರಗಳು, ಇಲ್ಲಿ ಬರುವ ಊರುಗಳೆಲ್ಲ ನನಗೆ ಚಿರಪರಿಚಿತವೇ. ನಮ್ಮ ಮನೆಯ ಅಕ್ಕ ಪಕ್ಕದಲ್ಲೇ ನಡೆದಿದೆ ಎನ್ನುವಂತಹ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿದು ಬರೆದಂತಹ ಕೃತಿಯಿದು. ಆದರೆ ಈ ಸನ್ನಿವೇಶಗಳಾದರೂ ಎಂಥವು.

ಮಲೆನಾಡ ಭಾಗದಲ್ಲಿನ ಹವ್ಯಕ ಬ್ರಾಹ್ಮಣ ಕುಟುಂಬವೊಂದು ಇಷ್ಟೊಂದು ಕಷ್ಟಗಳನ್ನು ಎದುರಿಸಿ ಬದುಕಲೇ ಸಾಧ್ಯವಿಲ್ಲವೇನೋ ಎಂಬಂತಹ ಸವಾಲುಗಳನ್ನು ದಾಟಿ ಬಂದದ್ದು ಮಾತ್ರ ನಿಜಕ್ಕೂ ಹೃದಯ ಕಲಕುವಂಥದ್ದು. ಕಥೆ, ನೋವು ಓದಿದ ಬಳಿಕ ನಿಜಕ್ಕೂ ಅಮ್ಮನ ಬಗ್ಗೆ ಗೌರವದ ಭಾವ ಹೆಚ್ಚಿಸುವಂಥದ್ದು. ಓದುತ್ತಾ ಓದುತ್ತಾ ಹೋದಂತೆ ನನಗೆ ಅರಿವೇ ಇಲ್ಲದಹಾಗೆ ಮನಸ್ಸು ತೋಯುತ್ತದೆ. ಭಾವುಕ ಆಗಿಸುತ್ತದೆ‌.

ಹಾಗೆ ನೋಡಿದರೆ ಇವರಾರೂ ನನಗೆ ಅಪರಿಚಿತರಲ್ಲ. ಹುದ್ದೆಯಲ್ಲಿ ರವಿಯಣ್ಣ ಎತ್ತರದ ಸ್ಥಾನದಲ್ಲಿದ್ದರೂ ಅದೆಕೋ ಹತ್ತಿರದ ಬಂಧು. ಭಾರತಕ್ಕ ಅಕ್ಕ. ಆ ಬಂಧುಗಳ ಅಮ್ಮನೇ ಮೀನಾಕ್ಷಿ ಭಟ್. ನಮ್ಮ ಹಿರೋಯಿನ್. ಸಾಧಕಿ, ಪ್ರೇರಕಿ ಎಲ್ಲ. ಅಮ್ಮ ಅಂದು ಕಠಿಣ ನಿಲುವು ತೆಗೆದುಕೊಳ್ಳದೇ ಇದ್ದರೆ ಈ ಕೃತಿಯೂ ಇಲ್ಲ. ಆ ಎರಡು ಆಕೃತಿಗಳೂ ಇಲ್ಲ!

ಆದರೆ ಅಂದು ಅಮ್ಮ….ಮೀನಾಕ್ಷಮ್ಮ….ಈ ಹರಿವ ನದಿ ಪ್ರತಿ ಅಧ್ಯಾಯವೂ ಮನಸ್ಸು ಕಲಕುತ್ತದೆ. ಕಲಕಿದ ಸಾಧನೆಯ ದಾರಿಗೆ ಬ್ಯಾಟರಿ ಬಿಡುತ್ತದೆ. ಈ ಕೃತಿಗೆ ಹಿರಿಯ ಲೇಖಕ ನಾಗೇಶ ಹೆಗಡೆ‌ ಅವರ ಮುನ್ನುಡಿ, ಪತ್ರಕರ್ತೆ ಡಾ. ಆರ್.ಪೂರ್ಣಿಮಾ ಅವರ ಬೆನ್ನುಡಿ ಇದೆ.

ಕರೆಂಟು ಬರುತ್ತದೆಂಬ ಕಾರಣಕ್ಕಾಗಿ ಲಿಂಗನಮಕ್ಕಿ ಡ್ಯಾಮ್ ಕಟ್ಟುವ ಸಲುವಾಗಿ ಮುಳುಗಡೆಯಾದ ಊರನ್ನು ಅಚ್ಚರಿಯಿಂದ ದುಗುಡದಿಂದ ನೋಡಿದ ಅದೇ ಪುಟ್ಟ ಬಾಲಕಿ ಮೀನಾಕ್ಷೀ ನಂತರದ ದಿನಗಳಲ್ಲಿ ಕಾದಂಬರಿಗಳ ಮೂಲಕವೇ ಅಕ್ಷರ ಪ್ರಪಂಚಕ್ಕೆ ತೆರೆದುಕೊಂಡು ತನ್ನ ವ್ಯಕ್ತಿತ್ವವನ್ನೂ ರೂಪಿಸಿಕೊಂಡವಳು.

ಹಾಗಾಗಿಯೇ ಆ ಕಾಲದಲ್ಲಿ ಅಪರೂಪವೆನಿಸಿದ ಅಥವಾ ಕ್ರಾಂತಿಕಾರಿ ಎನಿಸಿದ ಪ್ರೇಮವಿವಾಹ ಮಾಡಿಕೊಂಡು ಎಲ್ಲರನ್ನೂ ಎದುರಿಸಿ ದಿಟ್ಟ ಮಹಿಳೆಯಾಗಿ ರೂಪುಗೊಂಡಳು. ಇವರ ದಿಟ್ಟತನದ ಅರಿವಾಗುವುದೇ ಮೀನಾಕ್ಷಮ್ಮ ವಿಧವೆಯಾದಾಗ.

೩೫ನೇ ವರ್ಷಕ್ಕೇ ಗಂಡನನ್ನು ಕಳೆದುಕೊಂಡು, ಇಬ್ಬರು ಮಕ್ಕಳೊಂದಿಗೆ ಹೋರಾಡುತ್ತ ಬದುಕಿದ ರೀತಿ ಅನನ್ಯವಾದದ್ದು. ವಿದ್ಯೆಯಿಲ್ಲದ, ಆಸ್ತಿ ಮನೆ, ಹಣ ಏನೂ ಇಲ್ಲದ ಹೆಣ್ಣುಮಗಳೊಬ್ಬಳು ಬದುಕನ್ನು ದಿಟ್ಟವಾಗಿ ಎದುರಿಸುತ್ತಾ ಎಲ್ಲಿಯೂ ಸೋಲದೆ, ಎಲ್ಲಿಯೂ ಹತಾಶೆಗೊಳಗಾಗದೆ ಹೋಗುವ ಪರಿ ನಿಜಕ್ಕೂ ಅನನ್ಯವಾದದ್ದು.

ಬಹಳ ಮುಖ್ಯವಾಗಿ ಈ ಪುಸ್ತಕ ಓದುತ್ತ ಹೋದಂತೆ ಬದುಕನ್ನು ನೋಡುವ ರೀತಿಯೇ ಬದಲಾಗಿಸಿ ಬಿಡುತ್ತದೆ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವ, ಮುಂದೇನು ಎಂಬ ಪರಿಹಾರದ ಕುರಿತು ಮಾತ್ರ ಯೋಚಿಸುವ ಮನಸ್ಥಿತಿಯೇ ಬಹುಶಃ ಇವರನ್ನು ಗೆಲ್ಲಿಸಿದ್ದು ಎನಿಸುತ್ತದೆ.

ಇಂದು ಮಕ್ಕಳಿಬ್ಬರೂ ದಡ ಹತ್ತಿದ್ದಾರೆ, ಅವರು ಒಂದು ನೆಲೆಗೆ ಬಂದಿದ್ದಾರೆ ಎಂದು ಹೇಳುವಲ್ಲಿ ಇದು ಆ ಮಕ್ಕಳ ಗೆಲುವು ಎನ್ನುವುದಕ್ಕಿಂತ ಮೀನಾಕ್ಷಮ್ಮನ ಗೆಲವು ಎಂದೆನಿಸಿಬಿಡುತ್ತದೆ. ನಿಜಕ್ಕೂ ಅದೇ ಗೆಲುವು ಕೂಡ.

ಕರೆಂಟ್ ಎಂದರೆ ಏನು, ನಾಡಿಗೆ ಬೆಳಕು ನೀಡುವುದು ಎಂದರೇನು, ಹತ್ತಾರು ಈ ದೀಪದ ಗುಡ್ನಗಳನ್ನು ಸೇರಿಸಿದರೆ ಬರುವ ಬೆಳಕಾ ಎಂದು ಹುಡುಗಿಯೊಬ್ಬಳು ಕೇಳಿಕೊಳ್ಳುವ ಆ ಮುಗ್ಧತನವೇ ತಟ್ಟಿದರೆ, ಪ್ರೇಮಿಸಿ ಮದುವೆಯಾಗಿ ಪತಿ ಅಕಾಲ ಮರಣಕ್ಕೆ ತುತ್ತಾದಾದಾಗ ತಾನು ಜೀವ ಕಳೆದುಕೊಂಡುಬಿಟ್ಟರೆ ತನ್ನ ಪ್ರೇಮದ ಫಲವಾದ ಈ ಮಕ್ಕಳನ್ನು ಬಿಟ್ಟು ಹೋದರೆ ತಾನು ಈ ಪ್ರೇಮಕ್ಕೇನು ಬೆಲೆ ಕೊಟ್ಟಂತಾಯಿತು? ಎಂಬ ಪ್ರಶ್ನೆ ಇಡೀ ಪುಸ್ತಕದ ಜೀವಾಳ.

ಪ್ರೇಮಿಸಿ ಮದುವೆಯಾದ ಐನಕೈ ಗಜಾನನ ಶಾಸ್ತ್ರಿಗಳು, ಎಲ್ಲಿಯೂ ಯಾಕಾದರೂ ಇವನನ್ನು ಮದುವೆಯಾದೆ ಎಂಬ ಹಳಹಳಿಕೆಯನ್ನು ಮಾಡದೆ, ಅದೇ ಪ್ರೇಮವನ್ನು ಈಗಲೂ, ಅವರ ಅಗಲಿಕೆಯ ದಶಕಗಳೆರಡರ ಬಳಿಕವೂ ಉಳಿಸಿಕೊಳ್ಳುವುದಿದೆಯಲ್ಲ ಅದು ನಿಜವಾದ ಪ್ರೇಮದ ಔನ್ಯತ್ಯವೆಂದೆನಿಸಿಬಿಡುತ್ತದೆ. ಅಂಥ ಔನ್ನತ್ಯ ಸಾಧಿಸಿದ ದಾರಿ ತೋರುತ್ತದೆ ಈ ಕೃತಿ.

ಈ ಕೃತಿಯಲ್ಲಿ ಪ್ರೀತಿಸಿದವರಿಗೆ ಕೈತುತ್ತುಗಳೂ ಇವೆ. ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಕೂಡ.

ನಿಜಕ್ಕೂ ಹರಿವ ನದಿ, ಕಷ್ಟಕೋಟಲೆಗಳನ್ನು ಎದುರಿಸಲು ಸಾಧ್ಯವಾಗದೆ ಈ ಬದುಕು ಸಾಕೆನ್ನುವವರು ಓದಲೇ ಬೇಕಾದ ಕೃತಿ ಎಂಬುದಕ್ಕೆ ಬೇರೆ ಮಾತಿಲ್ಲ. ಬದಕು ಹರಿವ ನದಿ, ಅರಿವಿನ ನದಿ..ದಡ ಸೇರುವ ನದಿ ಎಂಬುದು ಮೀನಾಕ್ಷಮ್ಮ ಸಾಧಸಿದ್ದನ್ನು ಅರಿಯುವ ಕೃತಿ.

ಅಮ್ಮ ನಿಜವಾಗಿ ಗೆದ್ದಿದ್ದಾಳೆ! ಇಂಥ ಅಮ್ಮಂದಿರೇ ಇಂದು ನಮ್ಮ ಸಂಸ್ಕೃತಿಗಳ ಬೇರು. ಅಮ್ಮನಿಗೊಂದು ಸಲಾಂ…

‍ಲೇಖಕರು Admin

January 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: