ಹಿಟ್ಟಿನ ಸತ್ವ ಹೀರುವ ಗಿರಣಿಗಳು…

ಶ್ರೀಪಾದ ಹೆಗಡೆ

ಇದು ಸುಮಾರು ನಲವತೈದು ವರುಷಗಳ ಹಿಂದಿನ ಮಾತು. ನನ್ನ ಸಹೋದ್ಯೋಗಿಯೊಬ್ಬನನ್ನು ನಾವು ಕೆಲವರು ಸದಾ ಗೋಳು ಹೊಯ್ದುಕೊಳ್ಳುತ್ತಿದ್ದೆವು, ಕಾರಣ ಅವನು ಯಾವಾಗಲೂ ಒಂದಲ್ಲಾ ಒಂದು ತುಂಬ ತಮಾಶೆ ಎನಿಸುವ ಯೋಜನೆಯನ್ನು ಸೂಚಿಸುತ್ತಿರುತ್ತಿದ್ದ.

ಉದಾಹರಣೆಗೆ ಹೆಚ್ಚು ಶ್ರಮ ಪಡದೆ ಮತ್ತು ಖಾತ್ರಿಯಾಗಿ ನೆಲದಡಿಯಲ್ಲಿ ನೀರಿರುವ ಜಾಗದಲ್ಲಿ ಬಾವಿ ತೋಡುವುದು ಹೇಗೆ ಎನ್ನುವುದಕ್ಕೆ ಅವನು ಸೂಚಿಸುವ ಪ್ಲ್ಯಾನ್ ಅಂದರೆ ಮೊದಲಿಗೆ ಒಂದು ತೆಂಗಿನ ಗಿಡ ನೆಡುವುದು. ಅದು ಬೆಳೆದು ಸಾಕಷ್ಟು ದೊಡ್ಡದಾಗಿ ಕಾಯಿ ಬಿಡುವ ಹೊತ್ತಿಗೆ ಅದರ ಬುಡ ಮತ್ತು ಬೇರುಗಳು ನೆಲದಾಳಕ್ಕಿಳಿದು ಬಾವಿ ನಿರ್ಮಿಸಿ ನಾವು ಬಾವಿಯಿಂದ ನೀರು ಎತ್ತುವ ಹಾಗೆ ನೀರನ್ನು ಎತ್ತಿ ತನ್ನ ತಲೆಯಲ್ಲಿರುವ ತೆಂಗಿನ ಕಾಯಿಯೊಳಗೆ ತುಂಬುತ್ತಿರುತ್ತದೆ.

ಅಂಥ ಸಮಯದಲ್ಲಿ ತೆಂಗಿನ ಮರವನ್ನು ಬುಡ ಸಹಿತ ಕಿತ್ತು ಹಾಕಿ ಬಿಡುವುದು. ಆಗ ತಳದಲ್ಲಿ ನೀರಿರುವ ಬಾವಿ ತನ್ನಿಂದ ತಾನೆ ನಿರ್ಮಾಣವಾಗಿ ಬಿಡುತ್ತದೆ. ಆಳಕ್ಕಿಳಿದು ಅಗೆದು ಮಣ್ಣನ್ನು ಮೇಲಕ್ಕೆತ್ತುವ ಶ್ರಮವೂ ಇಲ್ಲ ಹಾಗೂ ಬಾವಿಯಲ್ಲಿ ನೀರು ಬರುವುದಂತೂ ನೂರಕ್ಕೆ ನೂರು ಗ್ಯಾರಂಟಿಯಾಗಿರುತ್ತದೆ. ಇಂಥ ಅನೇಕ ಪ್ಲ್ಯಾನಗಳು ಅವನಲ್ಲಿದ್ದವು. ಅವನಿಗೆ ನಿನ್ನ ಪ್ಲ್ಯಾನಗಳು ಕೇವಲ Master Plan ಗಳಲ್ಲ ಅವು Head Master Plan ಗಳು ಎಂದು ತಮಾಶೆ ಮಾಡುತ್ತಿದ್ದೆವು.

ಮೇಲಿನ ಇಂತಹ ಅನೇಕ ಪ್ಲ್ಯಾನಗಳಲ್ಲದೆ ಕೆಲವು ವಿಚಿತ್ರವಾದ ವಾದಗಳನ್ನೂ ಅವನು ಮಂಡಿಸುತ್ತಿದ್ದ. ಅವುಗಳಲ್ಲಿ ನಾನು ಯಾವಾಗಲೂ ಆಗಾಗ ನೆನಪಿಸಿಕೊಳ್ಳುವ ಅವನ ಒಂದು ವಾದವೆಂದರೆ: ಗಿರಣಿಯಲ್ಲಿ ಮಾಡಿದ ಹಿಟ್ಟಿನಿಂದ ತಯಾರಿಸಿದ ರೋಟಿ, ಚಪಾತಿಗಳನ್ನು ಅಥವಾ ಇತರ ಖಾದ್ಯಗಳನ್ನು ತಿನ್ನಬಾರದು ಎನ್ನುವ ಅವನ ಒಂದು ವಾದ. ಅದಕ್ಕೆ ಅವನು ಕೊಡುವ ಸಮರ್ಥನೆ ತುಂಬ ಹಾಸ್ಯಾಸ್ಪದವಾಗಿತ್ತು, ಅದೆಂದರೆ ಗಿರಣಿಯು ದವಸ ಧಾನ್ಯಗಳಿಂದ ಹಿಟ್ಟು ತಯಾರಿಸುವಾಗ ಅದರಲ್ಲಿರುವ ಸತ್ವವನ್ನೆಲ್ಲ ನುಂಗಿ ಬಿಡುತ್ತದೆ ಅದರಿಂದ ನಾವು ನಿಸತ್ವದ ಆಹಾರವನ್ನು ತಿನ್ನ ಬೇಕಾಗುತ್ತದೆ ಎನ್ನುತ್ತಿದ್ದ, ಹಾಗಾಗಿ ಬೀಸುವ ಕಲ್ಲನ್ನು ಉಪಯೋಗಿಸಿ ನಾವೇ ನಮ್ಮ ಶ್ರಮದಿಂದ ಹಿಟ್ಟು ಮಾಡಿ ತಿನ್ನಬೇಕು ಎನ್ನುತ್ತಿದ್ದ.

ಅವನು ಗಿರಣಿಯನ್ನು ಜೀವವಿರದ ಒಂದು ಯಂತ್ರವನ್ನಾಗಿ ಪರಿಗಣಿಸುವುದಕ್ಕೆ ತಯಾರಿರಲಿಲ್ಲ, ನಮಗೆ ಹೇಗೆ ಗಟ್ಟುಮುಟ್ಟಾಗಿ ಬದುಕುಳಿಯಲು ಸತ್ವಯುತ ಆಹಾರ ಬೇಕೋ ಹಾಗೆಯೆ ಗಿರಣಿಗೂ ಸತ್ವಯುತ ಆಹಾರ ಬೇಕು, ಆದ್ದರಿಂದ ಅದು ಧವಸ ಧಾನ್ಯದಿಂದ ಸತ್ವವನ್ನು ಹೀರಿಕೊಳ್ಳುತ್ತದೆ ಎಂದೇ ವಾದಿಸುತ್ತಿದ್ದ. ಹಾಗಾಗಿ ಇಂತಹ ಅನೇಕ ವಿಷಯಗಳ ಬಗ್ಗೆ ಅವನನ್ನು ರೇಗಿಸಿ ಗೊಳುಹೊಯ್ದು ಕೊಳ್ಳುವುದು ನಮಗೆಲ್ಲ ನಿತ್ಯದ ಹವ್ಯಾಸವಾಗಿತ್ತು. ಅವನ ಈ ವಾದ ಮೆಲ್ನೋಟಕ್ಕೆ ಎಷ್ಟೇ ಅಸಂಬದ್ಧವಾದರೂ ನನ್ನನ್ನು ಮಾತ್ರ ಆಗಾಗ ಕಾಡುತ್ತಲೇ ಇದೆ.

ಇತ್ತೀಚಿನ ದಿನಗಳಲ್ಲಂತೂ ನಾನು ನನ್ನ ಆ ಗೆಳೆಯನ ಈ ವಾದವನ್ನು ಪೂರ್ತಿಯಾಗಿ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದರೆ ಇವನಿಗೂ ಹುಚ್ಚು ಹಿಡಿಯಿತು ಅಂದು ಕೊಳ್ಳಬೇಡಿ. ಇದು ಒಂದು ಬಹು ದೊಡ್ದ ರೂಪಕವಾಗಿ ನನಗೆ ಇತ್ತೀಚೆಗೆ ಕಾಣುತ್ತಿದೆ. ಗಿರಣಿಗಳನ್ನು ಸ್ವಯಂ ಚಾಲಿತ ಅದೆಷ್ಟೊ ಅಗಣಿತ ಯಂತ್ರಗಳ ಪ್ರತಿನಿಧಿಯಾಗಿ ತೆಗೆದು ಕೊಂಡು ನನ್ನ ವಾದವನ್ನು ಈಗ ಸ್ಪಷ್ಟ ಪಡಿಸುತ್ತೇನೆ. ಗಿರಣಿ ಅಥವಾ ಇಂತಹ ಸ್ವಯಂ ಚಾಲಿತ ಯಂತ್ರಗಳು ನಡೆಯುವುದಕ್ಕೆ ಇಂಧನವಿಲ್ಲದೇ ಸಾಧ್ಯವಿಲ್ಲವಷ್ಟೆ.

ಇಂದು ಪ್ರತಿಯೊಬ್ಬನೂ ಮನೆಯ ಒಳಹೊರಗೆ ವಿವಿಧ ಬಗೆಯ ಯಂತ್ರಗಳಿಂದ ತಯಾರಾದ ಅದೆಷ್ಟೋ ಬಗೆಯ ವಸ್ತುಗಳನ್ನು ಬಳಸುತ್ತಿದ್ದಾನೆ. ಅಲ್ಲದೆ ಎಲ್ಲ ರೀತಿಯ ಕೆಲಸಗಳಿಗೆ ಅದು ಅನಿವಾರ್ಯವಾಗಿರಲಿ, ಆಗದಿರಲಿ ಇಂಧನ ಬೇಡುವ ಯಂತ್ರಗಳನ್ನು ನಾವು ಬಳಸುತ್ತಿದ್ದೇವೆ.

ಇಂಧನವೆಂದರೆ ಪೆಟ್ರೋಲ್, ಡೀಸೆಲ್, ಕಲ್ಲಿದ್ದಿಲು ಮಾತ್ರವಲ್ಲ, ಬ್ಯಾಟರಿ ಸೆಲ್ಲುಗಳನ್ನು ಬಳಸುವ ಚಿಕ್ಕ ಪುಟ್ಟ ಸಾಧನಗಳೂ ಇವೆಯಲ್ಲವೆ, ಅವೂ ಇಂಧನ ಆಧರಿತವೇ ಆಗಿವೆ. ಹಲ್ಲುಜ್ಜಿಕೊಳ್ಳಲೂ ಸಹ ಬ್ಯಾಟರಿ ಸೆಲ್ಲುಗಳಿಂದ ನಡೆಯುವ ಟೂತ್ ಬ್ರಶ್‍ಗಳನ್ನು ಇಂದು ಬಹು ಮಂದಿ ಬಳಸುತ್ತಿದ್ದಾರೆ. ಇನ್ನು ಶೇವ್ ಮಾಡಿಕೊಳ್ಳಲಂತೂ ಈಗಿನ ಒಂದೆರಡು ತಲೆಮಾರಿನವರು ರೇಝರ್ ಬ್ಲೇಡ್‍ಗಳ ಬದಲಾಗಿ ಬ್ಯಾಟರಿ ಸೆಲ್ಲುಗಳನ್ನು ಬೇಡುವ ಸಾಧನಗಳನ್ನು ಉಪಯೋಗಿಸುತ್ತಿದ್ದಾರೆ.

ಮನುಷ್ಯನ ಸಣ್ಣ ಪುಟ್ಟ ಶ್ರಮಗಳನ್ನೂ ಸಹ ಇಲ್ಲವಾಗಿಸುವ ಯಂತ್ರಗಳು ಈಗ ಬಂದು ಬಿಟ್ಟಿವೆ. ಉಳಿದಂತೆ ಅಗೆಯುವ ಬಗೆಯುವ ಉರುಳಿಸುವ ಸಾಗಿಸುವ ಕತ್ತರಿಸುವ ಎಲ್ಲ ಕೆಲಸಗಳನ್ನೂ ಇಂಧನ ಬೇಡುವ ಯಂತ್ರಗಳಿಂದಲೇ ನಾವು ದಿನ ನಿತ್ಯ ಮಾಡುತ್ತಿರುವುದು. ಈ ಎಲ್ಲ ಬಗೆಯ ಯಂತ್ರಗಳನ್ನು ತಯಾರಿಸಲು ಮತ್ತೊಂದಷ್ಟು ಯಂತ್ರಗಳನ್ನು ಬಳಸುತ್ತೇವೆ.

ಹೀಗೆ ಜಗತ್ತನ್ನು ಸ್ವಯಂ ಚಾಲಿತ ಯಂತ್ರಗಳೇ ತುಂಬಿ ಬಿಟ್ಟಿವೆ. ಇವುಗಳಿಗೆಲ್ಲ ಬೇಕಾಗುವ ಇಂಧನವನ್ನು ನಾವು ಪಡೆಯುತ್ತಿರುವುದು ನಿರಂತರವಾಗಿ ಈ ಭೂಮಿಯ ಸತ್ವವನ್ನು ಹೀರಿ ತಾನೆ.

ಇನ್ನು ಕೆಲವು ನೂರು ವರ್ಷಗಳಲ್ಲಿ ಭೂಮಿ ಬರಡಾಗಿ ಮನುಷ್ಯ ತನಗೆ ಜೀವಿಸಲು ಬೇಕಾದ ಅಹಾರವನ್ನೂ ಉತ್ಪಾದಿಸಲಾಗದ ಪರಿಸ್ಥಿತಿ ಉಂಟಾಗುವ ಎಲ್ಲ ಸಾದ್ಯತೆಗಳನ್ನು ನಾವಿಂದು ಮುಂಗಾಣುವಂತಾಗಿದೆ. ನನ್ನ ಸಹೋದ್ಯೋಗಿ ಗೆಳೆಯ ಅಂದು ಹೇಳುತ್ತಿದ್ದಂತೆ ಗಿರಣಿಗಳು ಕೇವಲ ನಮ್ಮ ಅಹಾರದಲ್ಲಿರುವ ಸತ್ವವನ್ನು ಮಾತ್ರ ಹೀರುತ್ತಲಿಲ್ಲ ಬದಲಾಗಿ ಮುಂಬರುವ ಕಾಲದಲ್ಲಿ ಅಹಾರವನ್ನೇ ಕಸಿದುಕೊಳ್ಳಲಿವೆ.

ಈ ಭೂಮಿಯನ್ನು ನಾಶ ಮಾಡದೆ ಬಹಳ ವರುಶಗಳ ಕಾಲ ಕಾಪಿಟ್ಟುಕೊಳ್ಳಬೇಕೆಂದರೆ ಯಂತ್ರಗಳನ್ನು ತ್ಯಜಿಸಿ ಮೊದಲಿನಂತೆ ಶಾರೀರಿಕ ಶ್ರಮದ ಬದುಕಿಗೆ ಮರುಳುವುದರ ಹೊರತಾಗಿ ಬೇರೆ ದಾರಿ ಇಲ್ಲ.

‍ಲೇಖಕರು Admin

January 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: