ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಬ್ಬದ ಹಸಿರು ಖರೀದಿಯೇ ಉಸಿರು..

ಮಾಲತಿ ಹೆಗಡೆ

ಹಗಲಿರುಳಿನ ರಥ ಉರುಳುತ್ತಾ ಉರುಳುತ್ತಾ ಮತ್ತೆ ಬರುತ್ತಿದೆ ಬೆಳಕಿನ ಹಬ್ಬ ದೀಪಾವಳಿ. ಕಳೆದ ಕಾಲ, ಇರುವ ಕಾಲಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ನಮ್ಮೊಂದಿಗೆ ಬದಲಾದ ಚಿತ್ರಣಗಳನ್ನು ತೋರಿಸುವ ದೀಪಾವಳಿಗೆ ಸಾಟಿಯಾದ ಹಬ್ಬ ಇನ್ಯಾವುದಿದೆ?

ಮಲೆನಾಡಿನಲ್ಲಿ ಕಳೆದ  ಬಾಲ್ಯದಲ್ಲಿ  ಅತ್ಯಂತ ಪರಿಸರದ ಸ್ನೇಹಿಯಾದ ಹಬ್ಬಗಳನ್ನು ಕಂಡವರು ನಾವು. ಅಲ್ಲಿ ದೀಪಾವಳಿ ಎಂದರೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು  ಸಿಗುತ್ತದೆ ಎಂಬ ಕರಾರುವಕ್ಕಾದ ಲೆಕ್ಕಾಚಾರದಲ್ಲಿ ಹಬ್ಬದ ತಯಾರಿ ಶುರುವಾಗುತ್ತಿತ್ತು.

ಹಬ್ಬಕ್ಕೆ ವಾರದ ಮೊದಲು ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದೆವು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳು. ಕೊಟ್ಟಿಗೆಯೆದುರಿಗೆ ಬಾವಿಕಟ್ಟೆಗೆ ಶೇಡಿಯಲ್ಲಿ (ಬಿಳಿಯ ಬಣ್ಣ) ಹಸೆ ಚಿತ್ರ ಬರೆಯುವ ಅಮ್ಮಂದಿರ ಕೌಶಲ್ಯಕ್ಕೆ ಬೆರಗಾಗುತ್ತಿದ್ದೆವು.

ಹಬ್ಬದ ಹಿಂದಿನ ದಿನದೊಳಗೆ ಸ್ವಚ್ಛತಾ ಅಭಿಯಾನಕ್ಕೆ ತೆರೆ ಬೀಳುತ್ತಿತ್ತು. “ಬಲಿವೇಂದ್ರನ ರಾಜ್ಯದಲಿ ಮಗೆಯ ಹಣ್ಣಿನ ತ್ವಾರಣವೇ ಮಗೆಯ ಹಣ್ಣನು ಮೆಟ್ಟಿ ಇಳಿದು ಬಂದನೆ ಬಲಿವೇಂದ್ರ ” ಎನ್ನುತ್ತಾ ಹಾಡು ಹೇಳಿ ಬಾವಿಯ ನೀರು ಸೇದಿ ಕಲಶ ತುಂಬಿ ಉದ್ದದ ಮುಳ್ಳು ಸೌತೆಕಾಯಿಗೂ ಚಿತ್ತಾರ ಬರೆದು ಪೂಜೆಗಿಟ್ಟು ಮೇಲೊಂದು ಅಡಿಕೆ ಸಿಂಗಾರ ಮುಡಿಸುತ್ತಿದ್ದರು.

ಮಕ್ಕಳಿಗೆ ತಲೆಗೆ ಎಣ್ಣೆ ಹಾಕಿ ಆರತಿ ಎತ್ತಿ ಸ್ನಾನ ಮಾಡಲು ಅಮ್ಮ ಕಳಿಸಿದಳೆಂದರೆ ಬರೋಬ್ಬರಿ ಒಂದು ಹಂಡೆ ನೀರು ಜಳಕ ಮಾಡಿಬಿಡುತ್ತಿದ್ದೆವು. ಅಂದು ಕಡುಬಿನೂಟ. ಸಂಜೆಯೊಳಗೆ ಚೆಂಡು ಹೂವು, ಪಚ್ಚೆತೆನೆ, ಹಣ್ಣಡಿಕೆ, ವೀಳ್ಯದೆಲೆಗಳನ್ನು ಬುಟ್ಟಿಯಲ್ಲಿ ತಂದಿಡುತ್ತಿದ್ದರು. ಬಚ್ಚಲು ಬಳ್ಳಿಗೆ ದಬ್ಬಣ ಸುರಿದು ಹೂವಿನ ಮಾಲೆಯನ್ನು, ಅಡಿಕೆ ಮಾಲೆಯನ್ನೂ ಬೇರೆಬೇರೆಯಾಗಿ ಕಟ್ಟುವ ತರಬೇತಿಯಂತಹ ಕಾರ್ಯಕ್ರಮ.

ನಮ್ಮ ತಲೆಗೆ ಮುಡಿಯಲು ಕನಕಾಂಬರದ ಮಾಲೆಯೂ ಸಿದ್ಧವಾಗುತ್ತಿತ್ತು. ರಾತ್ರಿ ಬರ‍್ಗಳವಿನ ಹೆಸರಿನಲ್ಲಿ ಅಕ್ಕ ಪಕ್ಕದ ಮನೆಯ ಹಿತ್ತಿಲಿನಲ್ಲಿರುವ ಎಳೆ ಸವತೇ ಕಾಯಿ, ಪೇರಲೆಕಾಯಿ. ಹೀಗೆ ತರಕಾರಿ, ಹೂವು ಹಣ್ಣುಗಳನ್ನು ಕದಿಯುತ್ತಿದ್ದೆವು. ಅವತ್ತು ಕದಿಯುವಾಗ ಸಿಕ್ಕಿಬಿದ್ದರೂ ಮಾಫ್ ಮಾಡುತ್ತಿದ್ದರು. ಹುಡುಗಿಯರಾಗಿದ್ದರಿಂದ ಬೈಯುವುದರಲ್ಲೂ ವಿಶೇಷ ರಿಯಾಯತಿ!

ಹಬ್ಬಕ್ಕೆ ಸಾಧ್ಯವಾದರೆ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಿದ್ದರು ಅದಿಲ್ಲವಾದರೆ ಇರುವುದರಲ್ಲೇ ಹೊಸದೆನಿಸುವ ಅಂಗಿ ಧರಿಸಿ ಮಾಲೆ ತಲೆಗೇರಿಸಿದರೆ ಅಲಂಕಾರ ಸಂಪೂರ್ಣ. ಆಗ ನಮ್ಮೂರಿನ ಅಮ್ಮಂದಿರಿಗೆ ಮದುವೆಯಲ್ಲಿ ಗಂಡನ ಮನೆಯವರು ಕೊಡಿಸುತ್ತಿದ್ದ ಒಂದೇ ರೇಷ್ಮೆಸೀರೆಯಲ್ಲಿ ಇಡೀ ಜೀವಮಾನ ಕಳೆಯುವ ರೂಢಿ ಇತ್ತು.

ಪ್ರತಿ ವರ್ಷ ದೀಪಾವಳಿಯಲ್ಲಿ ಅದನ್ನೇ ಉಟ್ಟು ಸಂಭೃಮಿಸುತ್ತಿದ್ದರು. ಕೊಟ್ಟಿಗೆಯಲ್ಲಿರುವ ಗಂಗೆ, ಸೀತೆ, ಸಾವಿತ್ರಿ ಮುಂತಾದ ದನ ಕರುಗಳಿಗೆಲ್ಲ “ಆ ಕೋಡು ತೋರಿಸ್ತಂತಯ್ಯ ಒದ್ದರೆ ನೋಡು ಮತ್ತೆ, ಹೇ ತಥ್. ಸರಿ ಅತ್ಲಾಗೆ  ಬಾಲ ಬೀಸಿದರೆ ಅಂದ್ರೆ. ಎಂದು ಒಮ್ಮೊಮ್ಮೆ ಗದರಿಸುತ್ತಾ, ನೀ ಭಾರಿ ಸಂಭಾವಿತ” ಎಂದು ಒಮ್ಮೊಮ್ಮೆ ಅವುಗಳ ಬೆನ್ನು ಚಪ್ಪರಿಸುತ್ತಾ ಝಳಕದ ಪುಳಕ ಕರುಣಿಸುವ ಗಂಡಸರ ಕಷ್ಟ ಮಕ್ಕಳಾದ ನಮಗೆ ನಮಗೆ ಮೋಜು ತರುತ್ತಿತ್ತು.

ಅಡುಗೆ ಮನೆಯಲ್ಲಿ ತಯಾರಾಗುತ್ತಿದ್ದ ಚರುವು (ಅರಿಶಿನ ಹಾಕಿದ ಅನ್ನ),  ರಾಶಿಯಾಗಿ ಎರೆಯುವ ದೊಸೆ, ಘಮಘಮಿಸುವ ಹೋಳಿಗೆ. ನೈವೇದ್ಯವಾಗುವವರೆಗೆ ತಿನ್ನದೇ ಇರುವುದೇ ಕಷ್ಟವಾಗುತ್ತಿತ್ತು. ‘ಈ ಹಬ್ಬದಲ್ಲಿ ಮಾಡುವ ಅಡುಗೆ  ಮಕ್ಕಳೇ ನಿಮಗಾಗಿ ಮಾಡಿದ್ದಲ್ಲ.  ದನಕರುಗಳಿಗೆ’ ಎಂದು ಅಮ್ಮ ಹೇಳಿದರೆ ಮೂತಿ ಉಬ್ಬಿಸಿ ನಿಮ್ಮದೇ ಒಳ್ಳೆ ಯೋಗಾ ಇವತ್ತು! ಎಂದು ನಿಟ್ಟುಸಿರು ಬಿಡುತ್ತಾ ಕರುಗಳ ಮೈ ನೇವರಿಸುತ್ತಿದ್ದವು.

ಕೊರಳಿಗೆ ಕಟ್ಟಿದ ಚೆಂಡುಹೂವಿನ ಮಾಲೆ ಅಡಿಕೆಮಾಲೆಯನ್ನು ತಿನ್ನಲೆತ್ನಿಸುತ್ತಿದ್ದ ಅವಕ್ಕೆ ನಮ್ಮ ಕಷ್ಟ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಬೆಟ್ಟದಲ್ಲಿರುವ ಹುಲಿದೇವರಿಗೆ ಊರಿನವರೆಲ್ಲ ಸೇರಿ ತೆಂಗಿನ ಕಾಯಿ ಒಡೆದು ಪೂಜೆ ಮಾಡಿ ಬರುತ್ತಿದ್ದರು. ನಂತರ ಕೊಟ್ಟಿಗೆಯಲ್ಲಿ ಗೋಪೂಜೆ. ಅಪ್ಪನ ಮಂತ್ರ, ಅಮ್ಮನ ಸಂಪ್ರದಾಯದ ಹಾಡು, ನಾವು ಬಾರಿಸುತ್ತಿದ್ದ ಜಾಗಟೆಯ ಸಪ್ಪಳಕ್ಕೆ ಕೆಲವು ದನ ಕರುಗಳು ಸಿಟ್ಟಿಗೆದ್ದು ಸರ್ಪದಂತೆ ಬುಸುಗುಡುತ್ತಿದ್ದವು.

ಪೂಜೆಯ ಅಂತ್ಯದಲ್ಲಿ ಹೋಳಿಗೆ, ದೋಸೆ, ಚರುವುಗಳನ್ನು ಒಂದೊಂದು ಬುಟ್ಟಿಯಲ್ಲಿ ತುಂಬಿ ಪ್ರತಿ ಹಸುವಿನ ಮುಂದಿಟ್ಟಾಗ ಬುಸುಗುಡುವ ಹಸುಗಳೂ ಶಾಂತವಾಗುತ್ತಿದ್ದವು. ಕೆಲವೊಮ್ಮೆ ಪಕ್ಕದ ಹಸುವಿನ ಬುಟ್ಟಿಯಲ್ಲಿರುವುದನ್ನೂ ತಿನ್ನಲು ಸ್ಪರ್ಧೆಗಿಳಿಯುತ್ತಿದ್ದವು. ಗೋಪೂಜೆ ಮುಗಿದ ಮೇಲೆ ಸುತ್ತು ಪೂಜೆ.

ಬಾವಿ, ಹೊಸ್ತಿಲು, ಕೃಷಿ ಪರಿಕರಗಳು, ಪಣತ, ತುಳಸಿಕಟ್ಟೆ, ವಾಹನಗಳು, ಒಲೆ ಹೀಗೆ ಎಲ್ಲ ಪೂಜೆಗಳನ್ನು ಮುಗಿಸಿ, ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಮನೆ ದೇವರ ಮಂದಿಟ್ಟು ಪೂಜೆ ಮಾಡಿ ಆರತಿ ಮಾಡುತ್ತಿದ್ದರು. ಭತ್ತದ ಕದಿರು, ಮಾವಿನೆಲೆಗಳನ್ನು ನಾರಿನಲ್ಲಿ ಕಟ್ಟಿ ಹೊಸ್ತಿಲಿಗೆ ತೋರಣ ಕಟ್ಟುತ್ತಿದ್ದರು. ನಂತರ ಬಹು ನಿರೀಕ್ಷಿತ ಹೋಳಿಗೆ ಊಟದ ಸಡಗರ.

ದೀಪಾವಳಿಯಲ್ಲಿ ಭರ್ಜರಿ ಊಟದ ನಂತರ ವಿಶ್ರಮಿಸುವ ಭಾಗ್ಯವಿರುತ್ತಿರಲಿಲ್ಲ. ಸಂಜೆ ಊರ ಹೊರಗಿರುವ ಗುಡಿಯಲ್ಲಿ ಸಾಮೂಹಿಕವಾಗಿ ಊರಿನವರೆಲ್ಲ ಪೂಜೆ ಸಲ್ಲಿಸುತ್ತಿದ್ದವು. ಎದುರಿನ ಬಯಲಿನಲ್ಲಿ ಊರಿನಲ್ಲಿರುವ ಎಲ್ಲರ ಮನೆಯ ಹೋರಿಗಳನ್ನು ಬಿಟ್ಟು ರೊಚ್ಚೆಗೆಬ್ಬಿಸುತ್ತಿದ್ದರು. ಸಡಿಲವಾಗಿ ಹಿಡಿದ ಹಗ್ಗವನ್ನು ಲೆಕ್ಕಿಸದೇ ಅವು ಚಂಗು ಚಂಗೆಂದು ಜಿಗಿದಾಡುತ್ತಿದ್ದರೆ.

ಸಾಹಸಿ ಯುವಕರು ಅವುಗಳ ಕೊರಳಿನಲ್ಲಿರುವ ಹಣ್ಣಡಿಕೆ ಮಾಲೆಗಳನ್ನು ಹರಿಯುತ್ತಿದ್ದರು. ಹೆಚ್ಚು ಮಾಲೆಗಳನ್ನು ಹರಿದವ ಎಲ್ಲರ ಕಣ್ಣಿನಲ್ಲಿ ಪರಾಕ್ರಮಿ ಎನಿಸಿಕೊಳ್ಳುತ್ತಿದ್ದ. ರಾತ್ರಿ ಮನೆಯ ಮುಂದೆ ತುಳಸಿಕಟ್ಟೆಯೆದುರು, ದೇವರ ಮುಂದೆ ಹಣತೆಗಳನ್ನು ಬೆಳಗಿ, ಬಲಿವೇಂದ್ರನನ್ನು ( ಪೂಜೆಗೆ ಬಳಸಿದ ಅಡಿಕೆ ಸಿಂಗಾರ) ಮುಂದಿನ ವರ್ಷ ಬಾರೋ ಎಂದು ಮನೆ ಮಾಡಿಗೆ ಒಗೆದರೆ ಹಬ್ಬಕ್ಕೆ ಮಂಗಳ ಹಾಡಿದಂತೆ.

ಕಳೆದ ಇಪ್ಪತ್ತು ವರ್ಷಗಳಿಂದ ನಾವು ಮಹಾನಗರವಾಸಿಗಳು. ಚಾ ಆತ್ರೀ? ಎಂದು ದಿನವೂ ಒಂದೇ ಪ್ರಶ್ನೆ ಕೇಳುವ ಓಣಿಯ ಮಂದಿಯಲ್ಲ ನೇಕರು ಹಬ್ಬ ಬಂದಾಗ ಏನು ತಗೊಂಡೀರಿ? ಬಂಗಾರಾ, ಹೊಸಾ ಟಿವಿ. ಎಷ್ಟರ ಸೀರಿ? ತವರು ಮನೀಯವರು ಏನಾರೂ ಕೊಡಿಸತಾರೇನ್ರೀ? ಹೀಗೆ ಸಾಲು ಸಾಲು ಪ್ರಶ್ನೆ ಹಾಕುತ್ತಾರೆ. ಇಲ್ಲಿ ಹಬ್ಬ ಬಂತೆಂದರೆ ಸಾಕು ಜಾಹೀರಾತುಗಳ, ಸೇಲುಗಳ ಅಬ್ಬರ. ಶಹರಗಳಲ್ಲಿ ವಾಸಿಸುವವರಿಗೆ ಹಬ್ಬವೆಂದರೆ ಖರ್ಚಿನ ಸಾಲು. 

ಆಸೆಗಣ್ಣಿನಲ್ಲಿ ಅಂಗಡಿ ಸಾಲನ್ನು ನೋಡುತ್ತಾ ನಿಟ್ಟುಸಿರನ್ನು ತಡೆಹಿಡಿಯುತ್ತಾ “ಹಬ್ಬಾ ಯಾಕಾರೆ ಬರ‍್ತಾವೋ” ಎಂದು ಗೊಣಗುವ ಬಡವರು, ಜೇಬು ಪರ್ಸುಗಳಲ್ಲಿರುವುದಕ್ಕಿಂತ ಬೆಲೆಬಾಳುವ ಸಂಗತಿಗಳನ್ನೇ ನೋಡಿ ಆಸೆಪಟ್ಟು ಕಡಿಮೆ ಬೆಲೆಯ ಇನ್ಯಾವುದನ್ನೋ ಖರೀದಿಸಿ ವೇದಾಂತ ಹೇಳಿಕೊಳ್ಳುವ ಮಧ್ಯಮವರ್ಗದವರು, ಬಿಂದಾಸ್ ಖರ್ಚು ಮಾಡಿದರೂ ಹಬ್ಬದ ವೇಳೆಗೆ ಕೈ ಕೊಡುವ ಕೆಲಸದವರಿಂದಾಗಿ ಉಸ್ ಎನ್ನುವ ಶ್ರೀಮಂತರು.

ಮಗಳನ್ನು ಕರಿಯೋದು, ಅಳಿತನಾ ಮಾಡೋದು, ಆಯಾರು ಮಾಡೋದು, ಪರಾಳ ತಯಾರಿ. ಹೀಗೆ ಹಬ್ಬದ ಸಂತಸದ ಪ್ರತಿ ಸಂಗತಿ ಮಾರುಕಟ್ಟೆಯಲ್ಲಿಯೇ ನಿರ್ಧಾರವಾಗುತ್ತದೆ. ಲಕ್ಷ್ಮೀ ಪೂಜೆಯಲ್ಲೂ ಪ್ರದರ್ಶನಕ್ಕೇ ಆದ್ಯತೆ ಹೆಚ್ಚು. ಪಟಾಕಿಯ ಸಪ್ಪಳ, ಮದ್ದಿನ ವಾಸನೆ ರೇಜಿಗೆ ತರಿಸುವಂಥದ್ದು. ಬಡಾವಣೆಯ ಗೆಳತ್ಯಾರು ತಯಾರಿಸಿದ ಅಥವಾ ಖರೀದಿಸಿದ ತಿನಿಸುಗಳನ್ನು ತಾಟು ತುಂಬಿಕೊಡುತ್ತಾರೆ. ‘ಅರಿಶ್ನಾ- ಕುಂಕುಮಕ್ಕ ನಮ್ಮಿನಿಗಿ ರ‍್ರೀ ಲಕ್ಷ್ಮೀ ಪೂಜಿ ಮಾಡೇವ್ರೀ ಎಂದು ರಾಗವಾಗಿ ಕರೆದು ಹೋಗುತ್ತಾರೆ.

ನಾನೂ ಪರತ್ ಕೊಡುವ ತಾಟಿನಲ್ಲಿ ತಿಂಡಿಗಳನ್ನು ತುಂಬುತ್ತಾ  “ಅತ್ತಿತ್ತಗಲದೇ ಭಕ್ತರ ಮನೆಯಲ್ಲಿ ನೆಲೆಸು” ಎಂದು ಲಕುಮಿ ದೇವಿಯಲ್ಲಿ ಬೇಡಿಕೊಳ್ಳುತ್ತೇನೆ. ‘ಹೆಪ್ಪು ಹಾಲಿಗೆ ಕೊಡಲು ತುಪ್ಪ ತಾನಾಗುವುದೇ ತುಪ್ಪ ಕೂಡುವುದೇ ಮರಳಿ ಹಾಲೊಳಗೆ’ ಎಂದು ಹಾಡು ಗುನುಗಿಕೊಳ್ಳುತ್ತೇನೆ. ಹಬ್ಬಕ್ಕೆ ಕೊಡಿಸಿದ ಹೊಸ ಬಟ್ಟೆ ಧರಿಸಿ ಬಣ್ಣದ ಪಾತರಗಿತ್ತಿಯಂತೆ ಕುಣಿವ ಮಕ್ಕಳನ್ನು ನೋಡಿ ಸಂತಸ ಪಡುತ್ತೇನೆ. ಈಗೀಗ ಊರಿನಲ್ಲಿಯೂ ಹಬ್ಬಕ್ಕೆ ಖರೀದಿ ಮಾಡುವ ಪ್ರವೃತ್ತಿ ಶುರು ಆಗಿದೆ ಎಂದು ಅಮ್ಮ ಫೋನ್ ಮಾಡುತ್ತಾರೆ.

‍ಲೇಖಕರು Avadhi

17 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading