ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಬ್ಬಕ್ಕೊಂದು ಕನವರಿಕೆ..

ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???

ಅಮಿತಾ ರವಿಕಿರಣ್

ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ….ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು ,ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು…ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ…ಅವರಿವರ ವಿಷಯ ಯಾಕೆ ??ನಾನೆ ಅಮ್ಮನ ರೇಷ್ಮೆ ಸೀರೆ ಹರಿದು ಅದನ್ನು ಲಂಗ ಮಾಡಿ ಅದಕ್ಕೊಂದು ಪುಟ್ಟ ಸೀರೆ ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು…ಮನೆ ಮನೆಗೆ ಎಳ್ಳು ಹಂಚೋಕೆ ಹೋಗುವ ಸಂಭ್ರಮವನ್ನ ಮನಸ್ಪೂರ್ತಿ ಅನುಭವಿಸಿದ್ದೇನೆ…

ಸಂಕ್ರಾಂತಿ ಹಬ್ಬ ಬರುವ ೨ ತಿಂಗಳು ಮುಂಚಿನಿಂದಲೇ ನಮ್ಮ ತಯಾರಿ ಶುರು …ಅಂಥದ್ದೇನು ತಯಾರಿ ಅಂದಿರಾ????ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ಗುಳಿಗೆಗಳನ್ನು ತರುತ್ತಿರಲಿಲ್ಲ…ಮನೆಯಲ್ಲೇ ಎಳ್ಳು ತಯಾರಿಸುತ್ತಿದ್ದೆವು…ಸಕ್ಕರೆಪಾಕ ವನ್ನು ೭ ಬಾರಿ ಸೋಸಿ -ಕಾಸಿ ಅದಕ್ಕೆ ನಿಂಬೆ ಹಣ್ಣು ಹಿಂಡಿ ಸುಧಾರಸ ಎಂಬ ಪಾಕ ತಯಾರಿಸಿ…ಎಳ್ಳು,ಗೋಡಂಬಿ ಬೀಜ,ಕುಂಬಳ ಬೀಜದ ಒಳತಿರುಳು,ಜೀರಿಗೆ,ಬಡೆಸೋಪು,ಲವಂಗ ,ಶೇಂಗ,ಪುಟಾಣಿ.ಹೀಗೆ ಎಲ್ಲವನ್ನು ಒಂದು ಹರಿವಾಣದಲ್ಲಿ ಹಾಕಿ ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣ ಇಟ್ಟು,,,ಒಂದೆರಡು ಚಮಚ ಸುಧಾರಸ ಹಾಕಿ …ಮೆತ್ತಗೆ ಕೈ ಆಡಿಸಬೇಕು…ಅದು ನಸುಕಿನಲ್ಲಿ ಎದ್ದು..ಏಕೆಂದರೆ ಛಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ…ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ……
ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ….ಅನ್ನೋ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ ನಗುತ್ತವೆ…ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ ಕಳಿಸುವ ಕಾರ್ಯಕ್ರಮ..ಕಾಮತ್ ಮಾಮನ ಅಂಗಡಿಗೆ ಹೋಗಿ…ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್ ,ಹೂವು ,ಎಳೆಗಳು ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆ ಯಿಂದ ಗ್ರೀಟಿಂಗ್ ತಯಾರಿಸಿ…ಅಲ್ಲಿ ಇಲ್ಲಿಂದ ಕದ್ದು ಕೆಲ ಸಾಲುಗಳನ್ನು ಬರೆದು…ತಯಾರಿಸಿದ ಎಳ್ಳು ಹಾಕಿ…ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ…ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು…
ಸಂಕ್ರಾಂತಿಯದಿನ ಅದು ನಮ್ಮದೇ ದಿನ…ಆ ದಿನ ಆಬ್ಲಿಗೆ…ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ,,,ಅದು ಆ ಹೊತ್ತಿಗೆ ಅರಳುವ ಹೂವು…ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು..ಅಲ್ಲದಿದ್ದರೂ ಮೊಳ ಅಬ್ಬಲಿಗೆ ಸಿಕ್ಕೆಸಿಗುತ್ತೆ…ಅದಲ್ಲದಿದ್ದರು…ಆಡುಸೋಗೆ ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂ ..ಅದನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರ ಜಡೆಗೆ ಮುಡಿಸಿ…ಸಿಂಗಾರ
ಮಾಡುತ್ತಿದ್ದನ್ನು ಮರೆಯಲಾದೀತೇ..??ನಂತರ ಮನೆ ಮನೆ ತಿರುಗಾಡಿ …ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ..ನಾಲ್ಕೇ ಕಾಳು ಕೊಟ್ಟು ನನ್ನ ಡಬ್ಬಿ ,ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ..ರಸ್ತೆಲೇ ಮಾತು ಬಿಟ್ಟು…ಮತ್ತು ದೋಸ್ತಿ ನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ…ಇವತ್ತಿಗೂ ನಿಚ್ಚಳ …….
ಮತ್ತೊಂದು ವಿಶೇಷ ಅಂದ್ರೆ ಸಂಕ್ರಾಂತಿಯ ಜಾತ್ರೆಗಳು….ನಮ್ಮೂರಿಂದ ೫-೬ ಮೈಲಿ ದೂರ ಇರೋ ಸಾಲಗಾಂವಿ ಯಲ್ಲಿ ಬಾಣನ್ತೆವ್ವ ದೇವಿ ಯಾ ಜಾತ್ರೆ,ದನಗಳ ಸಂತೆ ಆಗುತ್ತೆ …ಅಲ್ಲಿ ಮಾವಿನ ತೋಪಿನ ನಡುವೆ ಅಂಗಡಿ ಗಳು …ಎಷ್ಟ್ ಚಂದ…ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ್ ಅಡಿಕೆ ತೋಟದಲ್ಲಿ ಕೂತು ಊಟ ಮುಗಿಸಿ…ಜೋಕಾಲಿ..ಮಿರ್ಚಿ ಭಜಿ ,,,ಕಬ್ಬಿನಹಾಲು ,,,ಮಂಡಕ್ಕಿ ಖಾರದಾಣಿ. ತಂದು ಒಂದಷ್ಟನ್ನು ಕಟ್ಟಿಸಿ ಕೊಂಡು ಬಂದರೆ…ಇನ್ನೊಂದ್ ಜಾತ್ರೆ ಬರೋತನ್ಕ ಅದರ ಉಮೇದಿ ಜಾರಿಯಲ್ಲಿರುತ್ತೆ,,,,ಮತ್ತು ಎಷ್ಟೋ ”ಚಾಳಿ ಟೂ ”ಗಳು ಮತ್ತೆ ಗೆಳೆತನ ವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ ಬಹಳ ….
ಹೈಸ್ಕೂಲು ಮುಗಿಯೋ ಹೊತ್ತಿಗೆ ಈ ಜಾತ್ರೆ ಗೆ ಹೋಗೋ ಉತ್ಸಾಹ ಕಡಿಮೆ ಆಗುತ್ತ ಬಂತು ..ಅದಕ್ಕೆ ಕಾರಣ ..ಮತ್ತೆ ಯಾವತ್ತಾದ್ರು ವಿವರಿಸ್ತೀನಿ……….ಕಾಲೇಜ್ ಗಳಲ್ಲಂತು ಇಲ್ಲವೇ ಇಲ್ಲ ಅನ್ನೋಷ್ಟು ಕಡಿಮೆ ಎಳ್ಳು,ಕಡಿಮೆ ತಿರುಗಾಟ ,,ಅಬ್ಬಲಿಗೆ ಮುಡಿದದ್ದು ಕಡಿಮೆಯೇ…
ಹಾ ಮರೆತೇ ಬೆಳಗಾವಿ,,,ಸೋಲ್ಹಪುರ್ ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು ಮಂಡಕ್ಕಿಯ ಸ್ನಾನ ಮಾಡಿಸಲಾಗುತ್ತೆ…ಸಂಜೆಗೆ ಆರತಿ ಮಾಡುವುದು ಇದೆಯಂತೆ…ಇದು ನನ್ನ ಅತ್ತೆಯ ತವರುಮನೆಯ ನೆನಪಿಂದ ಹೆಕ್ಕಿದ್ದು…
ಆದರೆ ಈಗ ಈ ಉತ್ಸಾಹ ಇಲ್ಲ….ನನಗೇ ಇಲ್ಲವೋ??ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ??ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ…ಒಟ್ಟಿನಲ್ಲಿ ಸಂಕ್ರಮಣ ವೆ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ ..ನಾವು ದೊಡ್ಡವರಾಗಿ ಬಿಟ್ವ???ಅಥವ ನಮ್ಮ ಮಕ್ಕಳಿಗೆ ಈ ಹಬ್ಬಗಳ ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವ ಗೊತ್ತಿಲ್ಲ…ಯಾಕೋ ನೀರಸ ಅನ್ನೋ ವಂಥ ವಾತಾವರಣ…
ನನಗನಿಸಿದ ಮಟ್ಟಿಗೆ ..ಶಹರದ ಗಾಳಿ ಬಹು ಜೋರಾಗೆ ಬೀಸಿದೆ…ಮೊದಲಿನವರ ತಾಳ್ಮೆ,ಸಹನೆ ,ಇರದು ನಮ್ಮಲ್ಲಿಲ್ಲ…ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ,,,೧)ಹಬ್ಬ ಯಾವ ವಾರ ಬಂದಿದೆ…(ಇದು ಸರದಿ ರಜೆಗಾಗಿ )….೨)ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸ ಬಹುದು ಅಥವಾ ಎಷ್ಟು ವಿರಮಿಸ ಬಹುದು…
ಹೀಗೆ ಮುಂದುವರಿದರೆ…ಒಂದು ದಿನ ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್ ನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ…ಅಲ್ಲವೆ??

‍ಲೇಖಕರು G

13 January, 2013

3 Comments

  1. suguna

    ನಮಗೆ ಹಬ್ಬಗಳತ್ತ ಆಕರ್ಷಣೆ ಕಡಿಮೆ ಆಗಿರುವ ಆಗಿದೆ ಎಂದೆನಿಸುತ್ತೆ. ನಮ್ಮ ಬಾಲ್ಯ ಜೀವನ ನೆನಪಿಸಿತು ಅಮಿತಾ. ಸಂಕ್ರಾಂತಿ ಹಬ್ಬದ ಶುಭಾಶಯಗಳು

  2. Gopaal Wajapeyi

    ನಮ್ಮ ಚಿಕ್ಕಮ್ಮಂದಿರು, ಅವರ ಮಕ್ಕಳು ಅಂದರೆ ನನ್ನ ಅಕ್ಕ-ತಂಗಿಯರು ಕುಸುರೆಳ್ಳು ಮಾಡುವಾಗಿನ ಆ ತನ್ಮಯತೆ, ಉಮ್ಮೇದು, ಪೈಪೋಟಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಖುಷಿ… ಎಲ್ಲವನ್ನೂ ನಿಮ್ಮ ಲೇಖನ ಮತ್ತೆ ಕಣ್ಣ ಮುಂದೆ ತಂದು ನಿಲ್ಲಿಸಿತು. ಮನೆ ಮನೆಗೆ ಹೋಗಿ ”ಎಳ್ಳು ಬೆಲ್ಲಾ ಕೊಡೂಣು… ಒಳ್ಳೆ ಮಾತು ಆಡೂಣು…” ಅಂತ ಹೇಳಿ ಕೊಟ್ಟು -ಪಡೆದು ಬರುತ್ತಿದ್ದಾಗಿನ ಆ ಸಂಭ್ರಮದ ದಿನಗಳು ಊಹೂಂ, ಮತ್ತೆ ಮರಳಲಾರವು…

  3. Amita Ravikirana

    Thank you both of you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading