ಗೋಪಾಲ ವಾಜಪೇಯಿ ಕಾಲಂ : 'ಸಪ್ತಮಂಡಲ'ದ ಸುತ್ತಾಟದಲ್ಲಿ!

ಸುಮ್ಮನೇ ನೆನಪುಗಳು – 31

1984ರ ನೆನಪಿದು… ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅಂದು, ಶನಿವಾರ, ‘ಧರ್ಮಪುರಿಯ ಶ್ವೇತವೃತ್ತ’ ನಾಟಕ ಪ್ರದರ್ಶನ… ಜಯತೀರ್ಥ ನಮ್ಮನ್ನೆಲ್ಲ ಅಲ್ಲಿಗೆ ಬರಹೇಳಿದ್ದರು. ‘ಕರೆದ ಕಾರಣ’ವೇನೆಂಬುದು ಮಾತ್ರ ಸಸ್ಪೆನ್ಸ್… ಹಳಿಯಾಳದ ಜನ ನಾಟಕವನ್ನು ‘ಇಡಿಯಾಗಿ’ ಆಸ್ವಾದಿಸಿದರು. ಸಹಜವಾಗಿಯೇ ಜೋಶಿಗೆ ಸಂತೋಷವಾಗಿತ್ತು. ‘ಗ್ರಾಮೀಣ ಕಲಾವಿದರು ನಾಟಕದ ಮೂಲಕ ಬೇರೆ ಕಡೆಯ ಗ್ರಾಮೀಣ ಜನರನ್ನು ತಲಪಬೇಕು… ಆ ಜನ ರಂಗಚಟುವಟಿಕೆಗಳಿಗೆ ಸ್ಪಂದಿಸುವಂತಾಗಬೇಕು… ಇದು ‘ನೀನಾಸಂ ಜನಸ್ಪಂದನ’ದ ಉದ್ದೇಶ. ಅದು ಅಲ್ಲಿ ಈಡೇರಿತ್ತು. ಉತ್ತರ ಕನ್ನಡ ಜಿಲ್ಲೆಯ ಆ ಭಾಗದ ಜನ ಈ ಜಾನಪದ ಶೈಲಿಯ ನಾಟಕವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದರು… ಅಂದ ಮೇಲೆ ಆ ನಾಟಕದ ನಿರ್ದೇಶಕನಿಗೆ ಖುಷಿಯಾಗದಿದ್ದೀತೆ?
ಪ್ರದರ್ಶನದ ನಂತರ ಆ ಖುಷಿಯಲ್ಲೇ ನಮ್ಮನ್ನೆಲ್ಲ ಅಲ್ಲಿಯ ಪ್ರವಾಸಿ ಬಂಗಲೆಗೆ ರವಾನಿಸಿದರು ಜೋಶಿ. ಅಲ್ಲಿ ಅಂದಿನ ಪ್ರದರ್ಶನದ ಕುರಿತು ಚರ್ಚೆ, ಭರ್ಜರಿ ಊಟ, ನಗೆಚಾಟಿಕೆ… ಆಮೇಲೆ, ಸುಪ್ಪತ್ತಿಗೆಯಲ್ಲಿ ಸುಖನಿದ್ರೆ…
ಮರುದಿನ ಬೆಳಿಗ್ಗೆ ನಮ್ಮ ನಮ್ಮ ಊರುಗಳಿಗೆ ವಾಪಸಾಗುವ ತರಾತುರಿಯಲ್ಲಿದ್ದ ನಮ್ಮನ್ನು ತಡೆದರು ಜಯತೀರ್ಥ.
”ಮಸ್ತ್ ಊಟಾ ಮಾಡಿ, ಶಿಸ್ತ್ ನಿದ್ದೀ ಹೊಡದು ಹೋಗಲಿಕ್ಕೇನು ನೀವಿಲ್ಲೆ ಹಳಿಯಾಳಕ್ಕ ಬಂದದ್ದು?” ಅಂತ ನಗೆಯಾಡಿದರು. ”ಒಂದು ಮುಖ್ಯ ವಿಷಯ ಚರ್ಚಾ ಮಾಡಬೇಕು. ಇವತ್ತ ಹ್ಯಾಂಗೂ ಆದಿತ್ಯವಾರ. ಸಂಜಿಗೆ ಊರಿಗೆ ವಾಪಸ್ಸಾದ್ರಾತು, ಕೂಡ್ರಿ…” ಅಂತ ತಮ್ಮ ‘ಹಸಿಬಿ’ಯನ್ನು ಬಿಡಿಸಿ, ಮಂಡಿಯೂರಿ ಕೂತರು. ನಾವೆಲ್ಲ ನಮ್ಮ ಬಗಲು ಚೀಲಗಳನ್ನು ಬದಿಗಿಟ್ಟು, ಗೋಡೆಗೆ ಬೆನ್ನಾನಿಸಿದೆವು.
”ಒಂದು ವಿನೂತನ ಅನಸೋ ಅಂಥಾ ನಾಟಕೋತ್ಸವ ಮಾಡಬೇಕು…” ಅಂತ ಪೀಠಿಕೆ ಹಾಕಿದರು ಜೋಶಿ. ”ಈಗ ಹ್ಯಾಂಗೂ ನಾ ಡೈರೆಕ್ಟ್ ಮಾಡಿದ ನಾಲ್ಕು ನಾಟಕಗಳು ರೆಡಿ ಅವ… ನಾನು ಒಂದು ಕನಸು ಕಂಡೀನಿ… ಈ ನಾಟಕಗಳು ಒಂದೋ ಎರಡೋ ಇಲ್ಲಾ, ಹೆಚ್ಚಂದ್ರ ಐದೋ ಪ್ರದರ್ಶನ ಕಂಡು ಕಣ್ಣು ಮುಚ್ಚಬಾರದು.
ಮತ್ತ ಮತ್ತ ಇವುಗಳ ಪ್ರದರ್ಶನ ಬ್ಯಾರೆ ಬ್ಯಾರೆ ಕಡೆ ಆಗತಿರಬೇಕು… ಒಟ್ಟಾರೆ ಈ ಭಾಗದ ರಂಗಭೂಮಿ, ಅಂದ್ರ ‘ಪ್ರಾದೇಶಿಕ ರಂಗಭೂಮಿ’ ತನ್ನ ಅಂತಃಸತ್ವದಿಂದ ಬೆಳದು ಇಡೀ ನಾಡಿಗೆ ಮಾದರಿ ಅನಸಬೇಕು… ಮತ್ತ, ನಾನೇನು ಆರಂಭಕ್ಕ ಹೇಳಿದ್ನೆಲ್ಲಾ, ಆ ವಿನೂತನ ಅನಸೋ ನಾಟಕೋತ್ಸವನs ಇದಕ್ಕ ‘ನಾಂದಿ’ ಆಗಬೇಕು…” ಅಂತ ನಮ್ಮ ಕಡೆ ನೋಡಿದರು ಜೋಶಿ.
ಅಲ್ಲಿ ಸೇರಿದ್ದವರು ನಾವು ‘ಹನ್ನೆರಡು ಜನ ಬುದ್ಧಿವಂತರು’ ಹೌದೆಂದು ತಲೆಯಾಡಿಸಿದೆವು.
”ಈ ನಾಟಕೋತ್ಸವಕ್ಕ ನಾನು ‘ಸಪ್ತಮಂಡಲ ನಾಟಕೋತ್ಸವ’ ಅಂತ ಆಗಲೇ ಹೆಸರು ಹುಡಿಕಿಬಿಟ್ಟೀನಿ…” ಅಂತ ಮತ್ತೆ ನಮ್ಮೆಲ್ಲರತ್ತ ನೋಡಿದರು ಜಯತೀರ್ಥ.
ನಾವು ತಲೆಯಾಡಿಸುತ್ತಲೇ ಪರಸ್ಪರ ಮುಖ ನೋಡಿಕೊಂಡೆವು. ಇದೇನಿದು ‘ಸಪ್ತಮಂಡಲ’…?’ ಅನ್ನೋದು ಆಗಿನ ನಮ್ಮ ಪ್ರಶ್ನೆ. ಯಾಕಂದರೆ, ಅಲ್ಲಿ ಸೇರಿದ್ದ ನಾವು ನಾಲ್ಕು ಊರುಗಳವರು, ನಾಲ್ಕು ಹವ್ಯಾಸಿ ತಂಡಗಳವರು. ನಾಲ್ಕಿದ್ದದ್ದನ್ನು ಇವರು ‘ಏಳು’ ಅಂತಿದ್ದಾರಲ್ಲ… ಹೇಗೆ? ಅಂತ ತಲೆ ಕೆರೆದುಕೊಳ್ಳುವ ಹೊತ್ತಿಗೆ ಜಯತೀರ್ಥ ಅವರಿಂದಲೇ ನಮ್ಮ ಸಮಸ್ಯೆಗೆ ಸಮಾಧಾನ ಸಿಕ್ಕಿತು.
”ಗದಗಿನ ‘ಅಭಿನಯರಂಗ’, ಹುಬ್ಬಳ್ಳಿಯ ‘ಅಭಿನಯ ಭಾರತಿ’, ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ ಮತ್ತ, ಕಿತ್ತೂರಿನ ‘ಗ್ರಾಮೀಣ ರಂಗಚೇತನ’ – ಈ ನಾಲ್ಕು ಪ್ರದರ್ಶಕ ತಂಡಗಳ ಜೊತೀಗೆ ಮೂರು ಸಂಘಟನಾ ಸಂಸ್ಥಾಗಳೂ ಕೈ ಜೋಡಸತಾವ… ಅಂದ ಮ್ಯಾಲೆ ಆತಿಲ್ಲೋ ‘ಸಪ್ತಮಂಡಲ’…?” ಅಂತ ನಮ್ಮೆಲ್ಲರ ಕಡೆ ನೋಡುತ್ತ, ”ಯೋಳು ರಂಗ ಸಂಘಟನೆಗಳ ಒಂದು ತಾತ್ಕಾಲಿಕ ಒಕ್ಕೂಟ ಈ ‘ಸಪ್ತಮಂಡಲ’…” ಅಂತ ಘೋಷಿಸಿಬಿಟ್ಟರು ಜೋಶಿ.
ಜಯತೀರ್ಥ ಜೋಶಿಯ ಸಂಘಟನಾ ಚಾತುರ್ಯಕ್ಕೆ, ಎಲ್ಲರೊಂದಿಗೆ ಸೇರಿ ಎಲ್ಲರೊಂದಿಗೆ ತಾನೂ ಮುಂದುವರಿಯುವ ಆತನ ಚಾಕಚಕ್ಯಕ್ಕೆ ನಿದರ್ಶನ ಅದು.
ಮೇಲಿನ ಆ ಏಳೂ ತಂಡಗಳು ಪರಸ್ಪರ ಸಹಕಾರದಿಂದ ಒಂದು ‘ವಿನೂತನ’ವೆನ್ನಿಸುವಂಥ ನಾಟಕೋತ್ಸವವನ್ನು ಏರ್ಪಡಿಸುವ ವಿಚಾರಕ್ಕೆ ನಾವೆಲ್ಲಾ ‘ಸೈ’ ಎಂದೆವು. ಅದೇ ಹೊತ್ತಿಗೆ ಅದು ‘ಅಪರೂಪದ ನಾಟಕೋತ್ಸವ’ವೂ ಆಗಬೇಕು ಅಂತ ಜೋಶಿ ಹೇಳಿದಾಗ ಇನ್ನಷ್ಟು ಥ್ರಿಲ್ಲಾಯಿತು ನಮಗೆ.
”ಹೌದು, ‘ಅಪರೂಪದ ನಾಟಕೋತ್ಸವ’. ಯಾಕ ‘ಅಪರೂಪ’ದ್ದು ಅಂದ್ರ, ಅದು ನಾಲ್ಕೂ ಊರಿನೊಳಗ ನಡೆಯೋ ‘ಸಂಚಾರಿ ನಾಟಕೋತ್ಸವ’… ಒಂದು ಊರಿನೊಳಗ ಆರಂಭ ಆಗೋ ನಾಟಕೋತ್ಸವ ಹಾಂಗs ಮುಂದಿನ ಮೂರು ಊರುಗಳಿಗೆ ವಿಸ್ತರಿಸತದ… ಹೀಂಗ, ಏಕಕಾಲಕ್ಕ ಆ ನಾಲ್ಕೂ ಊರಿನ್ಯಾಗೂ ಆರಂಭ ಆಗಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ತಂಡಗಳು ತಿರಗಾಡತಿರತಾವ…” ಅಂತ ಒಂದು ಕ್ಷಣ ನಮ್ಮತ್ತ ನೋಡಿದರು.
ನಾವೆಲ್ಲ ಆಗಲೇ ಊರಿಂದೂರಿಗೆ ಹೋಗುವ, ಅಲ್ಲಿ ನಾಟಕ ಪ್ರಯೋಗಿಸುವ ಕನಸು ಕಾಣತೊಡಗಿದ್ದೆವು.
”ಹಾಂ… ಹೀಂಗ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗೋದಕ್ಕಾಗ್ಲೀ, ಅಲ್ಲೆ ನಾಟಕ ಪ್ರದರ್ಶನ ಮಾಡಿದ್ದಕ್ಕಾಗ್ಲೀ ಒಂದs ಒಂದು ಪೈಸಾನೂ ತಂಡಗಳಿಗೆ ಸಿಗೂದುಲ್ಲಾ. ಆದರ, ಆಯಾ ಊರಿನೊಳಗ ನಾಟಕೋತ್ಸವ ಸಂಘಟಿಸೋದು, ಬೆಳಕು ಮತ್ತು ಧ್ವನಿವ್ಯವಸ್ಥೆ ಸಹಿತದ ಸುಸಜ್ಜಿತ ರಂಗಮಂದಿರ ಒದಗಿಸೋದು, ಬರೋ ತಂಡಗಳಿಗೆ ಊಟ-ತಿಂಡಿ ಮತ್ತ ವಸತಿಯ ಏರ್ಪಾಡು ಮಾಡೋದು ಆಯಾ ಊರಿನ ತಂಡದ ಜವಾಬ್ದಾರಿ…”
ಆಗ ನಮ್ಮೊಳಗೆ ಪ್ರಶ್ನೆಗಳು ಉದ್ಭವಿಸತೊಡಗಿದವು.
ಯೋಜನೆಯೇನೋ ತುಂಬಾ ಆದರ್ಶದ್ದು. ಆಕರ್ಷಕವೆನಿಸುವಂಥದ್ದು. ಎಲ್ಲ ನಿಜ. ಆದರೆ ಇದಕ್ಕೆಲ್ಲ ಎಲ್ಲಿಂದ ಹಣ ತರುವುದು? ಆಯಾ ತಂಡ ತನ್ನ ಊರಲ್ಲಿ ನಾಟಕೋತ್ಸವ ಏರ್ಪಾಡು ಮಾಡೋದರ ಜೊತೆಗೆ, ಬೇರೆ ಊರುಗಳಿಗೆ ಹೋಗಿ ತನ್ನ ನಾಟಕವನ್ನ ಪ್ರದರ್ಶಿಸಬೇಕಲ್ಲ?… ಇದೆಲ್ಲ ಹೇಗೆ ಸಾಧ್ಯ? ಅದಕ್ಕೆ ಪ್ರತ್ಯೇಕ ಜನದ ವ್ಯವಸ್ಥೆ ಆಗಬೇಕಾಗುತ್ತದೆ… ಇಂಥ ಚಟುವಟಿಕೆಗಳಲ್ಲಿ ಬಣ್ಣ ಹಚ್ಚುವ ಅವಕಾಶ ಇದ್ದರೆ ಮಾತ್ರ ಬಂದು ಭಾಗವಹಿಸುವ ಜನವೇ ಜಾಸ್ತಿ… ಸುಮ್ಮನೆ ”ಬಾ” ”ಜವಾಬ್ದಾರಿ ಹೊರು” ”ದುಡಿ” ಎಂದರೆ ಯಾರು ತಾನೇ ಬರುತ್ತಾರೆ? ಇಲ್ಲಿ ನಮ್ಮ ಪಲ್ಲಕ್ಕಿಯನ್ನು ನಾವೇ ಹೊರಬೇಕು. ನಾಟಕೋತ್ಸವ ಅಂದರೇನು ಸುಮ್ಮನೆ ಮಾತೆ? ಅದು ಮಗಳ ಮದುವೆಯನ್ನು ಮಾಡಿದಷ್ಟು ಧಾವತಿಯ ಕೆಲಸ. ಇದು ಸಾಧ್ಯವಾಗದ ಯೋಜನೆ… ಅಂತ ನಾವು ಯೋಚಿಸುತ್ತಿದ್ದಾಗ, ನಮ್ಮ ಮನಸ್ಸನ್ನು ಓದಿಕೊಂಡವನಂತೆ ಇನ್ನೂ ಒಂದೆರಡು ಮಾತುಗಳನ್ನು ಹೇಳಿದರು ಜಯತೀರ್ಥ.
”ಇಲ್ಲೆ ಬರೋ ಮುಖ್ಯ ಪ್ರಶ್ನಿ Men & Moneyದು… ಹೌದಲ್ಲೋ? ಇಂಥಾ ಒಂದು ‘ಅಪರೂಪದ ನಾಟಕೋತ್ಸವ’ ಊರಾಗ ನಡೀತಿರೋಬೇಕಾರ, ನಿಮ್ಮ ನಿಮ್ಮ ಊರಿನ ಗಣ್ಯರನ್ನ, ಸಂಘ-ಸಂಸ್ಥಾಗಳನ್ನ, ಸೋಶಿಯಲ್ ಸರ್ವೀಸ್ ಮಾಡೋ ಕ್ಲಬ್ಬುಗಳನ್ನ ಈ ಕೆಲಸದಾಗ ತೊಡಗಿಸಿಕೋಬೇಕು… ಅದರಿಂದ ಎರಡೂ ಸಮಸ್ಯಾ ಬಗೀಹರೀತಾsವು… ಆಯಾ ಊರಿನ ತಂಡಗಳು ಇಡೀ ನಾಟಕೋತ್ಸವಕ್ಕ ಪ್ರಾಯೋಜಕರನ್ನೂ ಪಡಕೊಳ್ಳಬಹುದು…” ಅಂತ ಮತ್ತೆ ನಮ್ಮ ಪ್ರತಿಕ್ರಿಯೆಗಾಗಿ ಕಾದರು.
ಜೋಶಿಯ ಸಲಹೆ ನಮಗೆಲ್ಲರಿಗೂ ಒಪ್ಪಿತವಾಯಿತು.
”ಎಜ್ಯುಕೇಟೆಡ್ ಮಂದಿ ನೀವು. ಒಂದು ಗ್ರೂಪ್ ಆಗಿ ನೀವು ಹೋದ್ರ ‘ಇಲ್ಲಾ’ ಅಂತ ಅನಿಸಿಗೊಂಡು ಬರೋದು ಸಾಧ್ಯನs ಇಲ್ಲ… ಬೇಕಿದ್ರ ನಾನೂ ನಿಮ್ಮ ಜೊತೀ ಬರ್ತೀನಿ… ನಂ ಅಪ್ರೋಚು, ಉದ್ದೇಶ ಎರಡೂ ಕರೆಕ್ಟ್ ಇದ್ದಾಗ ಯಾವ ಕೆಲಸಿದ್ರೂ ಅದು ಸುಲಭನs…”
ಜೋಶಿ ಹೇಳಿದ್ದ ಮಾತು ತೆಗೆದು ಹಾಕುವಂಥದ್ದಲ್ಲ… ಅಂತೂ ಎಲ್ಲರಿಗೂ ಆತನ ಸಲಹೆ ಒಪ್ಪಿತವಾಗಿ ‘ಸಪ್ತಮಂಡಲ’ ರೂಹು ತಳೆಯುವ ಹಂತ ತಲಪಿತು.
ಹುಬ್ಬಳ್ಳಿ-ಧಾರವಾಡಗಳ ಮೂರು ಸಂಘಟನಾ ಸಂಸ್ಥೆಗಳು ನಮ್ಮೊಂದಿಗೆ ಕೈಕೂಡಿಸಿದವು. ಹುಬ್ಬಳ್ಳಿಯ ‘ಹುಬ್ಬಳ್ಳಿ ಆರ್ಟ್ ಸರ್ಕಲ್’ ಮತ್ತು ‘ಕಲಾಕ್ಷೇತ್ರಂ’ ಹಾಗೂ ಅವಳಿ ನಗರದ ‘ಬ್ಯಾಂಕರ್ಸ್ ಕಲ್ಚರಲ್ ಅಕಾಡೆಮಿ.’ ಈ ಮೂರೂ ಸಂಸ್ಥೆಗಳಿಗೆ ಅವರದೇ ಆದ ಸದಸ್ಯಬಲವಿತ್ತು. ಹೀಗಾಗಿ ‘ಪ್ರೇಕ್ಷಕಪ್ರಭು’ವಿಗಾಗಿ ಪರದಾಡಬೇಕಾದ ಪ್ರಮೇಯ ಅಲ್ಲಿರಲಿಲ್ಲ. ಎಲ್ಲಾ ನಾಟಕಗಳೂ House Full ಆಗೋದು ಖಂಡಿತ. ಇನ್ನು ಉಳಿದವು ಕಿತ್ತೂರು ಮತ್ತು ಗದಗು. ಅಲ್ಲಿಯೂ ರೋಟರಿ ಮುಂತಾದ ಸಂಸ್ಥೆಗಳು ಈ ಅಪೂರ್ವ ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಲು ಮುಂದಾದವು.
ಹುಬ್ಬಳ್ಳಿ-ಧಾರವಾಡಗಳಲ್ಲಿ ಸುಸಜ್ಜಿತ ರಂಗಮಂದಿರಗಳಿದ್ದವು. ಉಳಿದೆರಡು ಕಡೆ ಸ್ಪಾಟ್ ಲೈಟು, ಮೈಕ್ ಸೆಟ್ಟು, ಪರದೆ ಇತ್ಯಾದಿ ಎಲ್ಲವನ್ನೂ ಬೇರೆಯಿಂದಲೇ ತರಬೇಕು. ಅದಕ್ಕೂ ಜೋಶಿ ಒಂದು ಐಡಿಯಾ ಮಾಡಿದ್ದರು. ಈ ‘ನಾಟಕೋತ್ಸವ’ದಲ್ಲಿ ಹೆಗ್ಗೋಡಿನ ‘ನೀನಾಸಂ’ ಮತ್ತು ಮಂಚಿಕೇರಿಯ ‘ರಾಜರಾಜೇಶ್ವರಿ ಕಲಾಬಳಗ’ಗಳ ಎರಡು ವಿಶಿಷ್ಟ ನಾಟಕಗಳನ್ನು ಪ್ರದರ್ಶಿಸುವ ಏರ್ಪಾಟು ಅದು. ಕಿತ್ತೂರು ಮತ್ತು ಗದಗುಗಳ ತಂಡಗಳಿಗಿದ್ದ ಲೈಟು ಮೈಕುಗಳ ಸಮಸ್ಯೆ ಇದರಿಂದ ಪರಿಹಾರವಾದಂತಾಯಿತು.
ಇನ್ನುಳಿದದ್ದು ಜವಾಬ್ದಾರಿಯ ಹಂಚಿಕೆ. ಅಲ್ಲಿ ಸೇರಿದ್ದರಲ್ಲ ನಾಲ್ಕೂ ಪ್ರದರ್ಶಕ ತಂಡಗಳ ಇಬ್ಬಿಬ್ಬರು ಪ್ರತಿನಿಧಿಗಳು… ಅವರನ್ನೊಳಗೊಂಡಂತೆ ಒಂದು ಕಾರ್ಯಕಾರಿ ಸಮಿತಿ ರಚಿಸಲ್ಪಟ್ಟಿತು. ಸ್ವತಃ ಜಯತೀರ್ಥ ಜೋಶಿ ಈ ‘ಸಪ್ತಮಂಡಲ ನಾಟಕೋತ್ಸವ’ದ ಸಂಚಾಲಕ. ಸಾರ್ವಜನಿಕ ಸಂಪರ್ಕ, ಪ್ರಚಾರ ವ್ಯವಸ್ಥೆ ಇತ್ಯಾದಿಗಳ ಹೊಣೆ ನನ್ನ ಹೆಗಲೇರಿತು. ಹೀಗಾಗಿ ಎಲ್ಲ ಪತ್ರವ್ಯವಹಾರಕ್ಕೂ ನನ್ನ ಮನೆಯ ವಿಳಾಸವನ್ನೇ ನೀಡಬೇಕಾದ ಅನಿವಾರ್ಯತೆ. ಇದರೊಂದಿಗೆ ವಾರಕ್ಕೊಮ್ಮೆ ಕಾರ್ಯಕಾರಿ ಸಮಿತಿಯ ಸಭೆ ಕರೆಯುವುದು, ಅಲ್ಲಿಯವರೆಗಿನ ಪ್ರಗತಿಯ ವರದಿ ಒಪ್ಪಿಸುವುದು ಹಾಗೂ ಪ್ರಚಾರ ಪತ್ರ ಇತ್ಯಾದಿಗಳ ಮುದ್ರಣ ಇದೆಲ್ಲ ನನ್ನ ಜವಾಬ್ದಾರಿ. ಇಷ್ಟಲ್ಲದೆ ಎಲ್ಲ ಪತ್ರಿಕೆಗಳನ್ನು ಸಂಪರ್ಕಿಸುವುದು, ಪತ್ರಿಕಾ ಪರಿಷತ್ತು ಸೇರಿಸುವುದು, ಅಂತೆಲ್ಲ ನಾನು ಪೇಚಾಡುತ್ತಿದ್ದರೆ, ಒಂದಿಬ್ಬರು ಕಲ್ಲಪ್ಪಗಳಿಗೆ ಕಲ್ಲು ಹಾಕುವುದೇ ಕೆಲಸವಾಗಿಬಿಟ್ಟಿತು. ಅವರ ಮತ್ಸರಕ್ಕೆ ಕಾರಣ ನನಗೆ ಕೊನೆತನಕ ಗೊತ್ತಾಗಲಿಲ್ಲ…
ಪ್ರಸ್ತುತ ನಾಟಕೋತ್ಸವದಲ್ಲಿ ನನಗೆ ಇನ್ನೂ ಎರಡು ಹೊಣೆಗಳಿದ್ದವು. ‘ಅಭಿನಯ ಭಾರತಿ’ ಕೂಡ ಇದರಲ್ಲಿ ಒಂದು ಪ್ರದರ್ಶಕ ತಂಡ. ನಾವು ಅಭಿನಯಿಸಬೇಕಾಗಿದ್ದ ನಾಟಕ ‘ತಾಮ್ರಪತ್ರ.’ ಅದರಲ್ಲಿ ನನ್ನದೇ ಮುಖ್ಯ ಪಾತ್ರ. ಜೋಶಿಗೆ ಬೇರೆ ಬೇರೆ ಹತ್ತಾರು ಕೆಲಸಗಳು. ಹೀಗಾಗಿ ‘ತಾಮ್ರಪತ್ರ’ದ ರಿಹರ್ಸಲ್ ಕೂಡ ನಾನೇ ಮಾಡಿಸಬೇಕು. ಹುಬ್ಬಳ್ಳಿಯ ‘ಹುಬ್ಬಳ್ಳಿ ಆರ್ಟ್ ಸರ್ಕಲ್’ ಮತ್ತು ‘ಕಲಾಕ್ಷೇತ್ರಂ’ಗಳ ಜೊತೆಗೂ ಸಂಪರ್ಕವಿಟ್ಟುಕೊಳ್ಳಬೇಕು. ನನಗೆ ಆಫೀಸಿನಲ್ಲಿ ರಜೆಯೂ ಸಿಗುವ ಹಾಗಿರಲಿಲ್ಲ.
ಅಂತೂ ಶುರುವಾಯಿತು ‘ಸಪ್ತಮಂಡಲ ನಾಟಕೋತ್ಸವ.’

‘ಸಪ್ತಮಂಡಲ ನಾಟಕೋತ್ಸವ’ದಲ್ಲಿ ಪ್ರದರ್ಶಿಸಲ್ಪಟ್ಟ ಹುಬ್ಬಳ್ಳಿ ಅಭಿನಯ ಭಾರತಿ ತಂಡದ ‘ತಾಮ್ರಪತ್ರ’ದ ಒಂದು ದೃಶ್ಯ.

ಇಲ್ಲಿ ಪ್ರದರ್ಶಕ ತಂಡಗಳದ್ದು ಏಕಕಾಲಕ್ಕೆ ಎರಡು ರೀತಿಯ ಪಾತ್ರ. ಮೊದಲ ಮೂರು ದಿನ ತಮ್ಮ ಊರಲ್ಲಿ ಬೇರೆ ಮೂರು ಊರುಗಳ ಉಳಿದ ಮೂರು ತಂಡಗಳಿಂದ ನಾಟಕಗಳನ್ನು ಆಡಿಸಿ, ಆ ಕಲಾವಿದರಿಗೆ ‘ಆತಿಥ್ಯ’ ನೀಡುವುದು. ಕೊನೆಯ ದಿನ ತನ್ನ ಊರಲ್ಲೇ ತನ್ನ ನಾಟಕವನ್ನು ಅಭಿನಯಿಸಿ, ಇತರ ಊರುಗಳಿಗೆ ತೆರಳಿ ಆ ತಂಡಗಳ ‘ಅತಿಥಿ’ಯಾಗಿ ನಾಟಕ ಪ್ರದರ್ಶಿಸುವುದು. ಉದಾಹರಣೆಗೆ ಕಿತ್ತೂರಲ್ಲಿ ಆರಂಭವಾಗುವ ನಾಟಕೋತ್ಸವದಲ್ಲಿ ಮೊದಲ ದಿನ ನಾಟಕ ಪ್ರದರ್ಶಿಸಿದ ತಂಡ ಮುಂದಿನ ಮೂರು ದಿನಗಳಲ್ಲಿ ಎರಡು ಊರುಗಳಿಗೆ ತೆರಳಿ ಪ್ರದರ್ಶನ ನೀಡಿ, ಮರಳಿ ತನ್ನ ಊರನ್ನು ತಲಪುವುದು. ಮತ್ತು ಅಲ್ಲಿ ತನ್ನ ನಾಟಕವನ್ನು ಪ್ರದರ್ಶಿಸಿ, ಆ ಮೂಲಕ ಉತ್ಸವಕ್ಕೆ ಮಂಗಳ ಹಾಡುವುದು.
ಹೀಗೆ ಈ ನಾಟಕೋತ್ಸವ ನಡೆದದ್ದು 1984ರ ಜೂನ್ 6ರಿಂದ 11ರ ತನಕ… ಒಟ್ಟು ಆರು ದಿನ. ನಮ್ಮ ನಾಲ್ಕು ತಂಡಗಳ ನಾಲ್ಕು ನಾಟಕಗಳ ಜೊತೆಗೆ (ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲಿ ಮಾತ್ರ) ನೀನಾಸಂ ಹಾಗೂ ಮಂಚೀಕೇರಿಯ ವಿಶಿಷ್ಟ ನಾಟಕ ಪ್ರಯೋಗಗಳು : ಹೆಗ್ಗೋಡಿನ ಬಳಿಯ ಹರಿಜನ ಕೇರಿಯ ಯುವಕ ಯುವತಿಯರಿಂದ ‘ಮಾರಿಕೊಂಡವರು’ ಮತ್ತು ಮಂಚೀಕೇರಿಯ ಬಳಿಯ ಸಿದ್ದಿ ಸಮುದಾಯದವರಿಂದ ‘ಕಪ್ಪು ಜನ ಕೆಂಪು ನೆರಳು’. ದೇವನೂರ ಮಹಾದೇವರ ಕತೆಯನ್ನು ಆಧರಿಸಿದ ‘ಮಾರಿಕೊಂಡವರು’ (ನಿರ್ದೇಶನ : ಜಯತೀರ್ಥ ಜೋಶಿ) ಮತ್ತು ನೈಜೀರಿಯದ ಲೇಖಕ ಚಿನು ಆ ಅಚಿಬೆಯ ‘ಥಿಂಗ್ಸ್ ಫಾಲ್’ ಕಾದಂಬರಿ ಆಧರಿಸಿದ ‘ಕಪ್ಪು ಜನ ಕೆಂಪು ನೆರಳು’ (ನಾಟಕ ರೂಪ : ಕೆ.ವಿ. ಸುಬ್ಬಣ್ಣ, ನಿರ್ದೇಶನ : ಚಿದಂಬರರಾವ್ ಜಂಬೆ) ಎರಡೂ ನಮ್ಮ ನಗರವಾಸಿಗಳನ್ನು ಅಲುಗಾಡಿಸಿದ್ದು ಮಾತ್ರ ನಿಜ.
ಹುಬ್ಬಳ್ಳಿಯಲ್ಲಿಯ ‘ಸಪ್ತಮಂಡಲ ನಾಟಕೋತ್ಸವ’ ಮಾತ್ರ ಇನ್ನೊಂದು ರೀತಿಯಲ್ಲಿ ವಿಶೇಷವಾದದ್ದು. ಇಲ್ಲಿ ಪ್ರಾಯೋಜಕರ ಅಪೇಕ್ಷೆಯ ಮೇರೆಗೆ ನಾವು ಮುಂಜಾನೆ ಮತ್ತು ಮಧ್ಯಾಹ್ನ ‘ತಾಮ್ರಪತ್ರ’ ನಾಟಕವನ್ನು ಪ್ರದರ್ಶಿಸಬೇಕಾಯಿತು. ಆದರೆ ಅಲ್ಲಿ ‘ತಾಮ್ರಪತ್ರ’ವನ್ನು ನೋಡಬಯಸಿ ಬಂದವರು ಮೂರು ಶೋಗಳ ವೀಕ್ಷಕರು. ”ನಿಂತುಕೊಂಡಾದರೂ ಸರಿ, ನಾವು ನಾಟಕ ನೋಡಲಿಕ್ಕೇಬೇಕು…” ಎಂಬುದು ಅವರ ಹಠ. ‘ತಾಮ್ರಪತ್ರ’ದ ಬಗ್ಗೆ ಅದಾಗಲೇ ಅಂಥದೊಂದು ಒಳ್ಳೆಯ ಅಭಿಪ್ರಾಯ ಜನರನ್ನು ತಲಪಿಬಿಟ್ಟಿತ್ತು. ಆವತ್ತು ರವಿವಾರ ಬೇರೆ. ಉಪದ್ರವ ವಾಹಿನಿಗಳ ಮೋಡಿಗೆ ಇನ್ನೂ ಜನ ಒಳಗಾಗಿರಲಿಲ್ಲ… ಈ ಎರಡು ನಾಟಕಗಳಾದ ಮೇಲೆ ಸಂಜೆ ಹೆಗ್ಗೋಡು ಮತ್ತು ಮಂಚೀಕೇರಿಯ ತಂಡಗಳ ನಾಟಕಗಳು… ಮತ್ತು ಇವುಗಳನ್ನು ನೋಡಲೆಂದೇ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿಗಳಿಂದ ಬಂದು ಸಂಭ್ರಮಿಸಿದ ರಂಗಮಿತ್ರರು…
ಈ ‘ನಾಟಕೋತ್ಸವ’ ಕೇವಲ ಪ್ರದರ್ಶನಗಳಿಗೆ ಸೀಮಿತವಾಗಲಿಲ್ಲ. ಪ್ರತಿ ಊರಿನಲ್ಲಿ ‘ನಾಟಕೋತ್ಸವ’ ಉದ್ಘಾಟನೆಯ ಸಂದರ್ಭದಲ್ಲೇ ಆಯಾ ಊರಿನ ಇಬ್ಬಿಬ್ಬರು ‘ರಂಗ ಧೀಮಂತ’ರನ್ನು ಗೌರವಿಸಲಾಯಿತು. ಒಂದು ವಿಚಾರ ಸಂಕಿರಣವನ್ನೂ ಏರ್ಪಡಿಸಲಾಯಿತು.
ಈ ಐತಿಹಾಸಿಕವೆನ್ನಬಹುದಾದ ‘ನಾಟಕೋತ್ಸವ’ದಲ್ಲಿ ಪಾಲ್ಗೊಂಡ ಒಟ್ಟು ಕಲಾವಿದರ ಸಂಖ್ಯೆ 250ಕ್ಕೂ ಹೆಚ್ಚು. 50ಕ್ಕೂ ಮಿಕ್ಕಿದ ನೇಪಥ್ಯ ಕರ್ಮಿಗಳು. ಹಾಗೂ ನಾಲ್ಕೂ ಊರುಗಳಲ್ಲಿ ಐದು ಸಾವಿರಕ್ಕೂ ಮೀರಿದ ಪ್ರೇಕ್ಷಕರು… !
ಎಲ್ಲೆಡೆಯೂ ಪ್ರೇಕ್ಷಕರಿಂದ ಪ್ರೋತ್ಸಾಹದಾಯಕ ಪ್ರತಿಕ್ರಿಯೆ. ಅದರಿಂದಾಗಿ ನಮ್ಮ ಅಷ್ಟು ದಿನಗಳ ಶ್ರಮ, ಚಿಂತೆ , ದಣಿವು ಎಲ್ಲ ಮಟಾಮಾಯವಾಯಿತು. ಇದರ ಜೊತೆ ಜೊತೆಗೆ, ಹಿರಿಯರಾದ ಜಿ.ಬಿ. ಜೋಶಿ, ಗಂಗೂಬಾಯಿ ಹಾನಗಲ್, ಮುದೇನೂರ ಸಂಗಣ್ಣ, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಸಿದ್ದಲಿಂಗ ಪಟ್ಟಣಶೆಟ್ಟಿ, ಅಲ್ಲದೆ ವೃತ್ತಿ ರಂಗಭೂಮಿಯ ಹಿರಿಯರಾದ ಏಣಗಿ ಬಾಳಪ್ಪ, ಗರುಡ ಶ್ರೀಪಾದರಾಯರು ಮುಂತಾದವರು, ಹಿಂದೆಂದೂ ನಡೆಯದಿದ್ದಂಥ ಈ ನಾಟಕೋತ್ಸವವನ್ನು ವೀಕ್ಷಿಸಿ ಈ ಸಾಹಸವನ್ನು ಕೊಂಡಾಡಿದರು. ಜೋಶಿ ಮತ್ತು ತಂಡಗಳನ್ನು ಅಭಿನಂದಿಸಿದರು, ಇಂಥ ಪ್ರಯತ್ನ ನಿರಂತರವಾಗಿರಲೆಂದು ಹರಸಿದರು.
ಜೋಶಿಗೆ ಹಲವು ಕನಸುಗಳಿದ್ದವು : ಹುಬ್ಬಳ್ಳಿ-ಧಾರವಾಡಗಳ ಹವ್ಯಾಸಿ ರಂಗತಂಡಗಳ ಮಧ್ಯೆ ಸಾಮರಸ್ಯ, ಪರಸ್ಪರ ಸಹಕಾರ ಭಾವ ಉಂಟು ಮಾಡುವ ಕನಸು…
ಕ್ರಮೇಣ ಉತ್ತರ ಕರ್ನಾಟಕದ ಎಲ್ಲ ಹವ್ಯಾಸಿ ರಂಗ ತಂಡಗಳನ್ನು ಏಕಸೂತ್ರದಲ್ಲಿ ಹಿಡಿದಿಡುವ ಕನಸು… ಆ ನಂತರ ಕರ್ನಾಟಕದ ಎಲ್ಲ ಹವ್ಯಾಸಿ ರಂಗ ತಂಡಗಳ ಒಂದು ಸಮ್ಮೇಳನ… ರಾಜ್ಯದಾದ್ಯಂತ ವಿವಿಧ ಪ್ರಾದೇಶಿಕ ರಂಗ ಕೇಂದ್ರಗಳನ್ನು ಗುರುತಿಸಿ, ಆಯಾ ನೆಲದ ಸತ್ವದಿಂದಲೇ ಅವು ಬೆಳೆಯುವಂತೆ ಮಾಡುವುದು…
ಆದರೆ, ಕನಸು ಕಾಣುವುದೇ ಬೇರೆ, ಖರೆ ಸಂಗತಿಯೇ ಬೇರೆ…
ಕೆಲವೇ ದಿನಗಳಲ್ಲಿ ಜಯತೀರ್ಥ ಜೋಶಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ-ನಾಟಕ ವಿಭಾಗದ ಮುಖ್ಯಸ್ಥರಾಗಿ ನೌಕರಿಗೆ ನಿಂತರು. ಅಲ್ಲಿಂದ ಲ್ಯಾಂಕಾಸ್ಟರಿಗೆ ಹೋಗಿ ರಂಗ ಭೂಮಿಯಲ್ಲಿ ವಿಶೇಷ ಅಧ್ಯಯನಗೈದು ಮರಳಿದರು. ‘ರಂಗಾಯಣ’ದ ವಿಶೇಷಾಧಿಕಾರಿ ಆದರು…
ನಮ್ಮ ರಂಗಭೂಮಿ ಮತ್ತೆ ಮೊದಲಿನ ಸ್ಥಿತಿಗೆ ಮರಳಿತು.

‍ಲೇಖಕರು G

January 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. ramesh kulkarni

    ರಂಗಭೂಮಿಯ ಹಲವು ದಿಗ್ಗಜರ ಕುರಿತು,ಅಂತಹ ಮಹಾನ್ ಚೇತನಗಳೊಂದಿಗೆ ಒಡನಾಟವನ್ನು ಹೊಂದಿದ್ದ ತಮ್ಮ ಅಮೂಲ್ಯ ಅನುಭವಗಳು..ಹೇಳಲು ಮಾತುಗಳು ಹೊರಡುತ್ತಿಲ್ಲ ಸರ್..ಸಾಧ್ಯವಾದರೆ ನಿಮ್ಮನ್ನೊಮ್ಮೆ ಭೇಟಿಯಾಗುವ ಬಯಕೆ..ಇನ್ನೂ ತಮ್ಮ ಲೇಖನಗಳ ಕುರಿತು ನಾನು ವರ್ಣಿಸಲು ಯಾವ ಪದಗಳು ಸಾಲವು..ಧನ್ಯೋಸ್ಮಿ ಸರ್..ತಮ್ಮ ಅನುಭವದ ಬರಹಗಳ ರಸಪಾಕ ನಮಗೆ ಲಭಿಸುತ್ತಿರಲಿ..

    ಪ್ರತಿಕ್ರಿಯೆ
  2. prakash hegde

    ಅಣ್ಣಾ…
    ನಿಮ್ಮನ್ನೂ…
    ನಿಮ್ಮ ಹೊತ್ತಿಗೆಯನ್ನೂ ಇದೇ ತಿಂಗಳು ಇಪ್ಪತ್ತರ ಭಾನುವಾರ ನೋಡಲು ಕಾತುರರಾಗಿದ್ದೇವೆ…
    ದಯವಿಟ್ಟು..
    ನಿಮ್ಮ ನಾಟಕ ಅನುಭವಗಳ ಲೇಖನಗಳನ್ನೂ ಪುಸ್ತಕ ಮಾಡಿ…

    ಪ್ರತಿಕ್ರಿಯೆ
  3. Badarinath Palavalli

    ‘ಸಪ್ತಮಂಡಲ ನಾಟಕೋತ್ಸವ’ದ ಚಿತ್ರ ತುಂಬಾ ಚೆನ್ನಾಗಿದೆ ಸಾರ್.
    ಉತ್ತರ ಕರ್ಣಟಕದ ಮಂದಿ ನಾಟಕ ಪೋಷಕರು. ಅಂದಿಗೂ ಇಂದಿಗೂ.

    ಪ್ರತಿಕ್ರಿಯೆ
  4. Pushparaj Chauta

    ಸರ್, ಆ ಕಾಲಕ್ಕೆ ಐದು ಸಾವಿರಕ್ಕೂ ಮೀರಿದ ಪ್ರೇಕ್ಷಕರನ್ನು ಪೇರಿಸಿದ, ೨೫೦ ಕಲಾವಿದರನ್ನು ಒಂದುಗೂಡಿಸಿದ “ಸಪ್ತಮಂಡಲ” ನಾಟಕ ಮಹಾಮಂಡಲವಾದದಂತೂ ಖರೆ. ಅಲ್ಲೂ ನಿಮಗೆ ಕಲ್ಲಪ್ಪಗಳೂ ಇರದೇ ಇರಲಿಲ್ಲವಲ್ಲ ಎಲ್ಲಾ ಕಡೆ ಇರುವಂತೆ. ಅವರ ‘ನಾಟಕ’ವನ್ನೂ ಮೆಟ್ಟಿ ನಿಂತು ನೀವು ಮಾಡಿದ ಸಾಧನೆ ನಮಗೆಲ್ಲ ಅನುಸರಣೀಯ.

    ಪ್ರತಿಕ್ರಿಯೆ
  5. ಈಶ್ವರ ಕಿರಣ

    ನಿಮ್ಮ ನೆನಪಿನ ಚಿತ್ರಣ ಬಹಳ ಚೆನ್ನಾಗಿದೆ. ನೆನಪಿನ ಸರಣಿಗಳಲ್ಲಿ ಅದೆಷ್ಟು ನೆನಪುಗಳನ್ನಿಟ್ಟುಕೊಂಡಿದ್ದೀರಿ.. ಮುಂದೆ?

    ಪ್ರತಿಕ್ರಿಯೆ
  6. umesh desai

    ಗುರುಗಳ ನಿಮ್ಮಿಂದ “ಜಯತೀರ್ಥ ಪುರಾಣ” ಕೇಳುವ ಸೌಭಾಗ್ಯ
    ಬಂದದ..ಇವು “ಸುಮ್ಮನೇ” ನೆನಪುಗಳಲ್ಲ “ಮುತ್ತಿನಂಥಾ” ನೆನಪುಗಳು ಬಿಡ್ರಿ..!!

    ಪ್ರತಿಕ್ರಿಯೆ
  7. hipparagi Siddaram

    ಸರ್, ನಿಜಕ್ಕೂ ‘ಸಪ್ತಮಂಡಲ’ವೆಂಬ ಕಲ್ಪನೆಯೇ ಅದ್ಬುತ. ಅಂತಹ ಐತಿಹಾಸಿಕ ರಂಗಸಪ್ತಾಹದಲ್ಲಿ ಅರಳಿದ ಹಲವಾರು ಪ್ರತಿಭೆಗಳ ಬಾಯಿಂದ ನಾನು ಇಷ್ಟು ದಿನವೂ ಕೇಳುತ್ತಿದ್ದೆ. ನಿಮ್ಮ ಲೇಖನದಲ್ಲಿ ಸಾದ್ಯಂತವಾಗಿ ವಿವರಿಸಿದ್ದೀರಿ. ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ಸರ್….

    ಪ್ರತಿಕ್ರಿಯೆ
  8. Manjula

    ಸಪ್ತಮಂಡಲದಂಥ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ನೀವುಗಳೇ ಧನ್ಯರು.. ನಿಮ್ಮ ಜೀವನದಲ್ಲಿ ಅದೆಷ್ಟು ಸಂತುಷ್ಟಿಯ ಘಳಿಗೆಗಳಿವೆಯಲ್ಲ ಎಂದು ಆಶ್ಚರ್ಯ ಮತ್ತು ಸಂತೋಷ ಎರಡೂ 🙂

    ಪ್ರತಿಕ್ರಿಯೆ
  9. Paresh Saraf

    ಇಂಥ ಸಾಹಸಕ್ಕೆ ಕೈ ಹಾಕಿ ಯಶಸ್ಸಿನೆಡೆ ಹೆಜ್ಜೆ ಇಟ್ಟ ತಮ್ಮ ತಂಡಕ್ಕೆ ಅಭಿನಂದನೆಗಳು ಸಲ್ಲಬೇಕು. ಅನುಭವಗಳನ್ನು ನಮ್ಮೊಂದಿಗೆ ಇಷ್ಟು ಚೆನ್ನಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ
  10. suguna

    ಸಪ್ತಮಂಡಲ ಈ ಕಲ್ಪನೆಯೇ ವಿಶಿಷ್ಟ… ಆ ಕಾಲದಲ್ಲು ಅಷ್ಟು ಜನ ಸೇರಿಸಿರುವುದೇ ಒಂದು ಕಲೆ.. ನಿಮ್ಮ ಜೀವನದ ಅನುಭವ, ಸಾಧನೆಗಳ ಮುಂದೆ ನಮ್ಮದೆಂತಹ ಕೆಲಸ ಎಂದೆನಿಸುತ್ತದೆ. ಧನ್ಯವಾದಗಳು ಎಂದಿನಂತೆ ಒಳ್ಳೆಯ ಲೇಖನ ನೀಡಿದ್ದೀರಿ

    ಪ್ರತಿಕ್ರಿಯೆ
  11. arathi ghatikaar

    ನಿಮ್ಮ ನೆನಪಿನಂಗಳದಿಂದ ಓದುವುದೇ ಒಂದು ಖುಷಿ , ಅದರ ಜೊತೆಗೆ ಸಪ್ತಮಂಡಲ ನಾಟಕೋತ್ಸವದ ಯಶಸ್ಸು ಕೇಳಿ ಬಹಳ ಸಂತೋಷವಾಯಿತು . ಬೆರಗು ಮನದಿಂದ ಓದಿಸಿಕೊಂಡು ಹೋಯಿತು ನಿಮ್ಮ ರೋಮಂಚನಕಾರಿ ಅನುಭವ , ನಿಮ್ಮ ಕಲಾ ಸಾಧನೆ , ಇನ್ನು ನಿಮ್ಮೆಲ್ಲರ ಪರಿಶ್ರಮ ನಿಜಕ್ಕೂ ಪ್ರೇರಣೆ ನೀಡುವಂಥವು. ನಿಮ್ಮ ಮುಂದಿನ ಬರಹ ಓದಲು , ಓದುಗರ ಮಂಡಳಿಯೂ ಕಾತುರದಿಂದ ಕಾಯಿತ್ತಿದೆ ಅನ್ನುವುದಂತೂ ನಿಜ . 🙂

    ಪ್ರತಿಕ್ರಿಯೆ
  12. sahana prasad

    wonderful narration and a thrilling anecdote! each effort like this needs a “dreamer” as well as a “realist” n a group of ppl who r willing to work towards that dream. Thanks for sharing

    ಪ್ರತಿಕ್ರಿಯೆ
  13. ಗುರುಪ್ರಸಾದ ಕುರ್ತಕೋಟಿ

    ಸಪ್ತಮಂಡಲ ದ ಕತೆ ಅದ್ಭುತವಾಗಿದೆ. ಬರೀ ದುಡ್ಡು, ಹೆಸರು ಗಳಿಸಲು ಹವಣಿಸುವ ಈಗಿನ ಜನಗಳ ಮುಂದೆ, ಅದೊಂದನ್ನೂ ಲಿಕ್ಕಿಸದೇ ಕಲೆಗಾಗಿ ದುಡಿದ ನಿಮ್ಮ ತಂಡದ ಎಲ್ಲರಿಗೂ ನಮ್ಮ ದೊಡ್ಡ ಸಲಾಮು!!

    ಪ್ರತಿಕ್ರಿಯೆ
  14. Ahalya Ballal

    ನಡೆದು ಬಂದ ದಾರಿಯ ಈ ಸರಣಿ ಲೇಖನಗಳು ನಮ್ಮ ರಂಗಭೂಮಿ ಮುಂದೆ ಸಾಗಬಹುದಾದ, ಸಾಗಬೇಕಾಗಿರುವ ಹೊಸ ಮಾರ್ಗಗಳತ್ತ ಬೊಟ್ಟು ಮಾಡಿ ತೋರಿಸುತ್ತಿವೆ ಅನಿಸುತ್ತೆ, ಸರ್. ಆ ಹೊಸ ಮಾರ್ಗದ/ಮಾರ್ಗಗಳ ರೂಪುರೇಷೆ ಹೇಗಿರಬಹುದು ಎಂಬ ಕುತೂಹಲ ನನಗೆ!

    ಪ್ರತಿಕ್ರಿಯೆ
  15. Jayalaxmi Patil

    ಎಂಥಾ ಮಸ್ತ್ ಐಡಿಯಾರೀ ಕಾಕಾ ಇದು! ಉಳದ ಒಣಾ ಉಸಾಬರಿ ಎಲ್ಲಾ ಬಿಟ್ಟು, ಯಾರಾರ ಮಣಿ ಹಾಕ್ಲಿ ಅಂತ ಕಾಯೂದ್ರ ಬದ್ಲು ಹಿಂಗ ಒಂದಿಷ್ಟು ತಂಡಗೋಳು ಒಟ್ಟ್ ಸೇರಿ ನಾಟಕೋತ್ಸವ ಅಂತ ಮಾಡಿದ್ರ ನೋಡೋರ್ಗೂ ಮಾಡೋರ್ಗೂ ಹಬ್ಬಾನ ಹಬ್ಬ!!

    ಪ್ರತಿಕ್ರಿಯೆ
  16. ಹೆಚ್.ವಿ.ವೇಣುಗೋಪಾಲ್

    ತುಂಬಾ ಚೆನ್ನಾಗಿದೆ. ಆದರೆ ನನ್ನದೊಂದು ಪ್ರಾರ್ಥನೆ, ನಾಟಕೋತ್ಸವಗಳು ನಡೆಸುವಾಗ ಸಂಘತಕರುಗಳಿಗೆ ಎದುರಾಗುವ ವಿಕ್ಷಿಪ್ತ ತೊಂದರೆಗಳು ಹಾಗು ಅಡ್ಡಿ ಆತಂಕಗಳನ್ನು ದಾಖಲಿಸಿದರೆ ಭಾವಿ ಸಂಘಟಕರುಗಳಿಗೆ ಸಹಾಯವಾದೀತು. ಹೀಗೆ ಮಾಡುವುದರಲ್ಲಿ ಲೆಖಕನಿಗೆ ಒದಗಿಬರುವ ಇಕ್ಕಟ್ಟನ್ನು ತಿಳಿದೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ರಂಗಭೂಮಿಯಲ್ಲೂ ಬಲಗಣ್ಣು ಅದುರುವ ಹಾಗೇ ಆಗಾಗ ಎಡಗಣ್ಣು ಅದುರುತ್ತಿರುತ್ತವೆ ಎಂಬುದು ಎಲ್ಲ ಸಂಘಟಕರಿಗೂ ತಿಳಿದ ವಿಷಯ ಅಲ್ಲವೇ?

    ಪ್ರತಿಕ್ರಿಯೆ
  17. CHANDRASHEKHAR VASTRAD

    ಲಕ್ಷ್ಮೇಶ್ವರದ ಬಾಲ್ಯದ ಅನುಭವಚಿತ್ರಣಕ್ಕ ಹೋಲಿಸಿದ್ರ ಯಾಕೊ ಇದು ಸಪ್ಪೆ ಅನಸ್ತು.ಸೃಜನವರದಿ ಅನ್ನಬಹುದೆನೊ.ಮುಂದಿನ ರ಻ವಿವಾರ ನಿರೀಕ್ಷಿಸುತ್ತಿರುವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: