ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನುಮ ಎಲ್ಲರ ಎದೆಯಲ್ಲಿ..

ನಮ್ಮ ಹಳ್ಳಿಯ ಹನುಮ

-ಜಿ ಪಿ ಬಸವರಾಜು

ಎಷ್ಟೊಂದು ಸಲೀಸು ನಮ್ಮ ಹಳ್ಳಿಯ ಹನುಮ
ನುಡಿಸಲವನ ಬೇಡ ಬಿಂಕ ಬಡಿವಾರ, ಮಾತಿನ
ಚಮತ್ಕಾರ, ಕೇಳಿದರೆ ನೇರ ಹೇಳುತ್ತಾನೆ ಸುತ್ತಿಲ್ಲದೆ

ಇನ್ನೊಂದು ಗೂಢವೂ ಇದೆ : ಮಾತಾಳಿಯಲ್ಲ ಅವನು,
ರಾಮದೇವರಿಗೆ ಲಕ್ಷ್ಮಣ ದೇವರಿಗೆ ಮತ್ತೆ ತಾಯಿ ಸೀತಮ್ಮನಿಗೆ
ಇವನೇ ಹತ್ತಿರ, ಬಾನೆತ್ತರ ಇವನೆದೆ, ಸಹಜ ಬೀಸುವುದು ಗಾಳಿ
ಒಳ-ಹೊರಗೆ; ಆಡುತ್ತಾರೆ ಮೂವರೂ ಅಡೆತಡೆ ಇಲ್ಲದೆ ನೇರ
ಮುಟ್ಟುತ್ತಾರೆ ಇವನೊಳಗ; ಅಲ್ಲಿ ಬಿತ್ತಿದ ಬೀಜ ಮುಕ್ಕಾಗುವುದಿಲ್ಲ
ಹೆಕ್ಕಿ ತಿನ್ನುವ ಕೊಕ್ಕುಗಳಿಗೆ ಕಾಳಾಗುವದಿಲ್ಲ; ನೆಲದೆದೆಯ ಮೀಟಿ
ಚಿಮ್ಮುವುದು ಹಸಿರು, ಊಡಿ ಉಸಿರನು ಸಕಲ ಜೀವಜೀವಗಳಿಗೆ

ದೊರೆಯ ನುಡಿಸುವುದು ಸುಮ್ಮನೇ ಅಲ್ಲ,ಬಾಯಿ ಬಿಡುವವನಲ್ಲ
ಅವನು ಸುಮ್ಮನೇ, ತಾಯಿ ಮಕ್ಕಳ ಮುಂದೆಯೂ;
ಸಿರಿಗರ ಹೊಡೆದವರ ಮಾತು ಬೇರೆ; ಅವರಿಗೆ ಕಿವಿ ಕಿವುಡು
ಕಣ್ಣು ಕುರುಡು, ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ ನಮ್ಮ ಜನ

ಸಲೀಸಾಗಿ ಸಿಗುತ್ತಾನೆ ಹನುಮ ಊರ ಹೊರಗೆ ಎಲ್ಲರಿಗೂ
ಅವನಿರುವುದೇ ಅಲ್ಲಿ, ಗುಡಿ ಗುಂಡಾರವಿಲ್ಲ ಪೂಜೆ ಪುರಸ್ಕಾರ
ಇಲ್ಲ, ನಿಂತ ನಿಲುವಲ್ಲೆ ಮುಖ ತೋರಿದ್ದಾನೆ ಕಾಡಗಲ್ಲಿನ ಮೇಲೆ
ಜೋಗಿಯೊ ಜಂಗಮನೊ ದಾಸಪ್ಪನೊ ಗೊರಪ್ಪನೊ ದನತರುಬಿ
ನಿಂತ ನಿಷ್ಪಾಪಿ ಪುಟ್ಟನೊ -ಎಲ್ಲರಿಗೂ ಹಳ್ಳಿಯ ಹನುಮ, ಪ್ರೀತಿಯ
ಕಂದ, ಎಗ್ಗಿಲ್ಲದೆ ಕೇಳುತ್ತಾರೆ ಎಲ್ಲರೂ ಸಲೀಸಾಗಿ:
ʼಏನೆಂದಳೇನೆಂದಳೊ ನಿನ್ನೊಳು ಸೀತೆ ಹನುಮಯ್ಯ.ʼ

ʼಎನ್ನ ಕಂದ ಹಳ್ಳಿಯ ಹನುಮ
ಚೆನ್ನಾಗಿ ಇಹರೇ ಲಕ್ಷ್ಮಣ ದೇವರುʼ

ಉಳಿದಿಹನು ಹನುಮ ಎಲ್ಲರ ಎದೆಯಲ್ಲಿ
ರಾಮದೇವರಂತೆ ಲಕ್ಷ್ಮಣ ದೇವರಂತೆ, ತಾಯಿ
ಸೀತಾದೇವಿಯಂತೆ; ತುಂಬಿ ತುಳುಕುವ ಮುಗಿಲಿನಂತೆ
ಸುಡು ಬಿಸಿಲಲ್ಲಿ ಕಾದು ಕಂಗೆಟ್ಟ ಭೂಮಿಗೆ ಹನಿವ ಮಳೆಯಂತೆ
ಎತ್ತರೆತ್ತರದ ಮುಗಿಲಿನಂತೆ
ಕೈಗೆ ಸಿಕ್ಕ ಹಣ್ಣಿನಂತೆ ಅದಕೂ ಮಿಗಿಲಾದವನಂತೆ

‍ಲೇಖಕರು Admin

28 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading