ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಿ ಮಾತಾಡುತಿದೆ..

ಅಕ್ಷತಾ ಕೆರೆಗದ್ದೆ

ಕನ್ನಡಿ ಮಾತಾಡುತಿದೆ
ಮೆಲ್ಲನೆ
ನನ್ನ ನೋಡೆಂದು
 
ಮಳೆಯಲಿ ಮಿಂದು
ಶೃಂಗಾರ ಗೊಂಡು
ವದನವ ನಾಚಿಸುವುದು
ಸುಮ್ಮನೆ
 
ಅವನ ಚೇಷ್ಟೆಯ
ಸರಮಾಲೆ ಬಿಚ್ಚಿಡುವುದು
ನನ್ನ ಮುಂದೆ ಹಿಂದೆ
ನೆಳಲಾಗಿ
 
ಹಿಂದಿನಿಂದ ಬಂದಪ್ಪಿ
ಜೋಡಿ ಹೇಗಿದೆ
ಕೇಳಿದ ಪ್ರಶ್ನೆಗೆ
ಉತ್ತರವಾಗಿ
 
ಎಲ್ಲ ಕನಸುಗಳ ತಾ
ಸೆರೆ ಹಿಡಿದು
ಒಂದೊಂದೆ ಬಿಚ್ಚಿಡುವುದು
ಈ ಭಾವಗನ್ನಡಿ
 
ಕನ್ನಡಿ ಉಸುರುತ್ತಿದೆ
ಚೆಲುವೆ ನೀನೆಂದು
ಅವನ ಪ್ರೀತಿಯ
ರಂಗಿನೊಡತಿ
 
ಮಾತಾಡುತ್ತಿದೆ ಕನ್ನಡಿ
ಹೊತ್ತು ಕಳೆಯದಿರು
ಸುಮ್ಮನೆ ನಲ್ಲ
ಬರುವನು ಮೆಲ್ಲನೆಂದು

ವಿಳಾಸವಿಲ್ಲದವರು


ನೀವು ಬಯಸಿದ ಮನೆ
ಇಲ್ಲಿದೆ ಬನ್ನಿ
ಉಳಿಯಬಹುದು ನೀವು
ಬಯಸಿದಷ್ಟು ದಿನ
ಬಾಡಿಗೆ ಹೆಚ್ಚೇನಿಲ್ಲ
ಎಂದವರು ಬಿಡಿ ಮನೆಯ
ಉಳಿದದ್ದು ಸಾಕು ವಿಳಾಸ
ಬದಲಾಗಿದೆ ಎಂದು ಹೇಳುತ್ತಿದ್ದಾರೆ
ಮೊದಲಿದ್ದ ಮನೆ ಬಿಟ್ಟು
ಹೊಸ ಮನೆಗೆ ಬಂದವರು
ಮತ್ತೆ ಕಳೆದುಕೊಂಡರು
ತಮ್ಮ ವಿಳಾಸ
ಮನೆಗೆ ಮರಳುವಂತಿಲ್ಲ
ತೊರೆದ ಮನೆ ಈಗ
ಮೊದಲಿನಂತಿದೆ ಎಂದು
ನಂಬುವುದಾದರೂ ಹೇಗೆ?
ಜೇಡ ವಾಸದ ಮನೆಯ
ಮತ್ತೆ ಹೊಕ್ಕುವುದು ಕಷ್ಟ
ಹುಡುಕುತ್ತಿದ್ದಾರೆ ಹೊಸ ಮನೆಯ
ನಿರ್ಜನ ಬೀದಿಯಲ್ಲಿ ಹೀಗೆ
ರಾತ್ರಿ ಬಂದಿಳಿಯಲು
ಇರಬಹುದೇ ಯಾವ ಕಾರಣ?

ಇದ್ದಂತಿರಲಿ


ನೀ ಬರುವ ಮೊದಲು ಇದ್ದದ್ದೆಲ್ಲ ಇದ್ದ ಹಾಗೆ ಇತ್ತು
ನಿದ್ದೆ ತುಂಬುವ ರಾತ್ರಿ, ನಡೆದಷ್ಟು ತೀರ,
ಕಣ್ಣು ತುಂಬುವಷ್ಟು ಕಣಿವೆ ರಂಗು
ಎಲ್ಲ ತನ್ನಂತೆ ತಾನು.
 
ಈಗ ಕಣಿವೆ ರಂಗು, ತೀರ, ರಾತ್ರಿ ಎಲ್ಲಕ್ಕೂ ಹೊಸ ಬಣ್ಣ
ಹೃದಯದಿಂದ ಹಾದ ಸಾವಿರ ಹಾಡಿನ ಸಾಲು
ಅರಳಿದ ನೀಲಿ, ಕೆಂಪು, ಹಳದಿ ಹೂ
ರಾತ್ರ್ರಿ ತೊಟ್ಟ ಬಣ್ಣದ ಧೀರಿಸು
 
ನೀ ಇಲ್ಲದ ಮರುಗಳಿಗೆ ಎಲೆ ಉದುರಿದ ಮರ,
ನಿದ್ದೆ ಇಲ್ಲದ ರಾತ್ರಿ, ಮೂಡದ ಜೋಡಿ ಹೆಜ್ಜೆಗಳ ನಡಿಗೆ
ಮಂಜು ಮುಸುಕಿದ ಕಣಿವೆ, ಅಸ್ಪಷ್ಟ ದನಿಗಳು,
ಬೇಟೆಯಾಟದ ರಕ್ತ, ಸದ್ದಿಲ್ಲದ ಗಾಳಿ
 
ಇನ್ನೂ ರಾತ್ರಿ, ತೀರ, ಕಣಿವೆ ರಂಗಿನ ಮಾತು…
ಒಂದು ಕನಸನ್ನು ಸಮೀಪದಿಂದ ನೋಡುವ ಘಳಿಗೆ
ಇನ್ನೊಂದು ಏಕಾಂಗಿ ಮನದ ದಾಹ ಮತ್ತೊಂದು
ಪದೇ ಪದೇ ಇಳೆ ಬದಲಾಯಿಸುವ ಬಣ್ಣದ ಸೀರೆ
 
ಮತ್ತೆ ಬಂದು ನಿಂತಿದ್ದೀಯ
ಇತಿಹಾಸ ಭೂಗೋಳ ಚೆಹರೆ ಹೊತ್ತು
ಇರಲಿ ಬಿಡು ಇಲ್ಲೇ ಇರು
ಬರಲಿ ರಂಗಿನ ರಾತ್ರಿ, ಹತ್ತಿರವಾಗೋ ಕನಸು
ಇರುವುದೆಲ್ಲ ಅದರಂತೆ ಇರಲಿ
ನಿದ್ದೆ ತುಂಬಿದ ರಾತ್ರಿ ನಡೆದಷ್ಟು ತೀರ
ಕಣ್ಣು ತುಂಬುವಷ್ಟೇ ಕಣಿವೆ ರಂಗು

‍ಲೇಖಕರು avadhi

13 June, 2013

1 Comment

  1. mmshaik

    nice..one!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading