ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹತಾಶೆಯ ಬೀದಿಯಲಿ..

ಕಿರಸೂರ ಗಿರಿಯಪ್ಪ

ಕೆಂಪು ಹೆಜ್ಜೆಗಳ ಊರುತ
ಬೆಟ್ಟಗಳಾಚೆ ಕಳೆದು ಹೋದ ಸೂರ್ಯ
ಗಿಲಿ ಗಿಲಿ ಸದ್ದು ಮಾಡುತ
ತಲೆಯಲ್ಲಾಡಿಸೋ ಕರು
ಗವ್ವೆನ್ನುವ ಕತ್ತಲ ಸರಪಳಿಯಲ್ಲಿ
ಎಮ್ಮೆ ಹುಡುಕೋದು ಹೇಗೆ!
ಕಸಿವಿಸಿಗೊಂಡಳು

ವಿಪರೀತ ಅಮವಾಸ್ಯೆಯ ಕತ್ತಲ ಮೋಡಿಯಲಿ
ನರಿಗಳು ಘೀಳಿಡುವ ಸದ್ದು
ಹಣೆಗೆ ಬಿಗಿದ ಸೀರೆ ಸೆರಗನ್ನೊಮ್ಮೆ ಹಣೆಯ ಮ್ಯಾಲೆ
ಮತ್ತಷ್ಟು ಬಿಗಿದು
ಬೆದೆಗೆ ಬಂದು ದಿನವಿಡಿ ಕೂಗುವ
ಎಮ್ಮೆಗೆ ಕಟ್ಟಿದ ಗುದ್ದಿ* ನೆನಪಿಸಿಕೊಂಡಳು
ಮೈಬೆವರ ವರೆಸುತ

ಅಂಡಗಚ್ಫೆಯನ್ನೊಮ್ಮೆ ಆಯಾಸದ ಕೈಗಳಲಿ
ಸಡಲಿಸಿ ನಿಟ್ಟುಸಿರು ಬಿಟ್ಟು
ಮಿನುಕು ದೀಪವಿರಿಸಿ
ಕತ್ತಲ ಗುಡಿಸುತ
ಕಿರುದಾರಿಗಳ ಇಕ್ಕೆಲಗಳಲಿ
ಆಸೆಗಳ ನೋಟ ಬೀರಿದಳು
ಕಳೆದು ಹೋದ ಎಮ್ಮೆಯ ದಾರಿಗಳ ನಡುವೆ

ಪ್ರೀತಿಯಿಂದ ಸಾಕಿದ
ಎಮ್ಮೆಯ ಕತ್ತಿಗೆ
ಯಾರ ಪಾಪದ ಕಣ್ಣುಗಳು

ಮುಕ್ಕಿದವೋ
ಬರ್ತಿ ಬಸುರಾದ ಕೆಚ್ಚಲ ಮಿಡಿಗೆ
ಯಾವ ಕಿಚ್ಚಿನ ಮುಖಗಳು ಬಾಚಿಕೊಂಡವೋ!
ಹತಾಶೆಯ ಬೀದಿಯಲ್ಲಿ ಕನವರಿಕೆಯ ಸುದ್ಧಿ!

ಬರದ ಬೇಗೆಯಲೊಮ್ಮೆ
ಮನೆಗೆ ನಿಧಿಯಾಗಿದ್ದ ಎಮ್ಮೆಗಳು
ಸಂಕಟದ ಕರುಳಿಗೆ
ಅಮೃತ ಬಳ್ಳಿ ಜೋಡಿಸುತ್ತಿದ್ದವು
ಈಗ ನೆನಪುಗಳ ಪಳೆಯುಳಿಕೆಗಷ್ಟೆ !
ಗುದ್ದಿ ಮಾತ್ರ ಬಚ್ಚಲು ಮನೆಯ ಮೂಲೆಯಲ್ಲಿ
ಒಂಟಿ ದೀಪದ ಕಡ್ಡಿಯಾಗಿ ಗೋಚರ

(ಗುದ್ದಿ : ಓಡಿ ಹೋಗದ ಹಾಗೆ ಎಮ್ಮೆಗೆ ಕಟ್ಟುವ ಕಟ್ಟಿಗೆ ಸಹಿತ ಹಗ್ಗ)

‍ಲೇಖಕರು Avadhi

26 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading