ನಮ್ಮ ಹಳ್ಳಿಯೆಂದರೆ…
ಮೋಹನ್ ವಿ ಕೊಳ್ಳೇಗಾಲ 
1.
ನಮ್ಮ ಹಳ್ಳಿಯೆಂದರೆ ಭಗವದ್ಗೀತೆಯಲ್ಲಿ ಕಿಟ್ಟಣ್ಣ ಹೇಳಿದ
ಸಮತಾಭಾವವನ್ನೊಪ್ಪಿಕೊಂಡಪ್ಪಿಕೊಂಡು
ಬೇಸಿಗೆಗೆ ಮೈ ಸುಡದ ಚಳಿಗೆ ನಡುಗದ
ಜನಗಳ ಹಿಂಡು
ನೆತ್ತಿಗೆ ಬಂದ ಸೂರ್ಯ ಬೆವರ ಹನಿಸಿ ಸುಡುವಾಗ
ಹೃದಯಬೇಗೆ ಮರೆತು
ಸಂಸಾರ ತೊಟ್ಟಿಲ ತೂಗಲು ದುಡಿವರು ದಂಪತಿ
ನೊಗ ಹೊತ್ತೆತ್ತುಗಳಂತಾತು
ದುಡಿದ ಕೀಲುಸಂಧಿಯ ನೋವಿಗೆ ಸಾರಾಯಿ ಸುರಿದು
ಮನೆಗೆ ಬಂದರವರೇ ತತ್ವಜ್ಞಾನಿಗಳು
‘ಶಿವನಿಚ್ಚೆ’ಯೆಂದು ಬೆಳಗಿದ ಗಂಧದಕಡ್ಡಿ ಭಕ್ತಿಯಲ್ಲಿ
ಮರೆವರೆಲ್ಲಾ ಚಿಂತೆ ದುಃಖದಳು
ಇಟ್ಟುಕೊಂಡವನಾರು ಕಟ್ಟಿಕೊಂಡವನಾರೆಂಬುದೇ
ಅರಿಯದೆ ಎಡುವುವಾಗ
ಇನ್ನೂರು ಮುನ್ನೂರು ರೂಗಳಲ್ಲಿ ಪಂಚಾಯಿತಿ
ಮಗಿದು ಮತ್ತೆ ಕೂಡಿಕೊಳ್ಳುವ ರಾಗ
ಕೂಲಿ ಹೊಲದಲ್ಲಿ ಕೊಯ್ದ ಸೊಪ್ಪಿಗೆ ಕಳ್ಳ ಮಡಿಲಿನ
ಅವರೆಕಾಯಿ ಹಲಸಂದೆ ಕಾಳು ಬೆರೆತು
ಮುದ್ದೆ ಜಡಿದ ಘಮಲೇರಿರಲು
ಹೆದರಿದೆ ದೂರದ ಫಿಜಾ ಬರ್ಗರ್ ಸೋತು
ಹಡೆವ ಕಾಲಕ್ಕೆ ಹಡೆವ ಅಲ್ಲಿಲ್ಲಿ ಬೆಳೆದ ಮಕ್ಕಳು
ದುಡಿದುಣ್ಣುತ್ತವೆ ಮೈನೆರೆಯುವ ಮೊದಲೇ
ಕತ್ತಲಾರುವ ಮುನ್ನ ಎದ್ದು ಬೆಳಕಿಗೆ ಮೈಯೊಡ್ಡಿ
ಅರಳಿಸಿಕೊಳ್ಳುವರು ಜೀವನ ಸೆಲೆ
ಸೋಂಬೇರಿಕಟ್ಟೆಯ ಕಲ್ಲೇ ಅವರಿಗೆ ಮೆತ್ತನೆ ಹಾಸಿಗೆ
ನುಂಗಿದಮೇಲೆ ಗೊಳಗೊಳನೆ ಮುದ್ದೆ
ಆತಂಕಗೊಂಡ ಪಟ್ಟಣವೆಲ್ಲೋ ಬೆದರಿರಲು
ಇವರಿಗೋ ಸುಖನಿದ್ದೆ
ಸಣ್ಣದಾಗಿ ಮಿಣುಕುವ ಬೀದಿದೀಪ ಏಕಾಂಗಿಯಾಗಿರಲು
ಸಂಜೆ ಏಳಕ್ಕೆಲ್ಲಾ ಮೌನ ಕೂಡಿ
ಕತ್ತಲ ಹೊದ್ದು ಮಲಗುವ ಮನೆಗಳೊಳಗೆ
ಎಲ್ಲಾ ಮರೆಸಿದ ಕಾಮಪ್ರೇಮ, ಒಬ್ಬರಾಗುವ ಜೋಡಿ
2.
ನಮ್ಮ ಹಳ್ಳಿಯೆಂದರೆ ದನಗಳು ದುಡಿದು ದುಡಿದು
ಕೊಟ್ಟಿಗೆಯಲ್ಲಿ ಮಲಗಿದಂತೇ
ದನಗಳಿಗಿಂತ ಹೆಚ್ಚಾಗಿ ದುಡಿಯುವ
ಹೆಂಗಸರ ಸಂತೆ
ಮುಂಜಾನೆ ರಂಗೋಲಿ ತುಳಿದು ಎದ್ದುಹೋದ ಗಂಡನ
ಕತ್ತಲಕೂಪದೊಳಗೆ ಹುಡುಕಿ ಹುಡುಕಿ
ಹೆಂಡವಾಸನೆಯ ನುಂಗಿ ಕರೆದುಕೊಂಡು ಬಂದರೆ
ಸಾಲು ಸಾಲು ಮಕ್ಕಳ ಸಂಭಾಳಿಸುವಳು ತಡಕಿ
ಕೈ ಮುಗಿದು ಬಂದ ನಾಯಕನ ಮುಂದೆ ತಮ್ಮ ತಮ್ಮಲ್ಲೇ
ಗುಂಪು ಕಟ್ಟಿಕೊಂಡು ಜೊಲ್ಲು ಸುರಿಸೋ ಮುಗ್ಧರು
ರಾಜ್ಯ ದೇಶ ಮೀರಿದಿವರ ರಾಜಕೀಯದಿಂದ
ಬೀದಿ ರಸ್ತೆಗಿಲ್ಲ ಮೊದಲಿನಿಂದ ಡಾಂಬರು
ಅರ್ಧಂಬರ್ಧ ಶಾಲೆಯಲ್ಲರ್ಧರ್ಧ ಓದಿ ಮುಗಿಸಿ
ಪಂಚೆಕಟ್ಟಿ ಬೀಡಿ ಸೇದುವ ಹೈಕಳು
ಕೈ ಕೈ ಮಿಲಾಯಿಸಿದ ಜನಗಳಿಗೆ ಚರಂಡಿಯಲ್ಲಿ-
ಬಿದ್ದಾಗಲೇ ಮುಗಿಯುವುದು ಜಗಳ ಗೋಳು
3.
ನಮ್ಮ ಹಳ್ಳಿಯೆಂದರೆ, ಏರೋಪ್ಲೇನ್ ಏರಿ ನೋಡಿದರೆ
ಪ್ಯಾಚುಪ್ಯಾಚುಗಳಂತೆ ಕಾಣುವ ಬೀದಿಗಳು
ಅದ್ಯಾಕುಡ, ವಡೈ ಎಂದವರಿಗೆ
ಅಡ್ಡಬಿದ್ದೆ ಸೋಮಿ ಎನ್ನುವ ಜನಗಳು
ಮಾರಮ್ಮನ ಹಬ್ಬ ಬಂದರೆ ಒಳನುಗ್ಗಲು ಜಗಳಗಳು
ನಡುವೆ ಬಾರದ ದೇವರ ಭಕ್ತಿ ಶಕ್ತಿ
ಪಂಚಾಯಿತಿ ಕಟ್ಟೆಯೋ ರಣರಂಗ
ಹೇಗೋ ನಡೆದ ಹಬ್ಬ, ವರ್ಷವೆಲ್ಲಾ ಮಸೆದ ಕತ್ತಿ
ಆ ಜಾತಿ ಈ ಜಾತಿ ಸ್ವಜಾತಿ ನಡುವೆ ನಡೆವ ನೂರಾರು
ಲವ್ ಸ್ಟೋರಿಗಳು
ವಿಧಿಯಿಲ್ಲದೇ ಅವರು ಓಡಿದಾಗ
ಮತ್ತೆ ಊರಿಗೆ ಹೆಜ್ಜೆಯಿಡಲಾಗದ ಅದೇ ಗೋಳು
ಕುರಿ ತಿನ್ನುವವ ಹಂದಿ ತಿನ್ನುವವನನ್ನು ಬೈಯುವ
ಹಂದಿ ತಿನ್ನುವವ ದನ ತಿನ್ನುವವನನ್ನು
ದನ ತಿನ್ನುವವನನ್ನು ಹಸುವಿನ ಹಾಲು ಕುಡಿದ-
ಜೀವಸಸ್ಯ ತಿನ್ನವವ ಮೂದಲಿಸುವನಿನ್ನೂ!
ಪರಸ್ಥಳವೇ ಪರದೇಶದಂತೆ ನಮ್ಮೀ ಹಳ್ಳಿಗರಿಗೆ
ವೃತ್ತದೊಳಗೇ ತೃಪ್ತರು, ಉಳಿದದ್ದು ಶೇಷ
ವೃತ್ತದೊಳಗೆ ಮತ್ತಷ್ಟು ವೃತ್ತಾಂತಗಳು
ಕೆಲವೊಮ್ಮೆ ಬೇಡದ್ದಕ್ಕೆಲ್ಲಾ ಚಿಂತಿಸುವ ನಮ್ಮ ದೇಶ!







Halliya samagra bhavada samagra chitrana… nice poem
Nimma ‘chitraka shakthi’ adbuthavagide. good poem, only you can write such poems.